Mysore
26
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ವ್ಯಾಪಕ ಟೀಕೆ : ವಿವಾದಾತ್ಮಕ ʼಉದ್ಯಾನ ಮಸೂದೆʼ ಹಿಂಪಡೆಯಲು ಸರ್ಕಾರ ನಿರ್ಧಾರ

​ಬೆಂಗಳೂರು : ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ವಿರೋಧ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿವಾದಿತ ‘ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ’ವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ತೀರ್ಮಾನಿಸಿದೆ.

​ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅಧಿಕೃತ ಮಾಹಿತಿ ನೀಡಿದರು.

​”ಸಾರ್ವಜನಿಕರ ಹಿತಾಸಕ್ತಿ ಮತ್ತು ಅಭಿಪ್ರಾಯಕ್ಕೆ ಸರ್ಕಾರ ಯಾವಾಗಲೂ ಬದ್ಧವಾಗಿರುತ್ತದೆ. ಉದ್ಯಾನವನಗಳ ತಿದ್ದುಪಡಿ ವಿಧೇಯಕದ ಬಗ್ಗೆ ಸಾರ್ವಜನಿಕರಿಂದ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ, ಸದ್ಯಕ್ಕೆ ಈ ವಿಧೇಯಕವನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು.

​ಈ ವಿಧೇಯಕವು ಉದ್ಯಾನವನಗಳ ಸ್ವರೂಪ ಬದಲಾಯಿಸುತ್ತದೆ ಮತ್ತು ಪರಿಸರಕ್ಕೆ ಮಾರಕವಾಗಲಿದೆ ಎಂದು ಸಾರ್ವಜನಿಕರಿಂದ ಹಾಗೂ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ವಿಧೇಯಕದ ಕೆಲವು ಅಂಶಗಳ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆದಿತ್ತು. ಉದ್ಯಾನವನಗಳ ಬಳಕೆ, ನಿರ್ವಹಣೆ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಪ್ರಸ್ತಾವನೆಗಳ ಬಗ್ಗೆ ನಾಗರಿಕರು ಮತ್ತು ವಿವಿಧ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

​ಈ ವಿಧೇಯಕದ ವಿರುದ್ಧ ವಿರೋಧ ಪಕ್ಷವಾದ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸುವುದಲ್ಲದೆ, ಈ ಕುರಿತು ರಾಜ್ಯಪಾಲರಿಗೂ ಅಧಿಕೃತವಾಗಿ ದೂರು ನೀಡಿತ್ತು.

​ಜನರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿರುವ ಸರ್ಕಾರ, ಮುಂದಿನ ದಿನಗಳಲ್ಲಿ ಈ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಪಡೆದು, ಎಲ್ಲರ ಸಲಹೆಗಳನ್ನು ಕ್ರೋಡೀಕರಿಸಿ, ಹೊಸದಾಗಿ ಪರಿಷ್ಕೃತ ವಿಧೇಯಕವನ್ನು ಮಂಡಿಸಲು ತೀರ್ಮಾನಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರವು ವಿಧೇಯಕವನ್ನು ವಾಪಸ್ ಪಡೆದು, ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕ ಅಗತ್ಯ ಬದಲಾವಣೆಗಳನ್ನು ಮಾಡಿ ಹೊಸದಾಗಿ ಮಂಡಿಸಲು ಮುಂದಾಗಿದೆ.
ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಸರ್ಕಾರ ಮುಂದಾಗಿರುವುದು ಈ ನಿರ್ಧಾರದ ಪ್ರಮುಖ ಅಂಶವಾಗಿದೆ.

Tags:
error: Content is protected !!