Mysore
25
overcast clouds

Social Media

ಬುಧವಾರ, 15 ಜುಲೈ 2026
Light
Dark

ದೇವಸ್ಥಾನಗಳ ಅಭಿವೃದ್ಧಿಗೆ ಧಾರ್ಮಿಕ ಪ್ರವಾಸೋದ್ಯಮ ವರದಾನ

ಕೆ.ಬಿ.ರಮೇಶನಾಯಕ

ಧಾರ್ಮಿಕತೆ ಹೆಸರಿನಲ್ಲಿ ನಿಷೇಧ ಹೇರಿದ್ದ ವಿಡಿಯೋ, ಫೋಟೋ ಚಿತ್ರೀಕರಣಕ್ಕೂ ಅವಕಾಶ

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿರುವ ಹೆಸರಾಂತ ದೇವಸ್ಥಾನಗಳಿಗೆ ಮೂಲಸೌಕರ್ಯ

ವಾರ್ಷಿಕ ರೂ. ೨೫ಲಕ್ಷಕ್ಕೂ ಹೆಚ್ಚು ಆದಾಯದ ‘ಎ’ ದರ್ಜೆಯ ಪಟ್ಟಿಯಲ್ಲಿರುವ ಚಾಮುಂಡೇಶ್ವರಿ, ಶ್ರೀಕಂಠೇಶ್ವರ, ಮಲೆ ಮಹದೇಶ್ವರ ದೇವಸ್ಥಾನ 

ಮೈಸೂರು: ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಯಾತ್ರಾರ್ಥಿಗಳು, ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ, ಆದಾಯವನ್ನು ಹೆಚ್ಚಿಸಲು ಪ್ರವಾಸಿ ಸರ್ಕ್ಯೂಟ್ಗಳನ್ನು ರಚನೆ ಮಾಡಬೇಕೆಂಬ ಬಹು ವರ್ಷಗಳ ಬೇಡಿಕೆಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಧಾರ್ಮಿಕ ಪ್ರವಾಸೋದ್ಯಮದ ಉತ್ತೇಜನಕ್ಕೆ ಮುಂದಾಗಿದ್ದು, ಹಳೇ ಮೈಸೂರು ಭಾಗದ ಪುರಾತನ ದೇವಸ್ಥಾನಗಳ ಅಭಿವೃದ್ಧಿಗೆ ವರದಾನವಾಗಿದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಅಂತರ ಜಿಲ್ಲಾ ಪ್ರವಾಸಿ ಸರ್ಕ್ಯೂಟ್ ರಚಿಸಲು ಮುಂದಿನ ದಿನಗಳಲ್ಲಿ ವಿಸ್ತೃತ ಯೋಜನಾ ವರದಿ ತಯಾರಾಗುವುದರ ಜತೆಗೆ, ಧಾರ್ಮಿಕ ದತ್ತಿ ಇಲಾಖೆ ಗುರುತಿಸಿರುವ ದೇವಸ್ಥಾನಗಳು ಎದುರಿಸುತ್ತಿದ್ದ ಮೂಲಸೌಕರ್ಯದ ಕೊರತೆ ನೀಗುವ ದಿನಗಳು ಸಮೀಪಿಸಿದೆ.

ಹೀಗಾಗಿ, ಮೈಸೂರು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಒಂದೇ ದಿನದಲ್ಲಿ ವೀಕ್ಷಣೆ ಮಾಡಿ ವಾಪಸ್ ಹೋಗುವುದರಿಂದ ಇತರ ಸ್ಥಳಗಳಿಗೆ ಭೇಟಿ ನೀಡುವುದಿಲ್ಲ ಎನ್ನುವ ಉದ್ಯಮದವರ ಕೊರಗನ್ನು ದೂರವಾಗಿಸಿ, ಇತರ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡುವಂತೆ ಮಾಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕೆ ರಾಜ್ಯ ಸರ್ಕಾರ ಯೋಜನೆ ರೂಪಿಸಿರುವುದು ಗಮನಾರ್ಹವಾಗಿದೆ.

ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ೨೦೧ ಪ್ರವರ್ಗ-ಎ, ೧೩೯ ಪ್ರವರ್ಗ-ಬಿ, ೩೪,೨೨೩ ಪ್ರವರ್ಗ-ಸಿ ದೇವಸ್ಥಾನಗಳೆಂದು ಗುರುತಿಸಲಾಗಿದ್ದು, ಇದರಲ್ಲಿ ಎ, ಬಿ ಮತ್ತು ಸಿ ವರ್ಗವನ್ನು ಸೇರಿದಂತೆ ಮೈಸೂರು-೧,೩೧೧, ಮಂಡ್ಯ-೨,೧೨೦, ಚಾಮರಾಜನಗರ-೪೧೪, ಕೊಡಗು-೭, ಹಾಸನ-೨೪೫೬ ದೇವಸ್ಥಾನಗಳಿವೆ.

ವಿಶೇಷವಾಗಿ ವಾರ್ಷಿಕವಾಗಿ ರೂ. ೨೫ ಲಕ್ಷಕ್ಕಿಂತ ಹೆಚ್ಚು ವರಮಾನ ಹೊಂದಿರುವ ದೇವಸ್ಥಾನಗಳ ಪಟ್ಟಿಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ತಿ.ನರಸೀಪುರದ ವೈದ್ಯನಾಥೇಶ್ವರ, ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇಗುಲ, ಪಿರಿಯಾಪಟ್ಟಣದ ಮಸಣಿಕಮ್ಮ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ, ನಿಮಿಷಾಂಬ, ಚೆಲುವನಾರಾಯಣ ಸ್ವಾಮಿ, ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನ, ಕಲ್ಲುವೀರನಹಳ್ಳಿ ಶ್ರೀಮತ್ತಿತಾಳೇಶ್ವರ ದೇವಾಲಯ, ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರಸ್ವಾಮಿ, ಬಿಳಿಗಿರಿ ರಂಗನಾಥಸ್ವಾಮಿ, ಶಿವನಸಮುದ್ರದ ಶ್ರೀರಂಗನಾಥಸ್ವಾಮಿ, ರೂ. ೫ ಲಕ್ಷಕ್ಕಿಂತ ಹೆಚ್ಚು ವರಮಾನವಿರುವಗುತ್ತಲು ಅರ್ಕೇಶ್ವರಸ್ವಾಮಿ, ಸಾತನೂರು ಕಂಬದ ನರಸಿಂಹಸ್ವಾಮಿ, ನಂದಿಬಸವೇಶ್ವರ ದೇವಸ್ಥಾನ, ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ, ಮೈಸೂರು ಜಿಲ್ಲೆಯ ಚಿಕ್ಕದೇವಮ್ಮನಬೆಟ್ಟ, ತಿ.ನರಸೀಪುರದ ಗುಂಜಾನರಸಿಂಹಸ್ವಾಮಿ, ಮೂಗೂರು ತ್ರಿಪುರಸುಂದರಿ ಅಮ್ಮನವರ ದೇವಾಲಯ ಸೇರಿವೆ.

ಉಳಿದಂತೆ ರೂ. ಐದು ಲಕ್ಷಕ್ಕಿಂತ ಕಡಿಮೆ ವರಮಾನ ಇರುವ ಪುರಾತನವಾದ ಈ ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಾಗಿ ಗುರುತಿಸಿಕೊಂಡಿವೆ. ದೂರವಾಗುವ ಮೂಲಸೌಕರ್ಯದ ಕೊರತೆ: ಮೈಸೂರಿಗೆ ಬರುವ ಪ್ರವಾಸಿಗರು, ಹೊರರಾಜ್ಯದ ಯಾತ್ರಾರ್ಥಿಗಳು ಚಾಮುಂಡಿಬೆಟ್ಟ, ನಂಜನಗೂಡು ದೇವಸ್ಥಾನಗಳಿಗೆ ತೆರಳುವುದು ಬಿಟ್ಟರೆ ಗುಂಜಾನರಸಿಂಹಸ್ವಾಮಿ, ತಲಕಾಡು ವೈದ್ಯನಾಥೇಶ್ವರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಚಿಕ್ಕದೇವಮ್ಮನ ಬೆಟ್ಟಕ್ಕೆ ತೆರಳುವುದಿಲ್ಲ. ಒಂದು ವೇಳೆ ಹೋದರೂ ಮೂಲಸೌಕರ್ಯದ ಕೊರತೆ ಎದುರಾಗುವ ಕಾರಣ ವಾಸ್ತವ್ಯ ಹೂಡದೆ ತರಾತುರಿಯಲ್ಲಿ ಹಿಂತಿರುಗುತ್ತಾರೆ. ಗುಂಜಾನರಸಿಂಹಸ್ವಾಮಿ ದೇವಸ್ಥಾನ, ತ್ರಿಪುರಸುಂದರಿ ಅಮ್ಮನವರದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಇದ್ದರೂ ಮೂಲಸೌಕರ್ಯ ಇಲ್ಲದೆ ಸಮಸ್ಯೆಯಾಗುತ್ತಿದೆ. ಕುಡಿಯುವ ನೀರು, ಶೌಚಾಲಯ, ತಂಗಲು ವಸತಿ ವ್ಯವಸ್ಥೆ ಇಲ್ಲದಿರುವ ಕಾರಣ ಅನೇಕರು ಹಿಂದೇಟು ಹಾಕುತ್ತಿದ್ದರು. ಇದೀಗ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿರುವ ಕಾರಣ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸಹಾಯವಾಗಲಿದೆ.

ಸ್ಥಳೀಯ ಪ್ಯಾಕೇಜ್ ಟೂರ್‌ಗೆ ನೆರವು: ದಸರಾ ಮಹೋತ್ಸವದಲ್ಲಿ ಹಮ್ಮಿಕೊಳ್ಳುವ ಪ್ಯಾಕೇಜ್ ಟೂರ್ ಮಾಮೂಲಿ ದಿನಗಳಲ್ಲಿ ಇಲ್ಲದಂತಾಗಿದ್ದು, ಮುಂದೆ ನಾಲ್ಕು ಜಿಲ್ಲೆಗಳಲ್ಲಿರುವ ಧಾರ್ಮಿಕ ಸ್ಥಳಗಳಿಗೆ ಪ್ಯಾಕೇಜ್ ಟೂರ್ ಮಾಡಲು ಅನುಕೂಲವಾಗಲಿದೆ. ನಾಲ್ಕು ಜಿಲ್ಲೆಗಳಲ್ಲಿ ಪ್ರಸಿದ್ಧ ಕೇಂದ್ರವಾಗಿರುವ ದೇವಸ್ಥಾನಗಳವೀಕ್ಷಣೆಗೆ ಅಗತ್ಯ ಬಸ್ ವ್ಯವಸ್ಥೆ, ಮೂಲ ಸೌಕರ್ಯ, ಒಂದು ವೇಳೆ ತಂಗಿದರೆ ಅದಕ್ಕೆ ಬೇಕಾದ ಛತ್ರ, ಅತಿಥಿಗೃಹಗಳನ್ನು ನಿರ್ಮಾಣ ಮಾಡುವುದಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಚಿತ್ರೀಕರಣಕ್ಕೂ ಅವಕಾಶ: ಧಾರ್ಮಿಕತೆಯ ಹೆಸರಿನಲ್ಲಿ ಕೆಲವು ಕಡೆಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ. ಸೋಮನಾಥ ದೇವಾಲಯದಲ್ಲಿ ವಿಡಿಯೋ,ಫೋಟೋ ಚಿತ್ರೀಕರಣಕ್ಕೆ ಅವಕಾಶವಿಲ್ಲದಂತಾಗಿದ್ದು, ಧಾರ್ಮಿಕ ಪ್ರವಾಸೋದ್ಯಮದಲ್ಲಿ ಅವಕಾಶವಿದೆ. ಹೆಚ್ಚಿನ ಜನರು ಬರುವುದಕ್ಕೆ ಅವಕಾಶವಿದೆ. ಇದರಿಂದಾಗಿ ಆದಾಯ ಬರುವ ಜತೆಗೆ, ಸ್ಥಳೀಯ ಜನರಿಗೂ ಅನುಕೂಲವಾಗಲಿದೆ ಎಂಬುದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನಿರೀಕ್ಷೆಯಾಗಿದೆ.

” ಧಾರ್ಮಿಕ ದತ್ತಿ ಇಲಾಖೆ ಗುರುತಿಸಿರುವ ದೇವಸ್ಥಾನಗಳಿಗೆ ಮೂಲಸೌಕರ್ಯ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಬೇಕಾಗಿದೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಎಲ್ಲ ಕೇಂದ್ರಗಳಿಗೂ ಪ್ರವಾಸಿಗರನ್ನು ಆಕರ್ಷಿಸುವಂತೆ ಹಾಗೂ ಧಾರ್ಮಿಕ ಕೇಂದ್ರವನ್ನು ಪ್ರಮೋಟ್ ಮಾಡಲು ಇದು ಸಹಕಾರಿಯಾಗಲಿದೆ.”

ಪ್ರಭು, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

 

 

Tags:
error: Content is protected !!