ಶುಭಾ ಖಟಾವಕರ ಮ್ಹೆತ್ರಸ್
ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ಅಟಾರ್ನಿ ಜನರಲ್ ಹೇಳಿಕೆ!
೨೦೨೩ರ ನಂತರ ತಯಾರಾದ ವಾಹನಗಳಿಗೆ ಮಾತ್ರ ಇ-೨೦ ಬಳಕೆ ಸಾಮರ್ಥ್ಯ
ವಾಹನಗಳಿಗೆ ವ್ಯಾಪಕ ಹಾನಿ; ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಆಕ್ರೋಶ
ಇ-೨೦ ವರದಿ ಬಹಿರಂಗಪಡಿಸದ ಕೇಂದ್ರ ಸರ್ಕಾರದ ನಿಗೂಢತೆ ಏನು?
ಇ-೨೦ ಇಂಧನ ಲೋಪದ ಬಗ್ಗೆ ವಿಪಕ್ಷಗಳ ಮೌನವೇಕೆ?
ಇಂಧನ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಥೆನಾಲ್ -೨೦ (ಇ-೨೦) ಮಿಶ್ರಣ ನೀತಿಯು ದೇಶದ ಮೇಲೆ ನಡೆಯುತ್ತಿರುವ ಪ್ರಯೋಗವಾಗಿದೆ… ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಸ್ವತಃ ನೀಡಿರುವ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇ-೨೦ ಎಥೆನಾಲ್ ಮಿಶ್ರಣ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಲಾಪದ ಸಂದರ್ಭದಲ್ಲಿ, ಸರ್ಕಾರದ ಪರ ವಾದಿಸಿದ್ದ ಅಟಾರ್ನಿ ಜನರಲ್, ‘ಇ-೨೦ ಯೋಜನೆಯು ಒಂದು ಪ್ರಯೋಗ’ವಾಗಿದೆ, ಅದರ ಫಲಿತಾಂಶಗಳು ಮುಂದಿನ ವರ್ಷದೊಳಗೆ ಹೆಚ್ಚು ಸ್ಪಷ್ಟವಾಗಲಿವೆ ಎಂದು ಹೇಳಿದ್ದರು. ಈ ಹೇಳಿಕೆ ಪತ್ರಿಕೆಗಳಲ್ಲಿ ವರದಿಯಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ತಮ್ಮ ಹೇಳಿಕೆಯನ್ನು ಅಟಾರ್ನಿ ಜನರಲ್ ಬದಲಿಸಿಬಿಟ್ಟರು. ಅಟಾರ್ನಿ ಜನರಲ್ ಅವರ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಕೇಂದ್ರ ಇಂಧನ ಸಚಿವಾಲಯ ಪ್ರತಿಪಾದಿಸಿದೆ. ಆದರೆ, ವಿಡಿಯೋ ಸುಳ್ಳು ಎಂದು ಎಲ್ಲಿಯೂ ಸ್ಪಷ್ಟೀಕರಣ ನೀಡಿಲ್ಲ.
ಸರ್ಕಾರಕ್ಕೆ ಮಾತ್ರ ತಿಳಿದಿರುವ ಅಧ್ಯಯನದ ಪ್ರಕಾರ, ಇ-೨೦ ಇಂಧನವು ವಾಹನಗಳಿಗೆ ಸುರಕ್ಷಿತವಾಗಿದೆ. ಈ ವರದಿಯಲ್ಲೇನಿದೆ ಎಂಬುದನ್ನು ಇದುವರೆಗೂ ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ. ವರದಿಯನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ಏಕೆ ಮೀನ ಮೇಷ ಎಣಿಸುತ್ತಿದೆ? ದೇಶದೆಲ್ಲೆಡೆ ಇ-೨೦ ಇಂಧನ ಬಳಕೆಯಿಂದ ಅನೇಕ ವಾಹನಗಳ ಇಂಜಿನ್ ಸ್ಥಗಿತಗೊಂಡಿವೆ. ಇಂಧನದ ದಕ್ಷತೆ ಕ್ಷೀಣಿಸಿದೆ. ಮೈಲೇಜ್ ಕೂಡ ಕಡಿಮೆಯಾಗಿವೆ ಎಂಬ ಆರೋಪವುಳ್ಳ ವರದಿಗಳು ಬರುತ್ತಿವೆ. ಇದು ನಿಜವಾದಲ್ಲಿ ದೇಶದಲ್ಲಿ ಪ್ರಸ್ತುತ ಇರುವ ೩೨೦ ಮಿಲಿಯನ್ ಪೆಟ್ರೋಲ್ ಇಂಜಿನ್‌ಗಳಿಗೆ ಸುರಕ್ಷತೆ ಇಲ್ಲದಂತಾಗುತ್ತದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಸೇರಿದಂತೆ ಸರ್ಕಾರದ ಪ್ರತಿನಿಧಿಗಳು, ಇ- ೨೦ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇ-೨೦ ಇಂಧನವನ್ನು ಹಲವು ವರ್ಷಗಳ ಪರೀಕ್ಷೆಗಳ ಆಧಾರದ ಮೇಲೆ ಜಾರಿಗೆ ತರಲಾಗಿದೆ ಮತ್ತು ಇ-೨೦ ಇಂಧನದಿಂದ ವಾಹನಗಳಿಗೆ ವ್ಯಾಪಕ ಹಾನಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಅವರು ಹೇಳಿದ್ದಾರೆ. (ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಈ ಸಂಬಂಧ ಹೊರ ಹಾಕುತ್ತಿರುವ ಆಕ್ರೋಶ ಕೇಂದ್ರ ಸರ್ಕಾರಕ್ಕೆ ಸಾಕ್ಷ್ಯವಲ್ಲವೆ?)
ಇ-೨೦ ಇಂಧನವು ವಾಹನಗಳಿಗೆ ಹಾನಿಯನ್ನು ಉಂಟುಮಾಡುತ್ತದೆ ಎಂಬ ಆರೋಪಗಳನ್ನು ತಳ್ಳಿಹಾಕಲು ಸರ್ಕಾರ ಮತ್ತು ವಾಹನ ತಯಾರಕ ಕಂಪೆನಿಗಳು ೨೦೨೧ರಲ್ಲಿ ಭಾರತದ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ (ಎಆರ್‌ಎಐ) ಸಿದ್ಧಪಡಿಸಿದ ವರದಿಯನ್ನು ಪದೇ ಪದೇ ಉಲ್ಲೇಖಿಸುತ್ತಿವೆ. ಆ ವರದಿಯ ಪ್ರಕಾರ, ವಾಹನಗಳ ಬಿಡಿಭಾಗಗಳಿಗೆ ಗಮನಾರ್ಹ ಹಾನಿ ಅಥವಾ ತುಕ್ಕು ಉಂಟಾಗುವುದಿಲ್ಲ. ಆದರೆ, ಇಂಧನ ವ್ಯವಸ್ಥೆಯಲ್ಲಿರುವ ರಬ್ಬರ್ ಭಾಗಗಳನ್ನು ಮಾತ್ರ ಬದಲಾಯಿಸುವ ಅಗತ್ಯ ಉಂಟಾಗಬಹುದು ಎಂದು ಅದರಲ್ಲಿ ಹೇಳಲಾಗಿದೆ.
ಈ ಅಧ್ಯಯನದ ವರದಿಯನ್ನು ಪರಿಶೀಲಿಸಲು ಕೆಲ ವಾಹನ ಸವಾರರು ಮತ್ತು ಹೋರಾಟಗಾರರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಿದಾಗ, ಎಆರ್‌ಎಐ ಅದನ್ನು ಬಹಿರಂಗಪಡಿಸಲು ನಿರಾಕರಿಸಿತು. ಅಧ್ಯಯನವು ಗೌಪ್ಯವಾಗಿದ್ದು, ಕಾನೂನಿನ ಪ್ರಕಾರ ಸಾರ್ವಜನಿಕ ಪರಿಶೀಲನೆಯಿಂದ ವಿನಾಯಿತಿ ಪಡೆದಿದೆ ಎಂದು ಅದು ಕಾರಣ ನೀಡಿತು! ವಾಹನ ಮಾಲೀಕರ ಆಕ್ರೋಶ: ಏಪ್ರಿಲ್ ೧, ೨೦೨೬ ರಿಂದ ಎಲ್ಲ ವಾಹನಗಳಲ್ಲಿ ಕಡ್ಡಾಯವಾಗಿ ಎಥೆನಾಲ್ ಮಿಶ್ರಿತ ಇ-೨೦ ಪೆಟ್ರೋಲ್‌ನ್ನು ತುಂಬಿಸಲಾಗುತ್ತಿದೆ. ಈಗ ಶೇ.೧೦೦ರಷ್ಟು ಶುದ್ಧ ಪೆಟ್ರೋಲ್ ಅಥವಾ ೨೦೨೬ರ ಏಪ್ರಿಲ್‌ವರೆಗೆ ಸಾಮಾನ್ಯವಾಗಿ ಬಳಕೆಯಲ್ಲಿದ್ದ ಇ-೧೦ ಇಂಧನವನ್ನು ಖರೀದಿಸುವ ಆಯ್ಕೆಯೇ ಇಲ್ಲ. ೨೦೨೩ರ ಏಪ್ರಿಲ್ ನಂತರ ಮಾರಾಟವಾದ ವಾಹನಗಳು ಮಾತ್ರ ಇ-೨೦ ಇಂಧನಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ. ಇದರ ಪರಿಣಾಮವಾಗಿ, ೨೦೨೩ಕ್ಕೂ ಮುನ್ನ ಹೊಸ ಕಾರು ಅಥವಾ ದ್ವಿಚಕ್ರ ವಾಹನ ಖರೀದಿಸಿದವರು ಈಗ ಪರ್ಯಾಯವಿಲ್ಲದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.
೧೦% ಕ್ಕಿಂತ ಹೆಚ್ಚು ಎಥೆನಾಲ್ ಹೊಂದಿರುವ ಇಂಧನ ಮಿಶ್ರಣಗಳು ಇಂಧನ ಟ್ಯಾಂಕ್‌ಗಳು ಮತ್ತು ಇಂಧನ ಮಾರ್ಗಗಳಲ್ಲಿ ತುಕ್ಕು ಹಿಡಿಯಲು ಕಾರಣವಾಗುತ್ತವೆ ಮತ್ತು ಇಂಜಿನ್ ಸೀಲ್‌ಗಳನ್ನು ಹಾನಿಗೊಳಿಸುತ್ತವೆ. ನಿರ್ವಹಣಾ ವೆಚ್ಚಗಳು ಹೆಚ್ಚಾಗುತ್ತವೆ. ಇಂಧನದ ಕಾರ್ಯನಿರ್ವಹಣಾ ಅವಧಿಯೂ ಕಡಿಮೆಯಾಗುತ್ತದೆ. ಇ-೨೦ ಇಂಧನ ಬಳಕೆಯಿಂದ ಪರಿಸರ ಸಂರಕ್ಷಣೆ ಆಗುತ್ತದೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ, ೨೦೨೪ರ ಅಧ್ಯಯನವೊಂದರ ವರದಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ನಮಗೆ ಅಗತ್ಯವಾದ ಪ್ರಮಾಣದ ಎಥೆನಾಲ್ ಉತ್ಪಾದಿಸಲು ೧೦ ಬಿಲಿಯನ್ ಲೀಟರ್ ನೀರನ್ನು ಬಳಸ ಬೇಕಾಗುತ್ತದೆ! ಅಲ್ಲದೆ, ಮೈಲೇಜ್ ಕಡಿಮೆಯಾದಲ್ಲಿ ವಾಹನ ಮಾಲೀಕರು ಹೆಚ್ಚು ಇಂಧನ ಬಳಕೆ ಮಾಡಬೇಕಾಗುತ್ತದೆ. ಹಾಗಾದರೆ ಇ-೨೦ ಇಂಧನ ಬಳಕೆಯಿಂದ ಪರಿಸರ ಸಂರಕ್ಷಣೆ ಆಗುತ್ತದೆ ಎಂಬುದನ್ನು ನಂಬುವುದಾದರೂ ಹೇಗೆ?!
ಎಥೆನಾಲ್‌ಗೆ ತೇವಾಂಶ (ಹೈಗ್ರೋಸ್ಕೋಪಿಕ್)ವನ್ನು ಹೀರಿಕೊಳ್ಳುವ ಗುಣ ಇದೆ. ಎಥೆನಾಲ್(ಇ- ೨೦)ಗೆ ಯಾವ ತೇವಾಂಶ (ಅಥವಾ ನೀರು)ವೂ ತಾಗದಂತೆ ರವಾನಿಸಬೇಕು ಹಾಗೂ ಪೆಟ್ರೋಲ್ ಪಂಪ್‌ಗಳಲ್ಲಿ ವಿತರಿಸಬೇಕು. ಹಾಗೆ ಮಾಡದಿದ್ದರೆ ಹಂತ ಬೇರ್ಪಡಿಕೆ ಸಂಭವಿಸುತ್ತದೆ. ಹಂತ ಬೇರ್ಪಡಿಕೆ ಎಂದರೆ ಪೆಟ್ರೋಲ್, ಎಥೆನಾಲ್ ಹಾಗೂ ಅದು ಹೀರಿ ಕೊಂಡಿರುವ ನೀರಿನ ಅಂಶ ಪ್ರತ್ಯೇಕವಾಗುತ್ತದೆ.
ಇದರಿಂದ ವಾಹನಕ್ಕೆ ಹಾನಿಯಾಗುತ್ತದೆ. ಈ ಕಾರಣಗಳಿಂದಲೇ ಭೂತಾನ್, ತಮ್ಮಲ್ಲಿ ಸಾಗಾಣಿಕೆ ಮತ್ತು ವಿತರಣೆ ಕೇಂದ್ರಗಳು ಇದಕ್ಕೆ ಸೂಕ್ತವಾಗಿಲ್ಲವೆಂದು ಇ-೨೦ ಇಂಧನವನ್ನು ಸ್ವೀಕರಿಸಲು ನಿರಾಕರಿಸಿತು. ಏಕೆಂದರೆ ಇಥೆನಾಲ್ ರವಾನೆ ವ್ಯವಸ್ಥೆ ಹಾಗೂ ಸಾಗಾಣಿಕೆ ವ್ಯವಸ್ಥೆ ಯಾವುದೇ ತೇವಾಂಶ ಒಳ ಹೋಗದಂತೆ ಇರಬೇಕು.ಇ-೨೦ ಇಂಧನಕ್ಕೆ ಹೊಂದಿಕೆಯಾಗುವಂತೆ ವಾಹನಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಬೇಕಾಗಿದ್ದರೆ, ಅದೇ ಇಂಧನವು ಇ-೧೦ ಹೊಂದಾಣಿಕೆಯ ವಾಹನಗಳಿಗೂ ಸುರಕ್ಷಿತವಾಗಿದೆ ಎಂದು ಹೇಗೆ ಹೇಳಲಾಗುತ್ತಿದೆ? ಬಹಳಷ್ಟುಪೆಟ್ರೋಲ್ ಬಂಕ್‌ಗಳಲ್ಲಿ ಇ-೨೦ ಇಂಧನವನ್ನು ತುಂಬಿಸಲಾಗುತ್ತಿದೆಯೆಂಬ ಸೂಚನೆಯೂ ಇಲ್ಲ.
ರಾಜಕೀಯ ಹಸ್ತಕ್ಷೇಪ: ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರರಾದ ನಿಖಿಲ್ ಗಡ್ಕರಿ ಮತ್ತು ಸಾರಂಗ್ ಗಡ್ಕರಿ ಅವರಿಗೆ ಈ ಎಥೆನಾಲ್ ಯೋಜನೆಯಿಂದ ಲಾಭವಾಗುತ್ತಿದೆ ಎಂಬ ಮಾತುಗಳಿವೆ. ವರದಿಗಳ ಪ್ರಕಾರ, ನಿಖಿಲ್ ಗಡ್ಕರಿ ಅವರು ಸಿಯಾನ್ ಆಗ್ರೋ ಇಂಡಸ್ಟ್ರೀಸ್ ಆಂಡ್ ಇನ್ರಾಸ್ಟ್ರಕ್ಚರ್ ಲಿಮಿಟೆಡ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಹಾಗೆಯೇ, ಸಾರಂಗ್ ಗಡ್ಕರಿಯವರೂ ಎಥೆನಾಲ್ ಮತ್ತು ಜೈವಿಕ ಇಂಧನ ಕ್ಷೇತ್ರದಲ್ಲಿ ತೊಡಗಿರುವ ಕುಟುಂಬದ ಕೃಷಿ- ಉದ್ಯಮ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಾಗಿದೆ. ೨೦೨೪ರಿಂದ ಇಲ್ಲಿಯವರೆಗೆ ವಾರ್ಷಿಕವಾಗಿ ಸಿಯಾನ್ ಆಗ್ರೊ ಇಂಡಸ್ಟ್ರೀಸ್‌ನ ಆದಾಯವು ಶೇ.೪೫೦ಕ್ಕೂ ಹೆಚ್ಚಿನ ದರದಲ್ಲಿ ಹೆಚ್ಚುತ್ತಿರುವುದು ಕಂಡು ಬಂದಿದೆ. ತಮಗೆ ಸಂಬಂಽಸದ ಇಲಾಖೆಯ ವಿಷಯದಲ್ಲಿ ನಿತಿನ್ ಗಡ್ಕರಿಯವರು ವಿಶೇಷ ಮುತುವರ್ಜಿ ವಹಿಸಿದ್ದುದು ಈ ಊಹಾಪೋಹಗಳಿಗೆ ಕಾರಣವಾಗಿದೆ.
ವಿರೋಧಪಕ್ಷಗಳ ಮೌನ?: ಕೇಂದ್ರ ಸರ್ಕಾರದ ಇ-೨೦ ನೀತಿ ಕುರಿತು ಯಾವುದೇ ವಿರೋಧ ಪಕ್ಷಗಳ ನಾಯಕರು ಕೂಡ ತಮ್ಮ ಧ್ವನಿ ಎತ್ತದಿರುವುದು ವಿಪರ್ಯಾಸ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ನಾಯಕರು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿರುವುದು ಕಾರಣವೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿಬಂದಿದೆ. ಎಥೆನಾಲ್ ಉತ್ಪಾದಿಸಲು ಮೊಲಾಸಸ್ ಅಗತ್ಯವಿದೆ. ಸಕ್ಕರೆ ಕಾರ್ಖಾನೆಗಳು ಇದನ್ನು ಮಾರಾಟ ಮಾಡುವ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸುತ್ತಿವೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬಹುತೇಕ ಎಲ್ಲ ಸಕ್ಕರೆ ಕಾರ್ಖಾನೆಗಳೂ ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರು ಕುಟುಂಬದ ಒಡೆತನದಲ್ಲಿವೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲವೇ?
ಆಲ್ಕೋಹಾಲ್ ಆಧಾರಿತ ಇಂಧನ:
ಎಥೆನಾಲ್ ಮಿಶ್ರಣ ಎಂದರೆ ಸಸ್ಯಗಳಿಂದ ತಯಾರಿಸಲಾದ ಆಲ್ಕೋಹಾಲ್ ಆಧಾರಿತ ಇಂಧನ. ಅದನ್ನು ಪೆಟ್ರೋಲ್‌ಗೆ ಬೆರೆಸಲಾಗುವುದು. ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಲೀಟರ್ ಪೆಟ್ರೋಲ್‌ನಲ್ಲಿ ಶೇ.೨೦ರಷ್ಟು ಎಥೆನಾಲ್ ಮತ್ತು ಉಳಿದ ಶೇ.೮೦ರಷ್ಟು ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಆಧಾರಿತ ಪೆಟ್ರೋಲ್ ಇರಬೇಕು ಎಂಬ ಗುರಿಯನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ಇ-೨೦ ಎಂದು ಕರೆಯಲಾಗುತ್ತದೆ.
ಪರಿಸರದ ಮೇಲಾಗುವ ಪರಿಣಾಮಗಳು: ಎಥೆನಾಲ್ ಅನ್ನು ವಿವಿಧ ವಿಧಾನಗಳಿಂದ ತಯಾರಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಸಾಮಾನ್ಯವಾದ ವಿಧಾನವೆಂದರೆ ಸಕ್ಕರೆಯನ್ನು ಹುದುಗಿಸುವ ಕೈಗಾರಿಕಾ ವಿಧಾನವಾಗಿದೆ. ಇದನ್ನು ಮುಸುಕಿನ ಜೋಳದಿಂದಲೂ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲದೆ ಸರ್ಕಾರದಿಂದ ಎಥೆನಾಲ್ ಉತ್ಪಾದನೆಗೆ ಅನುಮೋದಿಸಲಾದ ಹೆಚ್ಚುವರಿ ಅಕ್ಕಿ ಮತ್ತು ಇತರ ಆಹಾರ ಧಾನ್ಯ ಗಳಿಂದಲೂ ಎಥೆನಾಲ್‌ನ್ನು ಉತ್ಪಾದಿಸಲಾಗುತ್ತದೆ. ಕಬ್ಬಿನಿಂದ ಒಂದು ಲೀಟರ್ ಎಥೆನಾಲ್‌ನ್ನು ತಯಾರಿಸಲು ಸುಮಾರು ೧,೫೦೦- ೩,೦೦೦ ಲೀಟರ್ ನೀರು ಬೇಕಾದರೆ ಮೆಕ್ಕೆಜೋಳದಿಂದ ತಯಾರಿಸಲು ಸುಮಾರು ೧,೨೦೦- ೨,೫೦೦ ಲೀಟರ್ ನೀರು ಬೇಕಾಗುತ್ತದೆ. ಈ ಬೆಳೆಗಳನ್ನು ಆಹಾರ, ಪಶು ಆಹಾರವಾಗಿ ಬಳಸುವ ಬದಲು ಎಥೆನಾಲ್ ಉತ್ಪಾದನೆಗೆ ತಿರುಗಿಸಿದಾಗ ಆಹಾರ ಮಾರುಕಟ್ಟೆಗೆ ಲಭ್ಯವಾಗುವ ಬೆಳೆಗಳ ಪ್ರಮಾಣ ಕಡಿಮೆಯಾಗುತ್ತದೆ. ಬೇಡಿಕೆ ಅದೇ ಮಟ್ಟದಲ್ಲಿದ್ದರೆ, ಪೂರೈಕೆ ಕಡಿಮೆಯಾಗುವುದರಿಂದ ಬೆಲೆಗಳ ಮೇಲೆ ಏರಿಕೆಯ ಒತ್ತಡ ಉಂಟಾಗಬಹುದು.
ಬ್ರೆಜಿಲ್ ಮಾದರಿ: ಬ್ರೆಜಿಲ್ ದೇಶದಲ್ಲಿ ಎಥೆನಾಲ್ ಮಿಶ್ರಣ ವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಭಾರತಕ್ಕೆ ಹೋಲಿಸಿದರೆ ಬ್ರೆಜಿಲ್ ವಿಶ್ವದ ಮತ್ತೊಂದು ಪ್ರಮುಖ ಎಥೆನಾಲ್ ಉತ್ಪಾದಕ ರಾಷ್ಟ್ರವಾಗಿದೆ. ಆದರೆ ಅಲ್ಲಿನ ಎಥೆನಾಲ್ ಕಾರ್ಯಕ್ರಮವು ಬಹುತೇಕ ಸಂಪೂರ್ಣವಾಗಿ ಕಬ್ಬಿನ ಮೇಲೆ ಅವಲಂಬಿತವಾಗಿದೆ; ಬ್ರೆಜಿಲ್‌ನಲ್ಲಿ ಕಬ್ಬು, ಭಾರತದಲ್ಲಿ ಅಕ್ಕಿ ಮತ್ತು ಮೆಕ್ಕೆಜೋಳದಂತೆ ಜನರ ದೈನಂದಿನ ಆಹಾರದ ಅವಿಭಾಜ್ಯ ಭಾಗವಲ್ಲ.
ಇಂಧನದ ಆಯ್ಕೆಗೆ ಅವಕಾಶ ಇಲ್ಲ: ಅಮೆರಿಕ ಮತ್ತು ಜಪಾನ್‌ನಂತಹ ಮುಂದುವರಿದ ರಾಷ್ಟ್ರಗಳಲ್ಲಿ ಕೇವಲ ಶೇ.೫ ಮತ್ತು ಶೇ.೧೦ರಷ್ಟು ಎಥೆನಾಲ್ ಮಿಶ್ರಿತ ಇಂಧನದ ಬಳಕೆ ಮಾಡುತ್ತಿದ್ದಾರೆ. ಅಲ್ಲಿ ಶೇ.೧೦೦ ಶುದ್ಧ ಪೆಟ್ರೋಲ್‌ನ ಆಯ್ಕೆಯೂ ಇದೆ. ಶೇ.೧೫ ಎಥೆನಾಲ್ ಮಿಶ್ರಿತ ಇಂಧನ ಐಚ್ಛಿಕವಾಗಿದೆ. ಈ ವಿಷಯದಲ್ಲಿ ಭಾರತದಲ್ಲಿ ಗೊಂದಲಮಯ ಪರಿಸ್ಥಿತಿ ಇದೆ. ಸರ್ಕಾರ ಜನರ ಮೇಲೆ ತನ್ನ ನಿರ್ಧಾರವನ್ನು ಒತ್ತಾಯಪೂರ್ವಕವಾಗಿ ಹೇರಲು ಹೊರಟಂತಿದೆ.
* ಅಧ್ಯಯನವೊಂದರ ವರದಿ ಪ್ರಕಾರ ಪ್ರತಿವರ್ಷ ಎಥೆನಾಲ್ ಉತ್ಪಾದನೆಗೆ ೧೦ ಬಿಲಿಯನ್ ನೀರು ಅಗತ್ಯ
* ಇ-೨೦ ಇಂಧನ ಲೋಪಗಳ ವಿರುದ್ಧ ದೇಶಾದ್ಯಂತ ಸಾಮಾಜಿಕ ಜಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶ
* ಇ-೨೦ ಇಂಧನಕ್ಕೆ ತೇವಾಂಶ (ಅಥವಾ ನೀರು) ತಾಗಿದರೆ ಪೆಟ್ರೋಲ್, ಎಥೆನಾಲ್ ಹಾಗೂ ಅದು ಹೀರಿಕೊಂಡಿರುವ ನೀರಿನ ಅಂಶ ಪ್ರತ್ಯೇಕವಾಗಿ ಬಿಡುತ್ತವೆ
* ಅಮೆರಿಕ, ಜಪಾನ್ ದೇಶಗಳಲ್ಲಿ ಕೇವಲ ಶೇ.೫ ಮತ್ತು ಶೇ.೧೦ರಷ್ಟು ಮಾತ್ರ ಎಥೆನಾಲ್ ಬಳಕೆ; ಶೇ.೧೫ ಐಚ್ಛಿಕ
* ಬ್ರೆಜಿಲ್ ದೇಶದಲ್ಲಿ ಎಥೆನಾಲ್ ಉತ್ಪಾದನೆ ಸಂಪೂರ್ಣ ಕಬ್ಬಿನ ಮೇಲೆ ಅವಲಂಬ





