ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ.
ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನ್ನುವ ಮಟ್ಟಿಗೆ ಮೊಬೈಲ್‌ಗೆ ಅಂಟಿಕೊಂಡಿರುತ್ತಾರೆ ಬಹಳಷ್ಟು ಮಂದಿ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಟೆಲಿಕಾಂ ಕಂಪೆನಿಗಳು ಬೇಕಾಬಿಟ್ಟಿ ರಿಚಾರ್ಜ್ ದರಗಳನ್ನು ಏರಿಸುತ್ತಿವೆ.
ವರ್ಷದಿಂದ ವರ್ಷಕ್ಕೆ ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚಾದಂತೆ ರಿಚಾರ್ಜ್ ದರವು ಕೂಡ ಎಗ್ಗಿಲ್ಲದೆ ಹೆಚ್ಚಾಗತೊಡಗಿದೆ. ವಿಧಿ ಇಲ್ಲದೆ ಗ್ರಾಹಕರು ಎಷ್ಟೇ ದರ ಏರಿಕೆಯಾದರೂ ರಿಚಾರ್ಜ್ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ವಾಯಿದೆ ಮುಗಿದ ಮೇಲೆ ಒಂದು ಅಥವಾ ಎರಡೇ ದಿನಕ್ಕೆ ಒಳ ಬರುವ ಕರೆಗಳನ್ನು ನಿಲ್ಲಿಸಲಾಗುತ್ತದೆ. ದುಬಾರಿ ಹಣವನ್ನು ಕೊಟ್ಟು ರಿಚಾರ್ಜ್ ಮಾಡಿಸಿಕೊಂಡರು ಒಮ್ಮೊಮ್ಮೆ ನೆಟ್‌ವರ್ಕ್ ಸಿಗದೇ ಗ್ರಾಹಕರು ಪರದಾಡುತ್ತಾರೆ. ಇನ್ನು ಆಶ್ಚರ್ಯವೆಂದರೆ ೩೦ ದಿನಗಳಿಗೆ ವಾಯಿದೆಯನ್ನು ನೀಡುವ ಬದಲು ೨೮ ದಿನಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಒಂದು ರೀತಿಯಲ್ಲಿ ಟೆಲಿಕಾಂ ಕಂಪೆನಿಗಳು ಗ್ರಾಹಕರಿಂದ ಹಗಲು ದರೋಡೆಯನ್ನು ಮಾಡುತ್ತಿವೆ. ಉತ್ತಮ ಸೇವೆಯ ಜೊತೆಗೆ ಗ್ರಾಹಕರಿಗೆ ಕೈಗೆಟುಕುವ ರಿಚಾರ್ಜ್ ಯೋಜನೆಗಳು ದೊರೆಯುವಂತೆ ನೋಡಿಕೊಳ್ಳಬೇಕಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಗಮನಹರಿಸಬೇಕಾಗಿದೆ.
-ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾಲ್ಲೂಕು


