Mysore
22
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ 

ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ 

ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್ ಚಕ್ರವರ್ತಿಯವರದ್ದು ಒಂದು ಸಾಧಾರಣ ಬಂಗಾಳಿ ಕುಟುಂಬ. ಅವರ ಹೆತ್ತವರು ಶಿಕ್ಷಣಕ್ಕೆ ಬಹು ಮಹತ್ವ ಕೊಡುತ್ತಿದ್ದವರಾಗಿದ್ದುದರಿಂದ ಇರುವ ಆರ್ಥಿಕ ಮಿತಿಯಲ್ಲೇ ಕುಶಾಲ್‌ಗೆ ರಾಜ್‌ಗೆ ಅತ್ಯುತ್ತಮ ಶಿಕ್ಷಣ ಲಭಿಸಿತು. ಕುಶಾಲ್ ರಾಜ್ ಸೇಂಟ್ ಝೇವಿಯರ್ ಶಾಲೆಯಲ್ಲಿ ಕಲಿತು, ೧೯೯೬ರಲ್ಲಿ ಮೆಸ್ರಾದ ಬಿಐಟಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮುಗಿಸಿ, ಎಚ್‌ಸಿಎಲ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ ನಂತರ ಐಐಎಮ್ ಲಕ್ನೋದಲ್ಲಿ ಎಂಬಿಎ ಮಾಡಿ, ೧೯೯೯ರ ಹೊತ್ತಿಗೆ ತನ್ನ ಕಾರ್ಪೋರೇಟ್ ವೃತ್ತಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದರು. ಅಲ್ಲಿಂದ ಮುಂದೆ ಬಿಪಿಎಲ್ ಮತ್ತು ಆಮ್‌ವೇ ಕಂಪೆನಿಗಳಲ್ಲಿ ಉದ್ಯೋಗ ಮಾಡಿದರು. ಅದರ ನಂತರ, ೨೦೦೫ರಲ್ಲಿ ಐಕಿಯಾ ಕಂಪೆನಿ ಸೇರಿ, ಅಲ್ಲಿ ಒಂದು ದಶಕ ಕಾಲ ಸೇವೆ ಸಲ್ಲಿಸಿದರು.

ಕುಶಾಲ್ ರಾಜ್ ಈ ಅವಧಿಯಲ್ಲಿ ಆನೇಕ ದೇಶಗಳನ್ನು ಸುತ್ತಿ, ಕಾರ್ಪೋರೇಟ್ ಸಿಸ್ಟಮ್‌ಗಳನ್ನು ರಚಿಸುವುದು, ತಂಡಗಳನ್ನು ನಿರ್ವಹಿಸುವುದು ಮತ್ತು ಬೃಹತ್ ವ್ಯಾಪ್ತಿಯಲ್ಲಿ ಆಲೋಚಿಸುವುದು ಹೇಗೆಂಬುದರಲ್ಲಿ ಪಳಗಿದರು. ಯಾವುದಕ್ಕೂ ಕೊರತೆಯಿಲ್ಲದ ಒಂದು ಐಷಾರಾಮಿ ಬದುಕು ನಡೆಸಲು ಬೇಕಾದುದೆಲ್ಲವೂ ಅವರ ಕೈಯಲ್ಲಿತ್ತು. ಆದರೆ, ಮುಂದೊಂದು ದಿನ ತಾನು ಇದೆಲ್ಲವನ್ನು ಬಿಡಬೇಕಾಗಿ ಬರುತ್ತದೆ ಎಂಬುದನ್ನು ಕುಶಾಲ್ ರಾಜ್ ಚಕ್ರವರ್ತಿ ಊಹಿಸಿಯೂ ಇರಲಿಲ್ಲ. ೨೦೧೧ರ ನವೆಂಬರ್ ತಿಂಗಳ ಒಂದು ತಣ್ಣಗಿನ ಬೆಳಗಿನ ಹೊತ್ತು ಕುಶಾಲ್ ರಾಜ್ ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆ ಗುರ್ಗಾಂವ್‌ನ ಒಂದು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅವರು ಆಗ ತಾನೇ ಒಂದು ಪ್ರವಾಸದಿಂದ ಹಿಂತಿರುಗಿ, ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಹೊರಟಿದ್ದರು. ಬೆಳಗಿನ ಕೊರೆಯುವ ಚಳಿಯಲ್ಲಿ ಅವರಿಗೆ ತಾವು ಮತ್ತು ತಮ್ಮ ಮಕ್ಕಳು ಮೈತುಂಬಾ ಧರಿಸಿದ್ದ ಬೆಚ್ಚಗಿನ ಉಡುಪು, ದಪ್ಪನೆ ಸ್ವೆಟರ್ ಕೂಡಾ ಕಡಿಮೆ ಅನ್ನಿಸುತ್ತಿತ್ತು. ಅವರಿಗೆ ಹಾಗೆ ಅನ್ನಿಸುತ್ತಿದ್ದ ಹೊತ್ತಿಗೆ ಸರಿಯಾಗಿ ಇಬ್ಬರು ಶಾಲಾ ಮಕ್ಕಳು ಅವರನ್ನು ಹಾದು ನಡೆದು ಹೋದರು. ಆ ಮಕ್ಕಳ ಮೈಮೇಲೆ ಚಳಿ ತಡೆಯುವಂತಹ ಯಾವುದೇ ಉಡುಪು ಇರಲಿಲ್ಲ. ಅಷ್ಟೇಕೆ, ಅವರ ಕಾಲಲ್ಲಿ ಚಪ್ಪಲಿಯೂ ಇರಲಿಲ್ಲ.

ಆ ದೃಶ್ಯ ಕುಶಾಲ್‌ರನ್ನು ತೀವ್ರವಾದ ಆಲೋಚನೆಗೆ ಈಡು ಮಾಡಿತು. ಆ ಮಕ್ಕಳ ಹೆತ್ತವರೂ ತನ್ನಂತೆಯೇ ತಮ್ಮ ಮಕ್ಕಳಿಗೆ ಬೆಚ್ಚಗಿನ ಉಡುಪನ್ನು ಬಯಸಿರುತ್ತಾರೆ. ಆದರೆ, ತನಗೂ ಅವರಿಗೂ ವ್ಯತ್ಯಾಸವೇನೆಂದರೆ, ತನಗೆ ತನ್ನ ಮಕ್ಕಳಿಗೆ ಅದನ್ನು ಪೂರೈಸಲು ಆರ್ಥಿಕ ಅನುಕೂಲತೆಯಿದ್ದಂತೆ ಆ ಮಕ್ಕಳ ಹೆತ್ತವರಿಗಿರಲಿಲ್ಲ. ಹಾಗೆ ಆಲೋಚಿಸಿದ ಕುಶಾಲ್, ಆ ಮಕ್ಕಳನ್ನು ಹಿಂಬಾಲಿಸಿಕೊಂಡು ಹೋದರು. ಅದು ಒಂದು ದೇವಸ್ಥಾನದ ಅವರಣದೊಳಗಿದ್ದ ಬಹು ಚಿಕ್ಕ ಶಾಲೆ. ಅಲ್ಲಿ ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ ೨೫೦ ಮಕ್ಕಳು ಕಲಿಯುತ್ತಿದ್ದರು! ಕುಶಾಲ್ ಅಷ್ಟೂ ಮಕ್ಕಳಿಗೆ ಶೂ, ಸಾಕ್ಸ್, ಸ್ವೆಟರ್ ಮತ್ತು ಬೆಚ್ಚನೆ ಉಡುಪುಗಳನ್ನು ಖರೀದಿಸಿ ಕೊಟ್ಟರು. ಹೀಗೆ, ಆ ಮಕ್ಕಳ ಬದುಕಿನೊಳಕ್ಕೆ ಕಾಲಿಟ್ಟ ಕುಶಾಲ್ ರಾಜ್ ಚಕ್ರವರ್ತಿಗೆ ಮತ್ತೆ ಅಲ್ಲಿಂದ ಹೊರ ಬರಲಾಗಲಿಲ್ಲ. ಆ ಮಕ್ಕಳಿಗೆ ಬೆಚ್ಚಗಿನ ಉಡುಪನ್ನು ಒದಗಿಸಿದ್ದು ಒಂದು ತಾತ್ಕಾಲಿಕ ಅಗತ್ಯ ಅಷ್ಟೇ. ಅಂತಹ ತಾತ್ಕಾಲಿಕ ಕೆಲಸವನ್ನು ಹೆಚ್ಚಿನವರು ಮಾಡಬಲ್ಲರು. ಆದರೆ, ಅದು ಆ ಮಕ್ಕಳ ಬದುಕಿನಲ್ಲಿ ಯಾವುದೇ ಗಮನಾರ್ಹವಾದ ಬದಲಾವಣೆಯನ್ನು ಮಾಡದು. ಅವರಿಗೆ ಬೆಚ್ಚಗಿನ ಉಡುಪಿನ ಅಗತ್ಯ ಎಷ್ಟಿತ್ತೋ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಿ, ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವುದು ಅದಕ್ಕಿಂತಲೂ ಹೆಚ್ಚು ಅಗತ್ಯವಾಗಿತ್ತು. ಹಾಗೆ ಆಲೋಚಿಸಿದ ಕುಶಾಲ್ ‘ಲೋಟಸ್ ಪೆಟಲ್ ಫೌಂಡೇಶನ್’ ಎಂಬ ಒಂದು ಟ್ರಸ್ಟನ್ನು ನೋಂದಾಯಿಸಿ, ಅದರ ಮೂಲಕ ಆ ಮಕ್ಕಳ ಶಿಕ್ಷಣಕ್ಕೆ ನೆರವಾಗ ತೊಡಗಿದರು.

ಆದರೆ, ಒಂದು ವರ್ಷದ ನಂತರ ಕುಶಾಲ್ ರಾಜ್ ಆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಅವಲೋಕಿಸಿದಾಗ ಅವರ ಕಲಿಕೆಯ ಗುಣಮಟ್ಟದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲಿಲ್ಲ. ೧೨ ವರ್ಷ ಪ್ರಾಯದ ಒಬ್ಬ ಹುಡುಗ ಇನ್ನೂಮೂರನೇ ತರಗತಿಯಲ್ಲಿದ್ದರೆ, ೧೫ ವರ್ಷದ ಇನ್ನೊಬ್ಬ ವಿದ್ಯಾರ್ಥಿ ಐದನೇ ತರಗತಿಯಲ್ಲಿದ್ದನು. ಆಗ ಕುಶಾಲ್ ರಾಜ್ ೨೦೧೩ರ ಏಪ್ರಿಲ್ ತಿಂಗಳಲ್ಲಿ ಗುರ್ಗಾಂವ್‌ನ ಒಂದು ಶಾಪಿಂಗ್ ಆರ್ಕೇಡ್‌ನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು, ಅಲ್ಲಿ ಆ ಮಕ್ಕಳಿಗಾಗಿ ‘ಫಾಸ್ಟ್ ಟ್ರ್ಯಾಕ್’ ಕಲಿಕಾ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದರು. ಅದಕ್ಕಾಗಿ ಅವರು ತಮ್ಮ ಉಳಿತಾಯದ ಹಣವಲ್ಲದೆ ೪೦ ಲಕ್ಷ ರೂಪಾಯಿ ಸಾಲವನ್ನು ಮಾಡಿದರು. ೨೦೧೬ರಲ್ಲಿ ಮೊತ್ತ ಮೊದಲ ಬ್ಯಾಚಿನ ಆರು ಮಕ್ಕಳು ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪಾಸು ಮಾಡಿದಾಗ ಕುಶಾಲ್ ರಾಜ್‌ಗೆ ಸಂತೋಷ ನೀಡಿದುದಲ್ಲದೆ, ತಮ್ಮ ವಿಧಾನ ಸರಿಯಾದ ದಾರಿಯಲ್ಲಿದೆ ಎಂಬ ಸಮಾಧಾನವೂ ಸಿಕ್ಕಿತು. ಮೊತ್ತ ಮೊದಲ ಬ್ಯಾಚಿನ ಆರು ವಿದ್ಯಾರ್ಥಿಗಳಲ್ಲಿ ಒಬ್ಬಳು ವಿದ್ಯಾರ್ಥಿನಿ ೨೦೨೪ರಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ವೈದ್ಯಳಾದುದು ಕುಶಾಲ್ ರಾಜ್‌ಗೆ ಹೊಸ ಹುಮ್ಮಸ್ಸನ್ನು ನೀಡಿತು. ತನ್ನ ೧೪ನೇ ವರ್ಷದ ಪ್ರಾಯದಲ್ಲಿ ಕುಶಾಲ್ ರಾಜ್‌ರ ‘ಫಾಸ್ಟ್ ಟ್ರ್ಯಾಕ್’ ಕಲಿಕಾ ಕಾರ್ಯಕ್ರಮದಲ್ಲಿ ನಾಲ್ಕನೇ ತರಗತಿ ಸೇರಿದ ಆ ಹುಡುಗಿ ಒಬ್ಬ ವೈದ್ಯೆಯಾಗಿ ಪರಿವರ್ತನೆಗೊಂಡ ರೀತಿ ಅನನ್ಯವಾದುದು.

ಕುಶಾಲ್ ರಾಜ್ ಚಕ್ರವರ್ತಿ ಆಗ ಐಕಿಯಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಆ ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ ಅವರು ೨೦೧೬ರ ಸೆಪ್ಟಂಬರ್ ತಿಂಗಳಲ್ಲಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ೨೦೧೭ರಲ್ಲಿ, ಐಐಎಮ್ ಲಕ್ನೋದಲ್ಲಿ ತಮ್ಮೊಂದಿಗೆ ಕಲಿತ ಒಬ್ಬ ಸಹಪಾಠಿಯ ನೆರವಿನಿಂದ ಗುರ್ಗಾಂವ್ನಲ್ಲಿ ಒಂದು ಜಮೀನು ಖರೀದಿಸಿ, ಅದರಲ್ಲಿ ಒಂದು ಶಾಲಾ ಕ್ಯಾಂಪಸನ್ನು ಕಟ್ಟಿದರು. ಇಂದು ಆ ಶಾಲೆ ನರ್ಸರಿಯಿಂದ ೧೨ನೇ ತರಗತಿಯ ತನಕ ಸುಮಾರು ೧೨೦೦ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಉತ್ತಮ ಶಿಕ್ಷಣದ ಜೊತೆಗೆ ಆರೋಗ್ಯಕರ ಆಹಾರ, ವೈದ್ಯಕೀಯ ಸವಲತ್ತುಗಳನ್ನೂ ಕೂಡ ನೀಡುತ್ತದೆ. ೧೨೦ಕ್ಕೂ ಹೆಚ್ಚು ಜನ ಶಿಕ್ಷಕರು ಮತ್ತು ಕೌನ್ಸಿಲರ್‌ಗಳ ಒಂದು ತಂಡ ಹಗಲಿರುಳು ಈ ಮಕ್ಕಳ ಭವಿಷ್ಯ ರೂಪಿಸುವ ಕಾಯಕದಲ್ಲಿ ತೊಡಗಿದೆ. ಅಂದು ಬೆಳಗ್ಗಿನ ಕೊರೆಯುವ ಚಳಿಯಲ್ಲಿ ಬರಿಗಾಲಲ್ಲಿ ನಡೆದು ಹೋದ ಆ ಇಬ್ಬರು ಮಕ್ಕಳಿಗೆ ಬೆಚ್ಚಗಿನ ಬಟ್ಟೆ ಕೊಡಿಸಿದ ಕುಶಾಲ್ ರಾಜ್ ಚಕ್ರವರ್ತಿ ಇಂದು ಅಂತಹ ನೂರಾರು ಬಡ ಮಕ್ಕಳ ಬದುಕನ್ನು ಹಸನಾಗಿಸುತ್ತಿದ್ದಾರೆ

” ಕುಶಾಲ್ ರಾಜ್ ಚಕ್ರವರ್ತಿ ಆಗ ಐಕಿಯಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಆ ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ ಅವರು ೨೦೧೬ರ ಸೆಪ್ಟಂಬರ್ ತಿಂಗಳಲ್ಲಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ೨೦೧೭ರಲ್ಲಿ, ಐಐಎಮ್ ಲಕ್ನೋದಲ್ಲಿ ತಮ್ಮೊಂದಿಗೆ ಕಲಿತ ಒಬ್ಬ ಸಹಪಾಠಿಯ ನೆರವಿನಿಂದ ಗುರ್ಗಾಂವ್‌ನಲ್ಲಿ ಒಂದು ಜಮೀನು ಖರೀದಿಸಿ, ಅದರಲ್ಲಿ ಒಂದು ಶಾಲಾ ಕ್ಯಾಂಪಸನ್ನು ಕಟ್ಟಿದರು.”

 

 

Tags:
error: Content is protected !!