Mysore
21
overcast clouds

Social Media

ಬುಧವಾರ, 22 ಜುಲೈ 2026
Light
Dark

ಮೈದುಂಬಿದ ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ  

ನವೀನ್ ಡಿಸೋಜ

ಜೀವದೊಂದಿಗೆ ಚೆಲ್ಲಾಟ; ಸೂಕ್ತ ಕ್ರಮಕ್ಕೆ ಸ್ಥಳೀಯ ನಿವಾಸಿಗಳ ಒತ್ತಾಯ

ಮಡಿಕೇರಿ: ಮಳೆಯಿಂದ ಮೈದುಂಬಿರುವ ಕೊಡಗು ಜಿಲ್ಲೆಯ ಜಲಪಾತಗಳಲ್ಲಿ ಪ್ರವಾಸಿಗರ ಅಪಾಯಕಾರಿ ವರ್ತನೆ ಆತಂಕಕ್ಕೆ ಕಾರಣವಾಗಿದೆ. ಜಲಪಾತ, ನದಿಗಳಿಗೆ ಇಳಿಯುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದ್ದರೂ ಆದೇಶ ಪಾಲನೆಯಾಗುತ್ತಿಲ್ಲ.

೨೦೨೬-೨೭ನೇ ಸಾಲಿನ ಮುಂಗಾರು ಮಳೆಯ ಸಂದರ್ಭ ಸಂಭವಿಸಬಹುದಾದ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲೆಯಾದ್ಯಂತ ಇರುವ ಜಲಪಾತಗಳು, ನದಿಗಳು, ಜಲಾಶಯಗಳು ಮತ್ತು ಇತರೆ ಜಲಪ್ರದೇಶಗಳಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಅನಧಿಕೃತ ಪ್ರವೇಶವನ್ನು ನಿರ್ಬಂಧಿಸಿ ಜು.೬ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

ಜಿಲ್ಲೆಯ ಎಲ್ಲಾ ಜಲಪಾತ, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಅಣೆಕಟ್ಟೆ ಮತ್ತು ಜಲಾಶಯದ ಪ್ರದೇಶಗಳಲ್ಲಿ ನೀರಿಗೆ ಇಳಿಯುವುದು, ಈಜುವುದು ಹಾಗೂ ಸಾಹಸ ಚಟುವಟಿಕೆ ನಡೆಸುವುದನ್ನು ನಿಷೇಧಿಸಲಾಗಿದೆ. ಮುಂಗಾರು ಮಳೆಯಿಂದಾಗಿ ಜಿಲ್ಲೆಯ ಜಲ ಪ್ರದೇಶಗಳಲ್ಲಿ ನೀರಿನ ಮಟ್ಟ ಮತ್ತು ವೇಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆದೇಶ ಹೊರಡಿಸಿ ನಿಯಮ ಉಲ್ಲಂಸಿ ದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಆದರೂ ಜಿಲ್ಲೆಯ ಜಲಪಾತ, ನದಿಗಳಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ.

ಮಡಿಕೇರಿ ಸಮೀಪದ ಕೋಟೆ ಅಬ್ಬಿ ಜಲಪಾತ ಹಾಗೂ ಮೇಧುರ-ಸೂರ್ಲಬ್ಬಿ ಜಲಪಾತಗಳಲ್ಲಿ ಪ್ರವಾಸಿಗರು ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ಇಳಿದು ಈಜಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಮಳೆ ಹಿನ್ನೆಲೆಯಲ್ಲಿ ಜಲಪಾತಗಳಲ್ಲಿ ನೀರಿನ ಹರಿವು ತೀವ್ರಗೊಂಡಿದ್ದರೂ, ಯಾವುದೇ ಎಚ್ಚರಿಕೆ ವಹಿಸದೆ ಪ್ರವಾಸಿಗರು ಜಲಪಾತದ ಬುಡದಲ್ಲೇ ಇಳಿದು ಮೋಜು-ಮಸ್ತಿ ನಡೆಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಹಿಂದೆ ಇದೇ ಜಲಪಾತಗಳಲ್ಲಿ ಹಲವರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿದ್ದು, ಅಪಾಯದಲ್ಲಿ ಸಿಲುಕಿದ್ದ ಅನೇಕ ಮಂದಿಯನ್ನು ಸ್ಥಳೀಯ ಗ್ರಾಮಸ್ಥರು ಜೀವದ ಹಂಗು ತೊರೆದು ರಕ್ಷಿಸಿದ ಉದಾಹರಣೆಗಳೂ ಇವೆ. ಆದರೂ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಜೀವದೊಂದಿಗೆ ಚೆಲ್ಲಾಟ ನಡೆಸುತ್ತಿರುವ ಪ್ರವಾಸಿಗರ ನಡೆಗೆಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಜಲಪಾತಗಳ ಬಳಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಅಪಾಯಕಾರಿ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

” ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಜಲಪಾತ, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಅಣೆಕಟ್ಟೆ ಮತ್ತು ಜಲಾಶಯದ ಪ್ರದೇಶಗಳಲ್ಲಿ ನೀರಿಗೆ ಇಳಿಯುವುದು, ಈಜುವುದು ಹಾಗೂ ಸಾಹಸ ಚಟುವಟಿಕೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಸೆಕ್ಷನ್ ೫೧(ಬಿ) ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.”

? ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ

ಪ್ರವಾಸಿ ತಾಣಗಳಲ್ಲಿ ಹುಚ್ಚಾಟಗಳಿಂದ ಈಗಾಗಲೇ ಹಲವಾರು ಮಂದಿ ಪ್ರಾಣ ಕಳೆದುಕೊಂಡ ಉದಾಹರಣೆಗಳಿದ್ದರೂ ಪ್ರವಾಸಿಗರು ವಿಶೇಷವಾಗಿ ಯುವಕ, ಯುವತಿಯರು ಮೋಜು ಮಸ್ತಿಗಾಗಿ ತಮ್ಮ ಜೀವನವನ್ನು ಪಣಕ್ಕಿಟ್ಟು ನೀರಿಗಿಳಿಯುತ್ತಿರುವುದು ವಿಪರ್ಯಾಸ. ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಜಲಪಾತದ ಪ್ರಾಕೃತಿಕ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ನೀರಿನ ಆಳ, ಎತ್ತರ ತಿಳಿಯದೆ ಹುಚ್ಚಾಟದಿಂದ ಮೈ ಮರೆಯುತ್ತಿದ್ದಾರೆ. ಇತ್ತೀಚೆಗೆ ಮಲ್ಲಳ್ಳಿ ಜಲಪಾತದಲ್ಲಿ ಯುವಕರಿಬ್ಬರನ್ನು ರಕ್ಷಣೆ ಮಾಡಲಾಗಿದೆ. ಹೀಗಿರುವಾಗ ಪ್ರವಾಸೋದ್ಯಮ ಇಲಾಖೆ, ಪೋಲೀಸ್ ಇಲಾಖೆ, ಜಿಲ್ಲಾಡಳಿತ ವಿಶೇಷ ಗಮನ ಹರಿಸಿ ಇಂತಹವರಿಗೆ ದಂಡ ವಿಧಿಸಿ ಮೊಕದ್ದಮೆ ದಾಖಲು ಮಾಡಬೇಕು ಮತ್ತು ಸೂಕ್ತ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಬೇಕು.”

ದೀಪಕ್ ಕನ್ನಡಿಗ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)

” ಈಜು ಗೊತ್ತಿದೆ ಎಂಬ ಮಾತ್ರಕ್ಕೆ ನೀರಿನಲ್ಲಿ ಸಾಹಸ ಪ್ರದರ್ಶನ ಮಾಡಬಾರದು. ನದಿ, ಕೆರೆ, ಜಲಪಾತಗಳ ಆಳ, ರಚನೆ, ಹರಿವು, ಆಯಾ ಪ್ರದೇಶದ ಮಣ್ಣು ವ್ಯತ್ಯಾಸದಿಂದ ಕೂಡಿರುತ್ತದೆ. ಕೆಸರಿನಲ್ಲಿ ಹೂತು ಹೋಗುವ, ತಲೆ-ದೇಹ ಬಂಡೆ, ಮರಕ್ಕೆ ಅಪ್ಪಳಿಸುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ದಿಢೀರ್ ಹೆಚ್ಚಾಗುವುದರಿಂದ ಈ ಬಗ್ಗೆ ಎಚ್ಚರವಹಿಸಬೇಕಿದೆ. ಈಜು ಬಾರದವರು ನೀರಿಗೆ ಇಳಿಯುವುದೇ ಅಪಾಯಕಾರಿ.”

ರವಿ ಮುತ್ತಪ್ಪ, ಈಜು ತಜ್ಞರು

 

 

Tags:
error: Content is protected !!