ಪರಮಶಿವ ನಡುಬೆಟ್ಟ
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದಲ್ಲಿ ನಡೆಸಲು ಕಾಂಗ್ರೆಸ್ ಹೋರಾಟ ಸಮಿತಿಯು ತೀರ್ಮಾನಿಸಿತು. ಭಾರತ ಸ್ವಾತಂತ್ರ್ಯ ಚಳವಳಿ ಇತಿ ಹಾಸದಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಪ್ರಸಿದ್ಧವಾದ ಪುಟವಾಗಿದೆ.
ಈ ಸತ್ಯಾಗ್ರಹದಲ್ಲಿ ಎಚ್.ಸಿ.ದಾಸಪ್ಪ, ಟಿ.ಎಸ್.ಸುಬ್ಬಣ್ಣ, ಭಾಷ್ಯಂ, ಎಂ.ವಿ. ವೆಂಕಟಪ್ಪ, ಸಿದ್ದಲಿಂಗಯ್ಯ, ರಾಮಚಂದ್ರರಾವ್, ಶ್ರೀನಿ ವಾಸರಾವ್ ಮುಂತಾದವರು ಭಾಗವಹಿಸಿದ್ದರು. ಬ್ರಿಟಿಷ್ ಅಧಿಕಾರಿಗಳು ಧ್ವಜ ಸತ್ಯಾಗ್ರಹ ನಡೆಸದಂತೆ ಪ್ರತಿಬಂಧಕಾಜ್ಞೆ ವಿಧಿಸಿದರು. ಆದರೂ ದೇಶಭಕ್ತ ಹೋರಾಟಗಾರರು ಇದನ್ನು ಮುರಿದು ಹೋರಾಟ ನಡೆಸಿ ಜೈಲು ಸೇರಬೇಕಾಯಿತು.
ಈ ಎಲ್ಲ ಹೋರಾಟಗಾರರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಅವಕಾಶ ಮಾಡಿ ಕೊಂಡರು. ಹೀಗಾಗಿ ಸಬರಮತಿ ಆಶ್ರಮ ದಲ್ಲಿ ಹಲವು ದಿನ ಉಳಿಯುವ ಸಂದರ್ಭವೂ ಬಂತು. ಆ ವೇಳೆಯಲ್ಲಿ ಗಾಂಧಿಜಿಯವರು ಟಿ.ಎಸ್.ಸುಬ್ಬಣ್ಣ, ರಾಮಚಂದ್ರ ರಾಯರು, ಎಚ್.ಸಿ.ದಾಸಪ್ಪ, ಎಂ.ವಿ.ವೆಂಕಟಪ್ಪ, ಎಚ್. ನರಸಿಂಹಯ್ಯ, ಸಿದ್ಧಲಿಂಗಯ್ಯ ಈ ಎಲ್ಲ ಯುವ ಹೋರಾಟಗಾರರನ್ನು ಭೇಟಿ ಮಾಡಿದರು.
ಜೈಲಿನಲ್ಲೋ, ಆಶ್ರಮದಲ್ಲೋ ಇಂಥ ಯುವಕರ ಅಮೂಲ್ಯ ಸಮಯ ಕಳೆದುಹೋಗುವುದನ್ನು ತಪ್ಪಿಸಲು ಗಾಂಧಿಜಿಯವರು ಯೋಚಿಸಿದರು.
ನೀವು ಈ ದೇಶದ ಹಳ್ಳಿಹಳ್ಳಿಗೂ ಹೋಗಿ ಅಲ್ಲಿ ಜಾತಿ ವಿರುದ್ಧ ಹೋರಾಡಿ ಬಡ ಜನರನ್ನು ದಲಿತರನ್ನು, ಮಹಿಳೆಯರನ್ನು ಅಕ್ಷರಸ್ಥರನ್ನಾಗಿ ಮಾಡಬೇಕು ಎಂಬ ದೇಶಾಭಿಮಾನವನ್ನು ತುಂಬಿದರು. ಗಾಂಧಿಜಿಯವರ ಈ ಸಲಹೆಯಂತೆ ಹೋರಾಟಗಾರರು ತಮ್ಮ ರಕ್ತದಲ್ಲಿ ಗಾಂಧಿಜಿಯವರಿಗೆ ಈ ಸೇವೆಯನ್ನು ಮಾಡುವುದಾಗಿ ಒಪ್ಪಿ ಬರೆದುಕೊಟ್ಟೆವು ಎಂಬುದನ್ನುಸುಬ್ಬಣ್ಣನವರೇ ಹೇಳಿದರು. ಇದರಂತೆ ಸುಬ್ಬಣ್ಣನವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಶಾಲೆಗಳನ್ನು ತೆರೆದರು.
ಇವರು ತೆರೆದ ಶಾಲೆಗಳು ಈಗ ಬಡವರು, ದಲಿತರು, ಮಹಿಳೆಯರು ಯಾರು ಶಿಕ್ಷಣದಿಂದ ವಂಚಿತರಾಗಿದ್ದರೋ ಅವರು ಶಿಕ್ಷಣ ಪಡೆಯಲು ನೆರವಾಗಿದೆ. ಇಂತಹ ಸುಬ್ಬಣ್ಣನವರು ಸಾರ್ವಜನಿಕವಾಗಿ ಶಾಲೆಗಳನ್ನು ತೆರೆದು ಅವರು ಇರುವವರೆಗೆ ತಮ್ಮ ಹೆಸರು, ತಮ್ಮ ಭಾವ ಚಿತ್ರ ಎಲ್ಲಿಯೂ ಕಾಣಿಸದಂತೆ ಹಿಂದೆಯೇ ಉಳಿದಿದ್ದರು. ಇಂತಹ ಸುಬ್ಬಣ್ಣನವರ ಸೇವೆಯಿಂದ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳು ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಕುಗ್ರಾಮಗಳಲ್ಲಿ ಸ್ಥಾಪನೆಯಾಗಿವೆ. ಸುಬ್ಬಣ್ಣನವರು ಅನ್ಯರ ಸುಖಕ್ಕಾಗಿ ತಾವೇ ಸವೆದರು. ತಾವು ತಮಗಾಗಿ ಏನನ್ನುಮಾಡಿಕೊಳ್ಳದಂಥ ನಿಷ್ಠಾವಂತ ಸ್ವತಂತ್ರ ಸೇನಾನಿ.





