Mysore
22
overcast clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಕೊಡಗಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ

ನವೀನ್ ಡಿಸೋಜ

೧೬,೦೬೩ ಪ್ರಕರಣ ದಾಖಲು, ೧.೦೬ ಕೋಟಿ ರೂ. ದಂಡ ಸಂಗ್ರಹ ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸದಿರುವುದು, ದಾಖಲೆಗಳಿಲ್ಲದೆ ವಾಹನ ಚಾಲನೆ ಹೆಚ್ಚಳ 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಸುವ ವಾಹನ ಸವಾರರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ೨೦೨೬ನೇ ಸಾಲಿನಲ್ಲಿ ಇಲ್ಲಿಯವರೆಗೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ೧೬,೦೬೩ ಪ್ರಕರಣಗಳನ್ನು ದಾಖಲಿಸಿ ಒಟ್ಟು ೧,೦೬,೦೪,೯೦೦ ರೂ. ದಂಡ ಸಂಗ್ರಹಿಸಲಾಗಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚಾರ ನಿಯಮ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಿರುವ ಪೊಲೀಸರು, ಅಪಾಯಕಾರಿ ಚಾಲನೆ, ಅತಿಯಾದ ಪ್ರಯಾಣಿಕರ ಸಾಗಾಟ, ನೋ ಪಾರ್ಕಿಂಗ್, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಸೀಟ್‌ಬೆಲ್ಟ್ ಧರಿಸದಿರುವುದು ಸೇರಿದಂತೆ ಹಲವು ಉಲ್ಲಂಘನೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಗಳ ಪೈಕಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದು ಅತಿ ಹೆಚ್ಚು ಕಂಡುಬಂದಿದ್ದು, ಈ ಸಂಬಂಧ ೭,೫೧೪ ಪ್ರಕರಣಗಳು ದಾಖಲಾಗಿವೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ನಿಯಮ ಉಲ್ಲಂಘನೆ ಮುಂದುವರಿದಿದೆ. ಸೀಟ್‌ಬೆಲ್ಟ್ ಧರಿಸದ ೨,೬೨೯ ಪ್ರಕರಣಗಳು, ನಿಗದಿತ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದ ೨,೨೪೦ ಪ್ರಕರಣಗಳು ದಾಖಲಾಗಿವೆ. ನೋ ಪಾರ್ಕಿಂಗ್ ನಿಯಮ ಉಲ್ಲಂಘನೆಯ ೧,೧೩೩ ಪ್ರಕರಣಗಳು, ವಾಹನದ ಅಗತ್ಯ ದಾಖಲೆಗಳನ್ನು ಹಾಜರುಪಡಿಸದ ೬೨೪ ಪ್ರಕರಣಗಳು ದಾಖಲಾಗಿವೆ. ನೋ ಎಂಟ್ರಿ ಉಲ್ಲಂಘನೆಯ ೪೩೩, ಟ್ರಿಪಲ್ ರೈಡಿಂಗ್‌ನ ೪೦೯ ಹಾಗೂ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ ೨೫೦ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದಲ್ಲದೆ ಅಪಾಯಕಾರಿ ಚಾಲನೆಯ ೨೫೩, ನೋ ಪಾರ್ಕಿಂಗ್ ಉಲ್ಲಂಘನೆಯ ೨೧೬, ವಿಮೆ ಇಲ್ಲದೆ ವಾಹನ ಚಲಾಯಿಸಿದ ೧೧೮, ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ವಾಹನ ಚಲಾಯಿಸಿದ ೧೩೬ ಹಾಗೂ ಓವರ್‌ಸ್ಪೀಡ್‌ನ ೨೫ ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತರಿಂದ ವಾಹನ ಚಾಲನೆಯ ೨೦, ಪೊಲೀಸ್ ಅಽಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ೧೬ ಹಾಗೂ ಹೆಚ್ಚುವರಿ ಎಲ್‌ಇಡಿ ಲೈಟ್ ಬಳಕೆಯ ೪೪ ಪ್ರಕರಣಗಳು ದಾಖಲಾಗಿವೆ. ಎಫ್‌ಸಿ ಇಲ್ಲದೆ ವಾಹನ ಚಲಾಯಿಸಿದ ೩ ಪ್ರಕರಣಗಳೂ ದಾಖಲಾಗಿವೆ. ಸಂಚಾರ ನಿಯಮ ಪಾಲಿಸಲು ಸೂಚನೆ ಸವಾರರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ಚಾಲಕರು ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮನವಿ ಮಾಡಿದ್ದಾರೆ.

ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಬಳಕೆ, ವೇಗದ ಮಿತಿ ಪಾಲನೆ, ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸದಿರುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು ಸೇರಿದಂತೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

” ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ಮೂಲಕ ಅಪಘಾತಗಳನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಸಹಕರಿಸಬೇಕು. ನಿಯಮ ಉಲ್ಲಂಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.”

-ಆರ್.ಎನ್.ಬಿಂದುಮಣಿ, ಪೊಲೀಸ್ ವರಿಷ್ಠಾಧಿಕಾರಿ, ಕೊಡಗು ಜಿಲ್ಲೆ

ಮಾಹಿತಿ ನೀಡಲು ಮನವಿ: ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಅಥವಾ ರಸ್ತೆ ಸುರಕ್ಷತೆಗೆ ಧಕ್ಕೆ ತರುವಂತಹ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ೧೧೨ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಪೊಲೀಸ್ ಕಂಟ್ರೋಲ್ ರೂಮ್: ೯೪೮೦೮೦೪೯೦೦ ಹಾಗೂ ದುಬಾರೆ ಸಂಪರ್ಕ ಸಂಖ್ಯೆ: ೦೮೨೭೨-೨೨೮೩೩೦ ಮೂಲಕವೂ ಸಾರ್ವಜನಿಕರು ಮಾಹಿತಿ ನೀಡಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

 

 

Tags:
error: Content is protected !!