ಉತ್ಪನ್ನಗಳ ಗುಣಮಟ್ಟವನ್ನು ಸ್ವತಂತ್ರವಾಗಿ ಪರೀಕ್ಷಿಸುವ ಖ್ಯಾತ ಟ್ರಸ್ಟಿಫೈಡ್ ಸಂಸ್ಥೆಯು ಕರ್ನಾಟಕದ ಜನಪ್ರಿಯ ‘ನಂದಿನಿ’ ತುಪ್ಪವನ್ನು ಕಠಿಣ ಲ್ಯಾಬ್ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿಯ ಪ್ರಕಾರ ನಂದಿನಿ ತುಪ್ಪವು ಶುದ್ಧತೆ ಹಾಗೂ ಕೀಟನಾಶಕಮುಕ್ತ ಎಂಬ ಎರಡೂ ಪ್ರಮುಖ ಮಾನದಂಡಗಳಲ್ಲಿ ಸಂಪೂರ್ಣವಾಗಿ ತೇರ್ಗಡೆಯಾಗಿದೆ.
ಯಾವುದೇ ಹಾನಿಕಾರಕ ಕೀಟನಾಶಕಗಳ ಅಂಶವಿಲ್ಲದೆ, ನೈಸರ್ಗಿಕ ಶುದ್ಧತೆಯಿಂದ ಕೂಡಿದೆ ಎಂದು ದೃಢಪಡಿಸಿರುವ ವರದಿಯನ್ನು ಉಖಿಸಿ ಖ್ಯಾತ ನ್ಯೂಟ್ರಿಷನಿಸ್ಟ್ ಊರ್ವಶಿ ಅಗರ್ವಾಲ್ ಅವರು ತಮ್ಮ ‘ಬನೊ ನ್ಯೂಟ್ರಿಸ್ಮಾರ್ಟ್’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವುದು ಸಂತಸದ ವಿಚಾರ.
೫ ಪ್ರಮುಖ ಬ್ರಾಂಡ್‌ಗಳ ತುಪ್ಪದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿರುವ ಸುರಕ್ಷಿತ ಮಿತಿಗಿಂತಲೂ ಅಧಿಕ ಪ್ರಮಾಣದ ರಾಸಾಯನಿಕ ಅಂಶಗಳು ಪತ್ತೆಯಾಗಿ ಲ್ಯಾಬ್ ಟೆಸ್ಟ್ ದೃಢಪಡಿಸಿರುವ ವರದಿಯ ವಿಷಯವನ್ನು ಊರ್ವಶಿ ಅಗರ್ವಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ನಂದಿನಿ ದೇಶದ ಅತ್ಯುತ್ತಮ ಶುದ್ಧ ತುಪ್ಪ ಎಂದು ಸಾಬೀತಾಗಿರುವುದು ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ವಿಚಾರ ಸಾಕಷ್ಟು ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲೇ ನಂದಿನಿಯ ಗುಣಮಟ್ಟದ ಶ್ರೇಷ್ಠತೆ ಸಾಬೀತಾಗಿರುವುದು ಖುಷಿಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ಹಾಗೂ ಗ್ರಾಹಕರು ನಂದಿನಿ ತುಪ್ಪದ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಮೆಚ್ಚುವಂತದ್ದು. ಈಗ ಹೇಳಬೇಕಿದೆ ‘ನಮ್ಮ ನಂದಿನಿ ನಮ್ಮ ಹೆಮ್ಮೆ’.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





