ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಅಗತ್ಯ ಮುನ್ನೆಚ್ಚರಿಕೆಗೆ ಅರಣ್ಯ ಇಲಾಖೆ ಮನವಿ
ಕೆ.ಬಿ.ಶಂಶುದ್ಧೀನ್
ಕುಶಾಲನಗರ: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಹಾರಂಗಿ ಸಾಕಾನೆ ಶಿಬಿರವನ್ನು ೫ ತಿಂಗಳ ಬಳಿಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅದರಲ್ಲೂ ಕುಶಾಲನಗರ ವ್ಯಾಪ್ತಿಯಲ್ಲಿ ನಿಸರ್ಗಧಾಮ, ದುಬಾರೆ, ಹಾರಂಗಿ ಜಲಾಶಯ, ಚಿಕ್ಲಿಹೊಳೆ ಜಲಾಶಯ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಕೆಲ ತಿಂಗಳ ಹಿಂದೆ ನಡೆದ ದುರ್ಘಟನೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಹಾರಂಗಿ ಸಾಕಾನೆ ಶಿಬಿರವನ್ನು ಮುಕ್ತಗೊಳಿಸಿದೆ. ಇದರಿಂದ ಮತ್ತೆ ಪ್ರವಾಸಿಗರು ಇತ್ತ ಆಗಮಿಸುತ್ತಿದ್ದು, ಶಿಬಿರದಲ್ಲಿ ಹೊಸ ಮೆರುಗು ಮೂಡತೊಡಗಿದೆ.
ಐದು ತಿಂಗಳ ಹಿಂದೆ ಶಿಬಿರದಲ್ಲಿದ್ದ ಆನೆಗಳ ನಡುವೆ ದಿಢೀರ್ ಸಂಘರ್ಷ ಏರ್ಪಟ್ಟು, ಆನೆಗಳ ಕಾದಾಟಕ್ಕೆ ಸಿಲುಕಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಶಿಬಿರವನ್ನು ಮುಚ್ಚಿತ್ತು. ಇದೀಗ ಶಿಬಿರವನ್ನು ಮುಕ್ತಗೊಳಿಸಲಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.
ನೂತನ ಮಾರ್ಗಸೂಚಿಯಂತೆ ಪ್ರವಾಸಿಗರು ಆನೆಗಳಿಂದ ಕನಿಷ್ಠ ೧೦ ಮೀಟರ್ ಅಂತರವನ್ನು ಕಡ್ಡಾಯವಾಗಿಕಾಯ್ದುಕೊಳ್ಳಬೇಕಿದೆ. ಜೊತೆಗೆ ಆನೆಗಳನ್ನು ಮುಟ್ಟುವುದು, ಅವುಗಳಿಗೆ ಆಹಾರ ನೀಡುವುದು, ಸ್ನಾನ ಮಾಡಿಸುವುದೂ ಸೇರಿದಂತೆ ಆನೆಗಳೊಂದಿಗೆ ನೇರ ಸಂಪರ್ಕ ಹೊಂದುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರವಾಸಿಗರು ಆನೆಗಳ ಸಮೀಪ ತೆರಳಿ ಸೆಲ್ಛಿ ಅಥವಾ ಫೋಟೊಗಳನ್ನು ತೆಗೆದುಕೊಳ್ಳುವುದನ್ನೂ ನಿಷೇಧಿಸಲಾಗಿದೆ.
ಆನೆಗಳು ಎಷ್ಟೇ ಶಾಂತವಾಗಿ ಕಂಡರೂ ಅವುಗಳ ವರ್ತನೆ ಬದಲಾಗುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸಬೇಕೆಂದು ಇಲಾಖೆ ಮನವಿ ಮಾಡಿದೆ.
” ಕೊಡಗು ಪ್ರವಾಸಿಗರನ್ನು ಕೈಬೀಸಿ ಕರೆಯುವ ಜಿಲ್ಲೆ. ಇಲ್ಲಿನ ಹಾರಂಗಿ ಸಾಕಾನೆ ಶಿಬಿರದಲ್ಲಿ ಆನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ದುರ್ಮರಣಕ್ಕೀಡಾಗಿದ್ದು ಪ್ರವಾಸಿಗರನ್ನು ಆತಂಕಕ್ಕೆ ಒಳಪಡಿಸಿತ್ತು. ಇದೀಗ ಶಿಬಿರವನ್ನು ಮತ್ತೆಆರಂಭಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಈ ಮಾರ್ಗಸೂಚಿಗಳು ಪ್ರವಾಸಿಗರ ಆತಂಕವನ್ನು ದೂರಮಾಡಿವೆ.”
ನಾಗರಾಜ್, ಪ್ರವಾಸಿಗರು, ಬೆಂಗಳೂರು
” ಆನೆಗಳ ಸುರಕ್ಷತೆ ಹಾಗೂ ಕಲ್ಯಾಣದ ಜೊತೆಗೆ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆನೆಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಿಬಿರವನ್ನು ಪುನರಾರಂಭಿಸಲಾಗಿದೆ. ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ಪ್ರವಾಸಿಗರು ಸುರಕ್ಷಿತವಾಗಿ ಶಿಬಿರವನ್ನು ವೀಕ್ಷಣೆ ಮಾಡಬಹುದು.”
-ರಕ್ಷಿತ್, ಕುಶಾಲನಗರ ವಲಯ ಅರಣ್ಯಾಧಿಕಾರಿ




