Mysore
25
broken clouds

Social Media

ಶುಕ್ರವಾರ, 24 ಜುಲೈ 2026
Light
Dark

ಮಡಿಕೇರಿಯಲ್ಲಿ ಬಳಂಜಿಗಿಲ್ಲ ಬೇಡಿಕೆ

ಪುನೀತ್

ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆಯಿಂದ ಬೇಡಿಕೆ ಕುಸಿತ; ಕುಲಕಸುಬಿಗೆ ಹೊಡೆತ 

ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯ ವಾತಾವರಣ ಇಲ್ಲದ ಕಾರಣ ನಗರದಲ್ಲಿ ಬಟ್ಟೆ ಒಣಹಾಕಲು ಉಪಯೋಗಿಸುವ ಬಳಂಜಿ ಖರೀದಿಗೆ ಜನ ಸಾಮಾನ್ಯರು ಹಿಂದೇಟು ಹಾಕುತ್ತಿದ್ದಾರೆ.

ಮಡಿಕೇರಿಯಲ್ಲಿ ಉತ್ತಮ ಮಳೆಯೊಂದಿಗೆ ಮೈಕೊರೆಯುವ ಚಳಿಯ ವಾತಾವರಣ ಇದ್ದಾಗ ಬಟ್ಟೆ ಒಣಗಿಸಲು ಜನರು ಬಳಂಜಿಯನ್ನು ಬಳಸುತ್ತಾರೆ. ಆದರೆ ನಗರದಲ್ಲಿ ಈ ವರ್ಷ ಬಳಂಜಿಗೆ ಬೇಡಿಕೆ ಕಡಿಮೆಯಾಗಿದ್ದು, ಪ್ರತಿ ಶುಕ್ರವಾರ ಮಾತ್ರ ಮಾರಾಟ ಮಾಡಲು ಮಡಿಕೇರಿ ನಗರಕ್ಕೆ ಬರುತ್ತೇವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಬಿದಿರು ಸಿಗದೆ ಪರದಾಟ: ಕೊರಗ ಮತ್ತು ಮೇದ ಜನಾಂಗದವರು ಕುಶಾಲನಗರದ ಸಮೀಪ ಕೊಪ್ಪದಲ್ಲಿ ಬಿದಿರಿನಿಂದ ಬುಟ್ಟಿ ಮೊದಲಾದ ವಸ್ತುಗಳನ್ನು ತಯಾರಿಸಿ ಬದುಕು ನಡೆಸುತ್ತಿದ್ದಾರೆ. ಬಿದಿರು ಬುಟ್ಟಿ ಮೊದಲಾದ ವಸ್ತುಗಳನ್ನು ತಯಾರಿಸಲು ಅಗತ್ಯವಾಗಿರುವ ಬಿದಿರನ್ನು ಕಾಡು, ಮೇಡು ಅಲೆದು ಸಂಗ್ರಹಿಸುತ್ತಾರೆ. ಆದರೆ ಅಗತ್ಯವಿರುವಷ್ಟು ಬಿದಿರು ಸಿಗದೇ ಪರದಾಡುತ್ತಿದ್ದಾರೆ.

ಗುಡಿ ಕೈಗಾರಿಕೆಗೆ ಮಾರಕವಾದ ಪ್ಲಾಸ್ಟಿಕ್:  ಇಂದಿನ ತಾಂತ್ರಿಕ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿದ್ದು, ಬಿದಿರಿನ ಬಳಕೆ ಕಡಿಮೆಯಾಗಿದೆ. ಬಿದಿರಿನ ವಸ್ತುಗಳ ಜಾಗಕ್ಕೆ ಪ್ಲಾಸ್ಟಿಕ್‌ನ ಕೇರುವ ಮೊರ, ಬುಟ್ಟಿ, ಕುಕ್ಕೆ, ಮಂಕರಿ ಬಂದಿವೆ. ಆರೋಗ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಬಳಕೆ ಹಾನಿಕರ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಾದರೆ ಬಿದಿರಿನ ವಸ್ತುಗಳ ಬಳಕೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕಿದೆ. ಅಲ್ಲದೆ ಗುಡಿ ಕೈಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಮೇದ ಜನಾಂಗದ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಸರ್ಕಾರ ಪ್ರೋತ್ಸಾಹ ನೀಡಬೇಕಾಗಿದೆ.

ಬಳಂಜಿಗೆ ೪೫೦-೭೦೦ರೂ. ಬೆಲೆ:  ಮಡಿಕೇರಿಯಲ್ಲಿ ಮಾರಾಟ ಮಾಡಲಾಗುತ್ತಿರುವ ದೊಡ್ಡ ಗಾತ್ರದ ಬಳಂಜಿಗೆ ೭೦೦-೮೦೦ ರೂ., ಸಣ್ಣ ಗಾತ್ರದ ಬಳಂಜಿಗೆ ೫೦೦-೬೦೦ ರೂ. ಬೆಲೆಯಿದೆ. ನಗರದ ಮಂಗೇರಿರ ಮುತ್ತಣ್ಣ ವೃತ್ತದ ಸಮೀಪ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಮನೆಮನೆಗೆ ತೆರಳಿ ವ್ಯಾಪಾರ ನಡೆಸಲು ಮುಂದಾದರೂ ಬೇಡಿಕೆಯಿಲ್ಲ ಎಂದು ವ್ಯಾಪಾರಿ ಕೃಷ್ಣರವರು ಬೇಸರ ವ್ಯಕ್ತಪಡಿಸುತ್ತಾರೆ.

” ಜಿಲ್ಲೆಯಲ್ಲಿ ಮಳೆ ಸರಿಯಾಗಿ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಬಳಂಜಿಗೆ ಬೇಡಿಕೆ ಕಡಿಮೆಯಾಗಿದೆ. ಇನ್ನು ಮೂರು ತಿಂಗಳಲ್ಲಿ ಮಳೆಗಾಲವು ಮುಗಿಯಲಿದ್ದು, ಜನರು ಬಳಂಜಿಯನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಧಾರಾಕಾರ ಮಳೆಯಾದರೆ ಮಾತ್ರ ಬಳಂಜಿಗೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ. ಜತೆಗೆ ವಾಶಿಂಗ್ ಮೆಷಿನ್, ಹೀಟರ್ ಬಳಕೆ ನಮ್ಮ ಜೀವನಕ್ಕೆ ಪೆಟ್ಟು ನೀಡಿದೆ.”

-ಕೃಷ್ಣ, ಬಳಂಜಿ ವ್ಯಾಪಾರಿ

 

 

Tags:
error: Content is protected !!