Mysore
24
overcast clouds

Social Media

ಶುಕ್ರವಾರ, 25 ಸೆಪ್ಟೆಂಬರ್ 2026
Light
Dark

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ 

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಂದ ಹಿಡಿದು ವಿವಿಧ ರಾಷ್ಟ್ರೀಯ ಗೌರವಗಳವರೆಗೆ ಬಹುತೇಕ ಪ್ರಮುಖ ಸಮಾರಂಭಗಳು ರಾಷ್ಟ್ರ ರಾಜಧಾನಿಯ ನಡೆಯುವುದು ರೂಢಿ. ಸಿನಿಮಾ ಕ್ಷೇತ್ರವೂ ಅದಕ್ಕೆ ಹೊರತಾಗಿರಲಿಲ್ಲ. ೧೯೫೪ರಲ್ಲಿ ಆರಂಭವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಏಳು ದಶಕಗಳ ಕಾಲ ದೇಶದ ವಿವಿಧ ಭಾಷೆ, ಸಂಸ್ಕೃತಿ ಮತ್ತು ಚಿತ್ರಪರಂಪರೆಗಳನ್ನು ಗೌರವಿಸುತ್ತ ಬಂದಿವೆ. ಆದರೆ ಪ್ರಶಸ್ತಿ ಪ್ರದಾನ ಸಮಾರಂಭ ಮಾತ್ರ ಬಹುಮಟ್ಟಿಗೆ ದೆಹಲಿಯ ಕೇಂದ್ರೀಕೃತವಾಗಿತ್ತು.

ಈಗ ಆ ಚಿತ್ರ ಬದಲಾಗುತ್ತಿದೆ. ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ ೨೨ರಂದು ಗುಜರಾತಿನ ಏಕತಾ ನಗರದಲ್ಲಿ ನಡೆಯಿತು. ೨೦೨೪ರಲ್ಲಿ ಪ್ರಮಾಣಪತ್ರ ಪಡೆದ ಚಿತ್ರಗಳ ಸಾಧನೆಗಳನ್ನು ಗುರುತಿಸಿದ ಈ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಇದೇ ವೇದಿಕೆಯಲ್ಲಿ ೨೦೨೪ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರದಾನ ಮಾಡಲಾಯಿತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಕೊಂಡೊಯ್ಯುವ ಉದ್ದೇಶವನ್ನು ಪ್ರಕಟಿಸಿದ್ದಾರೆ. ಮುಂದಿನ ಪ್ರಶಸ್ತಿ ಸಮಾರಂಭಗಳಿಗೆ ತಮ್ಮ ಅತ್ಯುತ್ತಮ ಪ್ರವಾಸಿ ತಾಣಗಳನ್ನು ರಾಜ್ಯಗಳು ಪ್ರಸ್ತಾಪಿಸಬಹುದು ಎಂಬ ಸಂದೇಶವನ್ನೂ ನೀಡಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇನ್ನು ಮುಂದೆ ಕೇವಲ ಒಂದು ಸಭಾಂಗಣದ ಕಾರ್ಯಕ್ರಮವಾಗದೆ, ದೇಶದ ಸಾಂಸ್ಕೃತಿಕ ವೈವಿಧ್ಯ ಮತ್ತು ಪ್ರವಾಸಿ ತಾಣಗಳನ್ನು ಪರಿಚಯಿಸುವ ವೇದಿಕೆಯಾಗಬೇಕು ಎಂಬುದು ಈ ಹೊಸ ಆಲೋಚನೆಯ ಹಿಂದಿದೆ ಎನ್ನಲಾಗುತ್ತಿದೆ.

ಸಿನಿಮಾ ಎಂದರೆ ಕೇವಲ ಪರದೆಯ ಮೇಲೆ ಮೂಡುವ ಕಥೆಯಲ್ಲ. ಅದು ಒಂದು ಪ್ರದೇಶದ ಭೂಗೋಳ, ಭಾಷೆ, ಆಹಾರ, ಉಡುಪು, ವಾಸ್ತುಶಿಲ್ಪ, ಜನಪದ, ಸಂಗೀತ, ನಂಬಿಕೆ, ಬದುಕಿನ ಕ್ರಮ-ಎಲ್ಲವನ್ನೂ ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೊಂಡೊಯ್ಯಬಲ್ಲ ಮಾಧ್ಯಮ. ಹಾಗಿರುವಾಗ ಸಿನಿಮಾದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವೇ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುವುದರಲ್ಲಿ ಒಂದು ಸಾಂಸ್ಕೃತಿಕ ತರ್ಕವಿದೆ ಎನ್ನುವುದು, ಈ ಬದಲಾವಣೆಯನ್ನು ಅನುಮೋದಿಸುವ ಮಂದಿಯ ಅಭಿಪ್ರಾಯ.

ದೆಹಲಿಗೆ ಬಂದಾಗ ಪ್ರಶಸ್ತಿ ವಿಜೇತರು ದೇಶದ ರಾಜಧಾನಿಯನ್ನು ನೋಡುತ್ತಾರೆ. ಆದರೆ ಸಮಾರಂಭವೇ ಏಕತಾ ನಗರದಲ್ಲಿ ನಡೆದಾಗ, ದೇಶದ ವಿವಿಧ ಭಾಗಗಳಿಂದ ಬಂದ ಕಲಾವಿದರು ಮತ್ತು ಮಾಧ್ಯಮದವರು ಆ ಪ್ರವಾಸಿ ತಾಣದ ಬಗ್ಗೆ ನೇರ ಅನುಭವ ಪಡೆಯುತ್ತಾರೆ. ನಾಳೆ ಬೇರೆ ರಾಜ್ಯದಲ್ಲಿ ನಡೆದರೆ ಅಲ್ಲಿನ ಸ್ಥಳ, ಅಲ್ಲಿನ ಸಂಸ್ಕೃತಿ ಮತ್ತು ಅಲ್ಲಿನ ಚಿತ್ರೀಕರಣದ ಸಾಧ್ಯತೆಗಳೂ ಅವರ ಗಮನಕ್ಕೆ ಬರುತ್ತವೆ. ಇದು ಚಲನಚಿತ್ರ ಪ್ರವಾಸೋದ್ಯಮಕ್ಕೂ ಹೊಸ ಅವಕಾಶ.  ಈ ಸಂದರ್ಭದಲ್ಲಿ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ – ಇಫ್ಫಿ) ಪಯಣದ ನೆನಪಾಗುತ್ತದೆ.

೧೯೫೨ರಲ್ಲಿ ಆರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಲವು ವರ್ಷಗಳ ಕಾಲ ದೇಶದ ವಿವಿಧ ನಗರಗಳಲ್ಲಿ ನಡೆದಿತ್ತು. ದೆಹಲಿ ಅದರ ಪ್ರಮುಖ ನೆಲೆಗಳಲ್ಲಿ ಒಂದಾಗಿತ್ತು. ಚಿತ್ರನಿರ್ಮಾಣ ಕೇಂದ್ರಗಳಲ್ಲಿಯೂ ಈ ಚಿತ್ರೋತ್ಸವಗಳು ನಡೆದವು. ೧೯೭೫ರಲ್ಲಿ ಫಿಲ್ಮೋತ್ಸವ ಎಂಬ ಪರ್ಯಾಯ, ಸ್ಪರ್ಧಾತ್ಮಕವಲ್ಲದ ಚಿತ್ರೋತ್ಸವವನ್ನು ಚಿತ್ರನಿರ್ಮಾಣ ಕೇಂದ್ರ ನಗರಗಳಲ್ಲಿ ಪರ್ಯಾಯವಾಗಿ ನಡೆಸುವ ವ್ಯವಸ್ಥೆ ರೂಪುಗೊಂಡಿತ್ತು. ನಂತರ ಫಿಲ್ಮೋತ್ಸವ ಮತ್ತು ಇಫಿ ಒಂದಾದವು.

೨೦೦೩ರಲ್ಲಿ ೩೪ನೇ ಇಫಿ ದೆಹಲಿಯಲ್ಲಿ ನಡೆಯಿತು. ೨೦೦೪ರಲ್ಲಿ ೩೫ನೇ ಇಫ್ಫಿ ಮೊದಲ ಬಾರಿಗೆ ಗೋವಾದಲ್ಲಿ ನಡೆಯಿತು. ಆ ನಂತರ ಗೋವಾ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಶಾಶ್ವತ ನೆಲೆಯಾಯಿತು; ೨೦೧೪ರಲ್ಲಿ ಗೋವಾವನ್ನು ಇಫ್ಫಿಯ ಶಾಶ್ವತ ತಾಣವೆಂದು ಅಧಿಕೃತವಾಗಿ ಘೋಷಿಸಲಾಯಿತು. ಅದು ಕೂಡ ಒಂದು ದೊಡ್ಡ ಪ್ರಯೋಗವೇ ಆಗಿತ್ತು. ಅಂದಿನ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರಾಗಿದ್ದ ಸುಷ್ಮಾ ಸ್ವರಾಜ, ಪಕ್ಷವನ್ನು ಅಧಿಕಾರಕ್ಕೆ ತಂದದ್ದಕ್ಕೆ ನೀಡಿದ ಉಡುಗೊರೆ ಇದು ಎಂದು ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕ್ಕರ್ ಹೇಳಿದ್ದರು. ಮಾತ್ರವಲ್ಲ, ಕೇವಲ ಮೂರು ತಿಂಗಳ ಅವಧಿಯಲ್ಲಿ ಚಿತ್ರೋತ್ಸವ ನಡೆಸಲು ಬೇಕಾದ ಪೂರಕ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಯಶಸ್ವಿಯಾಗಿದ್ದರು.

ರಾಜಧಾನಿಯಲ್ಲಿದ್ದ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಒಂದು ಪ್ರವಾಸಿ ರಾಜ್ಯಕ್ಕೆ ಕೊಂಡೊಯ್ಯುವುದು ಎಂದರೆ ಕೇವಲ ಸ್ಥಳಾಂತರವಲ್ಲ. ಚಿತ್ರೋತ್ಸವದ ಮೂಲಕ ಚಲನಚಿತ್ರ ಸಂಸ್ಕೃತಿಯನ್ನು ಬೆಳೆಸುವುದು, ಆ ಪ್ರದೇಶದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ವ್ಯವಸ್ಥೆಯ ಜೊತೆ ಬೆಸೆಯುವುದು. ಇಂದು ಗೋವಾ ಎಂದರೆ ಬೀಚ್‌ಗಳು, ಪ್ರವಾಸೋದ್ಯಮ, ಮನರಂಜನೆಗಳ ಜೊತೆಗೆ ಇಫ್ಫಿ ಕೂಡ ಅದರ ಸಾಂಸ್ಕೃತಿಕ ಗುರುತಿನ ಒಂದು ಭಾಗವಾಗಿದೆ. ಇದು ಎರಡು ವಿಭಿನ್ನ ಮಾದರಿಗಳು. ಗೋವಾದಲ್ಲಿ ಇಫಿಗೆ ಶಾಶ್ವತ ನೆಲೆ ಕಲ್ಪಿಸಿದ್ದರಿಂದ ಮೂಲಸೌಕರ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಚಿತ್ರೋತ್ಸವದ ಸುತ್ತ ಒಂದು ಸಾಂಸ್ಕೃತಿಕ ಪರಿಸರವೂ ಬೆಳೆಯಿತು. ಪ್ರತಿವರ್ಷ ಒಂದೇ ಸ್ಥಳದಲ್ಲಿ ಚಿತ್ರರಂಗದ ಜಗತ್ತು ಸೇರುವುದರಿಂದ ಆ ನಗರಕ್ಕೂ, ರಾಜ್ಯಕ್ಕೂ ಚಿತ್ರೋತ್ಸವದೊಂದಿಗೆ ನಿರಂತರ ಸಂಬಂಧ ಬೆಳೆದಿದೆ. ರಾಷ್ಟ್ರೀಯ ಪ್ರಶಸ್ತಿಗಳ ಹೊಸ ಪರಿಕಲ್ಪನೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿದೆ. ಪ್ರಶಸ್ತಿ ಸಮಾರಂಭವೇ ವರ್ಷದಿಂದ ವರ್ಷಕ್ಕೆ ಬೇರೆಬೇರೆ ರಾಜ್ಯಗಳತ್ತ ಸಾಗಬಹುದು. ಮುಂದಿನ ವರ್ಷ ಕರ್ನಾಟಕದಲ್ಲೂ ಇದು ನಡೆಯಬಹುದು. ಹಂಪಿ ಇರಬಹುದು. ಮೈಸೂರು ಇರಬಹುದು. ಕರಾವಳಿ ಕರ್ನಾಟಕದ ಯಾವುದಾದರೂ ಸ್ಥಳ ಇರಬಹುದು. ಬೆಂಗಳೂರಿನಂತಹ ಚಿತ್ರೋದ್ಯಮ ಕೇಂದ್ರವೂ ಇರಬಹುದು. ರಾಜ್ಯವು ಕೇವಲ ಒಂದು ಸುಂದರ ಸ್ಥಳವನ್ನು ತೋರಿಸಿದರೆ ಸಾಲದು. ಆ ಸ್ಥಳದಲ್ಲಿ ಇಂತಹ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಸಲು ಬೇಕಾದ ಮೂಲಸೌಕರ್ಯ, ಸಾರಿಗೆ, ವಸತಿ, ಸಭಾಂಗಣ, ಮಾಧ್ಯಮ ಸೌಲಭ್ಯ, ಭದ್ರತೆ, ಸಂಪರ್ಕ ವ್ಯವಸ್ಥೆ ಮತ್ತು ಪ್ರವಾಸೋದ್ಯಮದ ಸಮಗ್ರ ಯೋಜನೆಯನ್ನು ಮುಂದಿಡಬೇಕಾಗುತ್ತದೆ.

ಒಂದು ರಾಜ್ಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೊರೆತರೆ, ಅದು ಕೇವಲ ಒಂದು ದಿನದ ಸಮಾರಂಭವಲ್ಲ. ಅದನ್ನು ಒಂದು ಸಿನಿಮಾ ವೀಕ್ ’ ಆಗಿ ರೂಪಿಸಬಹುದು. ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಗಳ ವಿಶೇಷ ಪ್ರದರ್ಶನ, ಸ್ಥಳೀಯ ಚಿತ್ರಗಳ ಪ್ರದರ್ಶನ, ನಿರ್ದೇಶಕರು-ನಟರೊಂದಿಗೆ ಸಂವಾದ, ಚಿತ್ರ ಶಿಕ್ಷಣ ಕಾರ್ಯಾಗಾರ, ಚಿತ್ರೀಕರಣ ಸ್ಥಳಗಳ ಪರಿಚಯ, ಸ್ಥಳೀಯ ಕಲಾವಿದರ ಕಾರ್ಯಕ್ರಮ, ಚಿತ್ರೋದ್ಯಮದ ಸಭೆಗಳು, ಪ್ರವಾಸಿ ಸ್ಥಳಗಳಿಗೆ ಚಿತ್ರತಂಡಗಳ ಭೇಟಿ-ಇವೆಲ್ಲವನ್ನು ಜೋಡಿಸಬಹುದು. ಅದರಿಂದ ಕಾರ್ಯಕ್ರಮ ಮುಗಿದ ಮೇಲೂ ಅದರ ಪರಿಣಾಮ ಉಳಿಯಬಹುದು. ಇದೇ ಸಂದರ್ಭದಲ್ಲಿ ಒಂದು ಎಚ್ಚರಿಕೆಯೂ ಅಗತ್ಯ. ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರವಾಸೋದ್ಯಮದ ಪ್ರಚಾರ ಕಾರ್ಯಕ್ರಮವನ್ನಾಗಿ ಮಾತ್ರ ಮಾಡಬಾರದು. ಚಿತ್ರರಂಗವೇ ಕೇಂದ್ರದಲ್ಲಿರಬೇಕು; ಪ್ರವಾಸೋದ್ಯಮ ಅದರ ಸಹಜ ವಿಸ್ತರಣೆಯಾಗಬೇಕು.

ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವ ಕಲಾವಿದರು ಮತ್ತು ತಂತ್ರಜ್ಞರು ಪ್ರವಾಸಿಗರಲ್ಲ. ಅವರು ಚಿತ್ರರಂಗದ ಪ್ರತಿನಿಧಿಗಳು. ಅವರ ಭೇಟಿಯಿಂದ ಚಿತ್ರೀಕರಣದ ಹೊಸ ಸ್ಥಳಗಳು, ಸ್ಥಳೀಯ ಪ್ರತಿಭೆಗಳು, ನಿರ್ಮಾಣ ಸೌಲಭ್ಯಗಳು, ಜನಪದ ಕಲೆಗಳು, ಸ್ಥಳೀಯ ಕಥೆಗಳು ಮತ್ತು ಹೊಸ ಸಹಯೋಗಗಳ ಬಗ್ಗೆ ಅರಿವು ಮೂಡಿದರೆ ಮಾತ್ರ ಈ ಪ್ರಯೋಗಕ್ಕೆ ದೀರ್ಘಕಾಲದ ಅರ್ಥ ಬರುತ್ತದೆ.

ಗೋವಾದ ಇಫಿ ಅನುಭವ ಇಲ್ಲಿಗೆ ಒಂದು ಪಾಠ ನೀಡುತ್ತದೆ. ೨೦೦೪ರ ಮೊದಲ ಗೋವಾ ಆವೃತ್ತಿಯಲ್ಲಿಯೇ ಮೂಲಸೌಕರ್ಯವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವನ್ನು ಕೇಂದ್ರ ಸರ್ಕಾರ ಗುರುತಿಸಿತ್ತು. ಶಾಶ್ವತ ನೆಲೆ ಎನ್ನುವುದು ಕೇವಲ ಹೆಸರಿನಿಂದ ಸೃಷ್ಟಿಯಾಗುವುದಿಲ್ಲ; ಅದರ ಹಿಂದೆ ನಿರಂತರ ಹೂಡಿಕೆ, ಮೂಲಸೌಕರ್ಯ ಮತ್ತು ಆತಿಥೇಯ ರಾಜ್ಯದ ಸಕ್ರಿಯ ಪಾಲ್ಗೊಳ್ಳುವಿಕೆ ಬೇಕಾಗುತ್ತದೆ.

ಭಾರತೀಯ ಸಿನಿಮಾ ಎಂದರೆ ಒಂದು ಭಾಷೆಯ ಸಿನಿಮಾ ಅಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ, ಅಸ್ಸಾಮಿ, ಒಡಿಯಾ, ಪಂಜಬಿ, ಕೊಂಕಣಿ, ಮಣಿಪುರಿ, ಕಾಶ್ಮೀರಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಮತ್ತು ಅನೇಕ ಸಾಂಸ್ಕೃತಿಕ ಪರಿಸರಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳೇ ಈ ವೈವಿಧ್ಯವನ್ನು ಪ್ರತಿವರ್ಷ ದಾಖಲಿಸುತ್ತವೆ.

ಗೋವಾ ಇಫಿಗೆ ತನ್ನ ಗುರುತನ್ನು ಕೊಟ್ಟಿತು. ಈಗ ಏಕತಾ ನಗರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಒಂದು ಹೊಸ ಅಧ್ಯಾಯವನ್ನು ಕೊಟ್ಟಿದೆ. ಮುಂದಿನ ಅಧ್ಯಾಯ ಯಾವ ರಾಜ್ಯದ್ದು? ಅದು ಕೇವಲ ಕೇಂದ್ರ ಸರ್ಕಾರದ ನಿರ್ಧಾರವಾಗಿರಬೇಕಿಲ್ಲ. ತಮ್ಮ ನೆಲ, ತಮ್ಮ ಸಂಸ್ಕೃತಿ, ತಮ್ಮ ಪ್ರವಾಸಿ ಸಾಮರ್ಥ್ಯ ಮತ್ತು ತಮ್ಮ ಚಿತ್ರರಂಗವನ್ನು ರಾಷ್ಟ್ರೀಯ ವೇದಿಕೆಯೊಂದಿಗೆ ಹೇಗೆ ಜೋಡಿಸಿಕೊಳ್ಳಬೇಕು ಎಂಬುದನ್ನು ರಾಜ್ಯಗಳೂ ಯೋಚಿಸಬೇಕಾದ ಸಮಯ ಇದು.

” ರಾಷ್ಟ್ರಪತಿಗಳು ನೀಡುವ ಪ್ರಶಸ್ತಿಯನ್ನು ದೇಶದ ರಾಜಧಾನಿಯ ಹೊರಗೆ ತಂದ ಬೆಳವಣಿಗೆಯ ವಿರೋಧವೂ ಕೇಳಿಬಂದಿದೆ, ಮೊನ್ನೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ. ಮುಂದಿನ ವರ್ಷ ದೆಹಲಿಯ ಈ ಕಾರ್ಯಕ್ರಮ ನಡೆದರೆ ಆಶ್ಚರ್ಯವಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ.”

 

 

 

Tags:
error: Content is protected !!