ಎಸ್.ಎಸ್.ಭಟ್
ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ
ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡಹುಂಡಿ ಗ್ರಾಮಸ್ಥರ ನಡುವೆ ತಿಕ್ಕಾಟ ಆರಂಭವಾಗಿದೆ.
ತಾಲ್ಲೂಕಿನ ಗಡಿಯಂಚಿನ ರಾಮುಂಡಿ ಕಟ್ಟೆಯಿಂದ ನಮ್ಮ ಗ್ರಾಮದ ಕೆರೆಗೆ ನೀರು ಹರಿಸಬೇಕು ಎಂದು ಕೃಷ್ಣಾಪುರ ಗ್ರಾಮಸ್ಥರು ತಾಲ್ಲೂಕಿನ ಅಧಿಕಾರಿಗಳು, ಸಚಿವರು, ಶಾಸಕರನ್ನು ಹತ್ತಾರು ವರ್ಷಗಳಿಂದ ಒತ್ತಾಯಿಸಿ, ಕೊನೆಗೆ ಈಗ ತಾವೇ ಹೊಸ ಯೋಜನೆ ರೂಪಿಸಿದ್ದಾರೆ. ಆದರೆ, ಗ್ರಾಮಸ್ಥರು ರೂಪಿಸಿದ ಯೋಜನೆಯಿಂದಾಗಿ ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡ ಹುಂಡಿ ಗ್ರಾಮಸ್ಥರ ಜತೆ ತಿಕ್ಕಾಟಕ್ಕೆ ಕಾರಣವಾಗಿದೆ.
ನಂಜನಗೂಡು ತಾಲ್ಲೂಕಿನ ಗಾಂಧಿ ಗ್ರಾಮದಿಂದ ಕಪಿಲಾ ನದಿಯಿಂದ ನೀರೆತ್ತಿ ಗುಂಡ್ಲುಪೇಟೆ ಹಾಗೂನಂಜನಗೂಡು ತಾಲ್ಲೂಕಿನ ಕೆರೆಗಳಿಗೆ ನೀರುತುಂಬುವ ಯೋಜನೆಯಡಿ ಕೃಷ್ಣಾಪುರದ ರಾಮುಂಡಿ ಕೆರೆಗೆ ನೀರು ಹರಿಯುತ್ತಿದೆ.
ಗ್ರಾಮದ ಕೆರೆಗೆ ತುಂಬಿದ ನದಿ ನೀರನ್ನು ಕೇವಲ ೫೦೦ ಮೀಟರ್ ಕೆಳಭಾಗದಲ್ಲಿರುವ ಗ್ರಾಮದ ಹೊಸಕೆರೆಗೂ ಹರಿಸಿ ಎಂಬ ಕೃಷ್ಣಾಪರ ಗ್ರಾಮಸ್ಥರ ಹತ್ತು ವರ್ಷಗಳ ಬೇಡಿಕೆ ಈವರೆಗೂ ಈಡೇರಿರಲಿಲ್ಲ . ಕೆರೆ ತುಂಬಿಸಲು ಕಚೇರಿ ಸುತ್ತಿ ಬಸವಳಿದ ಕೃಷ್ಣಾಪುರ ಗ್ರಾಮಸ್ಥರು ಕೊನೆಗೆ ತಾವೇ ಹೊಸ ಯೋಜನೆ ರೂಪಿಸಿದ್ದು, ಅದು ಈಗ ಎರಡು ಗ್ರಾಮಗಳ ನಡುವೆ ವೈಷಮ್ಯಕ್ಕೆ ಕಾರಣವಾಗುವ ಹಂತ ತಲುಪಿದೆ.
ರಾಮುಂಡಿ ಕೆರೆಗೆ ಬಂದ ನೀರು ಕೃಷ್ಣಾಪುರದ ಪಕ್ಕದಲ್ಲಿರುವ ದೊಡ್ಡ ಹುಂಡಿ ಗ್ರಾಮದತ್ತ ಹರಿಯುತ್ತಿತ್ತು. ಹಾಗಾಗಿ ಗ್ರಾಮಕ್ಕೆ ಬಂದ ನೀರು ತಮಗಿಲ್ಲ ಎನ್ನುವ ಕೊರಗು ಈ ಗ್ರಾಮದ ಜನರನ್ನು ಕಾಡುತ್ತಲೇ ಇತ್ತು. ಅದಕ್ಕೆ ಗ್ರಾಮಸ್ಥರೇ ಪರಿಹಾರ ರೂಪಿಸಿ ಚಿಕ್ಕಾಟಿ ಯಿಂದ ಓಂಕಾರ ಸಿದ್ದೇಶ್ವರ ಬೆಟ್ಟ ತಲುಪುವ ಡಾಂಬರು ರಸ್ತೆಯನ್ನು ಜೆಸಿಬಿಯಿಂದ ಅಗೆದು ೨ ಅಡಿ ಅಗಲ ೧೨ ಅಡಿ ಉದ್ದದ ಕೊಳವೆಯನ್ನು ಅಲ್ಲಿ ಆ ರಸ್ತೆಗೆ ಅಡ್ಡವಾಗಿ ಅಳವಡಿಸಿ ತಮ್ಮ ಗ್ರಾಮದ ಕೆರೆಗೆ ನೀರು ಹರಿಸಲು ದಾರಿ ಮಾಡಿಕೊಟ್ಟರು. ಗ್ರಾಮಸ್ಥರ ಈ ಯೋಜನೆಯಿಂದಾಗಿ ಗ್ರಾಮದ ಹೊಸ ಕೆರೆಗೆ ನೀರು ಹರಿದು ಬಂತು. ಹೊಸ ಕೆರೆಗೆ ನೀರಿನ ಸಂಪರ್ಕ ತಿಳಿದ ದೊಡ್ಡಹುಂಡಿ ಗ್ರಾಮಸ್ಥರು ಕೃಷ್ಣಾಪುರ ಗ್ರಾಮಸ್ಥರು ಅಳವಡಿಸಿದ ಕೊಳವೆಯನ್ನು ಬಂದ್ ಮಾಡಿದರು.
ನೀರು ಸ್ಥಗಿತವಾಗಿದ್ದನ್ನು ತಿಳಿದ ಈ ಗ್ರಾಮದವರು ಕೆರೆ ಬಳಿ ಹೋಗಿ ಅದನ್ನು ತೆರೆದರು. ಈ ರೀತಿಯ ಕಣ್ಣಾಮುಚ್ಚಾಲೆ ಆಟ ಕೃಷ್ಣಾಪುರ ಹಾಗೂ ದೊಡ್ಡಹುಂಡಿ ಗ್ರಾಮಸ್ಥರ ನಡುವೆ ನಡೆಯಲಾರಂಭಿಸಿದ್ದು ಇದು ವಿಕೋಪಕ್ಕೆ ತಲುಪುವ ಮೊದಲು ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಶಾಸಕರುಗಳು ಮತ್ತು ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ವಿವಾದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು ಎನ್ನುವುದು ಜನತೆಯ ಆಶಯವಾಗಿದೆ
” ಕೃಷ್ಣಾಪುರದ ಹೊಸ ಕೆರೆಯು ನದಿ ನೀರು ತುಂಬಿಸುವ ಕೆರೆಗಳ ಪಟ್ಟಿಯಲ್ಲಿಲ್ಲ. ಈಗ ಏಕಾಏಕಿ ಅಕ್ರಮವಾಗಿ ನೀರು ಹರಿಸಿಕೊಳ್ಳುವುದು ಸರಿಯಲ್ಲ.”
-ದೊಡ್ಡಹುಂಡಿ ಗ್ರಾಮಸ್ಥರು
” ಕೆರೆ ನಮ್ಮ ತಾಲ್ಲೂಕಿನದ್ದು. ನೀರು ಹರಿದು ಬರುತ್ತಿರುವುದು ನಮ್ಮ ತಾಲ್ಲೂಕಿನಿಂದ. ಹಾಗಿದ್ದೂ ೫೦೦ ಮೀಟರ್ ಕೆಳಗಿರುವ ನಮ್ಮ ಗ್ರಾಮದ ಹೊಸಕೆರೆಗೆ ಏಕೆ ನೀರಿಲ್ಲ. ಮೊದಲು ನಮ್ಮೂರ ಕರೆ ತುಂಬಿಸಿ ನಂತರ ಪಕ್ಕದ ಗುಂಡ್ಲುಪೇಟೆ ತಾಲ್ಲೂಕಿನ ಕೆರೆ ತುಂಬಿಸಲಿ.”
-ಕೃಷ್ಣಾಪುರ ಗ್ರಾಮಸ್ಥರು
” ಕೃಷ್ಣಾಪುರ ಗ್ರಾಮದ ಜನ-ಜಾನುವಾರುಗಳಿಗೆ ಇಲ್ಲದ ನೀರು ದೊಡ್ಡಹುಂಡಿಯ ಕೋಳಿ ಸಾಕಾಣಿಕೆ ಕೇಂದ್ರಕ್ಕೂ ಹರಿಯುತ್ತಿದೆ. ಇದು ಸರಿಯೇ? ನಮ್ಮೂರ ಕೆರೆಗೂ ನೀರು ಹರಿಸಬೇಕು.”
ಸಿದ್ದಪ್ಪ, ಕೃಷ್ಣಾಪುರ




