Mysore
22
overcast clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ತಮಿಳುನಾಡಿಗೆ ನೀರು; 72 ಅಡಿಗೆ ಕುಸಿದ ಕಬಿನಿ ಜಲಾಶಯ

ಮಂಜು ಕೋಟೆ

ಹೊರಹರಿವಿನ ಪ್ರಮಾಣ ಕಡಿಮೆ ಮಾಡಿರುವ ಅಧಿಕಾರಿಗಳು; ರೈತರಿಗೆ, ಜನರಿಗೆ ನೀರಿನ ಸಮಸ್ಯೆ ಆತಂಕ 

ಎಚ್.ಡಿ.ಕೋಟೆ: ಈ ಬಾರಿ ತಡವಾಗಿ ಭರ್ತಿಯಾಗಿದ್ದ ತಾಲ್ಲೂಕಿನ ಕಬಿನಿ ಜಲಾಶಯ ಬರಿದಾಗುತ್ತಿದ್ದಂತೆ ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಲು ಸರ್ಕಾರದ ಜನಪ್ರತಿನಿಧಿಗಳು ಮುಂದಾಗಿದ್ದು, ರೈತರು ಮತ್ತು ಸಾರ್ವಜನಿಕ ರಲ್ಲಿ ನೀರಿನ ಕೊರತೆ ಎದುರಾಗುವ ಆತಂಕ ಉಂಟಾಗಿದೆ.

ಆಗಸ್ಟ್ ಪ್ರಾರಂಭದಲ್ಲಿ ತೀವ್ರ ಬರಿದಾಗಿದ್ದ ಕಬಿನಿ ಜಲಾಶಯದ ನೀರಿನ ಮಟ್ಟ ಸತತವಾಗಿ ಸುರಿದ ಮಳೆಯಿಂದಾಗಿ ಒಂದೇ ವಾರದಲ್ಲಿ ಗರಿಷ್ಟ ಮಟ್ಟಕ್ಕೆ ಸಂಗ್ರಹಗೊಂಡು ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡುತ್ತಿದ್ದ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೂರೂವರೆ ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಬೇಕೆಂದು ಆದೇಶಿಸಿತ್ತು. ಅದಕ್ಕಿಂತ ಹೆಚ್ಚಿನ ಪ್ರಮಾಣದ ಹೊರ ಹರಿವು ಇದ್ದ ಹಿನ್ನೆಲೆಯಲ್ಲಿ ನೀರು ಬಿಟ್ಟಿದ್ದರಿಂದ ಯಾವುದೇ ಸಮಸ್ಯೆಗಳು ಎದುರಾಗದಂತೆ ಆದೇಶವನ್ನು ಪಾಲಿಸಲಾಗಿತ್ತು. ಆ.೧೭ರಂದು ಮತ್ತೆ ಪ್ರಾಧಿಕಾರ ೧೬,೦೦೦ ಕ್ಯೂಸೆಕ್ಸ್ ನೀರನ್ನು ೨೭ರವರೆಗೆ ಬಿಡುವಂತೆ ಸೂಚಿಸಿದ್ದರಿಂದ ಸರ್ಕಾರವು ಕಬಿನಿ ಜಲಾಶಯವನ್ನು ಸಂಪೂರ್ಣವಾಗಿ ಉಪಯೋಗಿಸಲು ಮುಂದಾಯಿತು. ಇತ್ತ ಮಳೆ ಸಂಪೂರ್ಣವಾಗಿ ಇಳಿಮುಖವಾಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಬರದೇ ಇದ್ದರೂ ಜಲಾಶಯದಿಂದ ೧೩,೦೦೦ ಕ್ಯೂಸೆಕ್ಸ್ ನೀರನ್ನು ಒಂದು ವಾರದಿಂದ ತಮಿಳುನಾಡಿಗೆ ಬಿಟ್ಟ ಹಿನ್ನೆಲೆಯಲ್ಲಿ ಗರಿಷ್ಟ ಮಟ್ಟ ೭೨ ಅಡಿಗಳಿಗೆ ಕುಸಿದಿದೆ.

ಜಲಾಶಯ ಬರಿದಾಗಲು ಆರಂಭಿಸುತ್ತಿದ್ದಂತೆ ಸೋಮವಾರ ಬೆಳಿಗ್ಗೆಯಿಂದ ನದಿಗೆ ಹರಿಸಲಾಗುತ್ತಿದ್ದ ನೀರಿನಲ್ಲಿ ೬ ಸಾವಿರ ಕ್ಯೂಸೆಕ್ಸ್ ಕಡಿಮೆ ಮಾಡಿದ್ದಾರೆ. ಅತ್ತ ಕೆಆರ್‌ಎಸ್ ಜಲಾಶಯದ ಮೂಲಕ ನೀರಿನ ಪ್ರಮಾಣ ಹೆಚ್ಚು ಮಾಡಿದ್ದಾರೆ. ಜಲಾಶಯದಲ್ಲಿ ಒಂದೇ ವಾರದಲ್ಲಿ ೧೦ ಅಡಿ ನೀರು ಖಾಲಿಯಾಗುತ್ತಿದ್ದಂತೆ ಈ ಭಾಗದ ರೈತರು, ಸಾರ್ವಜನಿಕರು, ಜಾನುವಾರುಗಳು, ವನ್ಯಜೀವಿಗಳಿಗೆ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಮಳೆ ಉತ್ತಮವಾಗಿ ಸುರಿದಲ್ಲಿ ಮಾತ್ರ ಜಲಾಶಯಕ್ಕೆ ನೀರು ಹರಿದು ಬಂದು ಮತ್ತೆ ಭರ್ತಿಯಾಗಲಿದೆ.

ಇಲ್ಲದಿದ್ದಲ್ಲಿ ಜಲಾಶಯದಲ್ಲಿರುವ ಮತ್ತಷ್ಟು ನೀರು ಖಾಲಿಯಾಗಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ರೈತ ಸಂಘಗಳ ಮುಖಂಡರು, ಸಂಘಸಂಸ್ಥೆ ಗಳವರ ನಿರಾಸಕ್ತಿಯಿಂದ ಹೋರಾಟಗಳು ನಡೆಯದೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಹೋಗಿ ಈಗ ಜಲಾಶಯ ಖಾಲಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

” ಜಲಾಶಯದಿಂದ ಹೊರ ಹರಿವಿನ ನೀರಿನ ಪ್ರಮಾಣ ಕಡಿಮೆ ಮಾಡಲಾಗಿದ್ದು, ವಯ ನಾಡು ಪ್ರದೇಶದಲ್ಲಿ ಮಳೆ ಆಗುತ್ತಿದ್ದು ಜಲಾಶಯಕ್ಕೆ ನೀರಿನ ಪ್ರಮಾಣ ಹೆಚ್ಚಾಗಲಿದೆ. ಸೆಪ್ಟೆಂಬರ್‌ನಲ್ಲೂ ಈ ಭಾಗದಲ್ಲಿ ಉತ್ತಮ ಮಳೆ ಆಗುತ್ತದೆ ಎಂಬ ನಿರೀಕ್ಷೆ ಇದೆ.”

-ಗಣೇಶ್, ಎಇಇ,  ಕಬಿನಿ ಜಲಾಶಯ 

 

 

Tags:
error: Content is protected !!