ಚನ್ನೇಶ ಬಿ.ಇದರಮನಿ
ಸಿಬ್ಬಂದಿಗಳ ಕೊರತೆಯಿಂದ ಸಕಾಲದಲ್ಲಿ ಆಗದ ಕೆಲಸ; ಸಾರ್ವಜನಿಕರ ಆಕ್ರೋಶ
ಮೈಸೂರು: ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಜಾತಿ- ಆದಾಯ ಪ್ರಮಾಣಪತ್ರ ಪಡೆಯಲು ಉದ್ಯೋಗಾಕಾಂಕ್ಷಿಗಳು ಕಚೇರಿಗಳಿಗೆ ದಿನ ನಿತ್ಯ ಅಲೆಯುವಂತಾಗಿದೆ.
ಕೃಷ್ಣಮೂರ್ತಿಪುರಂನಲ್ಲಿರುವ ಮಹಾನಗರ ಪಾಲಿಕೆಯ ವಲಯ-೨ರ ಕಚೇರಿಗೆ ಪ್ರಮಾಣಪತ್ರ ಪಡೆಯಲು ಅನೇಕರು ತಿಂಗಳುಗಳಿಂದ ಅಲೆದರೂ ಪ್ರಯೋಜನವಾಗುತ್ತಿಲ್ಲ.
ಎಸ್‌ಐಆರ್ ಪ್ರಕ್ರಿಯೆಗೆ ಪಾಲಿಕೆ ಸಿಬ್ಬಂದಿಯನ್ನು ನಿಯೋಜನೆ ಮಾಡಿರುವುದರಿಂದ ಕಚೇರಿಯ ಕೆಲಸಗಳು ವಿಳಂಬವಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಲ್ಲದೆ, ಕಂಪ್ಯೂಟರ್ ಆಪರೇಟರ್ ಒಬ್ಬರು ಅನಾರೋಗ್ಯದಿಂದ ರಜೆಯ ಮೇಲೆ ತೆರಳಿದ್ದು, ಅವರ ಬದಲಿಗೆ ಬಂದವರು ಕಚೇರಿಯಲ್ಲಿ ಹೆಚ್ಚು ದಿನ ಕೆಲಸ ಮಾಡಲು ಆಗಿಲ್ಲ. ಕೆಲಸದ ಒತ್ತಡ ಇದಕ್ಕೆ ಕಾರಣ ಎನ್ನಲಾಗಿದೆ.
ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಿದ ೨೧ ದಿನಗಳ ಒಳಗೆ ಒದಗಿಸಬೇಕು ಎಂದು ಸಕಾಲ ನಿಯಮ ಹೇಳುತ್ತದೆ. ಆದರೆ, ಇಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ನಿಯಮ ಪಾಲನೆ ಕಷ್ಟಕರವಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮಾತ್ರವಲ್ಲದೆ, ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಜಾತಿ-ಆದಾಯ ಪ್ರಮಾಣಪತ್ರದ ಅವಶ್ಯಕತೆ ಇದೆ. ಇದಲ್ಲದೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆದುಕೊಳ್ಳಲು, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಜಾತಿ-ಆದಾಯ ಪ್ರಮಾಣಪತ್ರದ ಅವಶ್ಯವಿದೆ. ಇದಕ್ಕಾಗಿ ಪ್ರತಿ ನಿತ್ಯವೂ ಸಾರ್ವಜನಿಕರು, ವಿದ್ಯಾರ್ಥಿಗಳು ಕಚೇರಿಗೆ ಅಲೆದಾಡುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿಂದ ವಿಳಂಬವಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
” ನಮ್ಮ ಕುಟುಂಬದಲ್ಲಿ ಐದು ಜನ ಇದ್ದೇವೆ. ವಿವಿಧ ಉದ್ದೇಶಗಳಿಗಾಗಿ ನಮಗೆ ಜಾತಿ-ಆದಾಯ ಪ್ರಮಾಣಪತ್ರದ ಅವಶ್ಯವಿದೆ. ಅದರಲ್ಲೂ ನಮ್ಮ ಮಕ್ಕಳು ಅರಣ್ಯ ಇಲಾಖೆಯ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕಿದೆ.ಕಳೆದ ೧೦ ದಿನಗಳಿಂದ ಪ್ರಮಾಣಪತ್ರಕ್ಕೆಅಲೆದಾಡುತ್ತಿದ್ದೇವೆ. ಆದರೆ, ವಿವಿಧ ಕಾರಣನೀಡಿ, ಪ್ರಮಾಣಪತ್ರ ವಿತರಿಸಲು ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ನಾವು ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ.”
ಜೆ.ಎಸ್.ಹೋಮದೇವ್, ಮೈಸೂರು





