ಒಡನಾಡಿ ಸ್ಟ್ಯಾನ್ಲಿ
ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮೌಲ್ಯವೂ ಆಗಿದೆ
ಮಕ್ಕಳನ್ನು ಒಳಗೊಂಡ ಬಹುತೇಕ ಪ್ರಕರಣಗಳಲ್ಲಿ ಆಕ್ರೋಶಗೊಂಡು, ತಾಳ್ಮೆಗೆಟ್ಟ ಪೋಷಕರು ಮತ್ತು ಆಪ್ತರು ಮಕ್ಕಳಿಗೆ ಮುಕ್ತವಾಗಿ ಮಾತನಾಡಲು ಸಂಪೂರ್ಣವಾಗಿ ಬಿಡದೇ, ಪ್ರಭಾವ ಬೀರಿ, ತಮ್ಮ ಹೇಳಿಕೆಗಳನ್ನೂ ಆ ಮಕ್ಕಳ ಮೂಲಕ ದಾಖಲಿಸಲು ಯತ್ನಿಸುವುದನ್ನು ಅನೇಕ ಪ್ರಕರಣಗಳಲ್ಲಿ ನಾವು ಕಾಣುತ್ತೇವೆ. ಎಲ್ಲಿ ಮಕ್ಕಳ ಮಾತಿನ ಮುಕ್ತತೆ ಮತ್ತು ಮುಗ್ಧತೆಗೆ ನೂರಕ್ಕೆ ನೂರರಷ್ಟು ಅವಕಾಶವಿರುತ್ತದೋ ಅಂತಹ ಆಪ್ತ ಸಮಾಲೋಚನೆಗಳು ಸತ್ಯಾಂಶಗಳಿಂದ ಕೂಡಿರುತ್ತವೆ. ಇದೊಂದು ನ್ಯಾಯಿಕ ಸಂಸ್ಥೆಗಳಲ್ಲಿ ಪೋಕ್ಸೋ ಪ್ರಕರಣಗಳ ಆಪ್ತ ಸಮಾಲೋಚನೆ ನಡೆಸುವವರನ್ನು ಕಾಡುವ ಸೂಕ್ಷ್ಮ ಸಮಸ್ಯೆಯಾಗಿದೆ.
ಮೈಸೂರಿನಲ್ಲಿ ಶಿಕ್ಷಕರೋರ್ವರ ಮೇಲೆ ಆರೋಪಿಸಲಾಗಿದ್ದ ಪೋಕ್ಸೋ ಪ್ರಕರಣದ ಮೊದಲ ಹಂತದಲ್ಲಿ ಮಕ್ಕಳ ಮಾತಿಗಷ್ಟೇ ಮಾನ್ಯತೆ ನೀಡಿ ಸಿ ಡಬ್ಲ್ಯೂ ಸಿ ಹೇಳಿಕೆಯನ್ನು ದಾಖಲಿಸಿತ್ತು. ಈ ಆಪ್ತ ಸಮಾಲೋಚನೆಯು ಪ್ರಬುದ್ಧ ಮಹಿಳಾ ಆಪ್ತಸಮಾಲೋಚಕರ ಮೂಲಕ ನಡೆದಿತ್ತು ಹಾಗೂ ಅದರ ವರದಿಯನ್ನು ಅವರು ವೃತ್ತಿಧರ್ಮದೊಡನೆ, ಯಾವುದೇ ಪ್ರಭಾವಕ್ಕೊಳಗಾಗದೆ, ಪಾರದರ್ಶಕವಾಗಿ ಹಾಗೂ ಪೂರ್ವಾಗ್ರಹಗಳಿಲ್ಲದೆ ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಉದ್ದೇಶವೇ ನಲುಗಿದ ಮಕ್ಕಳಿಗೆ ನ್ಯಾಯ ಕೊಡಿಸುವುದಾಗಿದೆ. ಆ ಸಂದರ್ಭದಲ್ಲಿ ಪೋಷಕರನ್ನು ಹೊರಗಿಟ್ಟು ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮತ್ತು ಆಪ್ತ ಸಮಾಲೋಚನೆಯ ಮೌಲ್ಯವೂ ಆಗಿದೆ.
ಮಕ್ಕಳು ತಮ್ಮ ಹೆತ್ತವರ ಸಮಕ್ಷಮದಲ್ಲಿ ಸಂಪೂರ್ಣ ಸತ್ಯವನ್ನು ಅರುಹಲು ಇಚ್ಛಿಸುವುದಿಲ್ಲ. ಪೋಷಕರ ಪೂರ್ವ ನಿರ್ಧರಿತ ಉದ್ದೇಶಗಳು ಮಧ್ಯ ಪ್ರವೇಶಿಸುವುದರಿಂದ ವಿಷಯ ಪಲ್ಲಟವಾಗುವ ಸಾಧ್ಯತೆಗಳಿರುತ್ತವೆ. ಮುಂದಿನ ದಿನಗಳಲ್ಲಿ ಹಿರಿಯರನ್ನು ಎದುರು ಹಾಕಿಕೊಳ್ಳಬೇಕಾಗುವ ಭಯದಿಂದ ಮಕ್ಕಳು ಹೆದರಿ ಸುಳ್ಳನ್ನೇ ದಾಖಲಿಸಿ ಬಿಡುವ ಆತಂಕವೂ ಇದೆ. ಈ ಪ್ರಕರಣದಲ್ಲಿ ಮಕ್ಕಳು ಪೋಷಕರೊಡನೆಯೇ ಸಮಿತಿಯ ಮುಂದೆ, ಹಾಜರಾಗಿದ್ದರೂ ಸಮಿತಿಯು ಪೋಷಕರನ್ನು ಹೊರಗಿಟ್ಟು, ಮುಕ್ತ ವಾತಾವರಣದಲ್ಲಿ ಆಪ್ತ ಸಮಾಲೋಚನೆಯನ್ನು ನಡೆಸಿರುವುದರಿಂದ ಮಕ್ಕಳು ಸಹಜವಾಗಿ ನೈಜ ವಿಚಾರವನ್ನಷ್ಟೇ ಹೇಳಿದ್ದು ಅದರ ಪ್ರಕಾರ ಮಕ್ಕಳನ್ನು ಬಳಸಿ ಕೆಲವು ಶಿಕ್ಷಕರು ಈ ಪ್ರಕರಣವನ್ನು ಸೃಷ್ಟಿಸಿದ್ದಾರೆ ಎಂಬುದು ದಾಖಲಾಗಿದೆ. ಈ ಸ್ಥಿತಿಯಲ್ಲಿನ ಮಕ್ಕಳನ್ನು ಕಾನೂನಿನ ಪ್ರಕಾರ ಟ್ಯುಟರ್ಡ್ ಚೈಲ್ಡ್ ಫಾರ್ ಫಾಲ್ಸ್ ಇಂಪ್ಲಿಕೇಷನ್ ಎಂದು ಪರಿಗಣಿಸಲಾಗುತ್ತದೆ.
ಪೋಕ್ಸೋ ಪ್ರಕರಣ ತನ್ನ ಗಮನಕ್ಕೆ ಬಂದ ಕೂಡಲೇ ಒಂದು ನ್ಯಾಯಿಕ ಸಂಸ್ಥೆ ಮತ್ತು ವೃತ್ತಿಪರ ವ್ಯಕ್ತಿಗಳ ನಡೆ ಇದೇ ರೀತಿಯಲ್ಲಿ ಇರಬೇಕಾಗುತ್ತದೆ. ಕೇವಲ ತಾಂತ್ರಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಪೋಕ್ಸೋ ರೀತಿಯ ಅಪರಾಧಗಳು ನಡೆದಿದೆ ಅಥವಾ ನಡೆದಿಲ್ಲ ಎಂದು ಹೇಳುವಂತಿಲ್ಲ. ನಿರ್ಭೀತಿಯ, ಮಕ್ಕಳ ಸ್ನೇಹಿ ವಾತಾವರಣದಲ್ಲಿ ಮಕ್ಕಳು ನೀಡುವ ಹೇಳಿಕೆ ಹಾಗೂ ಹಂಚಿಕೊಳ್ಳುವ ವಿವರಗಳು ಬಹಳ ಮುಖ್ಯ ಎನಿಸಿಕೊಳ್ಳುತ್ತವೆ. ತಮ್ಮ ಮೇಲೆ ಯಾವುದೇ ರೀತಿಯ ಲೈಂಗಿಕ ಶೋಷಣೆ ನಡೆದಿಲ್ಲ, ಬದಲಾಗಿ ಶಾಲೆಯ ಇನ್ನಿತರ ಮೂವರು ಶಿಕ್ಷಕರು ಮತ್ತೋರ್ವ ಶಿಕ್ಷಕರ ಮೇಲೆ ಆ ರೀತಿ ಆಪಾದನೆ ಮಾಡುವಂತೆ ಪ್ರೇರಣೆ ನೀಡಿರುವುದಾಗಿ ಹೇಳಿಕೊಂಡಿದ್ದರಿಂದ ಲೈಂಗಿಕ ಶೋಷಣೆ ನಡೆದಿದೆ ಎಂದು ಆರೋಪಿಸಿದ್ದ ಪೋಷಕರಿಗೆ ಸಹಜವಾಗಿ ನಿರಾಸೆಯಾಗಿದೆ.
ಮಕ್ಕಳ ಕಲ್ಯಾಣ ಸಮಿತಿ ಒಂದು ನ್ಯಾಯಿಕ ಸಂಸ್ಥೆಯಾಗಿದ್ದು ಮಕ್ಕಳ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ಮತ್ತು ಆದೇಶಗಳನ್ನು ನೀಡಲು ಪ್ರಥಮ ದರ್ಜೆ ನ್ಯಾಯಾಧೀಶರ ಅಧಿಕಾರವನ್ನು ಹೊಂದಿದೆ. ಇದರ ಎ ಸದಸ್ಯರು ಒಂದು ಅವಧಿಯವರೆಗೆ ಸರ್ಕಾರದಿಂದ ನೇಮಕವಾಗಿದ್ದು, ಬಾಲನ್ಯಾಯ ಕಾಯಿದೆ, ಪೋಕ್ಸೋ ಕಾಯಿದೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಇತರೆ ಕಾನೂನುಗಳು ಮತ್ತು ನೀತಿಗಳ ಬಗ್ಗೆ ಮೇಲ್ಮಟ್ಟದ ತರಬೇತಿ ಹೊಂದಿದವರಾಗಿದ್ದರೂ ಈ ಸಮಿತಿಯು ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಪ್ತ ಸಮಾಲೋಚಕರು, ವಿಶೇಷ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯೊಡನೆ ಸಮನ್ವಯ ಸಾಧಿಸುತ್ತಾ ಕಾರ್ಯ ನಿರ್ವಹಿಸಬೇಕಾದ ಬಾಧ್ಯತೆಯನ್ನು ಹೊಂದಿದೆ.
ಮಕ್ಕಳನ್ನು ಆಪ್ತ ಸಮಾಲೋಚನೆಗೆ ಒಳಪಡಿಸುವಾಗ ಕೆಲವೊಂದು ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಅಳವಡಿಸಿಕೊಂಡು, ಅವರಿಗೆ ಮುಜುಗರವಾಗದಂತೆ, ಅವರ ಮನೋ ಸ್ವಾಸ್ಥ್ಯ ಕದಡದಂತೆ, ಉತ್ತಮ ವಾತಾವರಣದಲ್ಲಿ, ಅಗತ್ಯ ಬಿದ್ದರೆ ತಜ್ಞರನ್ನು ಸಂಪರ್ಕಿಸಿ , ಮಕ್ಕಳಿಗೆ ಮತ್ತು ಆರೋಪಿಗಳಿಗೆ ಸಂಬಂಧಿಸಿದ ಯಾರೊಬ್ಬರೂ ಆ ಸ್ಥಳದಲ್ಲಿ ಇರದಂತೆ, ಯಾವುದೇ ಬಾಹ್ಯ ಪ್ರಭಾವ ಮಕ್ಕಳ ಮೇಲೆ ಬೀರದಂತೆ ನೋಡಿಕೊಂಡು, ತಾಳ್ಮೆಯಿಂದ ನಡೆಸಿದ ಆಪ್ತಸಮಾಲೋಚನೆಯ ವಿವರಗಳನ್ನು ಪಾರದರ್ಶಕವಾಗಿ ಕಾನೂನಿನ ಗಮನಕ್ಕೆ ತರಬೇಕಾಗುತ್ತದೆ. ಆಪ್ತ ಸಮಾಲೋಚನಾ ವರದಿಯ ಕಾನೂನಾತ್ಮಕ ಸ್ಥಾನಮಾನದ ಬಗ್ಗೆ ಆಲೋಚಿಸುವುದಾದರೆ ಮಕ್ಕಳ ಕಲ್ಯಾಣ ಸಮಿತಿಯ ವರದಿ ನೇರ ಸಾಕ್ಷ್ಯವಲ್ಲದಿದ್ದರೂ ಅದೊಂದು ಮುಖ್ಯ ದಾಖಲೆ ಎಂಬುವುದನ್ನು ಅಲ್ಲಗಳೆಯಲಾಗದು.
ಸಮಿತಿಗೆ ತನಿಖೆ ನಡೆಸಲು ಅಧಿಕಾರವಿಲ್ಲದಿರಬಹುದು. ಆದರೆ ಅದು ಬಾಲ ನ್ಯಾಯ ಕಾಯ್ದೆ ೨೦೧೫ರ ಸೆಕ್ಷನ್ ೨೭/೩೦ ರ ಅಡಿಯಲ್ಲಿ ರಚಿತವಾದ, ಪ್ರಥಮ ದರ್ಜೆ ನ್ಯಾಯಾಧೀಶರ ಅಧಿಕಾರ ಹೊಂದಿರುವ ಪೀಠವಾಗಿದ್ದು, ಇದರ ವರದಿಯು ಪೊಲೀಸ್ ಹೇಳಿಕೆ (೧೬೧ ಸಿಆರ್‌ಪಿಸಿ/ ೧೮೦ ಬಿಎನ್‌ಎಸ್ ಎಸ್) ಮತ್ತು ನ್ಯಾಯಾಲಯದಲ್ಲಿ ನೀಡುವ ೧೬೪ ಹೇಳಿಕೆಗೆ (೧೮೩ ಬಿಎನ್ ಎಸ್‌ಎಸ್) ಸರಿಸಮವಲ್ಲದಿರಬಹುದು. ಆದರೆ, ಈ ವರದಿಯನ್ನು ಪೊಲೀಸರು ಮತ್ತು ನ್ಯಾಯಾಲಯ ಪೂರಕ ಸಾಕ್ಷ್ಯ (ಕೊರೋಬೊರೇಟಿವ್/ ರೆಫರೆನ್ಸ್ ಡಾಕ್ಯುಮೆಂಟ್) ವೆಂದು ಖಂಡಿತ ಪರಿಗಣಿಸಬಹುದು.
ಈ ಪ್ರಕರಣದಲ್ಲಿ ಪೊಲೀಸರದ್ದು ಅಸಂಗತ ನಡೆ ಎಂದೇ ನನ್ನ ಭಾವನೆ. ಸಿಡಬ್ಲ್ಯುಸಿ ವರದಿಯನ್ನು ತರಿಸಿ ಮುಂದಿನ ಕ್ರಮ ಕೈಗೊಳ್ಳಬಹುದಿತ್ತು. ಪೋಕ್ಸೋ ಸೆಕ್ಷನ್ ೨೪(೫) ಪ್ರಕಾರ ಮಗುವಿನ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿದ್ದರೆ ಸರ್ಕಾರಿ ತಜ್ಞ ಮನೋವೈದ್ಯರೊಬ್ಬರ ಅಭಿಪ್ರಾಯ ಪಡೆಯಬಹುದಿತ್ತು. ಆದರೆ ಪಟ್ಟು ಹಿಡಿದ ಪೋಷಕರು ಮಕ್ಕಳನ್ನು ಠಾಣೆಗೆ ಕರೆದೊಯ್ದು, ಸಿಡಬ್ಲ್ಯೂ ಸಿ ಯಲ್ಲಿ ಮಕ್ಕಳು ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆ ಕೊಡಿಸಿದ್ದನ್ನು ತತ್‌ಕ್ಷಣ ಪುರಸ್ಕರಿಸಿ ಎಫ್ ಐ ಆರ್ ಮಾಡಿರುವುದು ವೃತ್ತಿಪರವಲ್ಲದ ನಡೆಯೆಂದೇ ಪರಿಗಣಿಸಬೇಕಾಗಿದೆ. ಮೇಲ್ಮಟ್ಟದ ಪ್ರಕರಣವೊಂದರಲ್ಲಿ ದೂರು ದಾಖಲಿಸಲು ಪೊಲೀಸರು ಒಂದು ದಿನವಿಡೀ ಚರ್ಚಿಸಿದ್ದು ಸ್ಮರಣಾರ್ಹ! ತೊಂಬತ್ತೊಂಬತ್ತು ಮಂದಿ ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಒಬ್ಬ ನಿರಪರಾಧಿಗೆ ವಿನಾ ಕಾರಣ ಶಿಕ್ಷೆ ಆಗಬಾರದು ಎಂಬುದನ್ನು ಪ್ರಾಸಿಕ್ಯೂಶನ್ ನ ಭಾಗವಾಗಿರುವ ಪೊಲೀಸರು ಮರೆಯಬಾರದು.
ನ್ಯಾಯಾಲಯವೂ ಸಿಡಬ್ಲ್ಯೂಸಿ ಯ ವರದಿಯನ್ನು ಪರಿಗಣಿಸುತ್ತದೆ. ಏಕೆಂದರೆ ಇದು ಮಗುವಿನ ಮೊದಲ ಹೇಳಿಕೆಯಾಗಿದ್ದು ಸರ್ವೋಚ್ಚ ನ್ಯಾಯಾಲಯವು ಕೂಡಾ ಹಲವು ತೀರ್ಪುಗಳಲ್ಲಿ ಇದನ್ನು ಎತ್ತಿ ಹಿಡಿದಿದೆ. ಪೋಕ್ಸೋ ಪ್ರಕರಣದಲ್ಲಿ ಮಗುವಿನ ಹೇಳಿಕೆ ಸ್ವತಃ ವಿರೋಧಾಭಾಸದಿಂದ ಕೂಡಿದ್ದರೆ, ಅದನ್ನು ನಂಬುವಂತಿಲ್ಲ. ಸಿಡಬ್ಲ್ಯೂಸಿ ಮುಂದೆ ಶೋಷಣೆ ನಡೆದಿಲ್ಲ, ಶಿಕ್ಷಕರು ಹೇಳಿ ಕೊಡಿಸಿದರು ಎಂದು ಒಪ್ಪಿಕೊಂಡಿದ್ದು, ಆ ಮಗುವಿನ ದೂರಿನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕುಂದಿಸುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಲಯವು ಆಪ್ತ ಸಮಾಲೋಚಕಿಯನ್ನು ಸಾಕ್ಷಿಯಾಗಿ ಕರೆಸಿ, ಆಕೆಯ ವರದಿಯನ್ನು ಸೆಕ್ಷನ್ ೩೯ಬಿಎನ್‌ಎಸ್ ಮತ್ತು ಭಾರತೀಯ ಸಾಕ್ಷ್ಯ ಅಽನಿಯಮ ೧೮೭೨ ರ ಕಲಂ ೪೫ ರ (ತಜ್ಞರ ಅಭಿಪ್ರಾಯ) ಅಡಿಯಲ್ಲಿ ಪರಿಗಣಿಸಬಹು ದಾಗಿದೆ.
ಒಟ್ಟಿನಲ್ಲಿ ಇಂತಹ ಪ್ರಕರಣಗಳು ಸಿಡಬ್ಲ್ಯೂಸಿ ಯ ಮುಂದೆ ಬಂದಾಗ ಮಗುವಿನ ಪೋಕ್ಸೋ ಸಂಬಂಧಿತ ದೂರನ್ನು ಸಮಿತಿಯು ತಿರಸ್ಕರಿಸದೆ, ಮಗುವಿಗೆ ಅತ್ಯುತ್ತಮ ನ್ಯಾಯ ಕೊಡಿಸುವ ದೃಷ್ಟಿಯೊಡನೆ ಕೂಡಲೇ ಪರಿಗಣಿಸಿ, ಮಗುವನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕಾಗುತ್ತದೆ. ಅಂತಹ ವರದಿಯನ್ನು ಪೊಲೀಸ್ ಇಲಾಖೆಯು ಪರಿಗಣಿಸಬೇಕಾದುದು ವಿವೇಚನೆ. ಅದರ ಆಧಾರದ ಮೇಲೆ ಮತ್ತೊಮ್ಮೆ ಸಮವಸದಲ್ಲಿರದ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಅಲ್ಲಿನ ಆಪ್ತ ಸಮಾಲೋಚಕರು ಮಗುವನ್ನು ಮಾತನಾಡಿಸಬಹುದಾದರೂ ಪದೇ ಪದೇ ಮಗುವನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯುವುದು ಕೂಡಾ ಶೋಷಣೆಯ ಮುಂದುವರಿಕೆ (ಫರ್ದರ್ ವಿಕ್ಟಿಮೈಸೇಷನ್) ಎಂದೇ ಪರಿಭಾವಿಸಲಾಗುತ್ತದೆ. ವಿಚಾರಣೆಯ ಸಂದರ್ಭದಲ್ಲಿ ಹೇಳಿಕೊಟ್ಟು ನೀಡಲ್ಪಟ್ಟ ದೂರು ಎಂದು ಕಂಡುಬಂದರೆ, ಅಂತಿಮ ವರದಿಯಲ್ಲಿ ಸಿ ಡಬ್ಲ್ಯೂಸಿಯ ವರದಿಯನ್ನು ಲಗತ್ತಿಸಿ, ದೂರು ಸುಳ್ಳು ಎಂದು ನಮೂದಿಸಬೇಕಾಗುತ್ತದೆ. ಸಿ ಡಬ್ಲ್ಯೂ ಸಿ ಈ ಬಗ್ಗೆ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಈ ಮಗು ಆರೈಕೆ ಮತ್ತು ರಕ್ಷಣೆಯಲ್ಲಿರಬೇಕಾದ ಮಗು ಆದಾಗ್ಯೂ ವಯಸ್ಕರ ಪ್ರಭಾವಕ್ಕೊಳಪಟ್ಟಿದೆ ಎಂದು ಬರೆದು, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಇಲಾಖಾ ಮತ್ತು ಕ್ರಿಮಿನಲ್ ಕ್ರಮಕ್ಕೆ ಶಿಫಾರಸು ಮಾಡಬಹುದು. ಸಿ ಡಬ್ಲ್ಯೂಸಿ ಅಧ್ಯಕ್ಷರ ಸಹಿಯೊಂದಿಗೆ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೊಲೀಸ್ ತನಿಖಾಧಿಕಾರಿಗೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿಬಹುದು. ಅಸತ್ಯದ ಪಾಲಾಗುವ ಪ್ರಕರಣಗಳಿಂದಾಗಿ ವ್ಯವಸ್ಥೆಯಲ್ಲಿ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಅಂಗಗಳ ಆತ್ಮಸ್ಥೈರ್ಯ ಕುಂದುತ್ತಾ ಹೋಗಬಹುದು. ಅದಾಗದಿರಲಿ!
” ಒಟ್ಟಿನಲ್ಲಿ ಈ ಪ್ರಕರಣದ ಮೊದಲ ಮೆಟ್ಟಿಲ ಪ್ರಾಸಿಕ್ಯೂಶನ್ ಮುಗ್ಗರಿಸಿದೆ. ಇಂತಹ ಲೋಪಗಳಿಂದಲೇ ನಮ್ಮ ದೇಶದಲ್ಲಿ ಸುಮಾರು ೮೬% ಪ್ರಕರಣಗಳು ಖುಲಾಸೆಯಾಗುತ್ತಿವೆ. ಅಲ್ಲದೆ ಅನೇಕ ಅಮಾಯಕರು ಪ್ರಕರಣದ ಮೊದಲಿನಿಂದ ತೀರ್ಪು ಬರುವವರೆಗೂ ಎಲ್ಲ ರೀತಿಯ ಬೇಗೆಗಳಲ್ಲಿ ಬೆಂದು ಎಲ್ಲವನ್ನೂ ಕಳೆದುಕೊಂಡುನಿಂತಿರುತ್ತಾರೆ. ಅವರುಗಳ ನಷ್ಟವನ್ನು ತುಂಬಿಕೊಡುವುದು ಹೇಗೆ ಎಂಬುವುದು ಒಂದೆಡೆಯಾದರೆ ಇಂಥ ನಾಲ್ಕು ಪ್ರಕರಣಗಳು ಹುಸಿಯಾಗುತ್ತಾ ಬಂದಲ್ಲಿ ನಿಜವಾದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕಾದ ಪೋಕ್ಸೋ ಕಾಯ್ದೆ ತನ್ನ ಪ್ರಖರತೆಯನ್ನು ಕಳೆದುಕೊಳ್ಳಬಹುದು ಅಥವಾ ಅಪನಂಬಿಕೆಗೆ ಗುರಿಯಾಗಬಹುದೆಂಬ ಆತಂಕ ಮಕ್ಕಳಿಗಾಗಿ ತುಡಿಯುವ ನಮ್ಮಂಥವರಲ್ಲಿ ಮಡುಗಟ್ಟುತ್ತಾ ಹೋಗುತ್ತದೆ.”



