Mysore
21
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಕೆಸರುಗದ್ದೆ ಕ್ರೀಡಾಕೂಟಕೂಟ: ಕಾಡುತ್ತಿರುವ ಮಳೆ ಕೊರತೆ!

ನವೀನ್ ಡಿಸೋಜ

ಮುಂಗಾರು ಆರಂಭದಲ್ಲಿ ವಾಡಿಕೆ ಮಳೆಯಾಗದೆ ಆಯೋಜನೆಗೆ ಹಿಂದೇಟು; ಹಲವೆಡೆ ಕ್ರೀಡಾಕೂಟ ಮುಂದೂಡಿಕೆ

ಮಡಿಕೇರಿ: ಪ್ರತಿವರ್ಷ ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಕ್ಕೂ ಈ ಬಾರಿ ಮಳೆ ಕೊರತೆ ಕಾಡಿದೆ. ಜುಲೈ ತಿಂಗಳಲ್ಲಿ ಗದ್ದೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಬಾರಿ ಕೆಸರುಗದ್ದೆ ಕ್ರೀಡಾಕೂಟಗಳು ಕಡಿಮೆಯಾಗಿವೆ.

ಕೊಡಗಿನಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲದೆ ಮಳೆಗಾಲದಲ್ಲಿಯೂ ನಾನಾ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಕೆಸರುಗದ್ದೆಯಲ್ಲಿ ನಡೆಯುವ ಕ್ರೀಡಾಕೂಟ ಮಹತ್ವ ಪಡೆದುಕೊಂಡಿದೆ. ಬೇಸಿಗೆಯ ಸಮಯದಲ್ಲಿ ಹಾಕಿ, ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್ ಸೇರಿದಂತೆ ಒಂದಲ್ಲಾ ಒಂದು ಕ್ರೀಡಾಕೂಟಗಳು ನಡೆಯುವ ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ, ಕೆಸರುಗದ್ದೆ ಕ್ರೀಡಾಕೂಟಗಳು ಗಮನ ಸೆಳೆಯುತ್ತವೆ. ಈ ಕ್ರೀಡಾಕೂಟಗಳು ದೇಸಿ ಸೊಗಡನ್ನು ಅನಾವರಣಗೊಳಿಸುತ್ತವೆ.

ಇಲ್ಲಿನ ಕ್ರೀಡಾಪ್ರೇಮಿಗಳು ಮಳೆ, ಚಳಿಗೆ ಮೈಯೊಡ್ಡಿ ಆಟ ವಾಡುವುದಕ್ಕಾಗಿಯೇ ಕೆಲವು ಸಂಘ-ಸಂಸ್ಥೆಗಳು ತಂಡಗಳನ್ನು ರಚಿಸಿಕೊಂಡು ಆಯೋಜಕರ ಮೂಲಕ ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನುಆಯೋಜಿಸುತ್ತಾರೆ. ಗದ್ದೆಯಲ್ಲಿ ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಮುಕ್ತ ಓಟ, ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಯೋ ಜಿಸಿ, ವಿಜೇತರಿಗೆ ಬಹುಮಾನ ಘೋಷಿಸುತ್ತಾರೆ.

ಹಿಂದಿನ ಕಾಲದಲ್ಲಿ ನಾಟಿ ಆದ ನಂತರ ಪ್ರತಿ ಗ್ರಾಮದಲ್ಲಿ ನಾಟಿ ಓಟ ನಡೆಯುತ್ತಿತ್ತು. ಇದರಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನವಾಗಿ ಬಾಳೆಗೊನೆ, ಎರಡನೇ ಬಹುಮಾನವಾಗಿ ತೆಂಗಿನಕಾಯಿ ಹಾಗೂ ಮೂರನೇ ಬಹುಮಾನವಾಗಿ ವೀಳ್ಯೆದೆಲೆ ನೀಡಿ ಗೌರವಿಸಲಾಗುತ್ತಿತ್ತು. ಕಾಲಾನುಕ್ರಮದಲ್ಲಿ ಇದೇ ಮುಂದುವರಿದು ಕೆಸರುಗದ್ದೆ ಕ್ರೀಡಾಕೂಟ ಎಂದಾಯಿತು. ಮೊದಲು ನಾಟಿ ಓಟ ಮಾತ್ರ ನಡೆಯುತ್ತಿತ್ತು. ಆದರೆ ಇದೀಗ ನಾಟಿ ಓಟದೊಂದಿಗೆ ನಾನಾ ಕ್ರೀಡಾಕೂಟಗಳು ನಡೆಯುವುದರೊಂದಿಗೆ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿದೆ.

ಸದ್ಯ ಈ ಬಾರಿ ಮಳೆ ಕೊರತೆ ಕಂಡುಬಂದಿರುವುದರಿಂದ ಕೆಸರುಗದ್ದೆ ಕ್ರೀಡಾಕೂಟ ಕೂಡ ಕ್ಷೀಣಿಸಿದೆ. ಜೂನ್, ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾದಲ್ಲಿ ವಿವಿಧೆಡೆ ಕೆಸರುಗದ್ದೆ ಕ್ರೀಡಾಕೂಟಗಳು ನಡೆಯುತ್ತಿದ್ದವು. ಆದರೆ, ಈ ಬಾರಿ ಕೆಲವೆಡೆ ಕ್ರೀಡಾಕೂಟ ನಡೆಯುತ್ತಿದ್ದರೂ ಪ್ರತಿವರ್ಷ ನಡೆಯುತ್ತಿದ್ದ ಕ್ರೀಡಾಕೂಟಗಳಿಗೆ ಹೋಲಿಸಿದರೆ ಈ ಬಾರಿಹಲವು ಸಂಘಟನೆಗಳು ಕ್ರೀಡಾಕೂಟ ಆಯೋಜನೆಯಿಂದ ಹಿಂದೆ ಸರಿದಿವೆ.

” ಈ ಬಾರಿ ಮಳೆ ಕೊರತೆ ಹಿನ್ನೆಲೆಯಲ್ಲಿ ಗದ್ದೆಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ.ಈಗಾಗಲೇ ಹಲವು ಕ್ರೀಡಾಕೂಟಗಳು ನಡೆಯಬೇಕಿತ್ತು. ಆದರೆ, ಮಳೆ ಕೊರತೆಯಿಂದ ಕೆಸರುಗದ್ದೆ ಕ್ರೀಡಾಕೂಟಗಳ ಸಂಖ್ಯೆ ಕಡಿಮೆಯಾಗಿದೆ. ನಾವು ಪ್ರತಿವರ್ಷ ಆಗಸ್ಟ್ ೨ನೇ ವಾರದಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದೆವು. ಈ ಬಾರಿ ೩೪ನೇ ವರ್ಷದ ರಾಜ್ಯ ಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳನ್ನು ಆ.೨೨ ರಂದು ಭಾಗಮಂಡಲದಲ್ಲಿ ಆಯೋಜಿಸಲಾಗಿದೆ.”

-ಸುಕುಮಾರ್, ಯುವ ಒಕ್ಕೂಟ ಸದಸ್ಯರು, ತ್ರಿನೇತ್ರ ಯುವಕ ಸಂಘದ ಅಧ್ಯಕ್ಷರು

” ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್(ಯಿಫಾ) ವತಿಯಿಂದ ಕಳೆದ ಕೆಲ ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ನಾಟಿ ಹಾಗೂ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ತಡವಾಗಿ ನಡೆಯಲಿದ್ದು, ಆ.೨೮ರಂದು ಗದ್ದೆನಾಟಿ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ಹೆಬ್ಬಾಲೆ ಗ್ರಾಮದಲ್ಲಿ ಆಯೋಜಿಸಲಾಗಿದೆ.”

-ಸಜನ್ ಮಂದಣ್ಣ, ಕಾರ್ಯದರ್ಶಿ, ಯಿಫಾ ಕೊಡಗು

 

 

Tags:
error: Content is protected !!