Mysore
30
scattered clouds

Social Media

ಭಾನುವಾರ, 04 ಅಕ್ಟೋಬರ್ 2026
Light
Dark

ಮೋದಿ ಮುಂದೆ ಮೌನ ಮುರಿದ ಚಿರಾಗ್ ಚೀರಾಟ!

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ 

ಬಿಜೆಪಿಯವರನ್ನೂ ನಾಚಿಸುವಂತೆ ಕಟ್ಟಾ ಧಾರ್ಮಿಕ ಭಕ್ತನಂತೆ ಕಾಣುವ ವ್ಯಕ್ತಿತ್ವ

ಪ್ರಧಾನಿ ನರೇಂದ್ರ ಮೋದಿ ಅವರ ಹನ್ನೊಂದು ವರ್ಷಗಳ ಕೇಂದ್ರ ಸರ್ಕಾರದ ಆಡಳಿತ ಮತ್ತು ಬಿಜೆಪಿ ಮತ್ತು ಅದರ ನೇತೃತ್ವದ ರಾಷ್ಟ್ರೀಯ ಪ್ರಜಸತ್ತಾತ್ಮಕ ಮೈತ್ರಿಕೂಟದ ಕಾರ್ಯವೈಖರಿಯನ್ನು ಒಳಗಿದ್ದುಕೊಂಡೇ ಟೀಕಿಸಿದವರು ಇಲ್ಲ ಎನ್ನುತ್ತಿರುವಾಗಲೇ ಚಿರಾಗ್ ಪಾಸ್ವಾನ್ ಎನ್ನುವ ಬಿಸಿರಕ್ತದ ಯುವಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿರುವುದು ಹಲವರನ್ನು ತಲ್ಲಣಗೊಳಿಸಿದೆ.

ಬಿಹಾರದ ಜಮಿ ಲೋಕಸಭಾ ಕ್ಷೇತ್ರದಿಂದ ೨೦೧೪ರಿಂದ ಎರಡು ಬಾರಿ ಗೆದ್ದಿರುವ ಹಾಗೂ ತಂದೆ ರಾಂ ವಿಲಾಸ ಪಾಸ್ವಾನ್ ನಿಧನದ ನಂತರ ೨೦೨೪ರಲ್ಲಿ ಹಾಜೀಪುರ ಕ್ಷೇತ್ರದಿಂದ ಗೆದ್ದು ಬಂದು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಈ ಯುವಕನ ನಡೆ ಅಚ್ಚರಿ ಮೂಡಿಸಿದೆ.

ತಂದೆ ರಾಂ ವಿಲಾಸ್ ಪಾಸ್ವಾನ್ ತಮ್ಮ ೨೬ನೇ ವಯಸ್ಸಿನಲ್ಲಿ ಶಾಸಕರಾಗಿ ಬಿಹಾರದಲ್ಲಿ ೧೯೭೩ರಿಂದ ೭೭ರವರೆಗೆ ಜೆಪಿ ಚಳವಳಿಯನ್ನು ಮುನ್ನಡೆಸಿದವರು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ಅವರು, ೧೯೭೭ರ ಲೋಕಸಭಾ ಚುನಾವಣೆ ನಡೆದಾಗ ಇಡೀ ದೇಶವೇ ಅಚ್ಚರಿಪಡುವಂತೆ ತನ್ನ ವಿರೋಧಿ ಅಭ್ಯರ್ಥಿಗಿಂತ ೪.೨೪ ಲಕ್ಷ ಅತ್ಯಧಿಕ ಮತಗಳನ್ನು ಪಡೆದು ಗಿನ್ನಿಸ್ ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದರು. ಇದು ಅವರ ರಾಷ್ಟ್ರ ರಾಜಕೀಯ ಪ್ರವೇಶದ ದಿನಗಳು.

ಪಾಸ್ವಾನ್ ಲೋಕಸಭೆಯಲ್ಲಿ ಮಾತನಾಡಲು ನಿಂತರೆ ಹಿಂದಿಯಲ್ಲಿ ನಿರಂತರವಾಗಿ ಗಂಟೆ ಗಟ್ಟಲೆ ಹರಳುಹುರಿದಂತೆ ಮಾತನಾಡುತ್ತಲೇ ತಮ್ಮ ಬುದ್ಧಿವಂತಿಕೆ ಮತ್ತು ಮಾತುಗಾರಿಕೆಯಿಂದ ಎಲ್ಲ ಪಕ್ಷಗಳ ನಾಯಕರ ಸ್ನೇಹಜೀವಿ ಆಗಿದ್ದರು. ಅವರು ಬದುಕಿರುವವರೆಗೂ (೨೦೨೦) ಸಂಸತ್ತಿನಲ್ಲಿ ದಲಿತ ಪರವಾದ ಗಟ್ಟಿದನಿಯಾಗಿದ್ದರು. ಅವರ ಮುಂದಾಳುತನದಲ್ಲಿ ಸಂಸತ್ತಿನಲ್ಲಿನ ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡದ ಸಂಸತ್ ಸದಸ್ಯರ ವೇದಿಕೆ ದಲಿತರ ಹಕ್ಕುರಕ್ಷಣೆಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುವಂತಹ ಬಲವಾದ ಸಂಘಟನೆ ರೂಪಿಸಿದ್ದರು. ವೈಯಕ್ತಿಕವಾಗಿ ದೇವರು- ಧರ್ಮದಲ್ಲಿ ನಂಬಿಕೆ ಇಲ್ಲದಿದ್ದ ಪಾಸ್ವಾನ್ , ವಿ.ಪಿ. ಸಿಂಗ್ ಪ್ರಧಾನಿ ಆಗಿದ್ದಾಗ ಅವರ ನೀಲಿಗಣ್ಣಿನ ಹುಡುಗನಾಗಿ ಸಾಮಾಜಿಕ ಸಬಲೀಕರಣ ಖಾತೆ ಸಚಿವರಾಗಿ ಮಾಡಿದ ಕೆಲಸ ಅವಿಸ್ಮರಣೀಯ.

ಪ್ರಧಾನಿ ವಿ.ಪಿ. ಸಿಂಗ್ ಅವರ ಮೇಲೆ ಪಾಸ್ವಾನ್ ಸೇರಿದಂತೆ ತಂದ ಒತ್ತಡದಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ, ಸಂಸತ್ತಿನ ಸೆಂಟ್ರಲ್‌ಹಾಲ್‌ನಲ್ಲಿ ಅವರ ಆಳೆತ್ತರದ ತೈಲ ವರ್ಣ ಚಿತ್ರದ ಅನಾವರಣ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ಆಯೋಗದ ಶಿಫಾರಸ್ಸಿಗೆ ಹಲವು ನಾಯಕರ ಬೆಂಬಲ ಪಡೆದು ಸಂಪುಟದ ಒಪ್ಪಿಗೆ ಪಡೆಯಲು ಕಾರಣರಾದರು. ೧೯೯೬ರ ವಿಶಿಷ್ಟ ರಾಜಕೀಯ ಸನ್ನಿವೇಶದಲ್ಲಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ಆಯ್ಕೆಯಾದಾಗ ಮತ್ತು ಅವರು ರಾಜ್ಯಸಭೆ ಸದಸ್ಯರಾಗಿದ್ದ ಕಾರಣ ಲೋಕಸಭೆಯಲ್ಲಿ ಆಡಳಿತ ಪಕ್ಷದ ಸಭಾನಾಯುಕರಾಗಿದ್ದ ಪಾಸ್ವಾನ್ ಅವರ ಸಂಕ್ಷಿಪ್ತ ರಾಜಕೀಯ ಹಿನ್ನೆಲೆಯಿದು.

ಇಂತಹ ನಾಯಕರಾಗಿದ್ದ ರಾಂ ವಿಲಾಸ್ ಪಾಸ್ವಾನ್ ಅವರ ಪುತ್ರನೇ ಚಿರಾಗ್ ಪಾಸ್ವಾನ್ . ತಂದೆ ಬದುಕಿದ್ದಾಗಲೇ ಬಿಹಾರದ ಜಮಿ ಲೋಕಸಭೆ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದರು. ತಂದೆ ನಿಧನರಾದ ಬಳಿಕ ೨೦೨೪ರಲ್ಲಿ ಹಾಜೀಪುರ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.

ಚಿರಾಗ್ ಪಾಸ್ವಾನ್ ೨೦೧೧ರಲ್ಲಿ ನಟಿ ಮತ್ತು ಈಗಿನ ಲೋಕಸಭೆ ಸದಸ್ಯೆ ಕಂಗನಾ ರಣಾವತ್ ಜೊತೆ ಹಿಂದಿ ಚಿತ್ರ ‘ಮಿಲೇ ನಾ ಮಿಲೇ ಹಮ’ ದಲ್ಲಿ ನಾಯಕನಾಗಿ ನಟಿಸಿದ್ದು ವಿಶೇಷ. ತಂದೆ ಬದುಕಿzಗ ಅವರ ನೆರಳಿನಲ್ಲಿದ್ದ ಚಿರಾಗ್ ಪಾಸ್ವಾನ, ಈಗಿನ ವೇಷಭೂಷಣ ನೋಡಿದರೆ ಸದಾ ಹಣೆಗೆ ಉದ್ದನೆಯ ನಾಮ, ಕೈಗೆ ಹತ್ತರು ಸುತ್ತು ರಕ್ಷಾ ಸೂತ್ರದಾರ ಕಟ್ಟಿಕೊಂಡು ಬಿಜೆಪಿಯವರನ್ನೂ ನಾಚಿಸುವಂತೆ ಕಟ್ಟಾ ಧಾರ್ಮಿಕ ಭಕ್ತನಂತೆ ಕಾಣುತ್ತಾ ತಂದೆ- ಮಗನ ಹೋಲಿಕೆಯ ತದ್ವಿರುದ್ಧ ವ್ಯಕ್ತಿತ್ವದ ವರ್ಣನೆಯ ಲೆಕ್ಕಾಚಾರ ಸಹಜವಾಗಿಯೇ ಹಲವರ ಮನಸ್ಸಲ್ಲಿ ಮೂಡಿಬರುತ್ತದೆ.

ಜನತಾದಳವು ಹತ್ತಾರು ಮಂದಿ ನಾಯಕರ ಬಲದಿಂದ ಒಡೆದು ಒಡೆದು ಚೂರಾದಾಗ, ರಾಂ ವಿಲಾಸ್ ಪಾಸ್ವಾನ್ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತಮ್ಮದೇ ನಾಯಕತ್ವದಲ್ಲಿ ಲೋಕಜನಶಕ್ತಿ ಪಕ್ಷವನ್ನು ಕಟ್ಟಿಕೊಂಡು ಮತ್ತೆ ಲೋಕಸಭೆಗೆ ಆಯ್ಕೆಯಾದರು. ಆದರೆ ೨೦೨೦ರಲ್ಲಿ ಹೃದಯಾಘಾತ ಚಿಕಿತ್ಸೆ ಫಲಿಸದೆ ನಿಧನರಾದ ಬಳಿಕ ಆ ಪಕ್ಷದ ಚುಕ್ಕಾಣಿಯನ್ನು ಚಿರಾಗ್ ಕೈಗೆತ್ತಿಕೊಂಡು ಈಗ ಬಿಹಾರದ ರಾಜಕಾರಣದಲ್ಲಿ ತಮ್ಮದೇ ವಿಶಿಷ್ಟ ವ್ಯಕ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ೨೦೨೪ರ ಚುನಾವಣೆಯಲ್ಲಿ ಲೋಕಜನಶಕ್ತಿಯಿಂದ ಲೋಕಸಭೆಗೆ ಐವರು ಆಯ್ಕೆಯಾದರೆ, ಕಳೆದ ವರ್ಷ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ೧೯ ಮಂದಿಯನ್ನು ಗೆಲ್ಲಿಸಿಕೊಂಡು ಬಿಜೆಪಿ ನೇತೃತ್ವದ ಎನ್ ಡಿ ಎ ಭಾಗವಾಗಿ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ.

ಪಾದರಸದಂತೆ ಓಡಾಡುವ ಚಿರಾಗ್ ಪಾಸ್ವಾನ್ ಈಗ ಸುದ್ದಿಯಲ್ಲಿದ್ದಾರೆ. ಬಿಹಾರದಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯು ಜನತಾದಳ (ಯು) ನಾಯಕ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದು ಮುಖ್ಯ ಮಂತ್ರಿಯೂ ಆದರು. ಆದರೆ ಹೆಚ್ಚು ದಿನಗಳು ಅವರು ಮುಖ್ಯಮಂತ್ರಿಯಾಗಿ ಉಳಿಯಲಿಲ್ಲ.

ಬಿಜೆಪಿಯ ಹಿಡನ್ ಅಜೆಂಡಾ ಪ್ರಕಾರ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ರಾಜ್ಯಸಭೆಗೆ ಕಳುಹಿಸಿ, ತನ್ನ ಅಭ್ಯರ್ಥಿ ಸಮರ್ಥ್ ಚೌಧರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆ ಇತ್ತೀಚೆಗೆ ಬಿಹಾರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಸೇರಿದಂತೆ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಕಾನೂನು ವ್ಯವಸ್ಥೆ ಕುಸಿದಿದೆ. ಹೀಗಾಗಿ ಬಿಹಾರದಲ್ಲಿ ತನ್ನ ಪಕ್ಷವು ಎನ್ ಡಿ ಎ ಆಡಳಿತ ಭಾಗವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಚಿರಾಗ್ ಪಾಸ್ವಾನ್ ಸಾರ್ವಜನಿಕವಾಗಿ ಬಿಜೆಪಿ ಆಡಳಿತದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆಯ ಹಿನ್ನೆಲೆ ಮತ್ತು ಒಂದೂವರೆ ತಿಂಗಳ ಹಿಂದೆ ಮೀಸಲಾತಿ ವಿರೋಧಿ ಹೋರಾಟ ನಡೆಸಿದವರ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂದ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿಕೆ ಮತ್ತು ಈ ದಿಶೆಯಲ್ಲಿ ಸರ್ಕಾರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ  ಕ್ರಮದಿಂದ ಬಹುಶಃ ಚಿರಾಗ್ ಪಾಸ್ವಾನ್ ಸಿಟ್ಟಿಗೆದ್ದಿರಬಹುದು ಎನ್ನಲಾಗಿದೆ. ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ವ್ಯವಸ್ಥೆಗೆ ಧಕ್ಕೆ ಬಂದರೆ ಒಂದು ಕ್ಷಣವೂ ನಾನು ಅಧಿಕಾರದಲ್ಲಿರುವುದಿಲ್ಲ. ಕೂಡಲೇ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗೆಗೆ ನನಗೆ ಎಳ್ಳಷ್ಟೂ ಗೌರವ ಕಡಿಮೆ ಆಗಿಲ್ಲ. ಅವರ ಮೇಲಿನ ಪ್ರೀತಿ ವಿಶ್ವಾಸ ಅಚಲ’ ಎಂದು ಚಿರಾಗ್ ಹೇಳಿಕೊಂಡಿರುವುದು ಎನ್ ಡಿ ಎ ವಿಶೇಷವಾಗಿ ಬಿಜೆಪಿ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಬಿಹಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ತಮ್ಮ ಈ ಹೇಳಿಕೆಗಾಗಿ ಸಚಿವ ಸ್ಥಾನದಿಂದ ತೆಗೆದರೂ ನಾನು ಹೆದರುವುದಿಲ್ಲ ಎಂದಿರುವುದನ್ನು ನೋಡಿದರೆ ಎಲ್ಲರೂ ಮೋದಿ ಆಡಳಿತದ ಬಗೆಗೆ ಉಸಿರೆತ್ತದಿರುವಾಗ ಸರ್ಕಾರಕ್ಕೆ ಮುಜುಗರ ಮತ್ತು ಸವಾಲು ಹಾಕಿದಂತಹ ಹೇಳಿಕೆಗೆ ಬಂದ ಶಕ್ತಿ ಎಲ್ಲಿಯದು ಎನ್ನುವ ಅಚ್ಚರಿ ಹುಟ್ಟಿಸದೆ ಇರದು.

ಇಷ್ಟು ಮಾತ್ರವಲ್ಲದೆ, ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಖಾಸಗೀಕರಣದಿಂದ ಉದ್ಯೋಗಗಳು ಕಡಿಮೆ ಆಗುತ್ತಿರುವುದರಿಂದ ಖಾಸಗಿ ಕ್ಷೇತ್ರದಲ್ಲಿಯೂ ಉದ್ಯೋಗ ಮೀಸಲಾತಿ ವ್ಯವಸ್ಥೆ ಜರಿಗೆ ತರಬೇಕು ಎಂದು ಪ್ರತಿಪಾದಿಸಿzರೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಕಾರ್ಯದರ್ಶಿ ಮಟ್ಟದ ೪೫ ಉನ್ನತ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಹಿನ್ನೆಲೆಯಲ್ಲಿ ಖಾಸಗಿ ವಲಯದಲ್ಲಿ ಕೆಲಸ ಮಾಡಿದ ಮತ್ತು ಕೆಲವು ನಿವೃತ್ತ ಮಂದಿಯನ್ನು ಲ್ಯಾಟರಲ್ ಪದ್ಧತಿಯ ಮೂಲಕ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಕೈಗೊಂಡಾಗ ಚಿರಾಗ್ ಪಾಸ್ವಾನ್ ಬಲವಾಗಿ ವಿರೋಧಿಸಿದರು. ಆರ್‌ಎಸ್ ಎಸ್ ಹಿನ್ನೆಲೆಯ ಬಹುತೇಕ ಮಂದಿಯನ್ನು ಈ ಲ್ಯಾಟರಲ್ ಪದ್ಧತಿಯ ಮೂಲಕ ಪ್ರಧಾನಿ ಮೋದಿ ನೇಮಕ ಮಾಡಿಕೊಳ್ಳಲು ಹೊರಟಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪವೂ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ಬಂದಾಗ ಈ ವಿವಾದಿತ ನೇಮಕವನ್ನೇ ಸರ್ಕಾರ ಕೈಬಿಟ್ಟಿತು.

೧೯೭೭ರಲ್ಲಿ ಜನತಾ ಪಕ್ಷವು ಅಧಿಕಾರಕ್ಕೆ ಬಂದಾಗ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಜಾರಿಗೆ ತಂದ ಲ್ಯಾಟರಲ್ ನೇಮಕ ಪದ್ಧತಿಯಿಂದ ಅರ್ಥಶಾಸಜ್ಞ ಬಿಮಲ್ ಜಲಾನ್ ಕಾರ್ಯದರ್ಶಿಯಾಗಿ, ವಿ.ಪಿ. ಸಿಂಗ್ ಆಡಳಿತದಲ್ಲಿ ರಿಸರ್ವ್ ಬ್ಯಾಂಕ್ ಗೌವರ್ನರ್ ಆಗಿ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಡಾ. ಮನಮೋಹನ್ ಸಿಂಗ್ , ರಘುರಾಂ ರಂಗರಾಜನ್ ಮುಂತಾದವರು ರಿಸರ್ವ್ ಬ್ಯಾಂಕ್ ಗೌವರ್ನರ್ ಆಗಿ ನೇಮಕಗೊಂಡ ಉದಾಹರಣೆ ಇದೆ.

ಆದರೆ ೨೦೧೮ರಲ್ಲಿ ಮೋದಿ ಸರ್ಕಾರ ೬೦ ಮಂದಿಯನ್ನು ಲ್ಯಾಟರಲ್ ನೇಮಕ ಪದ್ಧತಿಯಿಂದ ನೇಮಕ ಮಾಡಿಕೊಂಡಿತು. ಇದರ ಪರಿಣಾಮವನ್ನು ಬಹುಶಃ ಯಾರೂ ಗಮನಿಸಲಿಲ್ಲ! ೨೦೨೪ರಲ್ಲಿ ಮತ್ತೆ ೪೫ ಮಂದಿ ನೇಮಕ ಪ್ರಕ್ರಿಯೆ ಕೈಗೊಂಡಾಗ, ಚಿರಾಗ್ ಪಾಸ್ವಾನ್ ಅಲ್ಲದೆ ಕೆಲವು ಪರಿಶಿಷ್ಟ ಜತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನಾಯಕರಿಂದಲೂ ವಿರೋಧ ಬಂದಿತು. ಈ ಪದ್ಧತಿಯಿಂದ ತಳಸಮುದಾಯದ ಅಧಿಕಾರಿಗಳು ಉನ್ನತ ಹುದ್ದೆಗಳಿಗೆ ನೇಮಕವಾಗುವ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂಬ ಆಕ್ರೋಶ ವ್ಯಕ್ತವಾದ್ದರಿಂದ ಸರ್ಕಾರ ಈ ಲ್ಯಾಟರಲ್ ನೇಮಕ ಪ್ರಕ್ರಿಯೆಯನ್ನು ಕೈಬಿಡಬೇಕಾಯಿತು.

ಚಿರಾಗ್ ಪಾಸ್ವಾನ್ ಇಷ್ಟಕ್ಕೆ ಸುಮ್ಮನಾಗಿಲ್ಲ. ಮುಂದೆ ನಡೆಯಲಿರುವ ಪಂಜಬ್ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ. ಎನ್ ಡಿ ಎ ಮಿತ್ರ ಪಕ್ಷಗಳು ವಿಶೇಷವಾಗಿ ಬಿಜೆಪಿ ಸೀಟು ಹೊಂದಾಣಿಕೆ ಮಾಡಿಕೊಂಡರೆ ಸಂತೋಷ. ಒಂದು ವೇಳೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಲೋಕಜನಶಕ್ತಿ ಪಕ್ಷವು ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ ಎಂದು ಎನ್‌ಡಿಎದಲ್ಲಿನ ಮಿತ್ರಪಕ್ಷಗಳ ನಾಯಕನೊಬ್ಬನಿಂದ ಬಂದಿರುವ ಹೇಳಿಕೆ ಮುಂದೆ ಯಾವ ತಿರುವು ತೆಗೆದುಕೊಳ್ಳಲಿದೆ ಎನ್ನುವುದನ್ನು ಹೇಳಲಾಗದು. ಚಿರಾಗ್ ಪಾಸ್ವಾನ್ ಅವರ ವೇಷಭೂಷಣದಿಂದ ವಿಚಲಿತರಾಗಿರುವ ಬಹುತೇಕ ದಲಿತ ವರ್ಗದ ಏಳಿಗೆ ಬಯಸುವ ಮಂದಿ ಇವ ನಮ್ಮವ ನಾಗಲಾರ ಎಂದುಕೊಂಡಿದ್ದಾಗ ಈಗಿನ ಅವರ ದಲಿತಪರವಾದ ಗಟ್ಟಿದನಿ ಅಚ್ಚರಿ ಮೂಡಿಸದೇ ಇರದು

” ಚಿರಾಗ್ ಪಾಸ್ವಾನ್ ಅವರ ವೇಷಭೂಷಣದಿಂದ ವಿಚಲಿತರಾಗಿರುವ ಬಹುತೇಕ ದಲಿತ ವರ್ಗದ ಏಳಿಗೆ ಬಯಸುವ ಮಂದಿ ಇವ ನಮ್ಮವನಾಗಲಾರ ಎಂದುಕೊಂಡಿದ್ದಾಗ ಈಗಿನ ಅವರ ದಲಿತಪರವಾದ ಗಟ್ಟಿದನಿ ಅಚ್ಚರಿ ಮೂಡಿಸದೇ ಇರದು.”

 

 

Tags:
error: Content is protected !!