ಸಚಿವರಾದ ಕೆಲವೇ ದಿನಗಳಲ್ಲಿ ಸಂಪುಟದಿಂದ ನಾಗೇಂದ್ರ ಹೊರಕ್ಕೆ
ಬೆಂಗಳೂರು: ಮಾಜಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಂಗೀಕರಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ನಾಗೇಂದ್ರ ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅಂಗೀಕಾರ ಮಾಡಿದ್ದಾರೆ ಎಂದು ಲೋಕಭವನದ ಅಧಿಕೃತ ಪ್ರಕಟಣೆ ತಿಳಿಸಿದೆ. ಯೋಜನೆ ಮತ್ತು ಅಂಕಿ ಸಾಂಖ್ಯಿಕ ಸಚಿವರಾಗಿದ್ದ ನಾಗೇಂದ್ರ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿರುವುದನ್ನು ರಾಜ್ಯ ಸರ್ಕಾರದ ಅಧಿಕೃತ ರಾಜ್ಯಪತ್ರದ ೨೯-೦೮-೨೦೨೬ರ ಅಧಿಸೂಚನೆ ದೃಢಪಡಿಸಿದೆ. ಹೀಗಾಗಿ ನಾಗೇಂದ್ರ ಅವರು ರಾಜ್ಯ ಸಚಿವ ಸಂಪುಟದಿಂದ ಅಧಿಕೃತವಾಗಿ ಹೊರಬಂದಿದ್ದಾರೆ.
ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿ.ನಾಗೇಂದ್ರ ಅವರು ಆಗಸ್ಟ್ ೩ರಂದು ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಯೋಜನೆ ಮತ್ತು ಅಂಕಿ ಸಾಂಖ್ಯಿಕ ಖಾತೆಯನ್ನು ವಹಿಸಿಕೊಂಡಿದ್ದ ಅವರು, ಕೇವಲ ಸುಮಾರು ೨೪-೨೫ ದಿನಗಳಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಯಿತು.
ನಾಗೇಂದ್ರ ಅವರು ೨೦೨೪ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದಾಗಲೇ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಆರೋಪಗಳು ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದವು. ಆಗಲೂ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಽಸಿದಂತೆ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ೨೦೨೬ರ ಜೂನ್‌ನಲ್ಲಿ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ನಾಗೇಂದ್ರ ಸೇರಿದಂತೆ ೩೦ ಮಂದಿಯನ್ನು ಆರೋಪಿಗಳಾಗಿ ಹೆಸರಿಸಿದೆ. ಸಿಬಿಐ ಪ್ರಕಾರ, ವಾಲ್ಮೀಕಿ ನಿಗಮಕ್ಕೆ ಸಂಬಂಽಸಿದ ಸುಮಾರು ೮೯.೬೩ ಕೋಟಿ ರೂ.ಗಳನ್ನು ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್ ವಹಿವಾಟುಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದ್ದು, ನಂತರ ಸುಮಾರು ೬೦೦ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಹಲವು ಹಂತಗಳಲ್ಲಿ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ಸಿಬಿಐ ದೋಷಾರೋಪಪಟ್ಟಿಯಲ್ಲಿ ನಾಗೇಂದ್ರ ಅವರ ವಿರುದ್ಧವೂ ನಿರ್ದಿಷ್ಟ ಆರೋಪಗಳನ್ನು ಮಾಡಲಾಗಿದೆ.




