Mysore
26
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ಕೆಪಿಎಸ್‌ಸಿ ಹಗರಣ | ಜ್ಞಾನೇಂದ್ರ ಕುಮಾರ್ ಅಮಾನತ್ತು

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ರಾಜ್ಯ ಸರ್ಕಾರ ಅಮಾನತ್ತುಗೊಳಿಸಿದೆ.

ಈ ಕುರಿತು ರಾಜ್ಯ ಸರ್ಕಾರ ಸೆ.3ರಂದು DPAR 259 SEC 2026ರ ಆದೇಶ ಹೊರಡಿಸಿದ್ದು, CID ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತ್ತು ಮಾಡಲಾಗಿದೆ.

48 ಗಂಟೆಗೂ ಹೆಚ್ಚು ಕಾಲ ವಶದಲ್ಲಿದ್ದ ಹಿನ್ನೆಲೆ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು MSME (ಬೆಂಗಳೂರು) ನಿರ್ದೇಶಕರಾಗಿದ್ದರು. KPSC ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಕ್ರಮ ಪ್ರಕರಣದಲ್ಲಿ ಅವರನ್ನು ಆಗಸ್ಟ್ 29ರಂದು ಬಂಧಿಸಲಾಗಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 89/2026ಕ್ಕೆ ಸಂಬಂಧಿಸಿದಂತೆ ಬಂಧನ ನಡೆದಿದ್ದು, ಪ್ರಕರಣದ ತನಿಖೆಯನ್ನು CID ನಡೆಸುತ್ತಿದೆ.

ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(3) ಹಾಗೂ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ ಕ್ರಮಗಳು) ಕಾಯ್ದೆ-2023ರ ಸೆಕ್ಷನ್ 10ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಬಂಧನದ ಬಳಿಕ ಅಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನಂತರ ಹೆಚ್ಚಿನ ತನಿಖೆಗಾಗಿ ಆಗಸ್ಟ್ 31ರಂದು CID ಪೊಲೀಸ್ ವಶಕ್ಕೆ ಪಡೆದಿದೆ. ಅಧಿಕಾರಿ 48 ಗಂಟೆಗೂ ಹೆಚ್ಚು ಕಾಲ ಅಧಿಕೃತ ವಶದಲ್ಲಿರುವುದನ್ನು ಸರ್ಕಾರ ಅಮಾನತ್ತು ಆದೇಶದಲ್ಲಿ ಪ್ರಮುಖವಾಗಿ ಪರಿಗಣಿಸಿದೆ.

ED ಶೋಧದಲ್ಲೂ ನೇಮಕಾತಿ ಅಕ್ರಮದ ಸುಳಿವು
ಈ ಪ್ರಕರಣ ಮತ್ತಷ್ಟು ಗಂಭೀರವಾಗಲು ಜಾರಿ ನಿರ್ದೇಶನಾಲಯದ (ED) ತನಿಖೆಯ ಮಾಹಿತಿಯೂ ಕಾರಣವಾಗಿದೆ. ಆಗಸ್ಟ್ 23ರಂದು ED ಬೆಂಗಳೂರು ವಲಯ ಕಚೇರಿಯ ಉಪ ನಿರ್ದೇಶಕರು ಸರ್ಕಾರಕ್ಕೆ ಕಳುಹಿಸಿರುವ ಪತ್ರದಲ್ಲಿ, PMLA ಕಾಯ್ದೆಯ ಸೆಕ್ಷನ್ 17ರಡಿ ನಡೆಸಿದ ಶೋಧ ಮತ್ತು ಜಪ್ತಿ ಕಾರ್ಯಾಚರಣೆಯಲ್ಲಿ ದೊರೆತ ವಸ್ತುಗಳು KPSC ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಸೂಚಿಸುತ್ತವೆ ಎಂದು ತಿಳಿಸಿರುವುದಾಗಿ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಂದಿನ KPSC ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಪಾತ್ರದ ಬಗ್ಗೆಯೂ ED ಪತ್ರದಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂದು ಸರ್ಕಾರ ದಾಖಲಿಸಿದೆ. ಹೀಗಾಗಿ, ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969ರ ನಿಯಮ 3(2) ಮತ್ತು 3(3)ರ ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಬಳಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ.

ಅಮಾನತ್ತು ಅವಧಿಯಲ್ಲಿ ನಿರ್ಬಂಧ
ಅಮಾನತ್ತು ಅವಧಿಯಲ್ಲಿ ಗಂಗ್ವಾರ್ ಅವರಿಗೆ ನಿಯಮಾನುಸಾರ ಜೀವನಾಧಾರ ಭತ್ಯೆ ಪಾವತಿಸಲಾಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ಯಾವುದೇ ಕಾರಣಕ್ಕೂ ತಮ್ಮ ಪ್ರಧಾನ ಕಚೇರಿಯನ್ನು ತೊರೆಯುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Tags:
error: Content is protected !!