Mysore
26
clear sky

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರೇ ಹೊರತು ದನ ಮೇಯಿಸಲು ಅಥವಾ ಹುಡುಕಲು ಬಂದವರಲ್ಲ ಎಂದು ACF ಸ್ಪಷ್ಟಪಡಿಸಿದರು. ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು. ಹಸುಗಳನ್ನು ಹುಡುಕಲು ಗನ್ ಯಾಕೆ ತರುತ್ತಾರೆ? ಒಂದು ವೇಳೆ ಹಸು ಹುಡುಕಲು ಹೋಗುವುದಾದರೆ ಸ್ಥಳೀಯ ಅರಣ್ಯಾಧಿಕಾರಿ ಅಥವಾ ಸಿಬ್ಬಂದಿಗೆ ಮಾಹಿತಿ ಕೊಡಬೇಕಿತ್ತು ಎಂದು ಪ್ರಶ್ನಿಸಿದರು.

ಅವರು 8 ರಿಂದ 10 ಕಿ.ಮೀ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಮೃತಪಟ್ಟವರು ಬಿದ್ದಿದ್ದ ಸ್ಥಳದಿಂದ 75 ಮೀಟರ್ ದೂರದಲ್ಲಿ ಎರಡು ಬ್ಯಾಗ್‌ನಲ್ಲಿ 34.25 ಕೆಜಿ ಮಾಂಸ ಪತ್ತೆಯಾಗಿದೆ. ಸ್ಥಳದಲ್ಲಿ ದಿನಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಯಾಡಲು ಬೇಕಾದ ಸಲಕರಣೆಗಳೂ ಸಿಕ್ಕಿವೆ. ಸಿಕ್ಕಿರುವ ಮಾಂಸ ಯಾವ ಪ್ರಾಣಿಯದು ಎಂಬುದನ್ನು ಪತ್ತೆ ಹಚ್ಚಲು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಘಟನೆ ವೇಳೆ ನಮ್ಮ ಸಿಬ್ಬಂದಿ ಆತ್ಮರಕ್ಷಣೆಗಾಗಿ ಫೈರ್ ಮಾಡಿದ್ದಾರೆ. ನಮ್ಮವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಸತ್ತವರು ಕೂಡ ಗುಂಡು ಹಾರಿಸಿದ್ದರು, ಅದು ಮಿಸ್ ಫೈರ್ ಆಗಿದೆ ಎಂದು ಹೇಳಿದರು.

ಮೂವರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ. ಇನ್ನುಳಿದ ಇಬ್ಬರು ಆತನ ಜೊತೆಯಲ್ಲಿದ್ದರು. ಒಟ್ಟಾರೆ 12 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಪ್ರತಿದಿನವೂ ಅರಣ್ಯ ಸಿಬ್ಬಂದಿ ಗಸ್ತಿಗೆ ಹೋಗುವಾಗ ಗನ್ ಬಳಸಿ ಹೋಗುತ್ತಾರೆ ಎಂದು ACF ಹೇಳಿದರು.

ಸತ್ತ ಮೂವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಆದರೆ ತಲೆಮರೆಸಿಕೊಂಡಿರುವ ಮಹಿಮಾ ದಾಸ್ ವಿರುದ್ಧ ಕಾವೇರಿ ವನ್ಯಧಾಮದಲ್ಲಿ ಫಿಷಿಂಗ್ ಸಂಬಂಧ ಒಂದು ಕೇಸ್ ಇದೆ ಎಂದು ಮಾಹಿತಿ ನೀಡಿದರು.

ಹೊಸ ಚಪ್ಪಲಿ ವಿಚಾರದ ಬಗ್ಗೆ ಮಾತನಾಡಿದ ಅವರು, ಹೊಸ ಚಪ್ಪಲಿಯಲ್ಲಿ ಯಾವ ಸಾಕ್ಷಿ ಸಿಗುತ್ತದೆ. ನಮ್ಮ ಸಿಬ್ಬಂದಿ ಅಲ್ಲಿಗೆ ತಗೊಂಡು ಹೋಗಿ ಇಟ್ಟಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜೊತೆ ಪಾರಾಗನ್ ಚಪ್ಪಲಿ ಸಿಕ್ಕಿದೆ. ಕಿತ್ತೊದರೆ ಇರಲಿ ಎಂದು ತಂದು ಇಟ್ಟುಕೊಂಡಿರಬಹುದು ಎಂದರು.

ಅರಣ್ಯ ಸಿಬ್ಬಂದಿ ನಾಪತ್ತೆ ವಿಚಾರಕ್ಕೆ ಸಂಬಂಧಿಸಿ, “ಯಾವುದೇ ದುರ್ಘಟನೆ ನಡೆಯಬಾರದೆಂದು ಅವರನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿದ್ದೇವೆ. ಹೆದರಿ ಓಡುವ ಪರಿಸ್ಥಿತಿ ಇಲ್ಲ. ತನಿಖಾ ತಂಡದ ಮುಂದೆ ಹಾಜರುಪಡಿಸಿ ಹೇಳಿಕೆ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕಳ್ಳಬೇಟೆ ತಡೆ ಶಿಬಿರ ಧ್ವಂಸ ಪ್ರಕರಣದಲ್ಲಿ ಸರ್ಕಾರದ ಆಸ್ತಿ ನಾಶ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಕಾಡಿನ ಗಡಿಭಾಗದ ಜನರ ವಿಶ್ವಾಸ ಗಳಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತದೆ. ಆದರೆ ಯಾರೂ ಅರಣ್ಯ ನಾಶ ಮಾಡಿದರೆ ಅವರನ್ನು ಸದೆಬಡಿಯುವ ಕೆಲಸವೂ ಆಗಬೇಕು ಎಂದು ಎಚ್ಚರಿಕೆ ನೀಡಿದರು.

ಘಟನೆ ಬಳಿಕ ಮೊದಲ ಬಾರಿಗೆ ಅರಣ್ಯಾಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

Tags:
error: Content is protected !!