ದಾ.ರಾ.ಮಹೇಶ್
ಪರಿಷ್ಕತ ಶುಲ್ಕ ಸೆಪ್ಟೆಂಬರ್ ೧ರಿಂದ ಜಾರಿ; ಸಫಾರಿ ಸಮಯ ೧ ಗಂಟೆ ಹೆಚ್ಚಳ
ಹನಗೋಡು : ಬಂಡೀಪುರ ಮತ್ತು ನಾಗರಹೊಳೆಯ ವಿವಿಧ ಪ್ರವಾಸೋದ್ಯಮ ಚಟುವಟಿಕೆಗಳ ಪ್ರವೇಶ ಟಿಕೆಟ್ ದರ ಹಾಗೂ ಸಫಾರಿ ಟಿಕೆಟ್ ದರವನ್ನು ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ಸೆಪ್ಟೆಂಬರ್ ೧ರಿಂದ ಪರಿಷ್ಕ ತ ದರ ಜಾರಿಗೆ ಬರಲಿದೆ. ಬಂಡೀಪುರ ಪ್ರವಾಸೋದ್ಯಮ ವಲಯದ ಕಾಕನಕೋಟೆ (ದಮ್ಮನಕಟ್ಟೆ), ನಾಗರಹೊಳೆ ವ್ಯಾಪ್ತಿಯ ವೀರನಹೊಸಹಳ್ಳಿ ಸಫಾರಿಗೆ ಪರಿಷ್ಕ ತ ದರ ಅನ್ವಯವಾಗಲಿದೆ.
ನಾಗರಹೊಳೆಯಲ್ಲಿ ಈ ಹಿಂದೆ ಬಸ್ ಸಫಾರಿಗೆ ಕ್ರಮವಾಗಿ ವಯಸ್ಕರಿಗೆ ೬೦೦ ರೂ. ಮತ್ತು ೬೫೦ ರೂ. ದರವಿತ್ತು, ಈಗ ಅದನ್ನು ೧,೦೦೦ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಮಕ್ಕಳಿಗೆ ೩೦೦ ರೂ. ಮತ್ತು ೩೨೫ ರೂ. ಇತ್ತು. ಅದನ್ನು ೫೦೦ ರೂ.ಗಳಿಗೆ ಹೆಚ್ಚಿಸಲಾಗಿದೆ. ಜೀಪ್ ಸಫಾರಿಗೆ ವಯಸ್ಕರಿಗೆ ೧,೦೦೦ ರೂ. ಮತ್ತು ೧,೧೦೦ ರೂ. ಇತ್ತು. ಪ್ರಸ್ತುತ ಅದು ೧,೫೦೦ ರೂ.ಗೆ ಹೆಚ್ಚಳವಾಗಿದೆ. ಮಕ್ಕಳಿಗೆ ೫೦೦ ರೂ. ಮತ್ತು ೫೫೦ ರೂ. ಇದ್ದದನ್ನು ೭೫೦ ರೂ. ಏರಿಕೆ ಮಾಡಲಾಗಿದೆ. ೩ ವರ್ಷದೊಳಗಿನ ಮಕ್ಕಳಿಗೆ ಪ್ರವೇಶ/ಟಿಕೆಟ್ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದ್ದು, ಸಫಾರಿ ವಾಹನದಲ್ಲಿ ಅವರು ಪೋಷಕರ ಸೀಟನ್ನೇ ಹಂಚಿಕೊಳ್ಳಬೇಕು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಕ್ಯಾಮೆರಾ, ವಾಹನ ನಿಲುಗಡೆ ಶುಲ್ಕವೂ ಏರಿಕೆ: ನಾಗರಹೊಳೆ ಮತ್ತು ಬಂಡೀಪುರ ಎರಡೂ ಕಡೆಗಳಲ್ಲಿ ಬೆಳಿಗ್ಗೆ ೬.೩೦ರಿಂದ ೯ ಗಂಟೆ ಹಾಗೂ ಸಂಜೆ ೩.೩೦ರಿಂದ ೬ ಗಂಟೆಯವರೆಗೆ ಸಫಾರಿ ನಡೆಯುತ್ತದೆ. ಸಫಾರಿಗೆ ತೆರಳುವವರು ಜತೆಯಲ್ಲಿ ಕ್ಯಾಮೆರಾ ತೆಗೆದುಕೊಂಡು ಹೋಗಬಹುದು. ೨೦೦ ಎಂಎಂಗಿಂತ ಹೆಚ್ಚಿನ ಲೆನ್ಸ್‌ಗಳುಳ್ಳ ಕ್ಯಾಮೆರಾಗೆ ೧,೫೦೦ ರೂ. ಮತ್ತು ಶೇ.೧೮ರಷ್ಟು ಜಿಎಸ್‌ಟಿ ಶುಲ್ಕ ಪಾವತಿಸಬೇಕು. ಹಿಂದೆ ೨೦೦ರಿಂದ ೫೦೦ ಎಂಎಂ ಲೆಲ್ಸ್‌ಗೆ ೧,೦೦೦ ರೂ. ಮತ್ತು ೫೦೦ ಎಂಎಂಗಿಂತ ಹೆಚ್ಚು ಲೆನ್ಸ್ ಹೊಂದಿದ್ದರೆ ೧,೫೦೦ ರೂ. ಶುಲ್ಕ ವಿಧಿಸಲಾಗುತ್ತಿತ್ತು.
ವಾಹನ ನಿಲುಗಡೆ ಶುಲ್ಕ: ಕಾರಿಗೆ ೧೦೦ ರೂ., ಲಘು ವಾಣಿಜ್ಯ ವಾಹನಕ್ಕೆ ೨೦೦ ರೂ., ಬಸ್ ೩೦೦ ರೂ. ಜತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ. ಅರಣ್ಯ ಅತಿಥಿಗೃಹಗಳ ದರದಲ್ಲಿ ಪರಿಷ್ಕರಣೆ ಮಾಡಿಲ್ಲ.
” ಈ ಹಿಂದೆ ಎರಡು ಗಂಟೆಗಳ ಕಾಲ ಮಾತ್ರ ಸಫಾರಿಯಲ್ಲಿ ಪ್ರವಾಸಿಗರಿಗೆ ಅವಕಾಶ ಇತ್ತು. ಆದರೆ ಇನ್ನು ಮುಂದೆ ಮೂರು ಗಂಟೆಗಳ ಕಾಲ ಸಫಾರಿ ಮಾಡಬಹುದಾಗಿದೆ. ಇಂಧನ ದರ ಹೆಚ್ಚಾಗಿರುವುದರಿಂದ ಪ್ರವಾಸಿಗರ ಟಿಕೆಟ್ ದರವನ್ನೂ ಹೆಚ್ಚಿಸಲಾಗಿದೆ.”
-ಲಕ್ಷ್ಮೀಕಾಂತ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
” ಸಫಾರಿ ಶ್ರೀಮಂತರಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಸಫಾರಿಗೆ ಇಷ್ಟು ದರ ಹೆಚ್ಚಿಸಿದರೆ ಜನಸಾಮಾನ್ಯರು ಹೋಗಲು ಹೇಗೆ ಸಾಧ್ಯ? ಆದ್ದರಿಂದ ದರ ಪರಿಷ್ಕರಣೆ ಕುರಿತು ಅರಣ್ಯ ಇಲಾಖೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು.”
-ಶಶಿಕುಮಾರ್ ಬೆಂಗಳೂರು , ವನ್ಯಪ್ರೇಮಿ




