ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ
ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ.
ಅಂದ ಹಾಗೆ ಮುಖ್ಯಮಂತ್ರಿಗಳಾದವರು ಹಲವರಿದ್ದಾರೆ. ಆದರೆ ಕೆಲವರನ್ನು ಮಾತ್ರ ಇತಿಹಾಸ ಪದೇ ಪದೇ ಸ್ಮರಿಸಲು ಹಲವು ಕಾರಣಗಳು ಸಿಗುತ್ತವೆ.
ದೇವರಾಜ ಅರಸರನ್ನೂ ಇಂತಹ ಹಲವು ಕಾರಣಗಳಿಗಾಗಿ ಸ್ಮರಿಸಲಾಗುತ್ತದೆ. ಇಂತಹ ಕಾರಣಗಳಲ್ಲಿ ಶೋಷಿತ ವರ್ಗಗಳ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರುವ ತವಕ. ಅಂದ ಹಾಗೆ ವ್ಯವಸ್ಥೆಯಲ್ಲಿರುವ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕದೆ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯವೇ ಇಲ್ಲ ಎಂಬುದು ಅರಸರಿಗೆ ಗೊತ್ತಿತ್ತು. ಮತ್ತು ಇದರ ಅನುಷ್ಠಾನಕ್ಕೆ ಕಾರ್ಯಕ್ರಮಗಳನ್ನು ರೂಪಿಸುವ ಜತೆ, ಜತೆಗೆ ಅದು ಸಾಧ್ಯವಾಗುವಂತೆ ಮಾಡಲು ರಾಜಕೀಯ ಸಮಾನತೆಯನ್ನು ತರಲು ಅರಸರು ಶ್ರಮಿಸಿದರು.
ಅಂದ ಹಾಗೆ ದೇವರಾಜ ಅರಸರ ರಾಜಕೀಯ ಬದುಕಿನ ಈ ಮುಖ ಎಲ್ಲರಿಗೂ ಗೊತ್ತು. ಆದರೆ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ರಾಜಕೀಯ ಪಡೆಯನ್ನು ಅವರು ರೂಪಿಸಿದರಲ್ಲ ಆ ಪಡೆಯನ್ನು ರಕ್ಷಿಸಲು ಅವರು ಇಟ್ಟ ಮಹತ್ವದ ಹೆಜ್ಜೆಯ ಬಗ್ಗೆ ತುಂಬ ಜನರಿಗೆ ಗೊತ್ತಿಲ್ಲ.
ತಾವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಅವರು ಒಂದು ಸ್ವಾರ್ಥದ ಹೆಜ್ಜೆಯನ್ನಿಟ್ಟಿದ್ದರೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬಲ್ಲ ಈ ರಾಜಕೀಯ ಪಡೆ ನಿಶ್ಶಕ್ತವಾಗುತ್ತಿತ್ತು. ಆದರೆ ಅವರು ತಪ್ಪಿಯೂ ಇಂತಹ ಹೆಜ್ಜೆಯನ್ನಿಡದ ಪರಿಣಾಮವಾಗಿ ಸಾಮಾಜಿಕ ನ್ಯಾಯಕ್ಕಾಗಿದೊಂದಿ ಎತ್ತುವ ಕೈಗಳು ಹಲವು ದಶಕಗಳ ಕಾಲ ಮುಂದುವರಿಯುವಂತಾಯಿತು. ಇದಾಗಿದ್ದು ಯಾವ ಸಂದರ್ಭದಲ್ಲಿ ಎಂಬುದನ್ನು ನೋಡಲು ನಾವು ಸುಮಾರು ನಲವತ್ತಾರು-ನಲವತ್ತೇಳು ವರ್ಷಗಳಷ್ಟು ಹಿಂದಕ್ಕೆ ಹೋಗಬೇಕು.
ಅಂದ ಹಾಗೆ ೧೯೬೯ರ ಹೊತ್ತಿಗೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿಭಜನೆ ಆಯಿತಲ್ಲ ಆ ಸಂದರ್ಭದಲ್ಲಿ ಪಕ್ಷ ಕಾಂಗ್ರೆಸ್ (ಒ) ಮತ್ತು ಕಾಂಗ್ರೆಸ್ (ಆರ್)ಆಗಿ ಕವಲೊಡೆಯಿತು. ಒ ಎಂದರೆ ಆರ್ಗನೈಸೇಷನ್. ಅಂದರೆ ಸಂಸ್ಥಾ ಕಾಂಗ್ರೆಸ್. ಇನ್ನು ಆರ್ ಎಂದರೆ ರೂಲಿಂಗ್. ಅರ್ಥಾತ್ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್. ಈ ಪೈಕಿ ಕಾಂಗ್ರೆಸ್(ಆರ್)ಗೆ ರಾಷ್ಟ್ರಮಟ್ಟದಲ್ಲಿ ಇಂದಿರಾ ಗಾಂಧಿ ಸುಪ್ರೀಂ ಲೀಡರು. ಈ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸಬಲ್ಲ ಸಾರಥಿಗಳು ಬೇಕಲ್ಲ? ಹೀಗಾಗಿ ಕರ್ನಾಟಕದ ವಿಷಯ ಬಂದಾಗ ಅವರು ದೇವರಾಜ ಅರಸರನ್ನು ಸಾರಥಿಯಾಗಿ ನೇಮಿಸಿದರು. ಮುಂದೆ ೧೯೭೨ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕರ್ನಾಟಕದ ಅಧಿಕಾರ ಸೂತ್ರ ಹಿಡಿದಾಗ ದೇವರಾಜ ಅರಸರನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂರಿಸಿದರು.
ಹೀಗೆ ಕರ್ನಾಟಕದ ಮುಖ್ಯಮಂತ್ರಿಯಾದ ಅರಸರು ಕೆಲವೇ ಕಾಲದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜರಿಗೆ ತಂದು ಉಳುವವನೇ ಹೊಲದೊಡೆಯನಾಗುವಂತೆ ಮಾಡಿದರು. ಅವತ್ತು ಉಳ್ಳವರ ಕೈಯಿಂದ ಇಲ್ಲದವರ ಕೈಗೆ ಅವರು ಹಸ್ತಾಂತರಿಸಿದ್ದು ಸುಮಾರು ಇಪ್ಪತ್ತೊಂದು ಲಕ್ಷ ಎಕರೆಯಷ್ಟು ಭೂಮಿ. ಈ ಪ್ರಮಾಣದ ಭೂಮಿ ದುರ್ಬಲರ ಕೈಗೆ ಹೋಗಿದ್ದರಿಂದ ಲಕ್ಷಾಂತರ ಮಂದಿ ತಲೆಮಾರುಗಳ ಕಾಲ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಯಿತು. ಯಾವ ಸವಲತ್ತು ದೀರ್ಘ ಕಾಲ ಬದುಕುಗಳನ್ನು ಕಟ್ಟಿಕೊಳ್ಳಲು ಅನುವುಮಾಡಿಕೊಡುತ್ತದೋ ಅದು ನಿಜವಾದ ಸಾಮಾಜಿಕ ಕ್ರಾಂತಿ.
ದೇವರಾಜ ಅರಸರು ಇದನ್ನು ಸಾಧಿಸಿದರು. ಕರ್ನಾಟಕದ ನೆಲೆಯಲ್ಲಿ ಇಂತಹ ಮತ್ತೊಂದು ಕ್ರಾಂತಿ ನಡೆದಿರಲಿಲ್ಲ. ಮುಂದೆ ನಡೆಯಲೂ ಇಲ್ಲ. ಅರಸರ ಈ ಸಾಮಾಜಿಕ ಕ್ರಾಂತಿ ಕಾಂಗ್ರೆಸ್ ಪಕ್ಷಕ್ಕೆ ಯಾವ ಮಟ್ಟದ ಲಾಭ ತಂದು ಕೊಟ್ಟಿತೆಂದರೆ ೧೯೭೮ರ ಹೊತ್ತಿಗೆ ದೇಶಾದ್ಯಂತ ಕಾಂಗ್ರೆಸ್ ವಿರೋಧಿ ಅಲೆ ಇದ್ದರೂ ಕರ್ನಾಟಕದಲ್ಲಿ ಮಾತ್ರ ಅದು ಬಂಪರ್ ಜಯ ಸಾಧಿಸಿತು. ಅರಸರ ಸಾಮಾಜಿಕ ಕ್ರಾಂತಿಯ ಪ್ರತಿಫಲ ಅದು.
ಇಂತಹ ಅರಸರು ನಿರಾತಂಕವಾಗಿ ಮುಂದುವರಿಯಲು ಸಾಧ್ಯವಾಗಿದ್ದರೆ ಕರ್ನಾಟಕದ ಚರಿತ್ರೆಯೇ ಬದಲಾಗುತ್ತಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಕುಸಿದಿದ್ದ ಇಂದಿರಾ ಗಾಂಧಿ ಅವರ ಕಿವಿ ಹಿತ್ತಾಳೆಯಾಗಿತ್ತು. ಅದರಲ್ಲೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾ ಗೆಲುವು ಸಾಧಿಸಿದರಲ್ಲ ಇದಾದ ನಂತರ ಇಂದಿರಾ ಪುತ್ರ ಸಂಜಯ್ ಗಾಂಧಿಯವರಿಗೆ ಹತ್ತಿರವಾಗಿದ್ದ ಕರ್ನಾಟಕದ ಇಬ್ಬರು ಕಾಂಗ್ರೆಸ್ ನಾಯಕರು ಇಂದಿರಾಗಾಂಧಿಯವರ ಕಿವಿಗೆ ಸೀಸ ಸುರಿಯತೊಡಗಿದರು. ‘ಮೇಡಂ, ದೇವರಾಜ ಅರಸರು ಸಾಮಾನ್ಯರಲ್ಲ. ನಿಮ್ಮನ್ನು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಿಸಿದ್ದು ತಾವೇ ಎಂದು ಅವರು ಭಾವಿಸಿದ್ದಾರೆ.
ಅಷ್ಟೇ ಅಲ್ಲ.ದಿಲ್ಲಿ ಗದ್ದುಗೆಯಿಂದ ನೀವು ಕೆಳಗಿಳಿದ ಮೇಲೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲು ಹವಣಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ರಾಷ್ಟ್ರ ರಾಜಕಾರಣದಲ್ಲಿ ನಿಮ್ಮ ವಿರೋಧಿಗಳಾಗಿರುವವರ ಜತೆ ಸತತ ಸಂಪರ್ಕದಲ್ಲಿ ಇದ್ದಾರೆ’ ಅಂತ ಈ ಇಬ್ಬರು ನಾಯಕರು ಸುರಿದ ಸೀಸ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತು. ಪರಿಣಾಮ? ಇಂದಿರಾ ಗಾಂಧಿ ಅರಸರ ವಿರುದ್ಧ ತಿರುಗಿ ಬಿದ್ದರು.೧೯೭೯ ರಲ್ಲಿ ತಮ್ಮ ಪಕ್ಷದವರೇ ತಮ್ಮ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ ಬೆಳವಣಿಗೆ ಅರಸರಿಗೆ ವಸ್ತುಸ್ಥಿತಿಯ ಅರಿವು ಮೂಡಿಸಿತು.
ಇಂತಹ ನಿರ್ಣಾಯಕ ಘಟ್ಟದಲ್ಲಿ ಅರಸರು ರೂಪಿಸಿದ್ದ ರಾಜಕೀಯ ಪಡೆ ಅವರ ಕೈ ಬಿಡಲಿಲ್ಲ. ಬದಲಿಗೆ ಬೆಂಗಳೂರಿನ ಶಾಸಕರ ಭವನದಲ್ಲಿರುವ ಹೆಚ್.ವಿಶ್ವನಾಥ್ ಅವರ ಕೊಠಡಿಯಲ್ಲಿ ಸಭೆ ಸೇರಿತು. ಈ ಸಭೆಯಲ್ಲಿದ್ದ ಕೆಲವರಿಗೆ ಗೊಂದಲ. ನಾವು ಅರಸರ ಜತೆಗಿರಬೇಕೋ?ವಿರುದ್ಧ ನಿಲ್ಲಬೇಕೋ? ಎಂಬುದು ಈ ಗೊಂದಲ. ಆದರೆ ಅವತ್ತು ಸಭೆಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ಮತ್ತು ಬಸವರಾಜ ಪಾಟೀಲ್ ಅನ್ವರಿಯವರು:‘ನಮಗೆ ಇಂದಿರಾಗಾಂಧಿ ಗೊತ್ತಿಲ್ಲ. ಆದರೆ ಅರಸರು ಗೊತ್ತು. ಇವತ್ತು ನಾವು ಚುನಾವಣೆಯಲ್ಲಿ ಗೆದ್ದು ಶಾಸಕರಾಗಲು ಕಾರಣರಾದವರು ಅರಸರು. ಹೀಗಾಗಿ ನಾವು ಅವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕಬೇಕು’ಎಂದು ವಾದಿಸಿದರು. ಫೈನಲಿ ಅದೇ ಸಭೆಯ ನಿರ್ಣಯವೂ ಆಯಿತು. ಅವತ್ತು ಸಭೆಯ ಈ ನಿರ್ಣಯವನ್ನು ಹೆಚ್.ವಿಶ್ವನಾಥ್ ಅವರು ಫೋನಿನ ಮೂಲಕ ಅರಸರಿಗೆ ತಿಳಿಸುತ್ತಾ,‘ ಬುದ್ಧಿ, ನಾವೆಲ್ಲ ನಿಮ್ಮ ಜತೆ ನಿಲ್ಲಲು ತೀರ್ಮಾನಿಸಿದ್ದೇವೆ’ ಎಂದಾಗ ಅರಸರು ಕಣ್ಣೀರು ಹಾಕಿದರಂತೆ.
ಮುಂದೆ ವಿಧಾನಸಭೆಯಲ್ಲಿ ಅರಸರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು. ಆದರೂ ಅರಸರಿಗೆ ಚಿತ್ರ ಸ್ಪಷ್ಟವಾಗಿತ್ತು. ಇಂದಿರಾಗಾಂಧಿ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ತಾವು ಉಳಿದು, ತಮ್ಮ ಜತೆಗಿರುವವರ ರಾಜಕೀಯ ಭವಿಷ್ಯ ಕಾಪಾಡಬೇಕು’ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿತು. ಹೀಗಾಗಿಯೇ ಅವರು ಇಂದಿರಾಗಾಂಧಿ ಅವರಿಂದ ದೂರ ಸರಿದು ೧೯೮೦ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಆದರೆ ಅವರ ಲೆಕ್ಕಾಚಾರ ಹುಸಿಯಾಯಿತು. ಅರ್ಥಾತ್ ಚುನಾವಣೆಯಲ್ಲಿ ಅವರು ನಿಲ್ಲಿಸಿದ್ದ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದ್ದರು. ಯಾವಾಗ ಈ ಬೆಳವಣಿಗೆ ನಡೆಯಿತೋ ಇದಾದ ನಂತರ ಬೆಂಗಳೂರಿನಲ್ಲಿ ಬೆಂಬಲಿಗರ ಬೃಹತ್ ಸಭೆ ನಡೆಸಿದ ದೇವರಾಜ ಅರಸರು, ಅವತ್ತೇ ರಾತ್ರಿ ತಮ್ಮ ಸರ್ಕಾರಿ ಬಂಗಲೆ ‘ಬಾಲಬ್ರೂಯಿ’ಯಲ್ಲಿ ತಮ್ಮ ಬೆಂಬಲಿಗ ಶಾಸಕರ ಸಭೆ ಕರೆದರು.
ಈ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು: ‘ನಾವು ನಿಮ್ಮ ಜತೆಗಿದ್ದೇವೆ. ನಿಮ್ಮ ಹಿಂದೆ ನಡೆಯುತ್ತೇವೆ’ ಎಂದು ಘೋಷಿಸಿದರು. ಆ ಸಂದರ್ಭದಲ್ಲಿ ಅರಸರು ಆಗಲಿ ಎಂದಿದ್ದರೆ, ಈ ಶಾಸಕರ ಪಡೆಯನ್ನು ಕಟ್ಟಿಕೊಂಡು ಇಂದಿರಾಗಾಂಧಿ ವಿರುದ್ಧ ತಿರುಗಿ ಬಿದ್ದಿದ್ದರೆ ಇತಿಹಾಸದ ಚಕ್ರ ಯಾವ ಕಡೆ ತಿರುಗುತ್ತಿತ್ತೋ? ಆದರೆ ಅವತ್ತು ನಲವತ್ತಕ್ಕೂ ಹೆಚ್ಚು ಶಾಸಕರು ರಣಘೋಷ ಹಾಕಲು ತಯಾರಿದ್ದರೂ ಅರಸರು ಅದನ್ನು ಒಪ್ಪಲಿಲ್ಲ. ಆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಎಷ್ಟು ಸೂಕ್ಷ್ಮವಾಗಿತ್ತೆಂದರೆ, ಆ ಮಾತುಗಳು ಸಾಮಾಜಿಕ ನ್ಯಾಯದ ಪರ ದೀರ್ಘ ಕಾಲ ಹೋರಾಡಬಲ್ಲವರ ಆತ್ಮಾಹುತಿಯನ್ನು ತಡೆಯಿತು. ‘ನೋಡಿ, ನೀವು ನನ್ನ ಜತೆ ಬರಲು ಸಂಪೂರ್ಣ ಸಿದ್ಧವಾಗಿದ್ದೀರಿ. ಆದರೆ ನಾನೀಗ ಮುಳುಗುತ್ತಿರುವ ಹಡಗು. ಈ ಹಡಗಿಗೆ ಹತ್ತಿಕೊಂಡರೆ ನೀವೆಲ್ಲ ಮುಳುಗುತ್ತೀರಿ. ನೀವು ಮುಳುಗಬಾರದು. ನೀವು ಮುಳುಗಿದರೆ ಶೋಷಿತರ ಪರವಾಗಿ ಹೋರಾಡುವ ಸೈನ್ಯ ನಿರ್ನಾಮವಾದಂತೆ. ಹಾಗಾಗಬಾರದು.
ಇವತ್ತು ಏನೇ ಆದರೂ ನಾವು ವಸ್ತುಸ್ಥಿತಿಯನ್ನು ಗ್ರಹಿಸಬೇಕು. ಜನ ಇಂದಿರಾಗಾಂಧಿ ಪರವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ನನ್ನ ಜತೆ ಉಳಿದರೆ ಇಂದಿರಾಗಾಂಧಿ ನನ್ನ ಸರ್ಕಾರವನ್ನು ವಜ ಮಾಡಿಸುತ್ತಾರೆ. ಸರ್ಕಾರ ವಜ ಆದರೆ ನೀವು ಮತ್ತೆ ಚುನಾವಣೆಗೆ ಅಣಿಯಾಗಬೇಕು. ಅದು ನಿಶ್ಚಿತವಾಗಿಯೂ ಅಪಾಯ. ಹೀಗಾಗಿ ಮೊದಲು ನೀವು ಉಳಿದುಕೊಳ್ಳಿ. ನಿಮಗೆ ಎಲ್ಲಿ ಬೆಳಕು ಕಾಣುತ್ತದೋ ಅಲ್ಲಿಗೆ ಹೋಗಿ ಬಿಡಿ ಇಂದಿರಾಗಾಂಧಿಯವರ ಪರ ನಿಂತಿರುವ ಗುಂಡೂರಾಯರ ಜತೆ ಸೇರಿಕೊಳ್ಳಿ’ ಎಂದರು.
ಅರಸರು ಹಾಗೆ ಖಡಾಖಂಡಿತವಾಗಿ ಹೇಳಿದ ಮೇಲೆ ಶಾಸಕರಿಗೆ ಬೇರೆ ದಾರಿ ಉಳಿಯಲಿಲ್ಲ. ಹೀಗಾಗಿ ಅವರು ಅತ್ತ ಕಡೆ ಹೋದರು. ಇತ್ತ ಅರಸರು ಕೆಳಗಿಳಿದರು. ಆದರೆ ಹೀಗೆ ಕೆಳಗಿಳಿಯುವ ಮುನ್ನ ತಾವು ಸೃಷ್ಟಿಸಿದ ಸಾಮಾಜಕ ನ್ಯಾಯದ ಸೈನ್ಯವನ್ನು ಉಳಿಸಲು ಅವರು ಆಡಿದ ಮಾತಿದೆಯಲ್ಲ ಅದು ಐತಿಹಾಸಿಕ ಮಹತ್ವದ್ದು. ಇವತ್ತು ಸಾಮಾಜಿಕ ನ್ಯಾಯದ ಕಲ್ಪನೆಯೇ ಇಲ್ಲದವರ ಮೆರೆದಾಟ ಶುರುವಾಗಿರುವ ಈ ಹೊತ್ತಿನಲ್ಲಿ ಇದೇ ಕಾರಣಕ್ಕಾಗಿ ಅರಸರು ಪದೇ ಪದೇ ನೆನಪಾಗುತ್ತಾರೆ.




