Mysore
25
overcast clouds

Social Media

ಗುರುವಾರ, 10 ಸೆಪ್ಟೆಂಬರ್ 2026
Light
Dark

ಜಂಬೂಸವಾರಿಯಲ್ಲಿ ಈ ಬಾರಿ ತಾರಾ ಮೆರುಗು

ಕೆ.ಬಿ.ರಮೇಶನಾಯಕ

ರವಿಚಂದ್ರನ್, ಶಿವರಾಜ್‌ಕುಮಾರ್, ಯಶ್, ರಿಷಭ್ ಶೆಟ್ಟಿ, ರಚಿತಾ ರಾಮ್, ಸಪ್ತಮಿ ಗೌಡ ಸೇರಿ ೩೦ ಕಲಾವಿದರು ಭಾಗಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ಸ್ಯಾಂಡಲ್‌ವುಡ್‌ನ ತಾರಾ ಮೆರುಗು ಮೇಳೈಸಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಯಕೆಯಂತೆ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಸರಾಂತ ನಟ-ನಟಿಯರು ಭಾಗವಹಿಸುವ ಜತೆಗೆ, ಕನ್ನಡ ಚಲನಚಿತ್ರ ರಂಗ ಬೆಳೆದುಬಂದ ಹಾದಿ ಕುರಿತು ಬೆಳಕು ಚೆಲ್ಲು ವಂತಹ ಸ್ತಬ್ಧಚಿತ್ರ ಕೂಡ ಮೆರಣಿಗೆಯಲ್ಲಿ ಸಾಗಲಿದೆ. ಸಾರ್ವಜನಿಕರು, ಪ್ರವಾಸಿಗರು ಈ ಬಾರಿಯ ಜಂಬೂಸವಾರಿ ಮೆರ ವಣಿಗೆಯಲ್ಲಿ ಗಜಪಡೆ, ಜಾನಪದ ಕಲಾತಂಡಗಳ ನೃತ್ಯವೈಭವದೊಂದಿಗೆ ತಮ್ಮ ನೆಚ್ಚಿನ ನಟ-ನಟಿಯರನ್ನು ಹತ್ತಿರದಿಂದ ನೋಡಬಹುದಾಗಿದೆ.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ದಸರಾ ಮಹೋತ್ಸವವನ್ನು ವಿಜೃಂ ಭಣೆಯಿಂದ ಆಚರಿಸುವ ಜತೆಗೆ, ಹೊಸ ರೂಪವನ್ನು ಕೊಡಲು ಬಯಸಿದ್ದಾರೆ. ಏಕತಾನತೆಯಿಂದ ಕೂಡಿರುವ ಬದಲಿಗೆ ವಿಭಿನ್ನ ಹಾಗೂ ವಿಶೇಷತೆಗಳನ್ನು ಪರಿಚಯಿಸುವ ಭಾಗವಾಗಿ ಕಂಬಳ ಸೇರ್ಪಡೆಯ ಜತೆಗೆ, ಕನ್ನಡ ಚಲನಚಿತ್ರ ರಂಗದವರು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಮಾಡಬೇಕೆಂದು ಹೇಳಿದ್ದರು. ಅದರಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲ ಅವರು ತಮ್ಮ ತಂಡದೊಂದಿಗೆ ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸಿ, ರೂಪರೇಷೆಗಳನ್ನು ಸಿದ್ಧಪಡಿಸುವ ಕುರಿತು ಚರ್ಚಿಸಿದರು.

೩೦ ಕಲಾವಿದರು ಭಾಗಿ: ಜಂಬೂಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿದರೆ, ನಟ-ನಟಿಯರು ಭಾಗವಹಿಸಿ ಅದಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ. ನಟರಾದ ರವಿಚಂದ್ರನ್, ಶಿವರಾಜ್‌ಕುಮಾರ್, ಯಶ್, ಗಣೇಶ್, ಡಾಲಿ ಧನಂಜಯ, ನೆನಪಿರಲಿ ಪ್ರೇಮ್, ದುನಿಯಾ ವಿಜಯ್, ಡಾರ್ಲಿಂಗ್ ಕೃಷ್ಣ, ಉಪೇಂದ್ರ, ಸುದೀಪ್, ಧ್ರುವ ಸರ್ಜಾ, ದೊಡ್ಡಣ್ಣ , ರಾಕ್‌ಲೈನ್ ವೆಂಕಟೇಶ್, ವಿನಯ್ ರಾಜಕುಮಾರ್, ರಿಷಭ್ ಶೆಟ್ಟಿ, ಪ್ರಜ್ವಲ್ ದೇವರಾಜ್, ರಕ್ಷಿತ್ ಶೆಟ್ಟಿ, ರವಿಶಂಕರ್, ಸಾಧುಕೋಕಿಲ, ವಿನೋದ್ ಪ್ರಭಾಕರ್, ತರುಣ್ ಸುಧೀರ್, ದೇವರಾಜ್, ನಟಿಯರಾದ ಉಮಾಶ್ರೀ, ಪ್ರೇಮ, ರಚಿತಾರಾಮ್, ರುಕ್ಮಿಣಿ ವಸಂತ್, ರಾಗಿಣಿ, ಅನು ಪ್ರಭಾಕರ್, ಸಪ್ತಮಿ ಗೌಡ, ಪ್ರಿಯಾಂಕ ಉಪೇಂದ್ರ, ಸೋನಾಲ್ ಭಾಗವಹಿಸಲಿದ್ದಾರೆ. ಈಗಾಗಲೇ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿರುವುದರಿಂದ ಅವರ ವಾಸ್ತವ್ಯ ಸೇರಿದಂತೆ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ ಎಂದು ಹೇಳಲಾಗಿದೆ.

ಚಿತ್ರರಂಗ ಬೆಳೆದುಬಂದ ಹಾದಿಯ ಸ್ತಬ್ಧಚಿತ್ರ: ನಾಡಿನ ಕಲೆ, ಸಾಹಿತ್ಯ, ಪರಂಪರೆಯನ್ನು ಬಿಂಬಿಸುವಂತೆ ಈ ಬಾರಿ ಕನ್ನಡ ಚಲನಚಿತ್ರರಂಗವು ಕಳೆದ ೯೩ ವರ್ಷಗಳಲ್ಲಿ ಮಾಡಿರುವ ಅಪರೂಪದ ಸಾಧನೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡುವಂತಹ ಸ್ತಬ್ಧಚಿತ್ರ ರೂಪಿಸಲಾಗುತ್ತದೆ. ಕನ್ನಡ ಚಲನಚಿತ್ರ ಆರಂಭವಾದ ವರ್ಷದಿಂದ ೨೦೨೬ರವರೆಗೆ ಆಗಿರುವ ಬದಲಾವಣೆಗಳು, ಕಪ್ಪುಬಿಳುಪು, ಬಣ್ಣದ ಸಿನಿಮಾ, ಸಿನಿಮಾ ಸ್ಕೋಪ್, ಟೆಂಟ್, ಚಿತ್ರಮಂದಿರ, ಮಲ್ಟಿಫ್ಲೆಕ್ಸ್ ಚಿತ್ರ ಮಂದಿರಗಳಾಗಿ ಪರಿವರ್ತನೆಯಾಗಿದ್ದನ್ನು ನೆನಪಿಸಲಾಗುತ್ತದೆ.

ಡಾ.ರಾಜಕುಮಾರ್, ವಿಷ್ಣುವರ್ಧನ್,ಅಂಬರೀಶ್, ಪುನೀತ್ ರಾಜಕುಮಾರ್, ಬಿ.ಸರೋಜಾದೇವಿ, ಅನಂತನಾಗ್, ಶಂಕರ್ ನಾಗ್, ಆರತಿ ಸೇರಿದಂತೆ ಕನ್ನಡ ಚಿತ್ರರಂಗದ ಮೇರು ನಟ-ನಟಿಯರ ಸಾಧನೆ, ಕನ್ನಡದ ನಟ-ನಟಿಯರಿಗೆ ದಕ್ಕಿರುವ ಪ್ರಶಸ್ತಿಗಳನ್ನು ಯುವಪೀಳಿಗೆಗೆ ಪರಿಚಯಿಸುವ ಕೆಲಸ ನಡೆಯಲಿದೆ ಎಂದು ಗೊತ್ತಾಗಿದೆ.

ಅರಮನೆಯಿಂದ ಕೆ.ಆರ್.ಸರ್ಕಲ್‌ವರೆಗೆ ಮಾತ್ರ: ಜಂಬೂಸವಾರಿ ದಿನದಂದು ಲಕ್ಷಾಂತರ ಜನರು ಸೇರುವ ಕಾರಣಕ್ಕಾಗಿ ಯಾವುದೇ ಗೊಂದಲವಾಗದಂತೆ ಹಾಗೂ ಅಭಿಮಾನಿಗಳ ಒತ್ತಡ ತಡೆಯಲು ಅರಮನೆಯಿಂದ ಕೆ.ಆರ್. ಸರ್ಕಲ್ ತನಕ ಮಾತ್ರ ಕಲಾವಿದರ ಮೆರವಣಿಗೆ ನಡೆಸಲು ಚಿಂತಿಸಲಾಗಿದೆ.

ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದ ಮೇಲೆ ಅಂಬಾರಿ ಬಸ್‌ನಲ್ಲಿ ೩೦ ಕಲಾವಿದರು ಕೆ.ಆರ್.ಸರ್ಕಲ್‌ವರೆಗೆ ಬಂದು ಮತ್ತೆ ಅರಮನೆಗೆ ವಾಪಸ್ಸಾಗಿ ಜಂಬೂಸವಾರಿ ವೀಕ್ಷಣೆ ಮಾಡಲು ಅನುವು ಮಾಡಲಾಗುತ್ತದೆ. ಚಿತ್ರರಂಗದ ಸ್ತಬ್ಧಚಿತ್ರ ಮಾತ್ರ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಲಿದ್ದು, ಸ್ತಬ್ಧಚಿತ್ರವನ್ನು ಮೈಸೂರಿನಲ್ಲೇ ವಿಶೇಷವಾಗಿ ತಯಾರು ಮಾಡಲಾಗುತ್ತದೆ. ಇದರ ವೆಚ್ಚವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಭರಿಸಲಿದೆ.

” ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಲಹೆಯಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಜಂಬೂಸವಾರಿ ಮೆರವಣಿಗೆಯಲ್ಲಿ ಕಲಾವಿದರ ಭಾಗಿ, ಸ್ತಬ್ಧಚಿತ್ರ ಭಾಗಿಯಾಗುವ ಬಗ್ಗೆ ತೀರ್ಮಾನಿಸಲಾಗಿದೆ.”

-ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

 

 

 

Tags:
error: Content is protected !!