Mysore
24
overcast clouds

Social Media

ಬುಧವಾರ, 29 ಜುಲೈ 2026
Light
Dark

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ

ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಹಾಗೂ ಮೀನುಗಾರಿಕೆ ಕಸುಬಿನಲ್ಲಿ ತೊಡಗಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ಸ್ಯ ವಾಹಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸೈಕಲ್ನಲ್ಲಿ ಮೀನು ಮಾರಾಟ ಮಾಡುತ್ತಿದ್ದವರಿಗೆ ಈಗ ತ್ರಿಚಕ್ರ ವಾಹನಗಳನ್ನು ಒದಗಿಸಲಾಗಿದೆ.

ವಿಶೇಷ ವಾಹನಗಳನ್ನು ಒದಗಿಸಿ ಅದರ ಮುಖಾಂತರ ನಿರುದ್ಯೋಗಿಗಳು ಇಲ್ಲವೇ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರು ಹಸಿ ಮೀನು, ಅದರಿಂದ ತಯಾರಿಸಿದ ಆಹಾರವನ್ನುನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಯೋಜನೆ ಇದಾಗಿದೆ. ಮೀನುಗಾರಿಕೆ ಇಲಾಖೆಯಿಂದ ಯೋಜನೆಗೆ ಅನುಕೂಲವಾಗುವಂತೆ ಮೊದಲ ಹಂತದಲ್ಲಿ ೧೫೦ ತ್ರಿಚಕ್ರ ಆಟೋಗಳನ್ನು ವಿಶೇಷವಾಗಿ ಮಾರ್ಪಡಿಸಿ ಅದನ್ನು ಮತ್ಸ್ಯ ವಾಹಿನಿ ಯೋಜನೆಯ ನೋಡೆಲ್ ಏಜೆನ್ಸಿಯಾಗಿರುವ ಕರ್ನಾಟಕ ಮೀನು ಅಭಿವೃದ್ಧಿ ನಿಗಮ ( ಕೆಎಫ್ಡಿ‌ಸಿ)ಕ್ಕೆ ಹಸ್ತಾಂತರಿಸಲಾಗಿದೆ.

ಅದರಂತೆ, ಮೈಸೂರು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದವು. ದೊಡ್ಡಕಾನ್ಯದ ಎಸ್. ಮಹೇಶ್, ಚನ್ನೀಪುರದ ಎಂ.ಉಮೇಶ್, ಹದಿನಾರು ಗ್ರಾಮದ ಕೆ.ಚಂದನ್ ಹಾಗೂ ಬನ್ನೂರಿನ ಗಿರೀಶ್ ಅವರನ್ನು ಜಿಲ್ಲಾ ಸಮಿತಿಯಲ್ಲಿ ಆಯ್ಕೆ ಮಾಡಿ ಹಂಚಿಕೆ ಮಾಡಲಾಗಿದೆ. ಇದಲ್ಲದೆ, ಮತ್ತೆ ಮೂರು ಆಟೋಗಳು ಬಂದಿದ್ದು, ಫಲಾನುಭವಿಗಳನ್ನು ಅಂತಿಮ ಗೊಳಿಸಬೇಕಾಗಿದೆ ಎಂದು ಹೇಳಲಾಗಿದೆ.

ಸಾಮಾನ್ಯ ವರ್ಗಕ್ಕೆ ಸೇರಿದವರಾದಲ್ಲಿ ಒಂದು ಲಕ್ಷ ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರಿಗೆ ೫೦ ಸಾವಿರ ರೂ. ಎಂಬ ನಿಯಮದಂತೆ ಠೇವಣಿ ಕಟ್ಟಿಸಿಕೊಂಡು ವಾಹನ ನೀಡಲಾಗಿದೆ. ಈಗಾಗಲೇ ಅವರು ವ್ಯಾಪಾರ ಆರಂಭಿಸಿ, ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ. ಈ ಯೋಜನೆಯಿಂದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಸ್ವ ಉದ್ಯೋಗಿಗಳಾಗಿ ಆರ್ಥಿಕ ಶಕ್ತಿ ಪಡೆದಿದ್ದಾರೆ ಹಾಗೂ ಇತರರಿಗೂ ಉತ್ತೇಜಿಸುವಂತೆ ಮಾಡಿದ್ದಾರೆ.

ವಾಹನದಲ್ಲಿ ಏನೇನು ಇರಲಿದೆ?: ಮೀನು ಆಹಾರ ಹಾಗೂ ಹಸಿ ಮೀನು ಮಾರಾಟಕ್ಕೆ ಅನುಕೂಲವಾಗುವಂತೆ ೮ ಲಕ್ಷ ರೂ. ವೆಚ್ಚದಲ್ಲಿ ರೂಪಿಸಿರುವ ತ್ರಿಚಕ್ರ ಎಲೆಕ್ಟ್ರಿಕ್ ವಾಹನವನ್ನು ಕೆಎಫ್ಡಿಸಿಯ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಇರಿಸಲಾಗಿರುತ್ತದೆ. ಇದರಲ್ಲಿ ಗ್ಯಾಸ್ ಸ್ಟೌ, ಬಾಣಲೆ, ರಾತ್ರಿ ವೇಳೆ ವ್ಯಾಪಾರಕ್ಕೆ ಅನುಕೂಲವಾಗುವಂತೆ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಅಂತೆಯೇ ಫಲಾನುಭವಿಗಳು ಈ ವಾಹನದಲ್ಲಿ ಹಗಲಿನ ವೇಳೆ ಹಸಿ ಮೀನು, ಸಂಜೆ ವೇಳೆ ಮೀನಿನಿಂದ ತಯಾರಿಸಿದ ಕಬಾಬ್, ಫಿಶ್ ಕರಿ, ಸಾಂಬಾರ್ ಮೀನು ಆಹಾರವನ್ನು ತಯಾರಿಸಿ ಮಾರಾಟ ಮಾಡಬಹುದಾಗಿದೆ. ವ್ಯಾಪಾರ ಮಾಡಿ ಪ್ರತಿ ತಿಂಗಳು ಬಾಡಿಗೆ ಕಟ್ಟಲು ಸಾಧ್ಯವಾಗದಿದ್ದರೆ ಈ ವಾಹನವನ್ನು ಕೆಎ-ಡಿಸಿ ವ್ಯವಸ್ಥಾಪಕ ನಿರ್ದೇಶಕರ ಸುಪರ್ದಿಗೆ ಹಸ್ತಾಂತರಿಸಬೇಕು. ನಂತರ, ವಾಹನವನ್ನು ಅಗತ್ಯ ಇರುವ ಬೇರೆ ಫಲಾನುಭವಿಗಳಿಗೆ ವಿತರಿಲಾಗುತ್ತದೆ ಎಂದು ತಿಳಿಸಲಾಗಿದೆ.

ಏನೇನು ಅನುಕೂಲಗಳು?: ನಗರ ಪ್ರದೇಶಗಳಲ್ಲಿ ಶೀತಲೀಕರಣ ವ್ಯವಸ್ಥೆಯೊಂದಿಗೆ ಗುಣಮಟ್ಟದ ತಾಜಾ ಮೀನು ಲಭ್ಯವಾಗುವುದರ ಜತೆಗೆ, ರಾಜ್ಯದ ಮೀನು ಉತ್ಪಾದನೆ, ರಫ್ತು ಹಾಗೂ ದೇಶಿಯ ಬಳಕೆಗೆ ಉತ್ತೇಜನ ದೊರೆಯುತ್ತಿದೆ. ಇ-ಆಟೋ ಬಳಕೆ ಮೂಲಕ ಪರಿಸರ ಸ್ನೇಹಿ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಮತ್ಸ್ಯವಾಹಿನಿ ಯೋಜನೆಯು ನೀಲಿ ಕ್ರಾಂತಿಯ ಹೊಸ ಅಧ್ಯಾಯವಾಗಬಲ್ಲದು. ಸರಿಯಾದ ಅನುಷ್ಠಾನ, ತರಬೇತಿ ಮತ್ತು ಮಾರುಕಟ್ಟೆ ಬೆಂಬಲದೊಂದಿಗೆ ಸಾವಿರಾರು ಕುಟುಂಬಗಳ ಜೀವನ ಮಟ್ಟವನ್ನು ಉತ್ತಮಗೊಳಿಸಲು ಸಾಧ್ಯವಾಗಲಿದೆ. ಒಂದು ವೇಳೆ ಫಲಾನುಭವಿಗಳು ಬಯಸಿದರೆ ಇಲಾಖೆಯ ವತಿಯಿಂದ ಉದ್ಯಮಶೀಲತೆ ಹಾಗೂ ವ್ಯವಹಾರ ನಿರ್ವಹಣೆ ಕುರಿತು ತರಬೇತಿ ಕೊಡಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

” ಯೋಜನೆಯ ಯಶಸ್ಸಿಗೆ ಇಲಾಖೆಯು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೀನುಗಾರರ ಆದಾಯವನ್ನು ಹೆಚ್ಚಿಸುವ, ದ್ವಿಗುಣಗೊಳಿಸುವ ರಾಷ್ಟ್ರೀಯ ಗುರಿಯ ಭಾಗವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.”

? ಮಂಜುನಾಥ್, ಉಪ ನಿರ್ದೇಶಕ, ಮೀನುಗಾರಿಕೆ ಇಲಾಖೆ

” ಗ್ರಾಹಕರಿಗೆ ನಾವು ಒದಗಿಸುವ ಶುಚಿ- ರುಚಿ ಆಹಾರವನ್ನು ಆಧರಿಸಿ ವ್ಯಾಪಾರ ನಡೆಯುತ್ತದೆ. ಒಂದೊಂದು ದಿನ ಕಡಿಮೆ ವ್ಯಾಪಾರವಾದರೆ, ಒಂದೊಂದು ದಿನ ಹೆಚ್ಚಾಗುತ್ತದೆ. ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಸಂಜೆ ವೇಳೆ ವ್ಯಾಪಾರ ಮಾಡುತ್ತೇನೆ. ಬೆಳಿಗ್ಗೆ ಹೊತ್ತು ಬೇರೆ ಕಡೆಗಳಲ್ಲಿ ವ್ಯಾಪಾರ ಮಾಡುತ್ತೇನೆ. ಸರ್ಕಾರದಿಂದ ನೀಡಿರುವ ವಾಹನವನ್ನು ನಿರ್ವಹಣೆ ಮಾಡಿಕೊಂಡು ಹೋಗುವುದರ ಜತೆಗೆ, ಗ್ರಾಹಕರಿಗೆ ರುಚಿಯಾದ ಮೀನು ಆಹಾರ ಪದಾರ್ಥಗಳನ್ನು ಕೊಟ್ಟರೆ ಗ್ರಾಹಕರನ್ನು ಸೆಳೆಯಬಹುದು.”

ಮಹೇಶ್, ಫಲಾನುಭವಿ, ದೊಡ್ಡಕಾನ್ಯ 

 

 

Tags:
error: Content is protected !!