Mysore
24
few clouds

Social Media

ಮಂಗಳವಾರ, 08 ಸೆಪ್ಟೆಂಬರ್ 2026
Light
Dark

ಧ್ವನಿವರ್ಧಕ ಬಳಕೆ; ನಿಯಮ ಉಲ್ಲಂಘಿಸಿದಲ್ಲಿ ಕ್ರಮ

ನವೀನ್ ಡಿಸೋಜ

ರಾತ್ರಿ ೧೦ರಿಂದ ಬೆಳಿಗ್ಗೆ ೬ರವರೆಗೆ ಧ್ವನಿವರ್ಧಕ, ಡಿಜೆ ಬಳಕೆಗೆ ನಿರ್ಬಂಧ; ನಿಯಮ ಪಾಲಿಸಲು ಪೊಲೀಸ್ ಇಲಾಖೆ ಮನವಿ

ಮಡಿಕೇರಿ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅತಿಯಾದ ಶಬ್ದದೊಂದಿಗೆ ಧ್ವನಿವರ್ಧಕ ಹಾಗೂ ಡಿಜೆ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಧ್ವನಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಸುಪ್ರೀಂ ಕೋರ್ಟ್ ಆದೇಶ, ಶಬ್ದ ಮಾಲಿನ್ಯ (ನಿಯಂ ತ್ರಣ ಮತ್ತು ನಿಯಮಾವಳಿ) ೨೦೦೦ ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ, ೧೯೮೬ರ ಸೆಕ್ಷನ್ ೧೫ರ ಅಡಿಯಲ್ಲಿ ಸಾರ್ವಜನಿಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ನಿಯಮದ ಪ್ರಕಾರ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ಧ್ವನಿವರ್ಧಕ, ಡಿಜೆ ಸೇರಿದಂತೆ ಧ್ವನಿವರ್ಧಕ ಸಾಧನಗಳ ಬಳಕೆಗೆ ನಿರ್ಬಂಧವಿದೆ. ಈ ಅವಧಿಯಲ್ಲಿ ಯಾವುದೇ ಕಾರ್ಯಕ್ರಮ, ಸಮಾರಂಭ ಅಥವಾ ಇತರ ಸಂದರ್ಭಗಳಲ್ಲಿ ಅತಿಯಾದ ಶಬ್ದ ಉಂಟು ಮಾಡುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಕಾನೂನುಬಾಹಿರವಾಗಲಿದೆ.

ಅಗತ್ಯ ಅನುಮತಿ ಪಡೆದು ಬಳಸುವ ಸಂದರ್ಭಗಳಲ್ಲಿಯೂ ನಿಗದಿಪಡಿಸಿರುವ ಶಬ್ದದ ಮಿತಿಯನ್ನು ಮೀರುವಂತಿಲ್ಲ. ಹೀಗಾಗಿ ಆಯೋಜಕರು ಕಾರ್ಯಕ್ರಮಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದು, ನಿಗದಿತ ಸಮಯ ಹಾಗೂ ಶಬ್ದದ ಮಿತಿಯೊಳಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕಿದೆ.

ಶಬ್ದಮಾಲಿನ್ಯ ನಿಯಮಾವಳಿಯಡಿ ವಿವಿಧ ಪ್ರದೇಶಗಳಿಗೆ ಹಗಲು ಮತ್ತು ರಾತ್ರಿ ವೇಳೆಗೆ ಪ್ರತ್ಯೇಕ ಶಬ್ದದ ಮಿತಿಗಳನ್ನು ನಿಗದಿಪಡಿಸಲಾಗಿದೆ. ಆ ಡೆಸಿಬಲ್ ಒಳಗೆಯೇ ಧ್ವನಿವರ್ಧಕ ಬಳಸಬೇಕಿದೆ. ಆಸ್ಪತ್ರೆ, ಶಾಲೆ ಹಾಗೂ ಇತರ ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತಲಿನ ಶಾಂತಿ ವಲಯಗಳಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದ್ದು, ಇಲ್ಲಿ ಧ್ವನಿವರ್ಧಕ ಬಳಕೆಯಿಂದ ಸಾರ್ವಜನಿ ಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ.

ಧ್ವನಿ ಮಾಲಿನ್ಯ ನಿಯಮಗಳನ್ನು ಉಲ್ಲಂಸುವವರ ವಿರುದ್ಧ ಕಾನೂನು ಕ್ರಮ ಜರುಗಲಿದೆ. ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡದ ಶಿಕ್ಷೆ ವಿಧಿಸುವ ಅವಕಾಶವಿದೆ. ನಿರ್ದಿಷ್ಟ ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಹೆಚ್ಚುವರಿ ಕಾನೂನು ಕ್ರಮವೂ ಜರುಗಬಹುದು.

ಧ್ವನಿ ಮಾಲಿನ್ಯದಿಂದ ವೃದ್ಧರು, ಮಕ್ಕಳು, ರೋಗಿಗಳು, ವಿದ್ಯಾರ್ಥಿಗಳು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ತೊಂದರೆ ಉಂಟಾಗುವ ಸಾಧ್ಯತೆಯಿದೆ. ನಿರಂತರ ಹಾಗೂ ಅತಿಯಾದ ಶಬ್ದವು ನಿದ್ರೆಗೆ ಅಡ್ಡಿಪಡಿಸುವುದರ ಜೊತೆಗೆ ಮಾನಸಿಕ ಒತ್ತಡ ಮತ್ತು ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಂಭ್ರಮಕ್ಕಿಂತ ಸಾರ್ವಜನಿಕರ ನೆಮ್ಮದಿ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಕೊಡಗು ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.

” ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ಧ್ವನಿವರ್ಧಕ, ಡಿಜೆ ಸೇರಿದಂತೆ ಧ್ವನಿವರ್ಧಕ ಸಾಧನಗಳ ಬಳಕೆಗೆ ನಿರ್ಬಂಧವಿದೆ. ಈ ಅವಧಿಯಲ್ಲಿ ಯಾವುದೇ ಕಾರ್ಯಕ್ರಮ, ಸಮಾರಂಭ ಅಥವಾ ಇತರ ಸಂದರ್ಭಗಳಲ್ಲಿ ಅತಿಯಾದ ಶಬ್ದ ಉಂಟುಮಾಡುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಿ ನಿಯಮ ಉಲ್ಲಂಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.”

ಆರ್.ಎನ್.ಬಿಂದುಮಣಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ನಿಯಮ ಉಲ್ಲಂಸಿದರೆ ಏನು ಶಿಕ್ಷೆ?:  ಧ್ವನಿ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಸುವ ಕಾರ್ಯಕ್ರಮದ ಆಯೋಜಕರು ಹಾಗೂ ಡಿಜೆ, ಧ್ವನಿವರ್ಧಕ ಮಾಲೀಕರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆ ೧೯೮೬ರ ಸೆಕ್ಷನ್ ೧೫ರ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ನಿಯಮ ಉಲ್ಲಂಘನೆ ಸಾಬೀತಾದಲ್ಲಿ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಕಾನೂನು ಅವಕಾಶವಿದೆ. ನಿಯಮ ಉಲ್ಲಂಘನೆಯ ಸಂದರ್ಭದಲ್ಲಿ ಸ್ಥಳದಲ್ಲೇ ಡಿಜೆ ಸೆಟ್, ಸ್ಪೀಕರ್ ಹಾಗೂ ಬಳಸಿದ ವಾಹನಗಳನ್ನು ಜಪ್ತಿ ಮಾಡುವ ಕ್ರಮವನ್ನೂ ಕೈಗೊಳ್ಳಲಾಗುತ್ತದೆ.

 

Tags:
error: Content is protected !!