Mysore
24
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ಕೊಡಗಿನಲ್ಲಿ ಇಂದು ಕೈಲ್‌ಪೊಳ್ದ್ ಸಂಭ್ರಮ

ಎಸ್.ಎ. ಹುಸೇನ್

ಆಯುಧಗಳಿಗೆ ವಿಶೇಷ ಪೂಜೆ; ಜಿಲ್ಲೆಯಾದ್ಯಂತ ಸಂಭ್ರಮದ ಹಬ್ಬದಾಚರಣೆಗೆ ಸಿದ್ಧತೆ

ಮಡಿಕೇರಿ: ಕೊಡಗಿನ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿರುವ ಕೈಲ್‌ಪೊಳ್ದ್ (ಕೈಲ್‌ಮುಹೂರ್ತ) ಹಬ್ಬದ ಸಂಭ್ರಮ ಮನೆ ಮಾಡಿದ್ದು, ಜಿಲ್ಲೆಯಾದ್ಯಂತ ಸಂಭ್ರಮದ ಹಬ್ಬದಾಚರಣೆಗೆ ಅಗತ್ಯ ಸಿದ್ಧತೆ ನಡೆದಿದೆ. ಕೊಡವ ಕ್ಯಾಲೆಂಡರ್‌ನ ಚಿನ್ಯಾರ್ ತಿಂಗಳ ೧೮ನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಅದರಂತೆ ಪ್ರತಿವರ್ಷ ಸೆ.೩ರಂದು ಕೊಡಗಿನ ಬಹುತೇಕ ಭಾಗಗಳಲ್ಲಿ ಹಬ್ಬ ನಡೆಯುತ್ತದೆ. ಆದರೆ ಗಾಳಿಬೀಡು ಹಾಗೂ ನಾಲ್ಕುನಾಡು ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಸಂಪ್ರದಾಯದಂತೆ ಬೇರೆಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ.

ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ ಹಾಗೂ ಪೊಳ್ದ್ ಎಂದರೆ ಹಬ್ಬ. ಹೀಗಾಗಿ ಕೈಲ್‌ಪೊಳ್ದ್ ಅನ್ನು ಕೊಡವರ ಆಯುಧ ಪೂಜೆಯೆಂದೇ ಪರಿಗಣಿಸಲಾಗು ತ್ತದೆ. ಹಬ್ಬದ ಮುಂಜಾನೆ ಮನೆಯ ಯಜಮಾನ ತೋಟದಿಂದ ಕುತ್ತರ್ಚಿ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಅಲಂಕರಿಸಿ ಹಾಲು ಮರಕ್ಕೆ ಸಿಕ್ಕಿಸುವ ಸಂಪ್ರದಾಯವಿದೆ.

ಬಳಿಕ ಕೃಷಿ ಚಟುವಟಿಕೆಗೆ ಬಳಸಿದ ನೇಗಿಲು, ನೊಗ ಹಾಗೂ ಕೃಷಿಗೆ ನೆರವಾದ ದನಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಲಾಗುತ್ತದೆ. ಕೃಷಿ ಸಲಕರಣೆಗಳನ್ನು ತೊಳೆದು ದೇವರ ಮನೆಯಲ್ಲಿ ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ಇದು ಕೊಡಗಿನ ಜನರ ಕೃಷಿ ಬದುಕಿನೊಂದಿಗಿನ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ಆಯುಧಗಳಿಗೆ ಪೂಜೆ ಬಳಿಕ ಮನೆಯ ಅಂಗಳ ಅಥವಾ ಊರಿನ ಮೈದಾನಗಳಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಹಿಂದೆ ಪೂಜೆಯ ನಂತರ ಬೇಟೆಗೆ ತೆರಳುತ್ತಿದ್ದ ಸಂಪ್ರದಾಯದ ಬದಲಾಗಿ ಇದೀಗ ಇಂತಹ ಕ್ರೀಡೆಗಳ ಮೂಲಕ ಕೊಡವರ ಶೌರ್ಯ ಹಾಗೂ ಕ್ರೀಡಾ ಕೌಶಲ ಪ್ರದರ್ಶಿಸಲಾಗುತ್ತಿದೆ.

ಕೈಲ್‌ಪೊಳ್ದ್ ಹಬ್ಬದ ಮತ್ತೊಂದು ವಿಶೇಷವೆಂದರೆ ಪಂದಿಕರಿ ಹಾಗೂ ಕಡಂಬುಟ್ಟ್ (ಕಡಂಬಿಟ್ಟು). ಹಿಂದೆ ಬೇಟೆಯಾಡಿದ ಕಾಡು ಹಂದಿಯ ಮಾಂಸವನ್ನು ಬಳಸಲಾಗುತ್ತಿತ್ತು. ಪ್ರಸ್ತುತ ಸಾಕಿದ ಹಂದಿಯ ಮಾಂಸದಿಂದ ಪಂದಿಕರಿ ತಯಾರಿಸಿ ಹಬ್ಬದ ವಿಶೇಷ ಭೋಜನವಾಗಿ ಸವಿಯಲಾಗುತ್ತದೆ.

ಆಧುನಿಕ ಜೀವನಶೈಲಿಯ ನಡುವೆಯೂ ಕೊಡವರ ಸಾಂಪ್ರದಾಯಿಕ ಆಚರಣೆ, ಕೃಷಿ ಸಂಸ್ಕೃತಿ, ಆಯುಧ ಪೂಜೆ ಹಾಗೂ ಕುಟುಂಬದ ಒಗ್ಗಟ್ಟನ್ನು ಉಳಿಸಿಕೊಂಡು ಬರುತ್ತಿರುವ ಕೈಲ್ ಪೊಳ್ದ್ ಹಬ್ಬ ಕೊಡಗಿನ ಜನರ ಪಾಲಿಗೆ ಇಂದಿಗೂ ವಿಶೇಷ ಮಹತ್ವ ಹೊಂದಿದೆ.

ಕೋವಿ ಪೂಜೆಗೆ ವಿಶೇಷ ಮಹತ್ವ:  ಕೈಲ್‌ಪೊಳ್ದ್ ಆಚರಣೆಯಲ್ಲಿ ಕೋವಿ ಪೂಜೆ ಪ್ರಮುಖ ಸ್ಥಾನ ಪಡೆದಿದೆ. ಹಿಂದೆ ಕೊಡವರು ಬೇಟೆಯಾಡುವ ಸಂಪ್ರದಾಯ ಹೊಂದಿದ್ದರು. ಕೃಷಿ ಚಟುವಟಿಕೆ ಆರಂಭವಾದಾಗ ಕೋವಿಯನ್ನು ದೇವರ ಮನೆಯಲ್ಲಿ ಇರಿಸಿ ಪೂಜಿಸಲಾಗುತ್ತಿತ್ತು. ಕೃಷಿ ಕಾರ್ಯ ಮುಗಿದ ಬಳಿಕ ಮತ್ತೆ ಬೇಟೆಗೆ ತೆರಳುವ ಪದ್ಧತಿ ಇತ್ತು. ಇದೀಗ ವನ್ಯಜೀವಿ ಬೇಟೆಗೆ ಕಾನೂನುಬದ್ಧ ನಿಷೇಧ ಇರುವುದರಿಂದ ಆ ಸಂಪ್ರದಾಯ ಬದಲಾಗಿದೆ. ಆದರೆ, ಇಂದಿಗೂ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ತೋಕ್‌ಪೂನಿಂದ ಅಲಂಕಾರ..!:  ಕೈಲ್‌ಪೊಳ್ದ್ ಆಚರಣೆ ಸಂದರ್ಭ ತೋಕ್ ಪೂ ಅಥವಾ ಗೌರಿ ಹೂವಿಗೂ ವಿಶೇಷ ಸ್ಥಾನಮಾನವಿದೆ. ದೇವರ ಮನೆಯಲ್ಲಿ ಕೋವಿಯನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸುವ ವೇಳೆ ಕಾಡಿನಲ್ಲಿ ದೊರೆಯುವ ತೋಕ್‌ಪೂ (ಗೌರಿ ಹೂ)ವಿನಿಂದ ಅಲಂಕರಿಸಲಾಗುತ್ತದೆ. ಈ ಹೂವು ಸಾಮಾನ್ಯವಾಗಿ ಆಗಸ್ಟ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಮಾತ್ರ ಕಾಣಸಿಗುವುದು ವಿಶೇಷ

 

 

Tags:
error: Content is protected !!