ದಾ.ರಾ.ಮಹೇಶ್
ವೀರನಹೊಸಹಳ್ಳಿಯಲ್ಲಿ ಕಲಾತಂಡಗಳೊಡನೆ ಸ್ವಾಗತ ಕೋರಲು ಅರಣ್ಯ ಇಲಾಖೆ ಸಜ್ಜು
ವೀರನಹೊಸಹಳ್ಳಿ: ಆಗಸ್ಟ್ ೨೬ರಂದು ಆರಂಭವಾಗಲಿರುವ ಗಜ ಪಯಣಕ್ಕೆ ವಿವಿಧ ಕಲಾತಂಡಗಳನ್ನು ಬಳಸಿಕೊಂಡು ಅಭೂತಪೂರ್ವ ಸ್ವಾಗತ ನೀಡಲು ಅರಣ್ಯ ಇಲಾಖೆ ವತಿಯಿಂದ ಪೂರ್ವ ತಯಾರಿ ಜೋರಾಗಿ ನಡೆಯುತ್ತಿದೆ.
ಪ್ರತಿ ವರ್ಷದಂತೆ ಗಜಪಯಣ ಕಾರ್ಯಕ್ರಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನ ಹೊಸಹಳ್ಳಿಯ ಮುಖ್ಯದ್ವಾರದ ಮುಂಭಾಗ ನಡೆಯಲಿದೆ. ಆಗಸ್ಟ್ ೨೬ರಂದು ಬೆಳಿಗ್ಗೆ ೧೦ ಗಂಟೆಗೆ ಗಜಪಯಣ ಆರಂಭವಾಗಲಿದೆ. ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯನ್ನು ಭರ್ಜರಿಯಾಗಿ ಸ್ವಾಗತಿಸಲು ಪ್ರವಾಸಿಗರು ಹಾಗೂ ೧೫ಕ್ಕೂ ಹೆಚ್ಚು ಜಾನಪದ ಕಲಾತಂಡಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಮೈಸೂರಿಗೆ ಆನೆಗಳನ್ನು ಕರೆತರಲಾಗುತ್ತಿತ್ತು. ಆದರೆ, ಈ ಸಾಲಿನಿಂದ ಇದಕ್ಕೆ ಹೊಸ ರೂಪ ನೀಡಲಾಗುತ್ತಿದ್ದು, ಸುಮಾರು ೬ ಸಾವಿರ ಜನರನ್ನು ಸೇರಿಸಿ ಆನೆಗಳಿಗೆ ಸ್ವಾಗತ ಕೋರಲಾಗುತ್ತಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಶಾಲಾ-ಕಾಲೇಜುಗಳು, ಮಹಿಳಾ ಸಂಘಟನೆಗಳಿಗೂ ಆಹ್ವಾನ ನೀಡಲಾಗುತ್ತಿದೆ. ವೀರನಹೊಸಹಳ್ಳಿಯಲ್ಲಿ ಗಜಪಯಣ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ರಸ್ತೆ ಪಕ್ಕದ ಗಿಡ ಗಂಟಿಗಳನ್ನು ತೆರವುಗೊಳಿಸಲಾಗಿದೆ.
೧೫ಕ್ಕೂ ಹೆಚ್ಚು ಕಲಾ ತಂಡಗಳು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತಿಂದ್ರ ಸಿದ್ದರಾಮಯ್ಯ ಅವರು ಆಗಸ್ಟ್ ೨೬ರಂದು ಗಜಪಡೆಗೆ ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಆದಿವಾಸಿಗಳ ನೃತ್ಯ, ಟಿಬೆಟಿಯನ್ ನೃತ್ಯ, ಗೊರವರ ಕುಣಿತ, ಜೇನುಕುರುಬರ ಕುಣಿತ, ಕಾಡು ಕುರುಬರ ಕುಣಿತ ಸೇರಿದಂತೆ ೧೫ಕ್ಕೂ ಹೆಚ್ಚಿನ ಕಲಾ ತಂಡಗಳು ಗಜಪಡೆಯ ಮುಂದೆ ಪ್ರದರ್ಶನ ನೀಡಲಿವೆ. ಅಲ್ಲದೆ ಆನೆಗಳನ್ನು ಮೆರವಣಿಗೆಯಲ್ಲಿ ಕೆಲ ದೂರ ಕರೆದೊಯ್ಯಲಾಗುತ್ತದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡದಲ್ಲಿ ೯ ಆನೆಗಳು ಆಗಮಿಸುತ್ತಿವೆ. ಎರಡನೇ ಹಂತದಲ್ಲಿ ಮಹೇಂದ್ರ, ಗೋಪಿ ಸೇರಿದಂತೆ ೭ ಆನೆಗಳನ್ನು ಕರೆತರಲಾಗುತ್ತದೆ
” ಆನೆಗಳ ತಂಡದಲ್ಲಿ ಮೊದಲ ಹಂತದಲ್ಲಿ ಒಂಬತ್ತು ಆನೆಗಳು ಬರಲಿವೆ. ಸುಮಾರು ೬,೦೦೦ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.”
-ಪ್ರಭುಗೌಡ, ಡಿಸಿಎಫ್, ಗಜಪಯಣದ ಉಸ್ತುವಾರಿ ಅಧಿಕಾರಿ
” ಮೈಸೂರಿನ ವಿವಿಧೆಡೆ ಹಾಗೂ ಹುಣಸೂರು ಮುಖ್ಯರಸ್ತೆಯಲ್ಲಿ ಸುಮಾರು ೨೦ ಸ್ಥಳಗಳಲ್ಲಿ ದೊಡ್ಡ -ದೊಡ್ಡ ಫಲಕಗಳನ್ನು ಪ್ರದರ್ಶಿಸಿ, ಆಗಸ್ಟ್ ೨೬ರಂದು ನಡೆಯುವ ಗಜಪಯಣಕ್ಕೆ ಸರ್ವರಿಗೂ ಸ್ವಾಗತ ಕೋರಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.”




