Mysore
31
broken clouds

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಕಾಂಚಳ್ಳಿ ಮತ್ತು ದಾಸನದೊಡ್ಡಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮಂಗಳವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಮಾಜಿ ಶಾಸಕ ನರೇಂದ್ರ ಅವರು ಜೊತೆಗಿದ್ದು, ಮನೆ-ಮನೆಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಸೋಮವಾರ ಮತ್ತು ಮಂಗಳವಾರ ತಡರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದರೂ, ಕೆಲವೆಡೆ ಅತಿವೃಷ್ಟಿಯಿಂದ ಸಂಕಷ್ಟ ಎದುರಾಗಿದೆ.

ಮಂಗಳವಾರ ತಡರಾತ್ರಿ ಕಾಂಚಳ್ಳಿ ಗ್ರಾಮದಲ್ಲಿ ಮಂಡಿ ಹಳ್ಳ ತುಂಬಿ ಹರಿದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಗ್ರಾಮದ ಇರಸೇಗೌಡ ಎಂಬುವವರು ಜಾನುವಾರುಗಳಿಗಾಗಿ ಶೇಖರಿಸಿದ್ದ ನಾಲ್ಕು ಟ್ರ್ಯಾಕ್ಟರ್ ಜೋಳದ ಮೇವು ಸಂಪೂರ್ಣ ನೀರುಪಾಲಾಗಿ ಸುಮಾರು 30 ಸಾವಿರ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ.

ಅದೇ ರೀತಿ ತುಳಸಮ್ಮ, ಮನ್ನಾ, ದೇಗೌಡ, ಕಾಳೇಗೌಡ, ಪ್ರದೀಪ್, ನಾಗರಾಜು, ಶಿವಲಿಂಗಚಾರಿ, ಶ್ರೀನಿವಾಸ್, ವೆಂಕಟರಾಜೇಗೌಡ, ಕಾಂತಮ್ಮ, ರವಿ ಸೇರಿದಂತೆ 50ಕ್ಕೂ ಹೆಚ್ಚು ಮನೆಗಳಿಗೆ ಮೊಣಕಾಲುದ್ದ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ-ಧಾನ್ಯ, ಅಕ್ಕಿ, ಬೇಳೆ, ಆಹಾರ ಪದಾರ್ಥಗಳು, ಎಲೆಕ್ಟ್ರಿಕ್ ಉಪಕರಣಗಳು, ಕೋಳಿ ಮೇವು ಸಂಪೂರ್ಣ ನೀರುಪಾಲಾಗಿ ಲಕ್ಷಾಂತರ ರೂಪಾಯಿ ನಷ್ಟ ಅಂದಾಜಿಸಲಾಗಿದೆ.

ಸಚಿವರಿಂದ ಪರಿಹಾರದ ಭರವಸೆ: ಸ್ಥಳ ಪರಿಶೀಲನೆ ನಂತರ ಮಾತನಾಡಿದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು, “ಮಳೆ ನೀರು ನುಗ್ಗಿ ಹಾನಿಗೊಳಗಾದ ಎಲ್ಲ ಮನೆಗಳ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡುತ್ತೇನೆ. ಅಂತಿಮ ಪಟ್ಟಿ ಬಂದ ಕೂಡಲೇ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು. ಅಲ್ಲದೆ, ಗ್ರಾಮದಲ್ಲಿ ಮತ್ತೆ ಇಂತಹ ಅನಾಹುತ ತಪ್ಪಿಸಲು ಎರಡು ಸೇತುವೆ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಲ್ಲಿಸುವಂತೆ ನೀರಾವರಿ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.

ಸ್ಮಶಾನದ ಕಾಂಪೌಂಡ್ ಕುಸಿತ: ಇದೇ ವೇಳೆ ಕುರುಬರದೊಡ್ಡಿ ಗ್ರಾಮದ ಮುಸ್ಲಿಂ ಸಮುದಾಯದ ಸ್ಮಶಾನದ ಕಾಂಪೌಂಡ್ ಗೋಡೆ ಮಳೆ ನೀರಿಗೆ ಕುಸಿದು ಬಿದ್ದಿರುವುದನ್ನು ಪರಿಶೀಲಿಸಿದ ಸಚಿವರು, “ಎಷ್ಟು ಮೀಟರ್ ಕಾಂಪೌಂಡ್ ಹಾನಿಯಾಗಿದೆ ಎಂಬ ಮಾಹಿತಿ ನೀಡಿದರೆ, ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಅನುದಾನ ಕೊಡಿಸಿ ಶೀಘ್ರದಲ್ಲೇ ನೂತನ ಕಾಂಪೌಂಡ್ ನಿರ್ಮಿಸಿ ಕೊಡಲಾಗುವುದು” ಎಂದು ಭರವಸೆ ನೀಡಿದರು.

ನಂತರ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನದೊಡ್ಡಿ ಗ್ರಾಮಕ್ಕೂ ಭೇಟಿ ನೀಡಿ, ನೀರು ನುಗ್ಗಿ ಗೋಡೆ ಕುಸಿದ ಮನೆಗಳನ್ನು ಪರಿಶೀಲಿಸಿ, ಅತಿ ಶೀಘ್ರದಲ್ಲಿ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ಅತಿ ಹೆಚ್ಚು ನಷ್ಟಕ್ಕೊಳಗಾಗಿ ತುಳಸಮ್ಮ ಮತ್ತು ಜಾನುವಾರುಗಳಿಗೆ ಮೇವಿಲ್ಲ ಎಂದು ಅಳಲು ತೋಡಿಕೊಂಡ ಇರಸೇಗೌಡ ರವರಿಗೆ ಸಚಿವರು ವೈಯಕ್ತಿಕವಾಗಿ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮದುವನಹಳ್ಳಿ ಶಿವಕುಮಾರ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜು, ಮುಖಂಡರಾದ ನಾರಾಯಣ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:
error: Content is protected !!