Mysore
25
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು

ಇಂದು ಗುರು ನಮನ

ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ ರೂವಾರಿ ದಿ.ಮಡಿಕೇರಿ ನಾಗೇಂದ್ರರವರ ಶಿಷ್ಯರು ನಾವಾಗಿದ್ದು ಒಂದು ಆಕಸ್ಮಿಕ ಹಾಗೂ ಅಚ್ಚರಿಯ ಸಂಗತಿಯೇ. ವೈದ್ಯರಾದ ನಾವು ಐದೂ ಜನ ಅಂದರೆ-ನಾನು ಡಾ.ಲಕ್ಷ್ಮಿ, ಡಾ.ರಮಾ, ಡಾ.ನಾಗೇಂದ್ರ ಪ್ರಸಾದ್, ಡಾ.ಪ್ರಹ್ಲಾದ್ ರಾವ್ ಮತ್ತು ಡಾ.ಸತ್ಯನಾರಾಯಣ. ನಾವೆಲ್ಲರೂ ಒಂದು ದಿನ ವೃತ್ತಪತ್ರಿಕೆಯಲ್ಲಿದ್ದ ಗುರುಕೃಪಾ ಸಂಗೀತದ ಜಾಹೀರಾತನ್ನು ಓದಿ ಇದ್ದಕ್ಕಿದ್ದಂತೆಯೇ ತೀರ್ಮಾನಿಸಿ ಒಟ್ಟಿಗೇ ಹೋಗಿ, ಅಂದೇ ಅಲ್ಲಿಗೆ ದಾಖಲಾತಿಯನ್ನು ಪಡೆದೆವು. ಇದಾದದ್ದು ೨೦೦೩ನೆಯ ಇಸವಿಯಲ್ಲಿ, ತದನಂತರ ೨೦೦೩ರಿಂದ ೨೦೦೫ರವರೆಗೂ ಅವರ ಶಿಷ್ಯರಾಗಿ ಬೆಳೆದೆವು.

ಅವರ ಗಾಯನ ಹೇಗಿತ್ತೆಂದರೆ, ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುವ ಕಂಠಸಿರಿ, ಮಾಧುರ್ಯ ಮತ್ತು ಸ್ಪಷ್ಟತೆ- ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಅನ್ನುವ ಹಂಬಲವನ್ನು ಹುಟ್ಟಿಸುವಂಥ ಗಂಧರ್ವಗಾನ. ಒಬ್ಬ ಕಲಾವಿದ ಸಮಾಜದಲ್ಲಿ ಅಜರಾಮರವಾಗಿ ಉಳಿಯಬೇಕಾದರೆ-ಅವರ ಸಾಧನೆ, ಕಾಳಜಿ, ಆಸಕ್ತಿ ಮತ್ತು ಪರಿಶ್ರಮವೇ ಆಧಾರ ಎನ್ನುವುದಕ್ಕೆ ಉತ್ತಮ ನಿದರ್ಶನವೇ ನಮ್ಮ ಗುರು ನಾಗೇಂದ್ರರವರು. ಅವರಿಗೆ ನಮ್ಮನ್ನು ಕಂಡರೆ ಆಪಾರ ಗೌರವ, ಆದರ, ಪ್ರೀತಿ ವಿಶ್ವಾಸ. ನಾವಿದ್ದ ಕಡಿಮೆ ಅವಧಿಯಲ್ಲೂ, ನಮಗೆ ಅವರು ತುಂಬಾ ಆತ್ಮೀಯರೂ, ಪ್ರೀತಿ ಪಾತ್ರ ಗುರುಗಳೂ ಆಗಿದ್ದರು.

ಜೀವನ ದರ್ಶನ: ಸರಳ ಸಜ್ಜನ, ಸೃಜನಶೀಲ, ಸಹೃದಯಿಗಳಾದ ನಮ್ಮ ಗುರುಗಳು ಜನಿಸಿದ್ದು- ಸಾಹಿತ್ಯ, ಸಂಗೀತ, ಗಮಕ ಇವುಗಳೇ ಜೀವಾಳವಾಗಿದ್ದ ಸುಸಂಸ್ಕೃತ ಮನೆತನದಲ್ಲಿ. ತಂದೆ ದಿ. ಅನಂತ ಪದ್ಮನಾಭರವರು ಹೆಸರಾಂತ ಗಮಕಿಗಳು,ತಾಯಿ ಲಕ್ಷ್ಮೀದೇವಿಯವರು ಕೂಡ ಸಂಪ್ರದಾಯದ ಹಾಡು, ಕುಮಾರವ್ಯಾಸ ಭಾರತವನ್ನು ಸೊಗಸಾಗಿ ಹಾಡುತ್ತಿದ್ದರಂತೆ. ಅಕ್ಕ ಪದ್ಮಿನಿ, ಅಣ್ಣಂದಿರಾದ ಶೇಷಗಿರಿರಾವ್, ಜಯರಾಮರಾವ್ ಎಲ್ಲರೂ ಗಮಕ ಕಲಿತಿದ್ದು, ಪ್ರಖ್ಯಾತರಾದವರೇ. ಇವರು ಜನಿಸಿದ್ದು ೧೬.೯.೧೯೫೦ರಲ್ಲಿ ಮಡಿಕೇರಿಯಲ್ಲಿ. ಚಿಕ್ಕಮಗುವಿನಿಂದಲೂ ಸಂಗೀತವನ್ನೇ ಕಿವಿಗೆ ತುಂಬಿಕೊಂಡ, ನಾಗೇಂದ್ರರವರು ಸಂಗೀತವನ್ನೇ ತಮ್ಮ ಬದುಕನ್ನಾಗಿಸಿಕೊಂಡು ಜೀವಿಸಿದವರು. ಶಾಲಾ-ಕಾಲೇಜುಗಳಲ್ಲಿದ್ದಾಗಲೇ ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ, ತಮ್ಮ ಹಾಡುಗಳಿಂದ ಜನಪ್ರಿಯರಾದವರು. ಬಿಕಾಂ ಡಿಗ್ರಿಯನ್ನು- ಎಂಇಎಸ್ ಕಾಲೇಜಿನಲ್ಲಿ ಮುಗಿಸಿದ ನಂತರ, ಕೆನರಾ ಬ್ಯಾಂಕಿನಲ್ಲಿ ಉದ್ಯೋಗಪಡೆದು, ಹೋದ ಊರುಗಳಲ್ಲೆಲ್ಲಾ ಸಂಗೀತದ ಸಾಮ್ರಾಜ್ಯವನ್ನು ಕಟ್ಟಿ ಎಲ್ಲರಿಗೂ ಆತ್ಮೀಯರಾದರು. ಹೀಗೆ ಊರಿಂದ ಊರಿಗೆ ವರ್ಗಾವಣೆ ಆಗುತ್ತಿದ್ದುದ್ದರಿಂದ ಇವರಿಗೆ ಹೋದಲ್ಲೆಲ್ಲಾ ಅನೇಕ ಹಿರಿಯ ಸಾಧಕರ, ಸಾಹಿತಿಗಳ, ಸಂಗೀತಗಾರರೊಡನೆ ಒಡನಾಟ ಬೆಳೆದು-ಶಿವಮೊಗ್ಗ ಸುಬ್ಬಣ್ಣ, ಗಮಕಿ ರಾಘವೇಂದ್ರರಾಯರು, ವಿದ್ವಾನ್ ನಾದಬ್ರಹ್ಮ ಕುರುಡಿ ವೆಂಕಣ್ಣಾಚಾರ್, ಶಂಕರನಾರಾಯಣ, ಹನುಮಂತರಾಜು, ಇಂದಿರಾ ವೆಂಕಟೇಶ್, ಇಂದಿರಾ ಕೇಶವನ್ ಇನ್ನೂ ಅನೇಕರು ಇವರ ಆತ್ಮೀಯರ ಸಾಲಿನಲ್ಲಿದ್ದಾರೆ.

ಸುಗಮ ಸಂಗೀತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ಎಂ.ಎಸ್.ಪ್ರಕಾಶ್, ಎಂ.ಆರ್.ಪ್ರಭಾಕರ್ ಅವರ ಜೊತೆ ಗೂಡಿ ‘ಭಾರತೀ ವೃಂದ’ ಎಂಬ ಗಾಯನಕೂಟವನ್ನು ಆರಂಭಿಸಿದರು. ಈ ತಂಡ ಯಶಸ್ವಿಯಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಇವರು ಪ್ರಸ್ತುತ ಪಡಿಸುತ್ತಿದ್ದ ‘ಅಂತಃಪುರಗೀತ’ ಗಾಯನ ಮನೆ ಮನೆಯ ಮಾತಾಯಿತು. ಈ ಗಾಯನವನ್ನು ಅತಿ ಹೆಚ್ಚಾಗಿ ಮೆಚ್ಚಿಕೊಂಡವರಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಎಂಇಎಸ್ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ರಾವ್, ಪದ್ಮಭೂಷಣ ಆರ್.ಕೆ.ಶ್ರೀಕಂಠನ್, ಜಿ.ಟಿ.ನಾರಾಯಣರಾವ್ ಇನ್ನೂ ಮುಂತಾದವರು. ಗುರು ನಾಗೇಂದ್ರರವರು ಕೇವಲ ಗಾಯಕರಷ್ಟೇ ಅಲ್ಲ, ಹಾರ್ಮೋನಿಯಂ, ಮೃದಂಗ, ಗೋಟು ವಾದ್ಯವನ್ನು ಯಾವ ಗುರುಗಳ ಮುಖೇನವೂ ಇಲ್ಲದೆ, ಸ್ವಯಂಪ್ರತಿಭೆಯಿಂದ ಕಲಿತಿದ್ದರು.

೧೯೭೮ನೇ ಇಸವಿಯಲ್ಲಿ ಶ್ರೀಮತಿ ಗೀತಾರವರೊಂದಿಗೆ ಇವರ ವಿವಾಹವಾಯಿತು. ನಂತರದಲ್ಲಿ ಇಬ್ಬರು ಗಂಡು ಮಕ್ಕಳಾದ ಭರತ, ಲಕ್ಷ್ಮಣರ ಜನನ, ೧೯೮೪ರಲ್ಲಿ ಇವರ ಅದೃಷ್ಟ ಬದಲಾಯಿತು. ಬೆಂಗಳೂರಿನಲ್ಲಿ ‘ಇಂಚರ’ ಎಂಬಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಈಗಾಗಲೇ ಮನೆ ಮಾತಾಗಿದ್ದ ಇವರು, ಬ್ಯಾಂಕುಗಳಲ್ಲಿ, ಗಣೇಶ ಉತ್ಸವ, ರಾಜ್ಯೋತ್ಸವಗಳ ಸಂಗೀತ ಕಾರ್ಯಕ್ರಮಗಳಲ್ಲಿ ಇವರದ್ದೇ ಸಿಂಹಪಾಲು. ಆದರೆ ಮಾತಾಪಿತೃಗಳ ವಿಯೋಗವಾದ ನಂತರ, ನಾಗೇಂದ್ರರವರಿಗೆ ಮೈಸೂರಿನಲ್ಲೇ ನೆಲೆಸಬೇಕೆಂಬ ಇಚ್ಛೆ ಬಲವಾಯಿತು. ಅದೇ ಸಮಯದಲ್ಲಿ ಇವರಿಗೆ ಪ್ರಮೋಷನ್ ದೊರೆತು ಬೆಳಗೊಳ ಶಾಖೆಗೆ ವರ್ಗವಾಯಿತು. ೧೯೯೮ರಲ್ಲಿ ವಿವೇಕಾನಂದ ನಗರದ ದಟ್ಟಗಳ್ಳಿಯಲ್ಲಿ ಸ್ವಂತಮನೆಯಾದ ನಂತರ, ಅವರಿಗೆ ನಂಜನಗೂಡಿಗೆ ವರ್ಗವಾಯಿತು. ಅಲ್ಲೇ ಕೆಲಕಾಲವಿದ್ದು ನಂತರದಲ್ಲಿ ಸ್ವಯಂ ನಿವೃತ್ತಿ ಪಡೆದು- ಏಪ್ರಿಲ್ ತಿಂಗಳಿನಲ್ಲೇ ಅವರ ಮಹದಾಸೆಯಂತೆ ‘ಗುರು ಕೃಪಾ ಸಂಗೀತ ಕೇಂದ್ರ’ ಸ್ಥಾಪಿತವಾಯಿತು. ನಿವೃತ್ತಿಯನ್ನು ಪಡೆದು, ಸಂಗೀತವನ್ನೇ ವೃತ್ತಿ ಯಾಗಿಸಿಕೊಂಡ ನಾಗೇಂದ್ರರವರು ತಮ್ಮ ಮಧುರ ಗಾಯನದಿಂದಾಗಿ ಆಕಾಶವಾಣಿ ಕಲಾವಿದರೂ, ಸುಗಮ ಸಂಗೀತ ವಿಭಾಗದ ಸ್ವರ ಸಂಯೋಜಕರೂ ಆಗಿ ಆಯ್ಕೆಯಾದರು. ಇದೇ ಸಮಯದಲ್ಲಿ ಮೈಸೂರಿನಲ್ಲಿ ಪ್ರಖ್ಯಾತರಾಗಿದ್ದ ಎಚ್.ಆರ್.ಲೀಲಾವತಿಯವರು, ರಘುರಾಂರವರಿಗೆ ಇವರು ಅಚ್ಚುಮೆಚ್ಚಿನ ಗಾಯಕರಾಗಿ ಆತ್ಮೀಯರಾದರು. ಹೀಗೇ ಗುರುಕೃಪಾ ಸಂಗೀತ ಕೇಂದ್ರ ದಿನೇ ದಿನೇ ಅಭಿವೃದ್ಧಿಪಥದೆಡೆಗೆ ಏರುತ್ತಾ, ಇಡೀಮೈಸೂರಿನಲ್ಲೇ ಮನೆ ಮಾತಾಯಿತೆಂದರೆ ತಪ್ಪಾಗಲಾರದು. ಸಣ್ಣದಾಗಿದ್ದ ಕೊಠಡಿ ಈಗ ಸಂಗೀತದ ದೊಡ್ಡ ಕೊಠಡಿಯಾಗಿ ನೂರಾರು ಜನ ಶಿಷ್ಯರಿಗೆ ನೆರಳಾಯಿತು. ಬೆಳಿಗ್ಗೆ ೧೦ ರಿಂದ ಸಂಜೆ ೭ರವರೆಗೂ, ಒಂದು ಬ್ಯಾಚ್ ಆದ ನಂತರ ಮತ್ತೊಂದು ಹೀಗೇ ಪುರುಸೊತ್ತಿಲ್ಲದೇ ಸಂಗೀತಾಭ್ಯಾಸ ಶಿಷ್ಯರಿಗಾಗಿ.

ಅವರು ನಮಗೆ ಕಲಿಸಿದ್ದು ಅನೇಕ ಪ್ರಾಕಾರಗಳ ಸಂಗೀತ-ಭಕ್ತಿಗೀತೆ, ದೇಶಭಕ್ತಿಗೀತೆ, ಕನ್ನಡ ಗೀತೆ, ಭಜನ್ಸ್, ಶ್ಲೋಕ, ಅಷ್ಟಪದಿ, ಭಾವಗೀತೆ-ಒಂದೇ ಎರಡೇ ನೂರಾರು. ಇದೆಲ್ಲಕ್ಕಿಂತ ಹೆಚ್ಚಾಗಿ ಅವರು ಎಂದೂ ಪುರಸ್ಕಾರ, ಸನ್ಮಾನ, ಪದವಿಗಳ ಕಡೆ ವಾಲಿದವರಲ್ಲ. ಅದನ್ನು ಬಯಸಿದವರೂ ಅಲ್ಲ. ನನ್ನ ಶಿಷ್ಯರುನನಗಿಂತ ಮೇಲೆ ಬರಬೇಕೆನ್ನುವ ಅವರ ಪ್ರಾಮಾಣಿಕ ಪ್ರಯತ್ನ. ಅವರ ಜೊತೆಯಲ್ಲೇ ಯಾವಾಗಲೂ ಹಾಡುತ್ತಿದ್ದ ಅವರ ಶಿಷ್ಯವೃಂದವೇ ಇದಕ್ಕೆ ಸಾಕ್ಷಿ. ಅಂದು ಆಗಸ್ಟ್ ೮ನೇ ತಾರೀಖು ೨೦೦೫ನೇ ಇಸವಿ. ನಮ್ಮದೇ ಸಂಗೀತದ ತರಗತಿ ೪ ಗಂಟೆಗೆ ಇತ್ತು. ದುರದೃಷ್ಟವಶಾತ್ ನಾವು ೫ ಜನ ವೈದ್ಯರು ಹೋಗಲಾಗಲಿಲ್ಲ. ಅದೇ ಅವರ ಕೊನೆಯ ದಿನವಾಯಿತು. ನಾವು ಮತ್ತೆ ಅವರ ಕಂಠವನ್ನು ಕೇಳಲೇ ಇಲ್ಲ.

” ಸುಗಮ ಸಂಗೀತ ಮತ್ತು ದಾಸ ಸಾಹಿತ್ಯದಲ್ಲಿ ಅಗ್ರಗಣ್ಯರಾಗಿದ್ದ ನಾಡಿನ ಹೆಸರಾಂತ ಗಾಯಕರಾದವಿದ್ವಾನ್ ಮಡಿಕೇರಿ ನಾಗೇಂದ್ರ ಅವರ ಸ್ಮರಣೆಯ ಕಾರ್ಯಕ್ರಮ‘ಗುರು ನಮನ’ವನ್ನು ಸೆ.೧೯ರಂದು ಸಂಜೆ೫.೩೦ಕ್ಕೆ ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಅವರ ಶಿಷ್ಯರು ಆಯೋಜಿಸಿದ್ದಾರೆ. ಹಿರಿಯಗಾಯಕಿ .ಎಚ್.ಆರ್.ಲೀಲಾವತಿ, ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್, ನಾಗೇಂದ್ರರವರ ಪತ್ನಿ ಗೀತಾ ಮಡಿಕೇರಿ ನಾಗೇಂದ್ರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಡಿಕೇರಿ ನಾಗೇಂದ್ರ ಅವರ ಶಿಷ್ಯರು ಹಾಡುಗಾರಿಕೆ ನಡೆಸಿಕೊಡಲಿದ್ದಾರೆ”

 

 

Tags:
error: Content is protected !!