ಎಂ.ಕೇಶವ್
ವರ್ಷದಿಂದ ಗೌರವಧನ ಪಾವತಿಯಾಗದೆ ೩೦೦ ಮಂದಿ ಡಿಟಿಸಿಗಳ ಪರದಾಟ
ಮೈಸೂರು: ಇಲ್ಲಿನ ಲಲಿತಮಹಲ್ ರಸ್ತೆಯಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಸಂಸ್ಥೆ (ಎಎನ್‌ಎಸ್‌ಎಸ್‌ಐಆರ್‌ಡಿ ಆಂಡ್ಪಿಆರ್) ಯಲ್ಲಿ ಕಾರ್ಯನಿರ್ವಹಿಸುತ್ತಿರುವ ೩೦೦ ಮಂದಿ ವಿಕೇಂದ್ರೀಕೃತ ತರಬೇತಿ ಸಂಯೋಜಕ (ಡಿಟಿಸಿ)ರಿಗೆ ಕಳೆದ ಒಂದು ವರ್ಷದಿಂದ ಗೌರವಧನ ಪಾವತಿಯಾಗದೆ ಪರದಾಡುತ್ತಿದ್ದಾರೆ. ಡಿಟಿಸಿಗಳಿಗೆ ಇತ್ತ ಬೇರೆ ಕೆಲಸಗಳಿಗೆ ಅರ್ಜಿ ಹಾಕಲು ವಯಸ್ಸು ಜಾರಿ ಹೋಗಿದ್ದು, ಇದನ್ನೇ ನಂಬಿರುವವರ ಬದುಕು ಡೋಲಾಯಮಾನವಾಗಿದೆ.
ಗ್ರಾಮೀಣಾಭಿವೃದ್ಧಿ ಕುರಿತು ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಽಗಳು, ಸಿಬ್ಬಂದಿ ವರ್ಗದವರಿಗೆ ಈ ಡಿಟಿಸಿಗಳು ತರಬೇತಿ ನೀಡುತ್ತಿದ್ದಾರೆ. ಇವರು ೨೦೦೬ರಿಂದ ಹೀಗೆ ತರಬೇತಿ ನೀಡುತ್ತಿದ್ದಾರೆ. ರಾಜ್ಯದ ೨೦೪ ತಾಲ್ಲೂಕುಗಳಲ್ಲಿ ೩೦೦ ಮಂದಿ ಹೀಗೆ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ, ಬಿಲ್ ಕಲೆಕ್ಟರ್, ಸ್ಥಾಯಿ ಸಮಿತಿ, ಸಂಜೀವಿನಿ ಒಕ್ಕೂಟ, ಮಹಿಳೆಯರ ಒಕ್ಕೂಟ ಸೇರಿದಂತೆ ಹಲವರಿಗೆ ಸರ್ಕಾರದ ಯೋಜನೆಗಳು, ಅನುಷ್ಠಾನ, ಅನುದಾನ ಬಳಕೆ, ಶಿಷ್ಟಾಚಾರ ಕುರಿತು ತರಬೇತಿ ನೀಡುತ್ತಿದ್ದಾರೆ.
ಹೀಗೆ ತರಬೇತಿ ನೀಡುವವರಿಗೆ ಮೊದಲು ಸ್ಥಳದಲ್ಲಿಯೇ ನಗದು ರೂಪದಲ್ಲಿ ಗೌರವ ಧನ ಪಾವತಿಸಲಾಗುತ್ತಿತ್ತು. ನಂತರ ೨೦೧೨ರಲ್ಲಿ ಚೆಕ್ ಮೂಲಕ ಪಾವತಿಸಲಾಯಿತು. ೨೦೨೩ರಿಂದ ಆನ್‌ಲೈನ್ ಪೇಮೆಂಟ್ ಜಾರಿಯಾಯಿತು. ಇದಾದ ಬಳಿಕ ಸರಿಯಾಗಿ ವೇತನ ಸಿಗುತ್ತಿಲ್ಲ. ಕಳೆದ ವರ್ಷ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಗೌರವಧನ ಸಿಗದೇ ಪರದಾಡುವಂತಾಗಿದೆ.
ಹತ್ತನೇ ತರಗತಿ ಓದಿದವರಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದವರು ಕೂಡ ೩೦ ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಬೇರೆ ಉದ್ಯೋಗ ಅರಸಿ ಹೋಗೋಣವೆಂದರೆ ವಯಸ್ಸಾಗಿದ್ದು, ಕೆಲಸ ಸಿಗುವುದಿಲ್ಲ. ಬೇರೆ ಕೆಲಸ ಮಾಡೋಣ ಅಂದರೆ, ಅಷ್ಟು ವರ್ಷದಿಂದ ಮಾಡಿದ ಕೆಲಸ ವ್ಯರ್ಥವಾಗಲಿದೆ. ಆದ್ದರಿಂದ ಗೌರವಧನ ಬಿಡುಗಡೆ ಮಾಡುವುದರ ಜೊತೆಯಲ್ಲಿ ಸರ್ಕಾರ ನೀಡಿದ ಭರವಸೆಯಂತೆ ಪ್ರತಿ ತಾಪಂ ವ್ಯಾಪ್ತಿಯಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಕೆಲಸ ಮಾಡುವ ಅನುಕೂಲ ಕಲ್ಪಿಸಬೇಕು ಎಂಬುದು ನೊಂದವರ ಬೇಡಿಕೆಯಾಗಿದೆ.
” ವಿಕೇಂದ್ರೀಕೃತ ತರಬೇತಿ ಸಂಯೋಜಕ (ಡಿಟಿಸಿ)ರಿಗೆ ಗೌರವಧನ ಪಾವತಿ ಈ ತಿಂಗಳೊಳಗೆ ಆಗಬಹುದು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಅವರಿಗೆ ಗೌರವಧನ ಸಿಗಲಿದೆ.”
-ಮನೋಜ್ ಕುಮಾರ್, ಉಪ ನಿರ್ದೇಶಕ, ತರಬೇತಿ ವಿಭಾಗ,(ಎಎನ್‌ಎಸ್‌ಎಸ್‌ಐಆರ್‌ಡಿ ಆಂಡ್ ಪಿಆರ್)
” ೩೦ ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಜೀವನ ನಿರ್ವಹಣೆಗಾಗಿ ಇದನ್ನೇ ನಂಬಿಕೊಂಡಿದ್ದೇವೆ. ಕಳೆದ ಒಂದು ವರ್ಷದಿಂದ ನಮಗೆ ಗೌರವಧನ ಸಿಕ್ಕಿಲ್ಲ. ಹೀಗಾದರೆ, ನಾವು ಜೀವನ ಮಾಡುವುದು ಹೇಗೆ? ಇಷ್ಟೊಂದು ವರ್ಷ ಕೆಲಸ ಮಾಡಿದ ನಮಗೆ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಆ ಭರವಸೆಯನ್ನು ಈಡೇರಿಸಿಲ್ಲ.”
-ಹೆಸರು ಹೇಳಲು ಇಚ್ಛಿಸದ ನೊಂದ ಡಿಟಿಸಿಗಳು




