Mysore
25
overcast clouds

Social Media

ಶುಕ್ರವಾರ, 11 ಸೆಪ್ಟೆಂಬರ್ 2026
Light
Dark

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಪ್ರತಿಭಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ

ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ 

ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಹಾಗೂ ಸಿ ಮತ್ತು ಡಿ ಸಮಸ್ಯೆ, ಸೆಕ್ಷನ್-೪ ವಿರೋಧಿಸಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ ಸಂಘ, ಕಾಫಿ ಬೆಳೆಗಾರರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸೆ.೧೧ರ ಶುಕ್ರವಾರ ಮಡಿಕೇರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ.

ಬೆಳಿಗ್ಗೆ ೧೦.೩೦ಕ್ಕೆ ಮಡಿಕೇರಿಯ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ನಮ್ಮ ಹಕ್ಕಿಗಾಗಿ ನಮ್ಮ ನೆಲಕ್ಕಾಗಿ ನಮ್ಮ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ ರೈತರು ಹಾಗೂ ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಮತ್ತು ಬೆಳೆಗಾರರ ಬದುಕಿಗೆ ರಕ್ಷಣೆ ನೀಡಬೇಕು. ಸ್ಥಳೀಯರ ಭೂಮಿ ಹಕ್ಕುಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆಗೆ ಯಾವುದೇ ನಿರ್ಬಂಧ ಹೇರಬಾರದು ಹಾಗೂ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ರೈತ ಹೋರಾಟ ಸಮಿತಿ ಆಗ್ರಹಿಸಿದೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಹೆಸರಿನಲ್ಲಿ ಕಾಫಿ, ಮೆಣಸು, ಅಡಕೆ, ಏಲಕ್ಕಿ, ಭತ್ತ ಇನ್ನಿತರೆ ಬೆಳೆಗಳ ಕೃಷಿಗೆ ಅನಗತ್ಯ ನಿರ್ಬಂಧ ವಿಧಿಸಬಾರದು. ಪರಿಸರ ಸಂರಕ್ಷಣೆಯ ಜೊತೆಗೆ ರೈತರು ಹಾಗೂ ಸ್ಥಳೀಯ ಜನರ ಬದುಕಿನ ರಕ್ಷಣೆಯೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಂಘಟನೆಗಳು ಒತ್ತಾಯಿಸಿವೆ.

ಗ್ರಾಮ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಕ್ಕೆ ಒತ್ತಾಯ: ಕರಡು ಅಧಿಸೂಚನೆ ಜಾರಿಗೊಳಿಸುವ ಮುನ್ನ ಗ್ರಾಮ ಮಟ್ಟದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಗ್ರಾಮಸ್ಥರ ಅಭಿಪ್ರಾಯ ಪಡೆದು ನಂತರ ಕ್ರಮ ಕೈಗೊಳ್ಳಬೇಕಿದೆ. ಮನೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್, ಶಾಲೆ ಹಾಗೂ ಆಸ್ಪತ್ರೆ ಸೇರಿದಂತೆ ಗ್ರಾಮೀಣ ಜನರ ಮೂಲಸೌಲಭ್ಯಗಳ ಅಭಿವೃದ್ಧಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು.

ಸಿ ಮತ್ತು ಡಿ ಹಾಗೂ ಸೆಕ್ಷನ್ ೪ ರದ್ದತಿಗೂ ಆಗ್ರಹ: ಕೊಡಗಿನ ಕೆಲವು ಗ್ರಾಮಗಳ ರೈತರ ಕೃಷಿ ಭೂಮಿಯನ್ನು ಸಿ ಮತ್ತು ಡಿ, ಸೆಕ್ಷನ್ ೪ರ ವ್ಯಾಪ್ತಿಗೆ ಒಳಪಡಿಸಿರುವುದರಿಂದ ರೈತರು ಅರಣ್ಯ ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿದ್ದಾರೆ ಎಂದು ಹೋರಾಟ ಸಮಿತಿ ಆರೋಪಿಸಿದೆ. ಸೆಕ್ಷನ್ ೪ನ್ನು ರದ್ದುಗೊಳಿಸುವುದರ ಜೊತೆಗೆ ಕೆಲವು ಗ್ರಾಮಗಳ ರೈತರ ಆರ್‌ಟಿಸಿಯಲ್ಲಿ ನಮೂದಾಗಿರುವ ಅರಣ್ಯ ದಾಖಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

” ಕೊಡಗಿನ ಕೆಲವು ಗ್ರಾಮಗಳ ರೈತರ ಕೃಷಿ ಭೂಮಿಯನ್ನು ಸಿ ಮತ್ತು ಡಿ, ಸೆಕ್ಷನ್ ೪ರ ವ್ಯಾಪ್ತಿಗೆ ಒಳಪಡಿಸಿರುವುದರಿಂದ ರೈತರು ಅರಣ್ಯ ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿದ್ದಾರೆ ಎಂದು ಹೋರಾಟ ಸಮಿತಿ ಆರೋಪಿಸಿದೆ. ಜಿ ವ್ಯಾಪ್ತಿ ೧೧ ಸಾವಿರಕ್ಕೂ ಹೆಚ್ಚು ರೈತರು ಫಾರಂ ೫೦, ೫೩ ಮತ್ತು ೫೭ರಡಿ ಹಕ್ಕುಪತ್ರಕ್ಕಾಗಿ ತಾಲ್ಲೂಕು ಕಚೇರಿಗಳಿಗೆ ಅರ್ಜಿ ಸಲ್ಲಿಸಿದ್ದು, ಹಲವು ಅರ್ಜಿಗಳು ನನೆಗುದಿಗೆ ಬಿದ್ದಿವೆ. ಈ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಅರ್ಹ ರೈತರಿಗೆ ಹಕ್ಕುಪತ್ರ ನೀಡಬೇಕು.”

-ದಿವಾಕರ್ ಕೂತಿ, ಕಾರ್ಯದರ್ಶಿ, ರೈತ ಹೋರಾಟ ಸಮಿತಿ

” ೭ನೇ ಕರಡು ಅಧಿಸೂಚನೆಯಲ್ಲಿ ಕೊಡಗಿನ ೫೫ ಗ್ರಾಮಗಳನ್ನು ಸೇರಿಸಲಾಗಿದ್ದು, ಈ ವರದಿಯಿಂದ ಭವಿಷ್ಯದಲ್ಲಿ ರೈತರಿಗೆ ಸಮಸ್ಯೆಯಾಗಲಿದೆ. ಆದರೆ, ವರದಿ ಅನುಷ್ಠಾನದಿಂದ ಯಾವುದೇ ತೊಂದರೆಯಿಲ್ಲ ಎಂಬ ಹೇಳಿಕೆಗಳಿಂದ ರೈತರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಜಿಯ ರೈತರು, ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.”

-ಕೆ.ಬಿ.ಸುರೇಶ್, ಅಧ್ಯಕ್ಷರು, ರೈತ ಹೋರಾಟ ಸಮಿತಿ, ಕೊಡಗು

” ೭ನೇ ಅಧಿಸೂಚನೆಗೆ ತಕರಾರು ಸಲ್ಲಿಸದೇ ಹೋದಲ್ಲಿ, ಇದೇ ಅಂತಿಮವಾಗಲಿದೆ. ತಕರಾರು ಸಲ್ಲಿಸಿದರೆ ಮಾರ್ಪಾಡು ಅಥವಾ ಕೈಬಿಡಲಾಗಿ ಕಸ್ತೂರಿ ರಂಗನ್ ವರದಿ ಜಾರಿಯಾಗಲಿದೆ. ಈ ಹಿಂದೆ ಕೇರಳ ಸರ್ಕಾರ ವರದಿಗೆ ತಕರಾರು ಸಲ್ಲಿಸಿದ ಹಿನ್ನೆಲೆಯಲ್ಲಿ ೭ನೇ ಕರಡು ಅಧಿಸೂಚನೆಯಲ್ಲಿ ಕೇರಳ ರಾಜ್ಯದ ಹೆಸರು ಇಲ್ಲ, ಅಲ್ಲಿ ಶೂನ್ಯ ಮಾಡಲಾಗಿದೆ. ಎಂಬುದನ್ನು ಮನಗಾಣಬೇಕಿದೆ.

-ಬಿ.ಜೆ.ದೀಪಕ್, ಕಾನೂನು ಸಲಹೆಗಾರರು, ರೈತ ಹೋರಾಟ ಸಮಿತಿ

 

 

Tags:
error: Content is protected !!