ಸ್ವಾಮಿ ಪೊನ್ನಾಚಿ
ಬೆಟ್ಟದ ಕಿಬ್ಬಿಯನ್ನು ಹತ್ತುತ್ತಾ ‘ಹೋ ಹೋ’ ಎಂದು ಸದ್ದು ಮಾಡಿ ದನಗಳನ್ನು ಓಡಿಸುತ್ತಾ ಬರುತ್ತಿದ್ದ ಕಾಕಿಗೆ ಬಾಯಿ ರುಚಿ ಕಳೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿತ್ತು. ಕೈಗೆ ಸಿಕ್ಕ ಸೊಪ್ಪುಗಳನ್ನೆಲ್ಲ ಕಿತ್ತು ಜಗಿದು ಉಗಿದರೂ ಉಹುಂ ಸಪ್ಪೆ ಸಪ್ಪೆ. ಇದು ಯಾಕೆ ಹೀಗೆ ಅಂತಲೂ ಅವನಿಗೆ ಗೊತ್ತಿತ್ತು. ದೊಡ್ಡಿಗೆ ಬಂದು ಹದಿನೈದು ದಿನ ಆಗಿತ್ತು. ಅವತ್ತಿನಿಂದ ಮುದ್ದೆ, ಹಾಲುಳ್ಳಿ ಸಾಂಬಾರು ಬಿಟ್ಟರೆ ನಾಲಿಗೆಗೆ ಒಗರಾಗಿ ಮಸಾಲೆಭರಿತ ರುಚಿ ಸಿಕ್ಕಿರಲಿಲ್ಲ. ಇದರ ಪರಿಹಾರಕ್ಕಾಗಿ ತಾನು ಊರಿನಲ್ಲಿ ಪಾಜಿ ಬಿಟ್ಟು ಗೌಜಲಕ್ಕಿ ಹಿಡಿಯುತ್ತಿದ್ದ ಉಪಾಯವನ್ನೇ ಬಳಸಿ ಹಿಂದಿನ ರಾತ್ರಿ ಅಲ್ಲಲ್ಲಿ ಪಾಜಿ ಒಡ್ಡಿ ಬಂದಿದ್ದನು. ಒಂದೋ ಎರಡೋ ಗೌಜಲಕ್ಕಿ ಬಿದ್ದಿದ್ದರೆ ಇವತ್ತು ರುಚಿಯಾದ ಸಾರು ಮಾಡಿ ತಿನ್ನಬೇಕೆಂಬುದು ಅವನ ಆಸೆಯಾಗಿತ್ತು. ಕಿಬ್ಬಿ ದಾಟಿ ಬಯಲು ಸಿಕ್ಕಿದಂತೆ ದನಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೇಯಲು ಶುರುಮಾಡಿದವು.
ಕುರುಚಲಾಗಿ ಬೆಳೆದ ಹುಲ್ಲನ್ನು ಕವರುತ್ತಾ ಮೇಯ್ದುಕೊಂಡು ಕಣಿವೆ ಹಳ್ಳದ ಕಡೆಗೆ ಬರುವಷ್ಟರಲ್ಲಿ ಸಂಜೆಯಾಗಿ ಬಿಡುತ್ತದೆ. ಈಗ ದನಗಳಿಗೆ ದೊಣ್ಣಾಯಿ ಹಾಗೂ ಕಿರುಬಗಳ ಕಾಟ ಇಲ್ಲ, ನಿಶ್ಚಿಂತೆಯಾಗಿರಬಹುದು ಎಂದು ಬಯಲಲ್ಲಿ ದನಗಳನ್ನು ಮೇಯಲು ಬಿಟ್ಟು ಕಾಕಿ ಆತುರದಲ್ಲಿ ಪಾಜಿ ಒಡ್ಡಿದ ಕಡೆಗೆ ನಡೆದನು. ಬಿದಿರು ಮೆಳೆಯ ಸಂದಿನಲ್ಲಿ ನುಗ್ಗಿ ಆಚೆ ಕಡೆ ಜಿಡ್ಡಿ ಪೊದೆಗಳೇ ತುಂಬಿದ್ದ ಪುಟ್ಟ ಬಯಲು.
ಗುಡಿಗುಡಿಸಿಕೊಂಡು ಗಡಿಬಿಡಿಯಲ್ಲಿ ಗುಂಪಾಗಿ ಗೌಜಲಕ್ಕಿಗಳು ಓಡಾಡುವಂತಹ ಜಾಗ. ಮೂರ್ನಾಲ್ಕು ಕಡೆ ಸಣ್ಣ ಕಲ್ಲಿನ ಚಪ್ಪಡಿ ನಿಲ್ಲಿಸಿ ಒಡ್ಡಿದ್ದ ಪಾಜಿಗಳಲ್ಲಿ ಒಂದೇ ಒಂದು ಪಾಜಿ ಮಾತ್ರ ಮಕ್ಕಾಡೆ ಮಲಗಿಕೊಂಡಿತ್ತು. ಕಲ್ಲು ಬಿದ್ದಿದೆ ಎಂದರೆ ಮಿಕ ಸಿಕ್ಕಿದೆ ಅಂತಲೇ ಲೆಕ್ಕ. ಅವನ ಊಹೆ ಸುಳ್ಳಾಗಿರಲಿಲ್ಲ. ಎರಡು ಗೌಜಲು ಹಕ್ಕಿಗಳು ಕಾಲು ಮುರಿದುಕೊಂಡು ಬಿದ್ದಿದ್ದವು. ಎರಡನ್ನೂ ಬಿಡಿಸಿಕೊಂಡ ಕಾಕಿ, ಅವುಗಳ ಕತ್ತು ಮುರಿದು ಟವಲ್ಗೆ ಕಟ್ಟಿಕೊಂಡು ದನಗಳು ಮೇಯ್ದುಕೊಂಡು ನಿಧಾನಕ್ಕೆ ಬರುತ್ತಿರಲಿ ಎಂದು ದೊಡ್ಡಿಯ ಅಟ್ಟಣೆ ಕಡೆ ನಡೆದನು.
ಜೇನುಕಲ್ಲು ಬೆಟ್ಟದ ತಪ್ಪಲಿನಲ್ಲಿ ಇದ್ದುದ್ದು ಒಂದೇ ದೊಡ್ಡಿ. ಕುಳ್ಳಪ್ಪ, ಸಿದ್ದಮಾದ ಮತ್ತು ಕಾಕಿ ಮೂರು ಜನ ಇಲ್ಲಿ ತಮ್ಮ ದನ ಬಿಟ್ಟುಕೊಂಡಿದ್ದರು. ಬಿರುಬಿಸಿಲಿನಲ್ಲಿ ನಡೆದುಕೊಂಡ ಬಂದ ಕಾಕಿ ಅವರಿಬ್ಬರೂ ಆಡುಗಳನ್ನು ಮೇಯಿಸಲು ಹೋಗಿರುವುದನ್ನು ಗಮನಿಸಿ, ತಾನೊಬ್ಬನೇ ಅಡುಗೆ ಮಾಡಲು ಸಿದ್ಧವಾದನು. ಕುಳ್ಳ, ಸಿದ್ದ ಬರುವುದರೊಳಗೆ ರುಚಿಯಾದ ಸಾರು ಮಾಡಿ ಅವರನ್ನು ಯಾಮಾರಿಸಿ ಖುಷಿಪಡಿಸಬೇಕು ಎಂಬುದೇ ಕಾಕಿಯ ಉಪಾಯವಾಗಿತ್ತು. ಇಪ್ಪತ್ತಾರರ ಹದಿಹರಯದ ಕಾಕಿ ದೊಡ್ಡಿಯಲ್ಲಿ ತಾನೇ ಚಿಕ್ಕವನು. ಕುಳ್ಳ, ಸಿದ್ದರಿಗೆ ಮದುವೆಯಾಗಿ ನಾಲ್ಕು ನಾಲ್ಕು ಮಕ್ಕಳಿದ್ದರೆ; ಮೊನ್ನೆ ತಾನೆ ಮದುವೆಯಾಗಿದ್ದ ಕಾಕಿ ಹೆಂಡತಿಯನ್ನು ಊರಿನ ಪೋಡಿನಲ್ಲೇ ಬಿಟ್ಟು ವಿರಹ ವೇದನೆ ಅನುಭವಿಸುತ್ತಿದ್ದನು. ಒಮ್ಮೊಮ್ಮೆ ತಡ ರಾತ್ರಿಯಲ್ಲಿ ಸಿದ್ದನನ್ನು ತಬ್ಬಿ “ಕೆಂಚಿ… ಕೆಂಚಿ” ಎಂದು ಕನವರಿಸಿ ಅವರನ್ನು ಬೆಚ್ಚಿ ಬೀಳಿಸುತ್ತಿದ್ದನು. ಪಾಪ, ಹೊಸದಾಗಿ ಮದುವೆಯಾದ ಗಂಡು; ಊರಿಗೆ ಹೋಗಿ ಬರಲಿ ಎಂದು ಕಾಡಿನಿಂದ ಕಳಿಸಿದ್ದ ದಿನವೇ ಕಟ್ಟು ಮಸ್ತಾದ ಗೂಳಿಯನ್ನೇ ದೊಣ್ಣಾಯಿ ಹಿಡಿದು ಬಿಟ್ಟಿತ್ತು. ತನ್ನ ಹೆಂಡತಿಯ ಮೇಲಿನ ಆಸೆಯಿಂದಾಗಿ ಪ್ರೀತಿ ಪಾತ್ರ ಗೂಳಿ ಕಳೆದುಕೊಂಡ ಶಿಕ್ಷೆಗಾಗಿ ಈ ಸಲ ಹದಿನೈದು ದಿನವಾದರೂ ಊರ ಕಡೆ ಮುಖ ಮಾಡಿರಲಿಲ್ಲ.
ಮೊಂಡಾದ ಚಾಕುವಿನಿಂದಲೇ ಗೌಜಲಕ್ಕಿಯ ಪುಕ್ಕ ಕತ್ತರಿಸಿ ಹೊಟ್ಟೆಯ ಭಾಗವನ್ನು ಸೀಳಿ ‘ಕಸರೆ’ಯನ್ನೆಲ್ಲ ದೂರ ಬಿಸಾಡಿ ಉಳಿದುದನ್ನು ಸಣ್ಣ ತುಂಡು ಮಾಡಿ ಪಾತ್ರೆಗೆ ಹಾಕಿ ಬೇಯಿಸುವುದಕ್ಕೆ ಇಟ್ಟು, ಕಾಡು ಮೆಣಸಿನ ಖಾರ ಅರೆಯಲು ಶುರು ಮಾಡಿದನು. ಸಂಬಳೆ ಚಕ್ಕೆ, ಗೊದೆ ಮಾವಿನ ಪಟ್ಟೆ, ಕಾಡು ಮೆಣಸಿನ ಕಾಯಿ ಜೊತೆಗೆ ಸ್ವಲ್ಪ ಖಾರದ ಪುಡಿ ಹಾಕಿ, ಕಲ್ಲು ಬಂಡೆಯ ಮೇಲೆ ಅರೆದಾಗ ಬಂದ ಘಮಲಿಗೆ ತಾನೇ ಬೆರಗಾಗಿ ಹೋದನು. ಪೋಡಿನಲ್ಲಿ ಕೆಂಚಿ, ನಾಟಿ ಕೋಳಿ ಸಾರಿಗೆ ಒಳಕಲ್ಲ ಮುಂದೆ ಕೂತು ಹಾಡಾಡಿಕೊಂಡು ಎಷ್ಟು ಚಂದ ಮಸಾಲೆ ಅರೆಯುತ್ತಿದ್ದಳು! ಹೆಂಡತಿಯ ಕೈಗುಣ ನೆನೆಸಿಕೊಂಡು ನಾಳೆ ಕೆಂಚಿಯನ್ನು ನೋಡಬೇಕೆಂಬ ಹಂಬಲ ಹೆಚ್ಚಾಯಿತು. ನುಣ್ಣಗೆ ಅರೆದಿದ್ದ ಮಸಾಲೆಯನ್ನು ಕೊತಕೊತ ಕುದಿಯುತ್ತಿದ್ದ ಪಾತ್ರೆಗೆ ಹಾಕಿ, ಬಾಡು ಬೇಯುವ ಹೊಗೆಯನ್ನೇ ನೋಡುತ್ತಾ ಕುಂತ. ದೂರದಲ್ಲಿ ದನಗಳು ಕಣಿವೆಯತ್ತ ಮುಖ ಮಾಡಿದ್ದವು. ಬಿಸಿಲಿಗೆ ಮೈ ಬೆವರುತ್ತಿತ್ತು. ಜೊತೆಗೆ ಬೆಂಕಿಯ ಹಬೆಯು ಸೇರಿಕೊಂಡು ತನ್ನ ಮೈ ವಾಸನೆಗೆ ತಾನೇ ಮುಜುಗರಗೊಂಡನು. ಕಾರೆ ಳ್ಳದಲ್ಲಿ ಸ್ನಾನ ಮಾಡಿ ವಾರವಾಗಿತ್ತು. ಎದೆಯನ್ನು ಬೆರಳಿನಿಂದ ತೀಡಿದ. ಹತ್ರಿ ಹಿಡಿದಾಗ ಮರದ ಚಕ್ಕೆ ಸುರಳಿ ಸುತ್ತುಕೊಂಡು ಬಂದಂತೆ ಬೆವರೊಟ್ಟಿಗಿನ ಕೊಳೆ ಉದುರತೊಡಗಿತು. ಥೂ ಎನ್ನುತ್ತಾ ಪಾತ್ರೆಯ ಮುಚ್ಚಳವನ್ನು ತೆರೆದು ನೋಡಿದನು. ಬಾಡು ಚೆನ್ನಾಗಿ ಬೆಂದು ಘಮಘಮ ಎನ್ನುತ್ತಿತ್ತು. ಸಂಜೆ ಬಂದು ಮುದ್ದೆ ಮಾಡಿಕೊಂಡು ತಿಂದುಬಿಡುವ ಅಂದುಕೊಂಡು ಪಾತ್ರೆ ಇಳಿಸಿ ಅವಿತಿಟ್ಟು ಬಿದರಿನ ಪಡ್ಲು ಸರಿಸುವುದಕ್ಕೂ ಅದೆಲ್ಲಿದ್ದರೋ ಮೂರ್ನಾಲ್ಕು ಮಂದಿ ಫಾರೆಸ್ಟ್ ಆಫೀಸರ್ ಗಳು ದೊಡ್ಡಿ ಒಳಗೆ ಬರುವುದಕ್ಕೂ ಸರಿಹೋಯಿತು. ಪಡ್ಲು ತೆಗೆಯಲು ಹೋದ ಕಾಕಿ ಗಾಬರಿಯಲ್ಲಿ ಪಡ್ಲು ತೆರೆಯುವುದನ್ನು ಮರೆತು “ನಮಸ್ಕಾರ ಸಾರ್” ಎಂದನು. ಇವನ ನಮಸ್ಕಾರವನ್ನು ಲೆಕ್ಕಿಸದೆ ಅವರು ಪಡ್ಲು ಒದ್ದುಕೊಂಡು ಒಳಕ್ಕೆ ಬಂದು ‘ಏನು? ಮಾಂಸದ ವಾಸನೆ ಬರ್ತಾ ಇದೆ, ಜಿಂಕೆಗಿಂಕೆ ಹೊಡೆದಿದ್ದೀರೋ ಹೇಗೆ?’ ಮಾದೇವ್ ಫಾರೆಸ್ಟರ್ ಗಡಸಾಗಿ ಕೇಳಿದನು. “ಜಿಂಕೆ ಯಾಕೆ ಹೊಡೆಯುವ ಸರ್? ಅದು ಬರಿ ಸೊಪ್ಪಿನ ಸಾರು” ಎಂದ. ವಾಸನೆಯಲ್ಲೇ ಕಂಡುಹಿಡಿದ ಮಾದೇವ ಫಾರೆಸ್ಟರ್ ವಾಸನೆಯ ಜಾಡು ಮೂಸಿಕೊಂಡೇ ಕಾಕಿ ಅವಿತಿಟ್ಟಿದ್ದ ಪಾತ್ರೆಯನ್ನು ಕಂಡುಹಿಡಿದು ಈಚೆ ಅಂಗಳಕ್ಕೆ ತಂದು ಇಟ್ಟನು.
‘ಸೊಪ್ಸಾರು ಇಷ್ಟು ಗಮ್ಮಂತದೋ? ಅದ್ಯಾವ ಸೊಪ್ಪು ಹೇಳು? ನಾವೂ ತಿಂತೀವಿ’ ಎನ್ನುತ್ತಾ ಮುಚ್ಚಳ ತೆಗೆದು ಸೌಟಿನಿಂದ ಬಾಡು ತೆಗೆದು ನೋಡಿಬಿಟ್ಟನು. ‘ಎಲಾ ಮಕ್ಕಳ, ಕಾಡಲ್ಲಿ ದನ ಮೇಯಿಸಿ ಅಂತ ಬಿಟ್ಟರೆ; ಇಲ್ಲಿ ಬಂದು ಮೊಲ ಹೊಡ್ಕೊಂಡು ಸಾಂಬಾರು ಮಾಡ್ತೀರಾ? ನಡಿ, ನಡಿ. ಯಾರ್ರೀ, ಗೋಪಾಲ್ ಅವನ್ನ ಅರೆಸ್ಟ್ ಮಾಡಿ’ ಎಂದರು. ಇದೊಳ್ಳೆ ಗ್ರಹಚಾರ ಆಯ್ತಲ್ಲ ಅಂದುಕೊಳ್ಳುತ್ತಾ, “ಅಯ್ಯೋ ಸಾ, ಅದು ಮೊಲದ ಬಾಡಲ್ಲ, ಗೌಜಲಕ್ಕಿದು. ಬೇಕಾದ್ರೆ ರುಚಿ ನೋಡಿ” ಎಂದ. “ಇಲ್ಲೆಲ್ಲಿ ಗೌಜಲಕ್ಕಿ ಸಿಕ್ತದೆ ರಾಸ್ಕಲ್, ನಡಿ” ಎಂದು ಅಬ್ಬರಿಸಿದನು. “ಎಷ್ಟು ಸಲ ಹೇಳೋದು ಸರ್ ನಿಮಗೆ? ಅದು ಮೊಲದ ಮಾಂಸ ಅಲ್ಲ, ಗೌಜಲಕ್ಕಿದು ಅಂತ” ಸ್ವಲ್ಪ ಜೋರು ದನಿಯಲ್ಲಿ ಹೇಳಿದನು ಕಾಕಿ. “ನನಗೇ ಎದುರುತ್ತರ ಕೊಡ್ತೀಯ ಮಗನೇ” ಎಂದು ಮಾದೇವ್ ಕಾಕಿಯ ಕಪಾಳಕ್ಕೆ ಬಿಗಿದನು. ಇದನ್ನು ನಿರೀಕ್ಷಿಸಿರದ ಕಾಕಿ “ಈ ನನ್ನ ಮಕ್ಕಳ ಸಹವಾಸವೇ ಬೇಡ ಸುಮ್ಮನೆ ನಿಂತುಕೊಳ್ಳುವ” ಎಂದು ಮೌನವಾದನು. ಇಬ್ಬರು ಗಾರ್ಡುಗಳು, ಕಾಕಿ ಎಷ್ಟು ಹೇಳಿದರೂ ಕೇಳದೆ ಅವನ ಕೈ ಹಿಡಿದುಕೊಂಡು ಊರಿನತ್ತ ಕರೆದುಕೊಂಡು ಹೋದರು. ಸಾಕ್ಷಿಗೆ ಇರಲಿ ಎಂದು ಪಾತ್ರೆ ಸಮೇತ ಎತ್ತಿಕೊಂಡು ಹೊರಟರು. ಡ್ಯೂಟಿಗೆ ರಿಪೋರ್ಟ್ ಆದ ಎರಡೇ ದಿನಗಳಲ್ಲಿ ಮೊಲದ ಮಾಂಸದ ಕಳ್ಳನನ್ನು ಹಿಡಿದುಬಿಟ್ಟೆ ಎಂಬ ಜಂಭದಿಂದ ಮಾದೇವ್ ಮೀಸೆ ತಿರುವಿಕೊಳ್ಳುತ್ತಾ ಹಿಂದೆ ನಡೆದ. ತನ್ನ ದಣಿಯನ್ನು ಯಾರೋ ಹೀಗೆ ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ದನಗಳು, ಮೇಯುವುದನ್ನು ನಿಲ್ಲಿಸಿ ಗಾಬರಿಯಿಂದ ಕೊಂಚಲಿನಲ್ಲಿ ಅವರು ಮರೆಯಾಗುವುದನ್ನು ಎವೆಯಿಕ್ಕದೆ ನೋಡುತ್ತಿದ್ದವು.
ಫಾರೆಸ್ಟ್ರು ಐಬಿಯ ಮುಂದೆ ಕಾಕಿಯನ್ನು ಕರೆದುಕೊಂಡು ಬಂದಾಗ ಹೊತ್ತು ಮುಳುಗಿತ್ತು. “ಕಾಕಿಯನ್ನು ಹಿಡಿದುಕೊಂಡು ಬಂದರಂತೆ” ಎಂದು ಊರಲ್ಲಿ ಅದಾಗಲೇ ಸುದ್ದಿ ಹಬ್ಬಿತ್ತು. ಏನಾಗಿದೆ ಎಂದು ವಿಚಾರಿಸುವ ಎಂದುಕೊಂಡರೂ “ಹೊಸಬ ಫಾರೆಸ್ಟರ್” ಎಂದು ಸುಮ್ಮನಾಗಿ ಕೇಳುವ ಧೈರ್ಯ ಯಾರೂ ಮಾಡಲಿಲ್ಲ. ಅಕ್ಕಪಕ್ಕ ಗಾರ್ಡುಗಳ ಕೂರಿಸಿಕೊಂಡು ನಡುವೆ ವಿರಾಜಮಾನನಾಗಿ ಕೂತಿದ್ದ ಕಾಕಿ. ಈಚೆ ನಡೆಯುತ್ತಿದ್ದ ಗದ್ದಲದಿಂದ ಕುತೂಹಲಗೊಂಡ ಫಾರೆಸ್ಟರ್ ಮಾದೇವನ ಹೆಂಡತಿ ಮೀರಾಬಾಯಿ ಬಂದು ನೋಡಿದಳು. ಐಬಿಯಲ್ಲಿ ಯಾವತ್ತೂ ಹೆಂಗಸರನ್ನು ಕಂಡಿರದ ಕಾಕಿ ಅವಳ ಮುಖವನ್ನೇ ದಟ್ಟಿಸಿದ. ದೂರದ ಬಿಜಾಪುರದಿಂದ ಮಾದೇಶ್ವರ ಬೆಟ್ಟದ ತಪ್ಪಲಿಗೆ ಪ್ಲೇಸು ತೆಗೆದುಕೊಂಡು ಬಂದ ಮಾದೇವ್ ಹೊಸದಾಗಿ ಮದುವೆಯಾಗಿ ಹೆಂಡತಿಯನ್ನು ಅಷ್ಟು ದೂರದಿಂದ ಬಿಟ್ಟು ಬರದೇ ಜೊತೆಯಲ್ಲಿ ಕರೆದುಕೊಂಡು ಬಂದಿದ್ದ. ಹೇಗಿದ್ದರೂ ಉಳಿದುಕೊಳ್ಳಲು ಕ್ವಾಟ್ರರ್ಸ್ ಇತ್ತು. ನನ್ನ ಗಂಡ ಕಾಡಿಗೆ ಹೋದ ಮೊದಲ ದಿನವೇ ದೊಡ್ಡ ಘನಂದಾರಿ ಕೆಲಸ ಮಾಡಿ ಬಂದ ಎನ್ನುವ ಕುತೂಹಲದೊಂದಿಗೆ ಆಕೆ ಪಾತ್ರೆಯಲ್ಲಿದ್ದ ಸಾಂಬಾರಿನ ಘಮಲಿನಿಂದಲೇ ‘ಹೋ ತೀತರ್ ಸ್ಮೆಲ್ ಬರ್ತಾ ಇದೆ. ಇದೆಲ್ಲಿ ಸಿಕ್ತು? ಎಷ್ಟು ಟೇಸ್ಟ್ ಇರುತ್ತೆ ಗೊತ್ತಾ ಈ ಹಕ್ಕಿದು?’ ಎಂದು ಅದರ ವಾಸನೆಗೆ ಮರುಳಾಗಿ ಎಡಗೈಗೆ ಒಂದು ಪೀಸು ಹಾಕಿಕೊಂಡು ರುಚಿ ನೋಡಿಬಿಟ್ಟಳು. ಅದುವರೆಗೂ ಮೊಲದ ಮಾಂಸ ಎಂದುಕೊಂಡಿದ್ದ ಫಾರೆಸ್ಟರ್, ಗಾರ್ಡುಗಳ ಎದುರಿಗೆ ಹೀಗೆ ತನ್ನ ಅಜ್ಞಾನ ಬಯಲಾದುದಕ್ಕೆ ನಾಚಿಕೊಂಡು ಅವರ ಮುಖ ನೋಡಿದನು. ಇದು ಗೌಜಲಕ್ಕಿ ಮಾಂಸದ್ದೇ ಎಂದು ಗೊತ್ತಿದ್ದರೂ ಸಾಹೇಬರಿಗೆ ಹೇಳಲು ಆಗದೆ ಇದ್ದ ಅವರು, ಅದನ್ನು ತೋರ್ಪಡಿಸದೇ ತಮಗೂ ಅದು ಗೊತ್ತಿರಲಿಲ್ಲ ಅನ್ನುವಂತೆ ಆಶ್ಚರ್ಯದಿಂದ ಕಣ್ಣರಳಿಸಿದರು. ಗಂಡನನ್ನು ಒಳಕ್ಕೆ ಕರೆದು ಮೀರಾಬಾಯಿ ಅವನನ್ನು ಬಿಟ್ಟುಬಿಡುವಂತೆಯೂ ಬೇಕಾದಾಗ ತೀತರ್ ತಂದುಕೊಡುವಂತೆ ಅವನಿಗೆ ಹೇಳಬೇಕೆಂತಲೂ ಮಾತಾಡಿ ಕಳಿಸಿದಳು. ದೂರದ ಊರಿನಿಂದ ಜೊತೆಯಲ್ಲಿ ಬಂದ ಹೆಂಡತಿಯನ್ನು ಖುಷಿಪಡಿಸಲು ಕಾಕಿಯನ್ನು ಬಿಡಲು ತೀರ್ಮಾನಿಸಿದ ಮಾದೇವ್ ‘ನೋಡು, ಅಯ್ಯೋ ಪಾಪ ಅಂತ ಬಿಡ್ತಾ ಇದ್ದೀನಿ, ಕರೆದಾಗ ಐಬಿ ಕಡೆ ಬಂದು ಹೋಗಬೇಕು ಆಯ್ತಾ?’ ಎಂದು ಅವನನ್ನು “ಬಿಡಿ ಹೋಗಲಿ” ಎಂದನು. ‘ಆಯ್ತು’ ಎಂದು ಬಿಗುಮಾನದಿಂದಲೇ ಹೇಳಿದ ಕಾಕಿ, ಮುಖ ಗಂಟು ಹಾಕಿಕೊಂಡು ಪೋಡಿನಿಂದ ಒಬ್ಬರಾದರೂ ಬಿಡಿಸಲು ಬರಲಿಲ್ಲವಲ್ಲ ಎಂಬ ಬೇಜಾರಿನಿಂದಲೇ ಅಲ್ಲಿಂದ ಹೊರಬಂದನು.
“ಎಂ.ಎಲ್.ಎ. ಕಡೆಯವರು ಈವತ್ತು ಉಳಿದುಕೊಳ್ಳೋಕೆ ಬರ್ತಾರಂತೆ ಎಲ್ಲಾ ವ್ಯವಸ್ಥೆ ಮಾಡಬೇಕಂತೆ ಸರ್” ಎಂದು ಗಾರ್ಡು ಗೋಪಾಲ ಹೇಳಿದಾಗ ‘ಉಳಿದುಕೊಳ್ಳೋಕೆ ರೂಮ್ಸ್ ಎಲ್ಲಾ ಇದೆಯಲ್ಲ! ಡ್ರಿಂಕ್ಸ್ ಅರೆಂಜ್ ಆಗಿದೆಯಲ್ಲ! ಮತ್ತೇನು ವ್ಯವಸ್ಥೆ ಮಾಡಬೇಕು” ಎಂದು ಮಾದೇವ್ ಮತ್ತೆ ಗಾರ್ಡಿನ ಕಡೆಗೇ ನೋಡಿದನು. ಈ ಹೊಸ ಸಾಹೇಬರುಗಳು ಬಂದಾಗೆಲ್ಲ ಅವರಿಗೆ ಹೇಳಿ ಅರ್ಥಮಾಡಿಸುವಷ್ಟರಲ್ಲಿ ಗಾರ್ಡು ಗೋಪಾಲನಿಗೆ ಸಾಕುಸಾಕಾಗಿ ಹೋಗುತ್ತಿತ್ತು. “ನೇರವಾಗಿಯೂ ಹೇಳುವಂತಿಲ್ಲ! ಮೋಕುಪ್ಪಿನಲ್ಲಿ ಹೇಳಿದರೆ ಅವರಿಗೆ ಅರ್ಥವೂ ಆಗುವುದಿಲ್ಲ. ಟ್ರೈನಿಂಗ್ ತಗೋ ಬಂದವರಿಗೆ ಇಷ್ಟು ಸಣ್ಣ ವಿಷಯ ಗೊತ್ತಾಗುವುದಿಲ್ಲವೇ? ಹೇಗೆ ಹೇಳಿ ಅರ್ಥ ಮಾಡಿಸೋದು ಇವರಿಗೆ?” ಎಂದು ನೇರವಾಗಿಯೇ ಕಡವೆ ಮಾಂಸದ ಊಟ ಸರ್ ಎಂದನು. ‘ಏನು ಹೇಳ್ತಾ ಇದ್ದೀರಿ?’ ಆಶ್ಚರ್ಯ ಮತ್ತು ಕೋಪದಿಂದ ಕಣ್ಣು ಬಿಡುತ್ತಾ ಗಾರ್ಡ್ ಕಡೆ ತಿರುಗಿದನು ಮಾದೇವ್. ಸಾಹೇಬರು ಕೆಂಗಣ್ಣಿನಿಂದ ನೋಡುತ್ತಿರುವುದನ್ನು ಕಂಡು ಕೊಂಚ ಹೆದರಿದ ಗೋಪಾಲ ಸಮಾಧಾನವಾಗಿ ಅವರಿಗೆ ಅರ್ಥವಾಗುವಂತೆ ಹೇಳಲು ಶುರು ಮಾಡಿದನು. ‘ಅಯ್ಯೋ ಸಾರ್, ಇಲ್ಲಿ ಯಾವಾಗಲೂ ಹೀಗೆ. ಯಾರಾದರೂ ವಿಐಪಿಗಳು ಬರ್ತಾ ಇರ್ತಾರೆ. ನಾವು ಇಲ್ಲಿನ ಸೋಲಿಗರಿಗೆ ಹೇಳಿ ಇಟ್ಕೊಂಡಿರಬೇಕು. ಅವರು ಹೇಗಾದರೂ ಮಾಡಿ ಕಡವೆ ಮಾಂಸ ತಂದು ಕೊಡ್ತಾರೆ. ವಿಐಪಿಗಳನ್ನು ಸರಿಯಾಗಿ ಗಮನಿಸಿಕೊಂಡಿಲ್ಲ ಅಂದರೆ ನೀರು ನೆರಳಿಲ್ಲದ ಜಾಗಕ್ಕೆ ಟ್ರಾನ್ಸ್‌ಫರ್ ಮಾಡಿಸಿ ಬಿಡ್ತಾರೆ ಸರ್’ ಎಂದ. “ಅಲ್ಲ ಕಣ್ರೀ, ಬೇಟೆ ಆಡಿದರೆ ಕೇಸ್ ಹಾಕಿ ಜೈಲಿಗೆ ಕಳಿಸ್ತೀವಿ. ಈಗ ನಾವೇ ಅದನ್ನ ಮಾಡಿಸಬೇಕ? ಇದೆಂಥ ಕೆಲಸಾನ್ರೀ?” ಎಂದವನೇ “ಅದೇನೋ ಮಾಡಿ, ಒಟ್ನಲ್ಲಿ ಯಾರಿಗೂ ಗೊತ್ತಾಗಬಾರದು ಅಷ್ಟೇ. ಹೇ ಗೋಪಾಲ ಕಾಕಿ ಇದ್ದಾನಲ್ಲ! ಅವನಿಗೆ ಹೇಳಿ. ಇದ್ದುದರಲ್ಲಿ ಅವನೇ ನಂಬಿಕಸ್ಥ, ಬಾಯಿ ಬಿಡುವುದಿಲ್ಲ. ಹುಷಾರು” ಎನ್ನುತ್ತಾ ಜೀಪ್ ಹತ್ತಿದರು. ಗೋಪಾಲ, ಇಂಥ ಎಷ್ಟು ಫಾರೆಸ್ಟ್ ಆಫೀಸರ್‌ಗಳನ್ನು ನೋಡಿಲ್ಲ? ಅವನಿಗೆ ಚೆನ್ನಾಗಿ ಗೊತ್ತಿತ್ತು, ಕೊನೆಗೆ ಹೀಗೆ ಆಗುತ್ತದೆ ಎಂದು. ಅದಕ್ಕೆ ಮೊದಲೇ ಕಾಕಿಗೆ ಸ್ವಲ್ಪ ಕೆಲಸ ಇದೆ. ಬಾ ಎಂದು ಹೇಳಿ ಕಳಿಸಿದ್ದನು.
“ಮೂರ್ ಮೂರ್ ದಿನಕ್ಕೂ ಇವರದೊಳ್ಳೆ ಕ್ವಾಟ್ಲೆ ಆಯ್ತಲ್ಲ! ಸ್ವಂತ ಕೆಲಸ ಇರುವಾಗಲೇ ಇವರು ಏನಾದರೂ ಹೇಳಿಬಿಡುತ್ತಾರೆ. ಮಾಡುವ ಹಾಗಿಲ್ಲ. ಬಿಡುವ ಹಾಗಿಲ್ಲ” ಮನಸಿನಲ್ಲೇ ಗೊಣಗಿಕೊಂಡು ಗೇಟ್ ತಳ್ಳಿ ಕಾಕಿ ಒಳಬಂದನು. ಗಾರ್ಡು ಗೋಪಾಲ ಮೊನ್ನೆ ವಶಪಡಿಸಿಕೊಂಡು ಬಂದಿದ್ದ ಬಂದೂಕಿನ ಬಳೆಯ ಮೇಲೆ ಇರುವ ಹೆಸರನ್ನು ತದೇಕ ಚಿತ್ತದಿಂದ ಓದುತ್ತಿದ್ದ. ‘ದೊಡ್ಡಸಿದ್ದ’ ತಾಮ್ರದ ಬಳೆಯ ಮೇಲೆ ಮೊಳೆಯಿಂದ ಕುಟ್ಟಿ, ಕೆತ್ತಿದ್ದ ಹೆಸರು. ಒಂದು ಕಾಲದ ಗೆಳೆಯ ಗೋಪಾಲನಿಗೆ, “ಫಾರೆಸ್ಟರ್ ತುಂಬಾ ಸ್ಟ್ರಿಕ್ಟ್, ಕಾಡಿಗೆ ಬೇಟೆಗೆ ಹೋಗಬೇಡ” ಎಂದು ಎಷ್ಟು ಪರಿಪರಿಯಾಗಿ ಹೇಳಿದ್ದರೂ “ಅದೇನು ಕಿತ್ಕೋತಾರೋ ನೋಡ್ತೀನಿ” ಎಂದು ಹೋಗಿ ಸಿಕ್ಕಿಕೊಂಡು ಜೈಲು ಪಾಲಾಗಿದ್ದ. ಅವನದೇ ಬಂದೂಕು. “ಅವನು ಹೋದಮೇಲೆ ಯಾರು ಬಳಸುತ್ತಿದ್ದರು ಇದನ್ನು ಎಂದು ಯೋಚಿಸಿದ. “ನಿನ್ನೆ ಇದನ್ನು ಕಾಡಿನಲ್ಲಿ ಬಿಸಾಡಿ ಹೋದವರಾದರೂ ಯಾರು? ಇದನ್ನು ಹೇಗಾದರೂ ಕಂಡು ಹಿಡಿಯಲೇಬೇಕು” ಎಂದುಕೊಳ್ಳುತ್ತಾ ಚಿಂತಾಕ್ರಾಂತನಾಗಿ ಯೋಚಿಸುತ್ತಿರುವಾಗಲೇ ಕಾಕಿ ಬಂದದ್ದು ಗಮನಿಸಿದ. “ಏ… ಕಾಕಿ, ಸಂಜೆ ಒಳಗೆ ಒಂದು ಕಡವೆ ಬೇಕು. ಅದಿಲ್ಲ ಅಂದ್ರೆ ಮೊಲ. ಜೊತೇಲಿ ಕೇತನನ್ನು ಕರ್ಕೊಂಡು ಹೋಗು, ಅವನ ಗುರಿ ಚೆನ್ನಾಗಿದೆ” ಎಂದನು. “ನನ್ ಕೈಲಿ ಇವತ್ತು ಹೋಗೋಕ್ ಆಗೋದಿಲ್ಲ ಸಾ, ನನ್ನ ಹೆಂಡ್ರನ್ನ ಬಿಳಿಗಿರಿ ಬೆಟ್ಟಕ್ಕೆ ಕಳಿಸ್ಬೇಕು. ಬೇರೆ ಯಾರಿಗಾದ್ರೂ ಹೇಳಿಕೊಳ್ಳಿ” ತುಸು ಬೇಸರದಿಂದಲೇ ಮಾತನಾಡಿದ. “ಹೇ ಹಂಗಂದ್ರೆ ಹೆಂಗೆ ಕಾಕಿ, ಸಾಹೇಬ್ರು ನಿಂಗೆ ಹೇಳವ್ರೆ. ನಿನ್ನ ಮ್ಯಾಲೆ ಬಾಳ ನಂಬ್ಕೆ ಇಟ್ಟವ್ರೆ ಏನಾದ್ರು ಮಾಡು. ಬರ್ತಾ ಇರೋದು ಎಂ.ಎಲ್.ಎ. ಕಡೆಯವರು.” “ಯಾರು ಬಂದ್ರೆ ನಂಗೇನ? ಮೊದ್ಲಿನ್ ತರ ಸುಲಭಕ್ಕೆ ಮಿಕ ಸಿಗೋದಿಲ್ಲ. ಸಿಕ್ಕಾಪಟ್ಟೆ ಕಾಯ್ಬೇಕು. ಲೇಟಾಗುತ್ತೆ. ಕೇತನಿಗೆ ಹೇಳ್ಬಿಡಿ, ಬೇರೆ ಯಾರ‍್ನಾದರೂ ಕರ‍್ಕೊಂಡು ಹೋಗಲಿ.” ತಪ್ಪಿಸಿಕೊಳ್ಳಲು ಕೇತನ ಹೆಸರನ್ನು ಹೇಳಿ ಸುಮ್ಮನಾದನು. ನರಿಗೇಳುದ್ರೆ, ನರಿ ಬಾಲಕ್ಕೆ ಹೇಳ್ತಂತೆ, ಹಂಗಾಯಿತು ನಿನ್ ಕತೆ. ಸಾಹೇಬ್ರಿಗೆ ನಿನ್ನ ಮೇಲೆ ನಂಬಿಕೆ. ನೀನು ಹೋಗು ಅಂದ್ರೆ ಅವನ ಮೇಲೆ ಎತ್ ಹಾಕ್ತೀಯ? ಏನ್ ಮಾಡ್ತೀಯಾ ಗೊತ್ತಿಲ್ಲ. ಸಂಜೆ ಒಳ್ಗೆ ರೆಡಿ ಆಗ್ಬೇಕು ಅಷ್ಟೇ! ವಿಷಯ ತಿಳಿಸಿದ್ದೇನೆ, ಇನ್ನು ಸಾಹೇಬರು ಮತ್ತು ನಿನಗೆ ಬಿಟ್ಟದ್ದು” ಎನ್ನುವಂತೆ ನೋಡಿ ಕೆಲಸ ಇದೆಯೆಂದು ಹೊರಟನು. ಕಾಕಿಗೆ ತಲೆಕೆಟ್ಟಂತಾಗಿತ್ತು. ಈ ದರಿದ್ರ ನನ್ ಮಕ್ಕಳ ಸಹವಾಸ ಮಾಡಬೇಡ ಅಂತ ಶಂಕರಜ್ಜ ಬೇಕಾದಷ್ಟು ಸಲ ಹೇಳಿದ್ದ. ನಾನೇ ಕೇಳಲಿಲ್ಲ. ಫಾರೆಸ್ಟ್ರು ಗೊತ್ತಿದ್ರೆ ಕಾಡಿನ ಕೆಲಸ ಸುಲಭ ಆಗ್ತದೆ. ಜೇನು ಕೀಳೋದು, ಕಾಡುಗೆಣಸು ತರೋದು ಮರಮುಟ್ಟು ಕಡಿಯೋಕೆ ಹೆಲ್ಪ್ ಆಗುತ್ತೆ ಅಂತ ಇವರು ಹೇಳಿದಂಗೆ ಕೇಳಿಕೊಂಡು ಇದ್ರೆ ಹೊತ್ತುಗೊತ್ತು ಅನ್ನದೆ ಹಿಂಗೆ ಕೆಲಸಕ್ಕೆ ಹಚ್ಚುತ್ತಾರಲ್ಲ! ನನ್ನ ಹೆಂಡತಿ ನೋಡಿದ್ರೆ ಶಾಸ್ತ್ರ ಮುಗಿಸಿಕೊಂಡು ತುದಿಗಾಲಿನಲ್ಲಿ ನಿಂತವಳೆ, ಏನ್ ಮಾಡೋದು ಎಂದು ಸಂಜೆ ಹೊತ್ಗೆ ಕೊಟ್ಬಿಟ್ಟು ನಾಳೆ ಬೆಟ್ಟಕ್ಕೆ ಹೋದರಾಯಿತು ಅಂದುಕೊಂಡ.
ಇದ್ದಕ್ಕಿದ್ದ ಹಾಗೆ ಸಿಸಿಎಫ್ ಮೇಡಮ್ ಮರೂರು ಫಾರೆಸ್ಟು ಆಫೀಸಿಗೆ ಭೇಟಿ ಕೊಟ್ಟಿದ್ದು ಮಾದೇವ್‌ಗೆ ಆಶ್ಚರ್ಯ ಮತ್ತು ಕುತೂಹಲ ಎರಡೂ ಒಟ್ಟಿಗೇ ಆಗಿತ್ತು. ಡಿಪಾರ್ಟ್‌ಮೆಂಟ್ ಕಡೆಯಿಂದ ಯಾವುದೇ ಸುತ್ತೋಲೆ ಬಂದಿರಲಿಲ್ಲ. ಹೊಸದಾಗಿ ಅಪಾಯಿಂಟ್ ಆಗಿದ್ದ ಅವನಿಗೆ, ಅವರನ್ನು ಹೇಗೆ ಸಂಭಾಳಿಸಬೇಕೆಂಬುದೂ ಗೊತ್ತಿರಲಿಲ್ಲ. ಹಿಂದೆ ಸುಮ್ಮನೆ ಕೈ ಕಟ್ಟಿ ನಿಲ್ಲುತ್ತಿದ್ದನು. “ಏನ್ರೀ ಸಮಾಚಾರ ಹೇಗಿದೆ ಕೆಲಸ ಎಲ್ಲಾ ಅಡ್ಜಸ್ಟ್ ಆಯ್ತಾ?” ಎಂದು ಆತ್ಮೀಯತೆಯಿಂದಲೇ ಕೇಳಿದರು ಮೇಡಂ. ಎಲ್ಲ ಪ್ರಶ್ನೆಗಳಿಗೂ ‘ಹೂ ಹೂ’ ಎನ್ನುತ್ತಿದ್ದನು. “ನಡೀರಿ ಒಂದು ರೌಂಡ್ ಕ್ಯಾಂಪ್ ಹತ್ತಿರ ಹೋಗಿ ನೋಡೋಣ” ಎಂದು ತಾವೇ ಮುಂದಾಗಿ ಹೋಗಿ ಜೀಪ್ ಹತ್ತಿದರು. ಅವರ ಹಿಂದೆಯೇ ಮಾದೇವ್ ಮತ್ತು ಗೋಪಾಲ ಇಬ್ಬರೂ ಜೀಪು ಹತ್ತಿ ಕುಳಿತುಕೊಂಡರು. ಊರನ್ನು ಬಿಟ್ಟ ಜೀಪು ನಿಜರು ದಾಟಿಕೊಂಡು ದೊಡ್ಡಗುಳಿ ಕ್ಯಾಂಪಿನ ಕಡೆಗೆ ಹೋಗುತಿತ್ತು. ಮುಂದಿನ ಸೀಟಿನಲ್ಲಿ ಕಾಡಿನ ಸೌಂದರ್ಯವನ್ನು ಆಸ್ವಾದಿಸಿಕೊಂಡು ಹಾಡು ಗುನುಗುತ್ತಿದ್ದ ಸಿಸಿಎಫ್ ಮೇಡಮ್ಮು ಸಡನ್ನಾಗಿ ಡ್ರೈವರ್‌ಗೆ ಜೀಪು ನಿಲ್ಲಿಸಲು ಹೇಳಿದರು. ಕೆಳಗೆ ಕೊಂಚಲಿನಲ್ಲಿ ಯಾರೋ ಓಡಾಡುತ್ತಿರುವುದನ್ನು ಗಮನಿಸಿ ಗಾಡಿ ನಿಲ್ಲಿಸಲು ಹೇಳಿದ್ದರು. ಗಾಬರಿಯಿಂದ ಗೋಪಾಲ ಮತ್ತು ಮಾದೇವ್ ಇಳಿದು “ಏನಾಯ್ತು ಮೇಡಮ್?” ಎಂದರು. “ಅಲ್ಲಿ ನೋಡಿ ಯಾರೋ ಇದ್ದಾರೆ. ಹತ್ತಿರ ಕರೆಯಿರಿ” ಎಂದರು. ಗೋಪಾಲ ಜೋರಾಗಿ “ಹೋಯ್ ಯಾರಲ್ಲಿ? ಬನ್ನಿ ಈ ಕಡೆ” ಎಂದು ಕೂಗಿದನು. ಕೆಳಗೆ ಓಡಾಡುತಿದ್ದ ಅವರು ಇತ್ತ ತಿರುಗಿ ಗಾರ್ಡು ಗೋಪಾಲನನ್ನು ಗುರುತಿಸಿ “ಬಂದೆ ಇರಿ ಸಾ?” ಎನ್ನುತ್ತಾ ಹೆಗಲ ಮೇಲೆ ಚೀಲವೊಂದನ್ನು ಎತ್ತಾಕಿಕೊಂಡು ಸಾವಧಾನವಾಗಿ ಮೇಲೇರಿ ಗಾಡಿಯತ್ತ ಬಂದರು. ಕಾಕಿ ಹೆಗಲ ಮೇಲೆ ಚೀಲ ಹೊತ್ತಿದ್ದ, ಕೇತನ ಕೈಯಲ್ಲಿ ಒಂದುಬಂದೂಕು ಇತ್ತು. ಗೋಪಾಲ ಮತ್ತು ಮಾದೇವ್ ಇಬ್ಬರೂ ನಿಂತಲ್ಲೇ ಬೆವರತೊಡಗಿದರು. ಈ ಕಾಡಿಗೆ ಅವರು ಕಡವೆ ಹೊಡೆಯಲು ಬರುತ್ತಾರೆಂದು ಕನಸಲ್ಲೂ ಅಂದು ಕೊಂಡಿರಲಿಲ್ಲ. ಕರೆದ ಕೂಡಲೇ ಬಂದ ಅವರ ಹುಂಬತನ ನೋಡಿ ಕೋಪವೂ ಬಂದಿತು. “ಇದೇನ್ರೀ ನೋಡ್ತಾ ಇದ್ದೀರಿ? ಹಿಡಿದು ಹಾಕ್ರೀ ಅವರನ್ನು” ಮೇಡಮ್ ಕಿರುಚಿದರು. ಮಾದೇವ್ ಮತ್ತು ಗೋಪಾಲ್ ಇಬ್ಬರೂ ಒಬ್ಬೊಬ್ಬರನ್ನು ಹಿಡಿದುಕೊಂಡು ಬಂದೂಕು ಕಿತ್ತುಕೊಂಡು ಚೀಲದ ಸಮೇತ ಗಾಡಿ ಹತ್ತಿಸಿದರು. ಕಾಕಿಯ ತಲೆ ಮೇಲೆ ಸರಿಯಾಗಿ ಪೆಟ್ಟುಕೊಟ್ಟು “ಎಷ್ಟು ಜಿಂಕೆ ಹೊಡೆದ್ರೋ? ಇನ್ನು ಯಾರ‍್ಯಾರು ಇದ್ದಾರೆ ನಿಮ್ ಗ್ಯಾಂಗಲ್ಲಿ ಬೊಗಳ್ರೋ” ಎಂದು ಗೋಪಾಲ ಅಂದಾಗಲೇ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಕಾಕಿ, ಕೇತನಿಗೆ ಗೊತ್ತಾಗಿ ಹೋಯಿತು.
ಫಾರೆಸ್ಟ್ ಐಬಿಯ ಮುಂದೆ ಕಾಕಿ ಮತ್ತು ಕೇತನನ್ನು ಕೂರಿಸಿ ಮಾಂಸದ ಚೀಲವನ್ನು ಹಾಗೂ ಬಂದೂಕನ್ನು ಇಟ್ಟು ಫೋಟೋ ತೆಗೆದುಕೊಂಡರು. ಗಾರ್ಡು ಗೋಪಾಲ “ಏನೂ ಆಗುವುದಿಲ್ಲ. ಸುಮ್ಮನೆ ಮೇಡಂ ಎದುರು ನಾಟಕ ಮಾಡ್ತೀವಿ. ಮೇಡಂ ಅತ್ತ ಹೋದ್ಮೇಲೆ ಬಿಡ್ತೀವಿ ಏನೂ ಮಾತಾಡ ಬೇಡ” ಎಂದು ಗುಟ್ಟಾಗಿ ಹೇಳಿದ್ದನು. ಗಂಡ ನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸುವ ಸುದ್ದಿ ಕೇಳಿ ಓಡೋಡಿ ಬಂದ ಕಾಕಿಯ ಹೆಂಡತಿ ಕೆಂಚಿ, “ಹೆರಿಗೆಗೆ ತವರಿಗೆ ಕರ‍್ಕೋ ಹೋಯ್ತೀನಿ ಅಂತ ಇಲ್ಲಿ ಬಂದು ಸಿಕ್ಕಾ ಕೊಂಡಿದ್ದೀಯಲ್ಲೊ. ಆವತ್ತೇ ಹೇಳಿದೆ ಈ ಮನೆ ಹಾಳರ ಸಾವಾಸ ಬುಡು ಅಂತ. ಕೇಳಿಲ್ಲ. ಈಗ ನೋಡುದ್ಯಾ” ಎಂದು ಮಾದೇವ್ ಕಡೆ ತಿರುಗಿ “ನಿನ್ ಹೆಂಡ್ತೀ ಜೋಪಾನ ಮಾಡಿ, ನನ್ ಗಂಡನ್ನ ಬೀದಿ ಪಾಲು ಮಾಡಿದ್ಯಲ್ಲೋ” ಎನ್ನುತ್ತಾ ಅವನ ಮೇಲೆ ದೂಳು ಬಿಟ್ಟಳು. ಮೀರಾಬಾಯಿ ಜಗುಲಿ ಮೇಲೆ ನಿಂತು ಸಾಯಂಕಾಲದ ಕಾಫಿ ಕುಡಿಯುತ್ತಿದ್ದಳು.
” ಕಾಕಿಗೆ ತಲೆಕೆಟ್ಟಂತಾಗಿತ್ತು. ಈ ದರಿದ್ರ ನನ್ ಮಕ್ಕಳ ಸಹವಾಸ ಮಾಡಬೇಡ ಅಂತ ಶಂಕರಜ್ಜ ಬೇಕಾದಷ್ಟು ಸಲ ಹೇಳಿದ್ದ. ನಾನೇ ಕೇಳಲಿಲ್ಲ. ಫಾರೆಸ್ಟ್ರು ಗೊತ್ತಿದ್ರೆ ಕಾಡಿನ ಕೆಲಸ ಸುಲಭ ಆಗ್ತದೆ. ಜೇನು ಕೀಳೋದು, ಕಾಡುಗೆಣಸು ತರೋದು, ಮರಮುಟ್ಟು ಕಡಿಯೋಕೆ ಹೆಲ್ಪ್ ಆಗುತ್ತೆ ಅಂತ ಇವರು ಹೇಳಿದಂಗೆ ಕೇಳಿಕೊಂಡು ಇದ್ರೆ ಹೊತ್ತುಗೊತ್ತು ಅನ್ನದೆ ಹಿಂಗೆ ಕೆಲಸಕ್ಕೆ ಹಚ್ಚುತ್ತಾರಲ್ಲ! ನನ್ನ ಹೆಂಡತಿ ನೋಡಿದ್ರೆ ಶಾಸ್ತ್ರ ಮುಗಿಸಿಕೊಂಡು ತುದಿಗಾಲಿನಲ್ಲಿ ನಿಂತವಳೆ, ಏನ್ ಮಾಡೋದು ಎಂದು ಸಂಜೆ ಹೊತ್ಗೆ ಕೊಟ್ಬಿಟ್ಟು ನಾಳೆ ಬೆಟ್ಟಕ್ಕೆ ಹೋದರಾಯಿತು ಅಂದುಕೊಂಡ.”




