ಮೈಸೂರು: ಮೊನ್ನೆಯಷ್ಟೇ ಲಿಂಗಾಂಬುಧಿ ಉದ್ಯಾನ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳ ವೀಕ್ಷಣೆಗೆ ಶುಲ್ಕ ನಿಗದಿಪಡಿಸಲು ಮುಂದಾಗಿ ಸಚಿವರ ವಾರ್ನಿಂಗ್‌ಗೆ ಹೆದರಿ ಕೈ ಬಿಟ್ಟಿದ್ದಾರೆ.
ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಏಕಾಏಕೀ ವೀಕ್ಷಣೆಗೆ ಶುಲ್ಕ ನಿಗದಿಪಡಿಸಿದ್ದರು. ಇದರಿಂದ ಪಿಸಿಸಿಎಫ್ ಕುಮಾರ್ ಪುಷ್ಕರ್ ಅವರು ಚಾಟಿಬೀಸಿದ್ದಾರೆ. ದಸರಾ ಗಜಪಡೆಯನ್ನು ವೀಕ್ಷಿಸಲು ಶುಲ್ಕ ನಿಗದಿಪಡಿಸಿರುವ ವಿಷಯ ಮಾಧ್ಯಮಗಳಲ್ಲಿ ಪ್ರಕಟಗೊಂಡು ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕವನ್ನು ರದ್ದು ಮಾಡಿದೆ.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಸಲಹೆ ಮೇರೆಗೆ ಅರಣ್ಯ ಇಲಾಖೆ ಗಜಪಡೆಯ ದರ್ಶನಕ್ಕೆ ಟಿಕೆಟ್ ವ್ಯವಸ್ಥೆ ಜಾರಿ ಮಾಡಿತ್ತು ಎನ್ನಲಾಗಿದೆ. ಜನರ ವಿರೋಧದಿಂದ ಎಚ್ಚೆತ್ತು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯ ಬಳಿಕ ಅದನ್ನು ತಕ್ಷಣವೇ ರದ್ದುಪಡಿಸಲಾಗಿದೆ. ಅರಮನೆ ಅಂಗಳದಲ್ಲಿ ಆನೆಗಳ ವೀಕ್ಷಣೆಗೆ ಬರುವ ಸಾರ್ವಜನಿಕರಿಂದ ಇದೇ ಮೊದಲ ಬಾರಿಗೆ ವಯಸ್ಕರಿಗೆ ೧೦೦ ರೂ., ಮಕ್ಕಳಿಗೆ ೫೦ ರೂ., ನಿಗದಿ ಮಾಡಲಾಗಿತ್ತು.
ಅರಮನೆ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಇಚ್ಛಿಸಿದ್ದಲ್ಲಿ ದಸರಾ ಆನೆಗಳನ್ನು ವೀಕ್ಷಿಸಲು ಅರಣ್ಯ ಇಲಾಖೆ ವತಿಯಿಂದ ಇ-ಟೆಕೆಟಿಂಗ್ ಸೌಲಭ್ಯವನ್ನು ನೀಡಲಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವುದು ಕಂಡು ಬಂದಿದ್ದು, ಈ ವಿಷಯವು ಕೇವಲ ಚಿಂತನಾ ಹಂತದಲ್ಲಿತ್ತು. ಆದರೆ, ಆನೆಗಳ ವೀಕ್ಷಣೆಗೆ ಟಿಕೆಟ್ ವ್ಯವಸ್ಥೆ ಇಲ್ಲ ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದ್ದಾರೆ.




