Mysore
30
scattered clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ

೨೨ ವಾರಗಳ ಗಾಂಧಿ ಅರಿವಿನ ಯಾನ 

ಮಹಾತ್ಮ ಗಾಂಧೀಜಿಯವರ ಜೊತೆಗಿನ ನಿಮ್ಮ ‘ಆಂದೋಲನ’ ಪತ್ರಿಕೆಯ ಅರಿವಿನ ಯಾನದ ಈ ವರ್ಷದ ಕೊನೆಯ ಪುಟ ಇದು. ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಹಯೋಗದಲ್ಲಿ ನಡೆದ ಇಪ್ಪತ್ತೆರಡು ವಾರಗಳ ಈ ಅರಿವಿನ ನಡಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ವಿನೂತನ ಪ್ರಯೋಗವಾಗಿತ್ತು. ಗಾಂಧೀಜಿಯ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಯ ಶತಮಾನೋತ್ಸವದ ಸಂದರ್ಭದಲ್ಲಿ ಮೂಡಿಬಂದ ವಾರದ ಈ ವಿಶೇಷ ಪುಟದ ಉದ್ದೇಶ ಎಳೆಯ ಮಕ್ಕಳ ಅರಿವಿನ ಅಂಗಳಕ್ಕೆ ಗಾಂಧಿ ಚಿಂತನೆಗಳ ಸಾರವನ್ನು ತಲುಪಿಸುವುದಾಗಿತ್ತು. ಕಳೆದ ಇಪ್ಪತ್ತೆರಡು ಶನಿವಾರಗಳಂದು ೫೭ ಶಾಲೆಗಳ ೧,೨೦೦ಕ್ಕೂ ಹೆಚ್ಚು ಮಕ್ಕಳು ಗಾಂಧಿ ಚಿಂತನೆಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ೨೨೭ ಮಕ್ಕಳು ಬಹುಮಾನಗಳಿಗೆ ಆಯ್ಕೆಯಾಗಿದ್ದಾರೆ. ‘ಆಂದೋಲನ’ ಕರೆಕೊಟ್ಟ ಚಿತ್ರಕಲಾ ಸ್ಪರ್ಧೆಯಲ್ಲಿ ೧೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ೨೪ ಪುಟಾಣಿ ಕಲಾವಿದರು ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಗಾಂಧಿ ಅರಿವಿನ ಈ ಯಾನದ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಇತಿಹಾಸವನ್ನು ತಿರುಚುವ ವಿಕೃತರ ಕೈಗೆ ಸಿಲುಕಿದ ಮಹಾತ್ಮ ಗಾಂಧಿಯ ಹೆಸರು ಅವಮಾನಕ್ಕೆ, ಮೂದಲಿಕೆಗೆ ಬಲಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಗಾಂಧಿ ಚಿಂತನೆಯ ಘನತೆ, ಅಂತಃಕರಣ ಮತ್ತು ಸಾರ್ವತ್ರಿಕತೆಯ ಮಹತ್ವವನ್ನು ಎಳೆಯ ಮಕ್ಕಳ ಮನಸ್ಸಿಗೆ ದಾಟಿಸುವುದು ಈ ಅಭಿಯಾನದ ಗುರಿಯಾಗಿತ್ತು. ಸರಳವಾಗಿ ಮತ್ತು ನಿರ್ದಿಷ್ಟವಾಗಿ ಗಾಂಧಿ ಚಿಂತನೆಯ ಸಾರವನ್ನು ಮಕ್ಕಳು ಮತ್ತು ಓದುಗರಿಗೆ ತಿಳಿಸುವುದು ವಾರದ ಈ ಗಾಂಧಿ ಪುಟದ ಉದ್ದೇಶವಾಗಿತ್ತು. ಮಹಾತ್ಮ ಗಾಂಧಿಯವರ ಆತ್ಮಕತೆಯ ತುಣುಕುಗಳು, ಗಾಂಧಿ ಚಿಂತನೆಯಿಂದ ಪ್ರೇರಿತರಾಗಿ ತಮ್ಮ ಬದುಕಿನ ಮಗ್ಗಲು ಬದಲಿಸಿದವರ ಜೀವನ ಕತೆಗಳು. ಗಾಂಧಿ ಚಿಂತನೆಯ ಕುರಿತು ಕನ್ನಡದ ಲೇಖಕ ಕಲಾವಿದರ ಬರಹಗಳು, ಶಾಲಾ ಮಕ್ಕಳ ಪುಟ್ಟ ಪ್ರಬಂಧಗಳು ಮತ್ತು ಚಿತ್ರಗಳು ಎಲ್ಲವೂ ಈ ಗುರಿಯನ್ನು ಹೊಂದಿದ್ದವು. ಈ ಇಪ್ಪತ್ತೆರಡು ಶನಿವಾರಗಳ ಅರಿವಿನ ಯಾನದಲ್ಲಿ ಓದುಗರಾಗಿ ಪಾಲುಗೊಂಡ ನಿಮಗೂ ಕೂಡ ನಮ್ಮ ಧನ್ಯವಾದಗಳು.

Tags:
error: Content is protected !!