ನವೀನ್ ಡಿಸೋಜ
ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯ ಸರ್ಕಾರದ ನಿರ್ದೇಶನದಂತೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಆಂಧ್ರಪ್ರದೇಶ ಹಾಗೂ ಬೆಂಗಳೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅದರಂತೆ ಕೊಡಗು ಜಿಲ್ಲೆಯಲ್ಲೂ ಅಧಿಕಾರಿಗಳ ಸಭೆ ನಡೆಸಿ ಆಸ್ಪತ್ರೆಗಳ ಸಿದ್ಧತೆಯನ್ನು ಪರಿಶೀಲಿಸಲಾಗಿದೆ. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ಐಸೋಲೇಷನ್ ವಾರ್ಡ್ ಸಿದ್ಧ ಪಡಿಸಲಾಗಿದ್ದು, ಒಟ್ಟು ೪೦ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ಸಂಪೂರ್ಣ ಸಜ್ಜಾಗಿದೆ.
ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಯಾವುದೇ ಸಮಸ್ಯೆ ಇಲ್ಲ. ಆಸ್ಪತ್ರೆಯಲ್ಲಿ ಪಿಪಿಇ ಕಿಟ್, ಎನ್-೯೫ ಮಾಸ್ಕ್, ಔಷಧಿಗಳು, ಸ್ಯಾನಿಟೈಸರ್ ಸೇರಿದಂತೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ. ಜ್ವರ, ಕೆಮ್ಮು, ಗಂಟಲು ನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ವೈರಲ್ ಜ್ವರದ ಲಕ್ಷಣಗಳೊಂದಿಗೆ ಬರುವ ರೋಗಿಗಳಿಗೂ ಅಗತ್ಯ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ಶಂಕಿತ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ನಡೆಸಿ, ಅಗತ್ಯವಿದ್ದರೆ ವಿಶೇಷ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಅನುಭವದ ಆಧಾರದ ಮೇಲೆ ಈ ಬಾರಿಯೂ ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಏನು ಮಾಡಬೇಕು?
* ಕೋವಿಡ್ ಲಸಿಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ
* ಕೋವಿಡ್ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಮನೆಯಲ್ಲೇ ಇರಿ
* ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸಿ
* ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಕೈ ಅಥವಾ ಟಿಶ್ಯೂ ಪೇಪರ್‌ನಿಂದ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿ , ನಿಮ್ಮ ಕೈಗಳನ್ನು ಸ್ವಚ್ಛವಾಗಿಡಿ
* ಮನೆಯಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಮಾಡಿ.
* ವೈದ್ಯರು ಹೇಳದ ಹೊರತು ಆಂಟಿ ಬಯಾಟಿಕ್ (ಪ್ರತಿಜೀವಕಗಳು) ಬಳಸದಿರಲು ಪ್ರಯತ್ನಿಸಿ, ಸ್ವಯಂ-ಔಷಽ ಮಾಡಬೇಡಿ
* ಅನಾರೋಗ್ಯದಿಂದ ಬಳಲುತ್ತಿದ್ದರೆ, ಕೆಲಸ, ಶಾಲೆ ಮತ್ತು ಸಾಮಾಜಿಕ ಕೂಟಗಳನ್ನು ತಪ್ಪಿಸಿ
ಕೋವಿಡ್‌ನ ಸಾಮಾನ್ಯ ಲಕ್ಷಣಗಳು:
* ಜ್ವರ, ನಡುಕದೊಂದಿಗೆ ಶೀತ
* ಒಣ ಕೆಮ್ಮು, ಗಂಟಲು ನೋವು
* ಉಸಿರಾಟದ ತೊಂದರೆ, ಎದೆ ನೋವು
* ವಾಸನೆ, ರುಚಿ ಗ್ರಹಿಕೆ ಕಳೆದುಕೊಳ್ಳುವುದು
ಇತರ ಲಕ್ಷಣಗಳು
* ತಲೆನೋವು ಮತ್ತು ಮೈಕೈ ನೋವು
* ಮೂಗು ಕಟ್ಟುವುದು, ಸ್ರವಿಸುವಿಕೆ
* ವಾಕರಿಕೆ, ವಾಂತಿ ಅಥವಾ ಭೇದಿ
* ವಿಪರೀತ ದಣಿವು ಮತ್ತು ಹಸಿವಾಗದಿರುವುದು
” ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಡಿಯೋ ಕಾನರೆನ್ಸ್‌ನಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಲಕ್ಷಣ ಕಂಡು ಬಂದ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೊಳಪಡಿಸುವುದು ಜೊತೆಗೆ ಅಗತ್ಯ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಔಷಧಿ ಕೂಡ ದಾಸ್ತಾನಿಡುವಂತೆ ನಿರ್ದೇಶನ ನೀಡಲಾಗಿದೆ. ಅದರಂತೆ ಆರೋಗ್ಯ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ೪೦ ಬೆಡ್‌ಗಳನ್ನು ಕಾಯ್ದಿರಿಸಲಾಗಿದ್ದು, ತಾಲ್ಲೂಕು ಆಸ್ಪತ್ರೆಯಲ್ಲಿಯೂ ಪ್ರತ್ಯೇಕ ವಾರ್ಡ್ ಕಾಯ್ದಿರಿಸುವಂತೆ ಸೂಚಿಸಲಾಗಿದೆ.”
-ಡಾ. ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕೊಡಗು




