Mysore
31
few clouds

Social Media

ಬುಧವಾರ, 15 ಜುಲೈ 2026
Light
Dark

ಕೊಡಗು ವಿಶ್ವವಿದ್ಯಾಲಯ ಬಗೆಹರಿಯದ ಕೊರಗು!

ನವೀನ್ ಡಿಸೋಜ

ಮಂಗಳೂರು ವಿವಿ ಅಧೀನದಲ್ಲಿದ್ದ ಕೊಡಗು ಈಗ ಪ್ರತ್ಯೇಕ ವಿವಿಯಾಗಿ ರೂಪುಗೊಂಡಿದೆ. ಆದರೆ, ಆಡಳಿತಾತ್ಮಕ ಹುದ್ದೆ ಭರ್ತಿಯಾಗದಿರುವುದು ಮತ್ತು ವರ್ಗಾವಣೆ ಪ್ರಕ್ರಿಯೆ ನಡೆಯದಿರುವುದರಿಂದ ಕೊಡಗು ವಿವಿಯ ಕೆಲ ಸಮಸ್ಯೆಗಳು ಮುಂದುವರಿದಿವೆ.

ಕೊಡಗು ವಿವಿ ಅಧಿನದಲ್ಲಿ ಒಂದು ಘಟಕ ಮಹಾ ವಿದ್ಯಾಲಯವಿದ್ದರೆ, ೨೩ ಸಂಯೋಜಿತ ಮಹಾವಿದ್ಯಾಲಯಗಳಿವೆ. ಕುಶಾಲನಗರ ಚಿಕ್ಕ ಆಳುವಾರದಲ್ಲಿ ಕ್ಯಾಂಪಸ್ ಇದ್ದು, ಸುಸಜ್ಜಿತ ಕಟ್ಟಡ, ಉತ್ತಮ ಗ್ರಂಥಾಲಯ ಕಲಿಕೆಗೆ ಪೂರಕ ವಾತಾವರಣ ಇದೆ. ಒಟ್ಟು ೧೦೮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದು, ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗುತ್ತಿದೆ. ರಾಜ್ಯ ಸರ್ಕಾರ ಕೊಡಗು ವಿವಿ ಘೋಷಿಸಿ ಭರವಸೆ ಹುಟ್ಟಿಸಿದೆಯೇ ಹೊರತು ಆಡಳಿತಾತ್ಮಕವಾಗಿ ಬೇಕಾದ ವ್ಯವಸ್ಥೆ ಕಲ್ಪಿಸಿಲ್ಲ. ಕೊಡಗು ವಿವಿ ಘೋಷಣೆಯಾಗಿ ೩ ವರ್ಷ ಕಳೆದಿದ್ದರೂ ಇಲ್ಲಿನ ಉಪನ್ಯಾಸಕರು ಇನ್ನೂ ಮಂಗಳೂರು ವಿವಿ ಅಧೀನದಲ್ಲೇ ಕಾರ್ಯ
ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದಿದ್ದರೂ ಉಪನ್ಯಾಸಕರು ಕಾರ್ಯನಿರ್ವಹಿಸುವಂತಾಗಿದೆ.

ಉದಾಹರಣೆಗೆ ಜ್ಞಾನ ಯೋಗ ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿಗಳು ಇಲ್ಲದಿದ್ದರೂ ಉಪನ್ಯಾಸಕರಿದ್ದಾರೆ. ವಿವಿ ವ್ಯಾಪ್ತಿಯ ಕೆಲ ಕಾಲೇಜುಗಳಲ್ಲಿ ಪ್ರಾಂಶುಪಾಲರ ಬದಲಾವಣೆ ಕೂಡ ಆಗಿಲ್ಲ. ಈ ವಿವಿಗೆ ಕುಲಪತಿಗಳ ನೇಮಕವಾಗಿದ್ದರೂ ಉಪನ್ಯಾಸಕರು ಮಂಗಳೂರು ವಿಶ್ವವಿದ್ಯಾನಿಲಯದ ಅಧಿನದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಕುಲಪತಿಗಳಿಗೆ ಉಪನ್ಯಾಸಕರ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಹೇಳಲಾಗಿದೆ. ಇನ್ನು ಅತಿಥಿ ಉಪನ್ಯಾಸಕರು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ೪೦ ಸಾವಿರ ರೂ. ವೇತನಕ್ಕೆ ಕಾರ್ಯ ನಿರ್ವಹಿಸಿದ್ದರೆ, ಈಗ ರೂ. ೩೨ ಸಾವಿರಕ್ಕೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇಂದಿಗೂ ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕ ಕ್ರಮದಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಕೊಡಗು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದ ಮರುಜೋಡಣೆ ಆಗದಿರುವುದು ಮತ್ತೊಂದು ಹಿನ್ನೆಡೆಯಾಗಿದೆ.

ಕೊಡಗು ವಿವಿಯಲ್ಲಿ ಎಂ.ಕಾಂ., ಎಂ.ಎ. ಕೊಡವ ಮತ್ತಿತರ ವಿಭಾಗಗಳಿದ್ದು, ಎಂಬಿಎ, ಎಂಸಿಎ, ಬಿಬಿಎ, ಬಿಎಡ್ ಮತ್ತಿತರ ವಿಷಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ, ಎಲ್‌ಎಲ್‌ಬಿ, ಎಂಎಸ್ಸಿ, ಸಂಜೆ ಕಾಲೇಜುಗಳ ತರಗತಿಗಳಿಗೂ ಬೇಡಿಕೆ ಇದೆ ಎನ್ನಲಾಗಿದೆ. ಪ್ರಮುಖವಾಗಿ ಕುಲಸಚಿವ ಆಡಳಿತಾಧಿಕಾರಿ, ಹಣಕಾಸು ಅಧಿಕಾರಿಗಳು, ಡೀನ್, ಸ್ಪೆಷಲ್ ಅಧಿಕಾರಿಗಳ ನೇಮಕ ಆಗಿಲ್ಲ. ಜೊತೆಗೆ ಸಿಂಡಿಕೇಟ್ ಸದಸ್ಯರ ನೇಮಕ ಕೂಡ ಆಗದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಕೊಡಗು ವಿಶ್ವವಿದ್ಯಾನಿಲಯ ಆದ ಬಳಿಕ ಸ್ನಾತಕ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೪,೦೦೦ದಿಂದ ೬,೫೦೦ಕ್ಕೆ ಏರಿಕೆ ಆಗಿದ್ದರೂ ಆಡಳಿತಾತ್ಮಕವಾಗಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸದಿರುವುದರಿಂದ ಕೊಡಗು ವಿವಿಯಲ್ಲಿ ಅನನುಕೂಲ ಹೆಚ್ಚಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

” ನಮ್ಮಲ್ಲಿ ಯಾವುದೇ ಉಪನ್ಯಾಸಕರ ಕೊರತೆ ಇಲ್ಲ. ಅತಿಥಿ ಉಪನ್ಯಾಸಕರ ಮೂಲಕ ಶಿಕ್ಷಣ ಒದಗಿಸಲಾಗುತ್ತಿದೆ. ವಿಶ್ವವಿದ್ಯಾನಿಲಯವಾದ ಬಳಿಕ ಹೇಗೆ ಉಪಯೋಗವಾಗಿದೆ ಎಂದು ಇಲ್ಲಿನ ಜನರೇ ಹೇಳಬೇಕಿದೆ. ಉಪನ್ಯಾಸಕರ ವರ್ಗಾವಣೆ, ಇನ್ನಿತರ ಹುದ್ದೆ ಭರ್ತಿ ಸಂಬಂಧ ಸರ್ಕಾರದ ಮಟ್ಟದಲ್ಲಿಯೇ ಕ್ರಮ ಆಗಬೇಕಿದೆ.”
-ಪ್ರೊ.ಅಶೋಕ ಸಂಗಪ್ಪ ಆಲೂರ, ಕುಲಪತಿ, ಕೊಡಗು ವಿಶ್ವವಿದ್ಯಾಲಯ

” ಕೊಡಗು ವಿಶ್ವವಿದ್ಯಾಲಯವಾದ ಬಳಿಕ ಸಣ್ಣಪುಟ್ಟ ಕೆಲಸಗಳಿಗೆ ದೂರದ ಮಂಗಳೂರಿಗೆ ತೆರಳುವುದು ತಪ್ಪಿದೆ. ಕುಶಾಲನಗರಕ್ಕೆ ತೆರಳಿದರೆ ನಮ್ಮ ಕೆಲಸ ಆಗಲಿದೆ. ಮಂಗಳೂರು ವಿವಿ ವ್ಯಾಪ್ತಿಯಲ್ಲಿದ್ದಾಗ ಫಲಿತಾಂಶ ತಡವಾಗುತ್ತಿತ್ತು. ಈಗ ಫಲಿತಾಂಶ ಬೇಗ ದೊರೆಯುತ್ತಿದೆ. ಆರಂಭದಲ್ಲಿ ಉಪನ್ಯಾಸಕರ ಕೊರತೆ ಉಂಟಾಗುತ್ತಿತ್ತು. ಈಗ ಅಂತಹ ಸಮಸ್ಯೆ ಇಲ್ಲ.”
-ಜೀವನ್, ವಿದ್ಯಾರ್ಥಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ

” ಕೊಡಗು ವಿಶ್ವವಿದ್ಯಾಲಯದಲ್ಲಿ ಅನುದಾನದ ಕೊರತೆ ಇದ್ದರೂ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಪ್ರಾಂಶುಪಾಲರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರ ವಿಶ್ವವಿದ್ಯಾಲಯದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.”

-ಶ್ರುತಿ, ವಿದ್ಯಾರ್ಥಿನಿ, ಎಫ್‌ಎಂಕೆಎಂಸಿ ಕಾಲೇಜು, ಮಡಿಕೇರಿ

Tags:
error: Content is protected !!