Mysore
20
broken clouds

Social Media

ಬುಧವಾರ, 02 ಸೆಪ್ಟೆಂಬರ್ 2026
Light
Dark

ಯುವಜನರ ಕೈಯಲ್ಲಿ ಮೊಬೈಲ್ ಇದೆ; ದಿಕ್ಕು ಇದೆಯೇ?

ಟಿ.ಕೆ.ಹರೀಶ್

ತಕ್ಷಣದ ಯಶಸ್ಸಿನ ಸಂಸ್ಕೃತಿಯಿಂದ ಅಪಾಯಕಾರಿ ; ಯುವಜನರಿಗೆ ಮನವರಿಕೆ ಅಗತ್ಯ

ಇಂದು ಒಂದು ಮಗು ಹುಟ್ಟಿದಾಗ ಅದರ ಸುತ್ತಲೂ ಕಾಣಿಸುವ ಮೊದಲ ಜಗತ್ತು ಮನೆಯವರ ಮುಖಗಳಷ್ಟೇ ಅಲ್ಲ; ಮೊಬೈಲ್ ಪರದೆ, ಡಿಜಿಟಲ್ ಸಾಧನಗಳು ಮತ್ತು ತಂತ್ರಜ್ಞಾನದ ಜಗತ್ತೂ ಆಗಿದೆ. ಒಂದು ಕಾಲದಲ್ಲಿ ಮಾಹಿತಿ ಪಡೆಯಲು ಗ್ರಂಥಾಲಯ ಬೇಕಿತ್ತು. ಇಂದು ಬೆರಳ ತುದಿಯಲ್ಲಿ ಜಗತ್ತೇ ತೆರೆದುಕೊಳ್ಳುತ್ತದೆ. ಒಂದು ಕಾಲದಲ್ಲಿ ಪತ್ರ ಬರಲು ದಿನಗಳು ಬೇಕಾಗುತ್ತಿತ್ತು; ಇಂದು ಕ್ಷಣಾರ್ಧದಲ್ಲಿ ಸಂದೇಶ ತಲುಪುತ್ತದೆ.

ಆದರೆ ತಂತ್ರಜ್ಞಾನ ನಮ್ಮ ಕೈಗೆ ಬಂದಿರುವ ವೇಗಕ್ಕಿಂತ ಜೀವನಕ್ಕೆ ದಿಕ್ಕು ನೀಡುವ ಜ್ಞಾನ ನಮ್ಮೊಳಗೆ ಬೆಳೆದಿದೆಯೇ? ಎಂಬ ಪ್ರಶ್ನೆ ಹೆಚ್ಚು ಮುಖ್ಯ. ಇಂದಿನ ಜೆನ್ ಝೀ ಪೀಳಿಗೆ ಅತ್ಯಂತ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕುತ್ತಿದೆ. ಮಾಹಿತಿ ಅಪಾರವಾಗಿದೆ; ಅವಕಾಶಗಳು ಅಪಾರವಾಗಿವೆ; ಆಯ್ಕೆಗಳೂ ಅಪಾರವಾಗಿವೆ. ಆದರೆ ಇದೇ ಸಮಯದಲ್ಲಿ ಗೊಂದಲ, ಆತಂಕ, ಹೋಲಿಕೆ, ಅಸಹನೆ ಮತ್ತು ತಕ್ಷಣದ ಯಶಸ್ಸಿನ ಹಂಬಲವೂ ಹೆಚ್ಚಾಗಿದೆ. ಹೀಗಾಗಿ ಮೊಬೈಲ್ ನಮ್ಮ ಬದುಕನ್ನು ಎಷ್ಟು ನಿಯಂತ್ರಿಸುತ್ತಿದೆ.

ತಂತ್ರಜ್ಞಾನ ಮನುಷ್ಯನ ಬದುಕನ್ನು ಸುಲಭಗೊಳಿಸಲು ಹುಟ್ಟಿಕೊಂಡದ್ದು. ಆದರೆ ಕೆಲವೊಮ್ಮೆ ಅದೇ ತಂತ್ರಜ್ಞಾನ ಮನುಷ್ಯನ ಸಮಯ, ಗಮನ ಮತ್ತು ಸ್ವಾತಂತ್ರ್ಯವನ್ನು ನಿಯಂತ್ರಿಸುವ ಮಟ್ಟಕ್ಕೆ ತಲುಪುತ್ತದೆ. ಮೊಬೈಲ್ ಒಂದು ಸಾಧನ. ಆದರೆ ಇಂದು ಅನೇಕ ಸಂದರ್ಭಗಳಲ್ಲಿ ಸಾಧನವೇ ಬಳಕೆದಾರನನ್ನು ನಿಯಂತ್ರಿಸುತ್ತಿರುವಂತೆ ಕಾಣುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನೋಟಿಫಿಕೇಶನ್ ಪರಿಶೀಲಿಸುವುದು, ಊಟ ಮಾಡುವಾಗ ಮೊಬೈಲ್ ನೋಡುವುದು, ಸ್ನೇಹಿತರೊಂದಿಗೆ ಕುಳಿತಾಗಲೂ ಪರದೆಯಿಂದ ಕಣ್ಣು ತೆಗೆಯದಿರುವುದು, ಮಲಗುವ ಮುನ್ನವೂ ಸ್ಕ್ರೋಲ್ ಮಾಡುವುದು. ಇದು ಕೇವಲ ಅಭ್ಯಾಸವಲ್ಲ; ನಿಧಾನವಾಗಿ ರೂಪುಗೊಳ್ಳುತ್ತಿರುವ ಜೀವನಶೈಲಿ.

ಅತ್ಯಂತ ದೊಡ್ಡ ಅಪಾಯವೆಂದರೆ, ನಾವು ಸಮಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವೇ ನಮಗಿಲ್ಲದಿರುವುದು. ಒಂದು ನಿಮಿಷ ಎಂದು ಮೊಬೈಲ್ ತೆಗೆದುಕೊಳ್ಳುತ್ತೇವೆ. ಅರ್ಧ ಗಂಟೆ ಕಳೆದಿರುತ್ತದೆ. ಒಂದು ವಿಡಿಯೋ ನೋಡೋಣ ಎಂದು ಆರಂಭಿಸುತ್ತೇವೆ. ಗಂಟೆ ಕಳೆದಿರುತ್ತದೆ. ಮಾಹಿತಿ ಹೆಚ್ಚಾಗಿದೆ; ಆದರೆ ಚಿಂತನೆ? ಇಂದಿನ ಯುವಜನರಿಗೆ ಮಾಹಿತಿಯ ಕೊರತೆಯಿಲ್ಲ. ಆದರೆ ಮಾಹಿತಿ ಮತ್ತು ಜ್ಞಾನ ಒಂದೇ ಅಲ್ಲ. ಸರ್ಚ್ ಮಾಡಿದರೆ ಉತ್ತರ ಸಿಗಬಹುದು. ಎಐ ಕೇಳಿದರೆ ವಿವರಣೆ ಸಿಗ ಬಹುದು. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ಸಿಗಬಹುದು. ಆದರೆ ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ಸರಿಯಾಗಿದೆ, ಯಾವುದು ತಪ್ಪಾಗಿದೆ ಎಂದು ನಿರ್ಧರಿಸುವ ವಿವೇಕವನ್ನು ಯಾವುದೇ ತಂತ್ರಜ್ಞಾನ ನಮ್ಮ ಪರವಾಗಿ ಸಂಪೂರ್ಣವಾಗಿ ಬಳಸಲಾರದು.

ಇಂದು ಯುವಜನರ ಮುಂದೆ ಇರುವ ದೊಡ್ಡ ಸವಾಲು ಮಾಹಿತಿಯ ಕೊರತೆಯಲ್ಲ; ಮಾಹಿತಿಯ ಮಹಾಪೂರದಲ್ಲಿ ಸತ್ಯವನ್ನು ಗುರುತಿಸುವ ಸಾಮರ್ಥ್ಯ. ಒಂದು ಸುಳ್ಳು ಸುದ್ದಿ ಸಾವಿರಾರು ಜನರನ್ನು ತಲುಪಲು ಕೆಲವೇ ನಿಮಿಷ ಸಾಕು. ಒಂದು ತಪ್ಪು ಕಲ್ಪನೆ ವೈರಲ್ ಆಗಬಹುದು. ಒಂದು ಅಪೂರ್ಣ ವಿಡಿಯೋ ಸಂಪೂರ್ಣ ಸತ್ಯದಂತೆ ಕಾಣಬಹುದು. ಆದ್ದರಿಂದ ಇಂದಿನ ಯುವಜನರಿಗೆ ಡಿಜಿಟಲ್ ಸಾಕ್ಷರತೆಯ ಜೊತೆಗೆ ವಿಮರ್ಶಾತ್ಮಕ ಚಿಂತನೆಯೂ ಅಗತ್ಯ.

ಹೋಲಿಕೆಯ ಸಮಾಜದಲ್ಲಿ ಬದುಕುತ್ತಿರುವ ಪೀಳಿಗೆ: ಸಾಮಾಜಿಕ ಜಾಲತಾಣದ ಮತ್ತೊಂದು ಗಂಭೀರ ಪರಿಣಾಮವೆಂದರೆ ಹೋಲಿಕೆ. ನಾವು ನಮ್ಮ ಜೀವನವನ್ನು ಹಿಂದೆಂದೂ ಇಷ್ಟು ಜನರ ಜೀವನದೊಂದಿಗೆ ಹೋಲಿಸಿಕೊಂಡಿರಲಿಲ್ಲ. ಇಂದು ಪ್ರತಿಯೊಬ್ಬರ ಮೊಬೈಲ್ ಪರದೆಯಲ್ಲೂ ನೂರಾರು ಜನರ ‘ಯಶಸ್ಸು’ ಕಾಣಿಸುತ್ತದೆ. ಯಾರೋ ವಿದೇಶಕ್ಕೆ ಹೋಗಿದ್ದಾರೆ… ಯಾರೋ ಹೊಸ ಕಾರು ಖರೀದಿಸಿದ್ದಾರೆ… ಇವೆಲ್ಲವನ್ನೂ ನೋಡುತ್ತಾ ಯುವಕ ತನ್ನ ಜೀವನವನ್ನು ಪ್ರಶ್ನಿಸಲು ಆರಂಭಿಸುತ್ತಾನೆ. ಆದರೆ ನಾವು ಮರೆಯುತ್ತಿರುವ ಸತ್ಯವೇನೆಂದರೆ ಸಾಮಾಜಿಕ ಜಾಲತಾಣ ಜೀವನದ ಸಂಪೂರ್ಣ ಚಿತ್ರವಲ್ಲ; ಅದು ಆಯ್ದ ಕ್ಷಣಗಳ ಪ್ರದರ್ಶನ ಎಂಬುದನ್ನು. ಇತರರ ಪ್ರದರ್ಶಿತ ಯಶಸ್ಸಿನೊಂದಿಗೆ ನಮ್ಮ ಕಾಣದ ಹೋರಾಟವನ್ನು ಹೋಲಿಸುವುದು ನ್ಯಾಯಸಮ್ಮತವಲ್ಲ.

ತಕ್ಷಣದ ಯಶಸ್ಸಿನ ಸಂಸ್ಕ ತಿ: ಇಂದಿನ ಪೀಳಿಗೆಯ ಮತ್ತೊಂದು ದೊಡ್ಡ ಸವಾಲು ತಕ್ಷಣದ ಫಲಿತಾಂಶದ ನಿರೀಕ್ಷೆ. ವೈರಲ್ ವಿಡಿಯೋಗಳು, ತಕ್ಷಣದ ಪ್ರತಿಕ್ರಿಯೆಗಳು ಮತ್ತು ಕ್ಷಣಾರ್ಧದಲ್ಲಿ ದೊರೆಯುವ ಮಾಹಿತಿಯ ಸಂಸ್ಕ ತಿ ಯುವಜನರ ಮನಸ್ಸಿನಲ್ಲೂ ವೇಗದ ನಿರೀಕ್ಷೆಯನ್ನು ಬೆಳೆಸಿದೆ. ವೈರಲ್ ಆಗಲು ಕ್ಷಣ ಸಾಕಾಗಬಹುದು; ಆದರೆ ವ್ಯಕ್ತಿತ್ವ ಕಟ್ಟಲು ಜೀವನ ಬೇಕು. ಈ ವ್ಯತ್ಯಾಸವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು.

ಯುವಶಕ್ತಿ ಎಂದರೆ ಕೇವಲ ವಯಸ್ಸಲ್ಲ : ಯುವಕ ಎಂದರೆ ಕೇವಲ ಇಪ್ಪತ್ತು ಅಥವಾ ಇಪ್ಪತ್ತೈದು ವರ್ಷದ ವ್ಯಕ್ತಿ ಅಲ್ಲ. ಹೊಸದನ್ನು ಕಲಿಯುವ ಮನಸ್ಸು, ಪ್ರಶ್ನಿಸುವ ಧೈರ್ಯ, ಬದಲಾವಣೆಯನ್ನು ಸ್ವೀಕರಿಸುವ ಸಾಮರ್ಥ್ಯ ಮತ್ತು ಸಮಾಜದ ಬಗ್ಗೆ ಹೊಣೆಗಾರಿಕೆ ಹೊಂದಿರುವ ಮನೋಭಾವವೇ ನಿಜವಾದ ಯುವಶಕ್ತಿ.

ದಿಕ್ಕಿಲ್ಲದ ವೇಗ ಅಪಾಯಕಾರಿ: ಯುವಜನರಿಗೆ ವೇಗಬೇಕು. ಆದರೆ ವೇಗಕ್ಕಿಂತ ಮುಖ್ಯವಾದುದು ದಿಕ್ಕು. ದಿಕ್ಕಿಲ್ಲದ ವೇಗ ಅಪಾಯಕಾರಿ. ಗುರಿಯಿಲ್ಲದ ಜ್ಞಾನ ಅಪೂರ್ಣ. ಜವಾಬ್ದಾರಿಯಿಲ್ಲದ ಸ್ವಾತಂತ್ರ್ಯ ಅಪಾಯಕಾರಿ. ವಿವೇಕವಿಲ್ಲದ ತಂತ್ರಜ್ಞಾನ ಮತ್ತಷ್ಟು ಅಪಾಯಕಾರಿ. ಕನಸು ಇರಲಿ; ಆದರೆ ಕನಸಿನ ಜೊತೆಗೆ ಪರಿಶ್ರಮವೂ ಇರಲಿ. ಸ್ವಾತಂತ್ರ್ಯ ಇರಲಿ; ಆದರೆ ಅದರ ಜೊತೆ ಜವಾಬ್ದಾರಿಯೂ ಇರಬೇಕು. ಏಕೆಂದರೆ ದೇಶದ ಭವಿಷ್ಯವನ್ನು ಕೇವಲ ತಂತ್ರಜ್ಞಾನ ಕಟ್ಟುವುದಿಲ್ಲ. ತಂತ್ರಜ್ಞಾನವನ್ನು ಯಾವ ದಿಕ್ಕಿನಲ್ಲಿ ಬಳಸುವ ಯುವ ಮನಸ್ಸುಗಳು ಕಟ್ಟುತ್ತವೆ. ಇಂದಿನ ಜೆನ್ ಝೀ ಪೀಳಿ ಗೆಗೆ ಬೇಕಾಗಿರುವುದು ಮತ್ತೊಂದು ಹೊಸ ಆಪ್ ಅಲ್ಲ; ಒಂದು ಸ್ಪಷ್ಟ ಗುರಿ, ಒಂದು ದೃಢವಾದ ಮೌಲ್ಯಬದ್ಧತೆ ಮತ್ತು ತನ್ನ ಬದುಕಿನ ದಿಕ್ಕನ್ನು ತಾನೇ ನಿರ್ಧರಿಸುವ ಸಾಮರ್ಥ್ಯ.

(ಲೇಖಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ)

” ಇಂದು ಯುವಜನರ ಮುಂದೆ ಇರುವ ದೊಡ್ಡ ಸವಾಲು ಮಾಹಿತಿಯ ಕೊರತೆಯಲ್ಲ; ಮಾಹಿತಿಯ ಮಹಾಪೂರದಲ್ಲಿ ಸತ್ಯವನ್ನು ಗುರುತಿಸುವ ಸಾಮರ್ಥ್ಯ. ಒಂದು ಸುಳ್ಳು ಸುದ್ದಿ ಸಾವಿರಾರು ಜನರನ್ನು ತಲುಪಲು ಕೆಲವೇ ನಿಮಿಷ ಸಾಕು.”

 

 

Tags:
error: Content is protected !!