ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:
ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ ಜಗವ ಗೆದ್ದ ಮಹಾತ್ಮ. ನನ್ನ ಕಣ್ಣಲ್ಲಿ ಗಾಂಧಿ ಕೇವಲ ಇತಿಹಾಸದ ಪುಟವಲ್ಲ, ಪ್ರತಿ ಭಾರತೀಯನ ಎದೆ ಬಡಿತದ ಚೇತನ. ನನ್ನ ಕಣ್ಣಲ್ಲಿ ಗಾಂಧಿ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದು ಒಂದು ಪವಿತ್ರ ವಿಚಾರಧಾರೆ. ‘ಬದಲಾವಣೆ ನಿನ್ನಿಂದಲೇ ಆರಂಭವಾಗಲಿ’ ಎಂಬ ಇವರ ದಿವ್ಯ ನುಡಿಯಂತೆ, ನನ್ನ ದೇಶವನ್ನು ಜಗತ್ತಿನಲ್ಲೇ ಶ್ರೇಷ್ಠವಾಗಿಸಲು ಮೊದಲು ನಾನು ಒಬ್ಬ ಉತ್ತಮ ನಾಗರಿಕನಾಗುತ್ತೇನೆ ಎಂದು ದೃಢ ಸಂಕಲ್ಪ ಮಾಡುತ್ತೇನೆ. ಗಾಂಧಿಜಿಯವರ ಆದರ್ಶಗಳು ನನ್ನ ಕಣ್ಣಲ್ಲಿ ಎಂದಿಗೂ ಮರೆಯಾಗದ ಧ್ರುವ ತಾರೆಯಾಗಿ ಉಳಿಯಲಿವೆ. ಭಾರತದಲ್ಲಿ ಬ್ರಿಟಿಷರ ಆಡಳಿತವನ್ನು ಕೊನೆಗೊಳಿಸಲು ಗಾಂಧಿಜಿ ಅನೇಕ ಚಳವಳಿಗಳನ್ನು ನಡೆಸಿದರು. ಅಂತಿಮವಾಗಿ ೧೯೪೭ರ ಆ.೧೫ರಂದು ಭಾರತ ದೇಶ ಸ್ವಾತಂತ್ರ್ಯ ಗಳಿಸಿತು. ಜಾತಿ-ಧರ್ಮಗಳ ಕಹಿಯಿಲ್ಲದ, ಬಡವ-ಬಲ್ಲಿದ ನೆಂಬ ತಾರತಮ್ಯದ ಗೋಡೆಗಳಿಲ್ಲದ ಮತ್ತು ಹೆಣ್ಣು ಮಕ್ಕಳಿಗೆ ಮಧ್ಯರಾತ್ರಿಯಲ್ಲೂ ಪರಮ ಸುರಕ್ಷತೆ ಇರುವ ದಿವ್ಯ ‘ರಾಮರಾಜ್ಯ’ ಮಹಾತ್ಮ ಗಾಂಧಿಜಿ ಅವರ ಕನಸಾಗಿತ್ತು. ಸಮಾಜದ ಕೊನೆಯ ವ್ಯಕ್ತಿಗೂ ಉಚಿತ ಶಿಕ್ಷಣ, ನ್ಯಾಯ ಮತ್ತು ಹಕ್ಕುಗಳು ಸಿಕ್ಕಾಗ ಮಾತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂಬುದು ಮಹಾತ್ಮ ಗಾಂಧಿಜಿ ಅವರ ದೂರದೃಷ್ಟಿಯಾಗಿತ್ತು.
ಪುಣ್ಯ ಸಿ., ೯ನೇ ತರಗತಿ, ಟೆರೇಷಿಯನ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ, ಸಿದ್ಧಾರ್ಥನಗರ, ಮೈಸೂರು
ಆಧುನಿಕ ಜಗತ್ತಿಗೆ ಗಾಂಧಿಯೇ ಪ್ರಸ್ತುತ:
ಆಡಂಬರದ ಇಂದಿನ ಜಗತ್ತಿನಲ್ಲಿ ಅತ್ಯಂತ ಕನಿಷ್ಠ ಅಗತ್ಯತೆಗಳೊಂದಿಗೆ ಹೇಗೆ ಅರ್ಥ ಪೂರ್ಣವಾಗಿ ಬದುಕಬಹುದು ಎಂಬುದನ್ನು ಅವರ ಜೀವನ ಸರಳತೆ ಬಗ್ಗೆ ನಮಗೆ ಕಲಿಸಿಕೊಡುತ್ತದೆ. ದ್ವೇಷವನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ. ಪ್ರೀತಿ ಮತ್ತು ಅಹಿಂಸೆಯಿಂದ ಮಾತ್ರ ಗೆಲ್ಲಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟರು. ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳುವ ಧೈರ್ಯ ಹಾಗೂ ಸತ್ಯದ ಹಾದಿಯಲ್ಲಿ ನಡೆಯುವ ಅವರ ದೃಢತೆ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯವಾಗಿದೆ. ಇಂದು ನಾವು ಆಚರಿಸುವ ಸ್ವಚ್ಛ ಭಾರತದ ಕಲ್ಪನೆ ಅವರದ್ದೇ ಆಗಿತ್ತು. ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿ ‘ಗಾಂಧಿಜಿ ಇಂದಿಗೆ ಬೇಡವಾದವರೇ?’ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಆದರೆ ನನ್ನ ಪ್ರಕಾರ, ಗಾಂಧಿಜಿ ಇಂದಿನ ಕಾಲಕ್ಕೆ ಅತ್ಯಂತ ಹೆಚ್ಚು ಅಗತ್ಯವಾಗಿದ್ದಾರೆ. ಇಂದಿನ ಜಗತ್ತು ಸ್ವಾರ್ಥ, ಭ್ರಷ್ಟಾಚಾರ, ಹಿಂಸಾಚಾರ ಮತ್ತು ಅತಿಯಾದ ಹಪಾಹಪಿಯಿಂದ ಕೂಡಿದೆ. ಇಂದಿನ ಆಧುನಿಕ ಯುಗದಲ್ಲಿ ಹಿಂಸೆ, ಭ್ರಷ್ಟಾಚಾರ ಮತ್ತು ದ್ವೇಷ ಹೆಚ್ಚಾಗುತ್ತಿರುವಾಗ ನಮಗೆ ಗಾಂಧಿಜಿಯವರ ಅವಶ್ಯಕತೆ ಹಿಂದಿಗಿಂತಲೂ ಹೆಚ್ಚಾಗಿದೆ. ನನ್ನ ಕನಸಿನ ಗಾಂಧಿ ಇಂದಿನ ಯುವ ಪೀಳಿಗೆಯ ಅಲೋಚನೆಗಳಲ್ಲಿ ಮೂಡಿಬರಬೇಕಿದೆ. ಪರಸ್ಪರ ಧರ್ಮ, ಜಾತಿಗಳನಡುವೆ ಸಾಮರಸ್ಯವನ್ನು ಮೂಡಿಸುವಲ್ಲಿ ಗಾಂಧಿ ತತ್ವಗಳು ಇಂದಿಗೂ ರಾಮಬಾಣ. ಮಾನವೀಯತೆಯ ಹಾದಿಯಲ್ಲಿ ನಾವು ನಡೆದಾಗ ಮಾತ್ರ ನಾವು ಅವರಿಗೆ ನೀಡುವ ನಿಜವಾದ ಗೌರವ ಹಾಗೂ ನಮ್ಮ ಗಾಂಧಿಜಿ ಅವರ ಕನಸಿನ ಶಾಂತಿಯುತ ಸ್ವಚ್ಛ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಬೃಂದಾ ಎಸ್., ೯ನೇ ತರಗತಿ, ಶ್ರೀ ಗೋಕುಲ ಶಾಲೆ, ಕುವೆಂಪುನಗರ, ಮೈಸೂರು
ಇಂದಿನ ಸಮಾಜದ ಸುಧಾರಣೆಗೆ ಗಾಂಧಿ ತತ್ವ ಅತ್ಯವಶ್ಯಕ: ಗಾಂಧಿಜಿ ಅವರು ಬಾಲ್ಯದಲ್ಲೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಗಾಂಧಿಯವರು ಭಾರತದ ಸ್ಥಿತಿ-ಗತಿಗಳನ್ನು ಕಂಡು ಮರುಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸೆಯೆಂಬ ಅಸ್ತ್ರವನ್ನು ಕೈಗೆತ್ತಿಕೊಂಡು ಗ್ರಾಮಸ್ವರಾಜ್ಯ, ಕಾನೂನು ಭಂಗ ಚಳವಳಿ, ಅಸಹಕಾರ ಚಳವಳಿ ಮುಂತಾದ ಹೋರಾಟಗಳನ್ನು ಸೃಷ್ಟಿಸಿದರು. ರೈತರ ರಾಜಕಾರಣ, ಆತ್ಮಸಾಕ್ಷಿ ಇಲ್ಲದ ಸಂತೋಷ, ದುಡಿಮೆ ಇಲ್ಲದ ಸಂಪತ್ತು, ಚಾರಿತ್ರ್ಯವಿಲ್ಲದ ಶಿಕ್ಷಣ, ತ್ಯಾಗವಿಲ್ಲದ ಪೂಜೆ, ನೀತಿಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ ವಿಜ್ಞಾನ ಇವುಗಳನ್ನು ೭ ಸಮಾಜ ಪಾತಕಗಳೆಂದು ಕರೆದರು. ಗಾಂಧಿಜಿಯವರು ಯಾವಾಗ ಒಬ್ಬ ಹೆಣ್ಣುಮಗಳು ಯಾವುದೇ ರೀತಿಯ ಭಯವಿಲ್ಲದೆ ಮಧ್ಯರಾತ್ರಿ ಮನೆಯಿಂದ ಧೈರ್ಯವಾಗಿ ಹೊರಗೆ ಬರುತ್ತಾಳೆ, ಅಂದು ನಮ್ಮ ದೇಶ ರಾಮ ರಾಜ್ಯವಾಗುತ್ತದೆ ಎಂದು ಹೇಳುತ್ತಾರೆ. ಗಾಂಧಿಜಿಯವರು ಭಾರತದಲ್ಲಿನ ಜಾತಿ ತಾರತಮ್ಯ ತೊಡೆದು ಹಾಕುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳುತ್ತಾರೆ. ಪ್ರಸ್ತುತ ಸಮಾಜದ ಯುವ ಪೀಳಿಗೆಯ ಶಸ್ತ್ರಗಳನ್ನು ಕೈಗೆತ್ತಿಕೊಂಡು ಹಿಂಸಾಚಾರವನ್ನು ಮರೆಯುತ್ತಿದ್ದಾರೆ. ಇಂದಿನ ಸಮಾಜದ ಸುಧಾರಣೆಗೆ ಗಾಂಧಿಯ ತತ್ವಗಳು ಅತ್ಯವಶ್ಯ
ಎಂ.ತೇಜಸ್ವಿನಿ, ೧೦ನೇತರಗತಿ, ಸರ್ಕಾರಿ ಪ್ರೌಢಶಾಲೆ, ವೆಂಕಟಯ್ಯನ ಛತ್ರ, ಚಾಮರಾಜನಗರ ತಾಲ್ಲೂಕು




