Mysore
24
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಜನರ ನಂಬಿಕೆ ಕಳೆದುಕೊಂಡ ಚುನಾವಣಾ ಆಯೋಗ

ಪ್ರಕಾಶ್ ರಾಜ್

 ಭಾರತದ ಚುನಾವಣಾ ಆಯೋಗ ಈಗ ಆಂತರಿಕ ಕ್ಷೋಭೆಯಲ್ಲಿ ಸಿಲುಕಿದೆ. ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳನ್ನು ಇಬ್ಬರು ಆಯುಕ್ತರು ಆಕ್ಷೇಪಿಸಿರುವುದು ದೇಶದಲ್ಲಿ ಬಹುದೊಡ್ಡ ಸಂಚಲನವನ್ನು ಹುಟ್ಟು ಹಾಕಿದೆ. ಪ್ರಜಪ್ರಭುತ್ವದ ಉಳಿವಿಗಾಗಿ ಹೋರಾಟದ ಕರೆ ಮೊಳಗಿದೆ. ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಹುಭಾಷಾ ನಟ, ಚಿಂತಕ ಪ್ರಕಾಶ್ ರಾಜ್ ‘ಆಂದೋಲನ’ಕ್ಕೆ ಬರೆದ ವಿಶೇಷ ಲೇಖನ.

ಕೇಂದ್ರ ಚುನಾವಣಾ ಆಯೋಗ ಜನರ ನಂಬಿಕೆ ಕಳೆದುಕೊಂಡಿದೆ ಎನ್ನುವುದು ಈಗ ಕೇವಲ ಅಭಿಪ್ರಾಯವಲ್ಲ, ಆಯೋಗವೇ ಸ್ವತಃ ಸಾಬೀತುಮಾಡಿ ಕೊಂಡಿರುವ ಸತ್ಯ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್  ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳು, ಇದಕ್ಕೆ ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಗಳು ಆಯೋಗವೇ ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ಗಮನಿಸಿದರೆ ಒಂದಂತೂ ಸ್ಪಷ್ಟ. ಇಲ್ಲಿ ಹೊಸ ಮತದಾರರನ್ನು ಒಳಗೊಳಿಸುವ ವಿಚಾರವೇ ನಡೆದಿಲ್ಲ. ಇಬ್ಬರು ಆಯುಕ್ತರು ಮೊದಲನೆಯದಾಗಿ ಆಕ್ಷೇಪಿಸಿದ್ದು ಇದನ್ನೇ. ಸ್ವಾತಂತ್ರ್ಯ ನಂತರ ಇದುವರೆಗೂ ೧೮ ವರ್ಷ ತುಂಬಿದ ಅರ್ಹ ಮತದಾರರು ಮತದಾನದ ಹಕ್ಕು ಪಡೆದುಕೊಳ್ಳಲು ಆಯೋಗಕ್ಕೆ ಕೊಡಬೇಕಾಗಿದ್ದುದು ತನ್ನ ವಯಸ್ಸಿನ ಮತ್ತು ವಾಸದ ಪ್ರಮಾಣ ಪತ್ರ ಮಾತ್ರ. ಈಗ ಚುನಾವಣಾ ಆಯೋಗ ಕುಲ, ಗೋತ್ರ ಎಲ್ಲವನ್ನೂ ಕೇಳುತ್ತಿದೆ. ನನ್ನ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ೨೦೦೨ ರಲ್ಲಿ ಎಲ್ಲಿ ಮತ ಚಲಾಯಿಸಿದ್ದರು ಎನ್ನುವ ಮಾಹಿತಿ ಚುನಾವಣಾ ಆಯೋಗಕ್ಕೆ ಯಾಕೆ ಬೇಕು?

ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ಮತ್ತೊಂದು ಪ್ರಶ್ನೆ ಚುನಾವಣಾ ಆಯೋಗದ ಕೇಂದ್ರೀಕರಣ. ಹಿಂದೆ ಮತದಾರರ ಪಟ್ಟಿಗೆ ಸಂಬಂಧಿಸಿದ ಅನೇಕ ಪ್ರಕ್ರಿಯೆಗಳಲ್ಲಿ ಸ್ಥಳೀಯ ಮಟ್ಟದ ಚುನಾವಣಾಧಿಕಾರಿಗಳ ಪಾತ್ರವೇ ಪ್ರಮುಖವಾಗಿತ್ತು. ಆದರೆ ಈಗ ನಿರ್ಧಾರದ ಅಧಿಕಾರ ಮೇಲ್ಮಟ್ಟದಲ್ಲಿ ಹೆಚ್ಚು ಕೇಂದ್ರೀಕೃತವಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಸಲ್ಲಿಸಲಾದ ದಾಖಲೆಗಳು ಮತ್ತು ಆಕ್ಷೇಪಣೆಗಳಿಗೆ ಸಮರ್ಪಕವಾಗಿ ಸ್ಪಂದಿಸಲಾಗುತ್ತಿಲ್ಲ. ಗೋವಾದಲ್ಲಿ ೯೭ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯ ಅಧಿಕಾರಿಗಳಿಂದ ಅರ್ಹರೆಂದು ಪರಿಗಣಿಸಲ್ಪಟ್ಟಿದ್ದರೂ ಅವರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲು ಆಗಲಿಲ್ಲ. ಇದಕ್ಕೆ ಕಾರಣ ದೆಹಲಿಯನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗಿರುವ ಈ ಕೇಂದ್ರೀಕೃತ ವ್ಯವಸ್ಥೆ. ಎಂತಹಾ ಘೋರ ಅಪರಾಧವಿದು!

ಚುನಾವಣಾ ಆಯೋಗ ನಿರ್ಧಾರಗಳನ್ನು ಕೈಗೊಳ್ಳುವಾಗ ಮೂವರೂ ಚುನಾವಣಾ ಆಯುಕ್ತರ ಒಮ್ಮತ ಇರಬೇಕು. ಕನಿಷ್ಠ ಬಹುಮತವಾದರೂ ಇರಬೇಕು. ಯಾಕೆಂದರೆ ಅದು ಆಯೋಗಕ್ಕೆ ಸಂವಿಧಾನವೇ ನೀಡಿರುವ ಹಕ್ಕು. ಈ ಸಂದರ್ಭದಲ್ಲಿ ಇಬ್ಬರು ಆಯುಕ್ತರು ‘ಇದು ಅಸಾಂವಿಧಾನಿಕ, ಇದು ತಪ್ಪು’ ಎಂದು ಹೇಳುತ್ತಿದ್ದರೂ ಅದನ್ನು ಪರಿಗಣಿಸದೆ ಮುಖ್ಯ ಚುನಾವಣಾ ಆಯುಕ್ತರಿಗೇ ಎ ಅಧಿಕಾರವಿರುವುದು ಎಂಬುದಾಗಿ ಬಿಂಬಿಸಲು ಪ್ರಯತ್ನಿಸಿದ್ದು ಏಕೆ? ಮೂಲಭೂತವಾಗಿ ಈ ಬಿಂಬಿಸುವಿಕೆಯೇ ಸಂವಿಧಾನ ಬಾಹಿರ. ಮೇಲಾಗಿ, ಇಬ್ಬರೂ ಈ ಮತದಾನದ ಹಕ್ಕನ್ನು ಮೊಟಕುಗೊಳಿಸುವುದೇ ತಪ್ಪು. ಆ ಅಧಿಕಾರವೇ ಆಯೋಗಕ್ಕಿಲ್ಲ ಅನ್ನುತ್ತಿದ್ದಾರೆ. ಹೀಗಿರುವಾಗ, ಜ್ಞಾನೇಶ್ ಕುಮಾರ್ ಸುಪರ್ದಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಯವರ ಪಕ್ಷದ ಚುನಾವಣಾ ಚಿಹ್ನೆಯನ್ನು ಕಿತ್ತುಕೊಂಡಿದ್ದಿರಲಿ, ದೆಹಲಿ ಚುನಾವಣೆಗಿಂತ ಮೊದಲು ಲಕ್ಷಾಂತರ ವೋಟುಗಳನ್ನು ರದ್ದುಪಡಿಸಿದ್ದಿರಲಿ, ಮಹಾರಾಷ್ಟ್ರದದ ವೋಟ್ ರದ್ದತಿಯಿರಲಿ ಎಲ್ಲವೂ ಕಾನೂನುಬಾಹಿರವೇ, ಅಸಾಂವಿಧಾನಿಕವೇ. ಈಗಿರುವುದು ಒಂದೇ ದಾರಿ – ಚುನಾವಣಾ ಆಯೋಗದ ನಡೆಗಳನ್ನು ಪ್ರಶ್ನೆ ಮಾಡುವುದು. ಯಾಕೆಂದರೆ ಸಾಕ್ಷಿಗಳು ಹೊರಗೆ ಬಂದಿವೆ. ಆಕ್ಷೇಪಿಸಿ ಬರೆದ ಇ-ಮೇಲ್‌ಗಳು ಲಭ್ಯವಾಗಿವೆ. ಆಯೋಗದ ನಡೆಯೇ ಸಂವಿಧಾನ ಬಾಹಿರವೆಂದು ಖಾತರಿಯಾಗಿದೆ. ಇವೆಲ್ಲದರ ಸೂತ್ರಧಾರರಾಗಿರುವ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕಾಕ್ರೋಚ್ ಜನತಾ ಪಕ್ಷ ಹೇಳಿದಂತೆ ನಿರ್ಧಾರ ಕೈಗೊಂಡಿರುವ ಅಷ್ಟು ಫೈಲ್‌ಗಳನ್ನು ಸುಪ್ರೀಂಕೋರ್ಟ್‌ಗೆ ಒಪ್ಪಿಸಬೇಕು. ಏಕೆಂದರೆ, ಆಯೋಗಕ್ಕೆ ಯಾವಾಗ ಬೆಂಕಿ ಹೊತ್ತಿಕೊಳ್ಳುತ್ತದೆ ಅಂತ ನಮಗೆ ಗೊತ್ತಿಲ್ಲ ಅಲ್ವಾ? ಈಗಾಗಲೇ ನಾಲ್ಕು ಸಾವಿರ ಇಎಂಐಗಳಿಗೆ ಬೆಂಕಿ ಹೊತ್ತಿರುವುದು ನಾವೆ ನೋಡಿದ್ದೀವ?

ಹಾಗೆ ನೋಡಿದರೆ, ಜ್ಞಾನೇಶ್ ಕುಮಾರ್ ಆಯ್ಕೆಯ ಕಾನೂನನ್ನು ಪಾಲಿಸಲಾಗಿಲ್ಲ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ, ಪ್ರಧಾನ ಮಂತ್ರಿ ಮತ್ತು ಲೋಕಸಭೆಯ ವಿರೋಧಪಕ್ಷದ ನಾಯಕರು ಸೇರಿ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ಆಯುಕ್ತರನ್ನು ಆಯ್ಕೆ ಮಾಡಬೇಕು. ಆದರೆ ಇಲ್ಲಿ ಹೊಸ ನಿಯಮವೊಂದನ್ನು ತಂದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲಾಯಿತು. ಪ್ರಧಾನಮಂತ್ರಿಗಳು ಹಾಗೂ ಅವರು ಆಯ್ಕೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೇರಿ ಜ್ಞಾನೇಶ್ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಅತ್ಯಂತ ಬುದ್ಧಿವಂತಿಕೆಯಿಂದ ೨:೧ ಬಹುಮತ ಬರುವಂತೆ ಮಾಡಿಕೊಂಡಿರುವ ವ್ಯವಸ್ಥೆ ಇದು. ಇದರ ಜೊತೆಗೆ ಸ್ವತಂತ್ರ ಸಂಸ್ಥೆಯಾಗಿರುವ ಚುನಾವಣಾ ಆಯೋಗಕ್ಕೆ ನ್ಯಾಯಾಂಗದ ಇಮ್ಯುನಿಟಿ (ಜ್ಯೂಡಿಷಿಯಲ್ ಇಮ್ಯುನಿಟಿ) ಕೊಡಲಾಯಿತು. ಸಂವಿಧಾನದ ಯಾವ ಆಧಾರದ ಮೇಲೆ ಇದನ್ನು ಕೊಡಲಾಯಿತು? ಜ್ಞಾನೇಶ್ ಕುಮಾರ್ ಆಯೋಗದ ಮುಖ್ಯಸ್ಥರಾಗಿದ್ದಾಗ ಮತ್ತು ನಿವೃತ್ತರಾದ ಮೇಲೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗದು ಎನ್ನುವ ನಿಯಮನ್ನು ಯಾಕೆ ತರಲಾಯಿತು? ಕಳ್ಳತನ ಮಾಡುವ ಮುಂಚೆಯೇ ಮೈಗೆ ಎಣ್ಣೆ ಸವರಿಕೊಳ್ಳುವ ಕುತಂತ್ರವೇ ಇದು? ನಿಜಕ್ಕೂ ಈ ದೇಶದಲ್ಲಿ ಏನಾಗುತ್ತಿದೆ? ಎಸ್‌ಐಆರ್ ಇಡೀ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಮತ್ತೆ ಹಿಂದಕ್ಕೆ ಹೋಗಿ ೨೦೨೫ರ ಮತದಾರರ ಪಟ್ಟಿಯನ್ನೇ ಮುಂದುವರಿಸಬೇಕು. ಇಡೀ ದೇಶವನ್ನು ಪರೀಕ್ಷೆಗೆ ಕೂರುವಂತೆ ಮಾಡಿರುವ ಈ ಎಸ್‌ಐಆರ್ ವ್ಯವಸ್ಥೆ ರದ್ದಾಗಬೇಕು. ಯಾಕೆಂದರೆ ನೀವು ಮಾಡಿರುವ ತಪ್ಪಿಗೆ ನಾವು, ಈ ದೇಶದ ಜನಸಾಮಾನ್ಯರು ಕ್ಯೂನಲ್ಲಿ ನಿಲ್ಲುವಂತಾಗಬಾರದು.

ಫಾರಂ ೬ ರಲ್ಲಿ ಜುಲೈನಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಹೊಸ ಮತದಾರರು ತಮ್ಮ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಮತದಾನ ಮಾಡಿದ ಮಾಹಿತಿ ಕೊಡಬೇಕು. ಮನೆ ಸ್ಥಳಾಂತರಿಸಿರುವವರು, ವೋಟು ಹಾಕದಿರುವವರು ಮತ್ತೆ ಫಾರಂ ೬ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ತಾನು ಇದುವರೆಗೆ ಮತದಾನ ಮಾಡಿಲ್ಲ ಎಂದೂ ಘೋಷಣೆ ಮಾಡಿಕೊಳ್ಳಬೇಕು. ಇದರ ಜೊತೆಗೆ ತಾನು ಘೋಷಣೆ ಮಾಡಿರುವುದು ಸುಳ್ಳಾದರೆ ತನ್ನನ್ನು ಬಂಧಿಸಬಹುದು ಎನ್ನುವ ನಿಯಮವನ್ನೂ ಒಪ್ಪಿಕೊಳ್ಳಬೇಕು. ಮನೆ ಶಿಫ್ಟ್‌  ಮಾಡಿಕೊಂಡಿರುವ, ಇದಕ್ಕಿಂತ ಮೊದಲು ಮತ ಚಲಾಯಿಸಿರುವ ನಾನೇಕೆ ಈ ಘೋಷಣೆ ಮಾಡಿಕೊಳ್ಳಬೇಕು? ಇವೆಲ್ಲವನ್ನೂ ಸರಿಪಡಿಸಬೇಕು ಅಂದ್ರೆ ಜನ ಬೀದಿಗಿಳಿಯಬೇಕು.

ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಪ್ರಕ್ರಿಯೆ ಸಂವಿಧಾನಬದ್ಧವಾಗಿ ನಡೆಯುತ್ತಿದೆ ಎಂಬುದು ಬಿಜೆಪಿ ವಾದ. ಆದರೆ, ಇಲ್ಲಿ ಪ್ರಶ್ನೆ ಭಿನ್ನಾಭಿಪ್ರಾಯದ ಬಗ್ಗೆ ಅಲ್ಲ. ಸಂವಿಧಾನ ಬದ್ಧತೆಯ ಪ್ರಶ್ನೆ. ಈ ಪ್ರಕ್ರಿಯೆ ಸಂವಿಧಾನಬದ್ಧವಾಗಿಲ್ಲ, ಕಾನೂನುಬದ್ಧವಾಗಿಲ್ಲ ಅಂತ ಇಬ್ಬರು ಆಯುಕ್ತರು ಹೇಳುತ್ತಿದ್ದಾರೆ. ಅಂದರೆ ಅದು ಕೇವಲ ಭಿನ್ನಾಭಿಪ್ರಾಯ ಅಲ್ಲ, ಸಂವಿಧಾನದ ಪ್ರಕಾರ ಈ ಪ್ರಕ್ರಿಯೆಯನ್ನು ಮಾಡಬೇಕಾದರೆ ಬೇರೆ ರೀತಿಯ ಕಾನೂನು ಪ್ರಕ್ರಿಯೆ ಅನುಸರಿಸಬೇಕು ಅಂದಿದ್ದಾರೆ. ಹೀಗಿರುವಾಗ ಇದನ್ನು ಕೇವಲ ಭಿನ್ನಾಭಿಪ್ರಾಯ ಎಂದು ಹೇಗೆ ಬದಿಗೊತ್ತುವುದು? ಇದು ಸರ್ಕಾರದ ವತಿಯಿಂದಾದ ಅಪರಾಧ. ಇನ್ನು ಜ್ಞಾನೇಶ್ ಕುಮಾರ್ ಈ ದೇಶದ ಸಾರ್ವಭೌಮತಕ್ಕೇ ಸವಾಲೆಸೆದಿದ್ದಾರೆ. ಅವರು ರಾಜೀನಾಮೆ ಕೊಡುವುದಷ್ಟೇ ಅಲ್ಲ, ಈ ದೇಶದ ಜನತೆಗೆ ಮಾಡಿರುವ ದ್ರೋಹಕ್ಕೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಇದರ ಜೊತೆಗೆ ಯಾರ ಆದೇಶದ ಮೇರೆಗೆ ಇಂತಹ ಸಂವಿಧಾನಬಾಹಿರ ಕೃತ್ಯವನ್ನು ಮಾಡಿದರು ಎನ್ನುವುದರ ಬಗ್ಗೆಯೂ ತನಿಖೆಯಾಗಬೇಕು. ಅದು ಅಮಿತ್ ಶಾ ಮತ್ತು ನರೇಂದ್ರ ಮೋದಿಯಾಗಿದ್ದರೆ ಈ ದೇಶದ ಸಂವಿಧಾನವನ್ನು ನಾಶಪಡಿಸಲು ಯತ್ನಿಸಿದ್ದಕ್ಕೆ ಅವರ ವಿರುದ್ಧವೂ ಪ್ರಕರಣ ದಾಖಲಾಗಬೇಕು. ಅವರಿಬ್ಬರನ್ನೂ ದೇಶದ್ರೋಹಿಗಳೆಂದು ಘೋಷಿಸಬೇಕು.

* ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೊಸ ಮತದಾರರನ್ನು ಒಳಗೊಳಿಸುವ ವಿಚಾರವೇ ನಡೆದಿಲ್ಲ

* ಆಯೋಗದ ನಡೆಯೇ ಸಂವಿಧಾನ ಬಾಹಿರ; ಇವೆಲ್ಲದರ ಸೂತ್ರದಾರ ಜ್ಞಾನೇಶ್ ಕುಮಾರ್

*  ಜ್ಞಾನೇಶ್ ಏಕಪಕ್ಷೀಯ ನಿರ್ಧಾರ ಆಯೋಗ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿ

” ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಮತ್ತಷ್ಟು ಸುಧಾರಣೆ ತರಬೇಕು. ಆಯೋಗ ಮತ್ತಷ್ಟು ಜನಪರವಾಗಿರಬೇಕು. ಜನತಂತ್ರವಾಗಿರಬೇಕು” 

 

 

Tags:
error: Content is protected !!