ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 105 ಭಾರತೀಯರು ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ರಣಭೀಕರ ಪ್ರವಾಹದ ಅಬ್ಬರಕ್ಕೆ ನೂರಾರು ಮನೆಗಳು, ವಾಹನಗಳು, ಸೇತುವೆಗಳು ಹಾಗೂ ಮೂಲಸೌಕರ್ಯ ಯೋಜನಾ ಸ್ಥಳಗಳು ಕೊಚ್ಚಿಹೋಗಿವೆ. ಪ್ರವಾಹದ ನೀರು ಕೆಳಭಾಗಕ್ಕೆ ಹರಿದು ಬರುತ್ತಿರುವುದರಿಂದ ನೇಪಾಳದ ಗಡಿಗೆ ಹೊಂದಿಕೊಂಡಿರುವ ಬಿಹಾರದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಬುಧವಾರ ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದು, ಟಿಮುರೆ ಮತ್ತು ಸ್ಯಾಪ್ರು ಬೇಸಿ ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಗೈರೋಂಗ್ ಗಡಿ ದಾಟುವ ಪ್ರದೇಶದ ಸಮೀಪ ಟಿಬೆಟ್ ಭಾಗದಲ್ಲೂ ಭಾರೀ ಭೂಕುಸಿತ ಸಂಭವಿಸಿದ್ದು, ಹಲವರು ಸಾವನ್ನಪ್ಪಿ ಅನೇಕರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಈ ಭೀಕರ ಪ್ರವಾಹಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಉಪಗ್ರಹ ಚಿತ್ರಗಳು ಟಿಬೆಟ್ ಭಾಗದಲ್ಲಿ ಭಾರೀ ಮಳೆಯಾಗಿರುವುದನ್ನು ತೋರಿಸಿವೆ. ಹಿಮನದಿ ಸರೋವರ ಸ್ಫೋಟಗೊಂಡಿದ್ದರಿಂದ ಈ ಪ್ರವಾಹ ಉಂಟಾಗಿರಬಹುದು ಎಂಬ ಆಯಾಮದಲ್ಲೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ನದಿಗಳು ರುದ್ರನರ್ತನ ಮಾಡುತ್ತಿರುವುದು ಹಾಗೂ ಪ್ರವಾಹದ ರಭಸಕ್ಕೆ ಸೇತುವೆಗಳು ಮತ್ತು ಮನೆಗಳು ಇಸ್ಪೀಟ್ ಎಲೆಗಳಂತೆ ಕುಸಿದು ಬೀಳುತ್ತಿರುವುದು ಕಂಡುಬಂದಿದೆ. ಆತಂಕಗೊಂಡ ಜನರು ಜೀವಭಯದಿಂದ ಕಿರುಚುತ್ತಾ ಓಡುತ್ತಿರುವ ದೃಶ್ಯಗಳು ದಾಖಲಾಗಿವೆ.
ನೇಪಾಳ ಸರ್ಕಾರವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಆದರೆ ನೀರಿನ ಮಟ್ಟ ತೀವ್ರವಾಗಿ ಹೆಚ್ಚಿರುವ ಕಾರಣ ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್‌ಗೆ ಅಡ್ಡಿಯುಂಟಾಗಿದೆ. ಇನ್ನೊಂದೆಡೆ, ಟಿಬೆಟ್ ಭಾಗದಲ್ಲಿ ನಾಪತ್ತೆಯಾಗಿರುವವರ ಪತ್ತೆಗೆ ಸರ್ವಪ್ರಯತ್ನ ನಡೆಸುವಂತೆ ಹಾಗೂ ಮುಂದಿನ ಅಪಾಯಗಳನ್ನು ತಡೆಯಲು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚಿಸಿದ್ದಾರೆ.




