ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಆಡಳಿತ ಇದೀಗ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಪಾದಚಾರಿ ಮಾರ್ಗ (ಫುಟ್‌ಪಾತ್) ಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ.
ರಾಜಧಾನಿ ಬೆಂಗಳೂರು ನಗರದಲ್ಲಿನ ಫುಟ್‌ಪಾತ್ ಒತ್ತುವರಿ ತೆರವು ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರೇ ಸ್ವತಃ ರೋಡಿಗಿಳಿದು ಕಾರ್ಯಾಚರಣೆಯ ಮೇಲುಸ್ತುವಾರಿಗೆ ನಿಂತ ಕಾರಣಕ್ಕೆ ಬೆಂಗಳೂರಿನ ಹೃದಯಭಾಗದ ಬಹುತೇಕ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳು ಇದೀಗ ಪಾದಚಾರಿಗಳ ಸುಗಮ ಸಂಚಾರಕ್ಕೆ ತೆರೆದುಕೊಂಡಿವೆ. ಆದರೆ, ಹತ್ತಾರು ವರ್ಷಗಳಿಂದ ಅದೇ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ ಎಂಬ ಕೂಗಿನ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ ಅವರಿಗೆಲ್ಲ ವ್ಯಾಪಾರಕ್ಕೆ ಪರ್ಯಾಯ ಜಾಗಗಳನ್ನು ಕಲ್ಪಿಸಲು ಮುಂದಾಗಿದೆ. ಇತ್ತ ಹೈಕೋರ್ಟ್ ಕೂಡ ಉತ್ತಮ ಪಾದಚಾರಿ ಮಾರ್ಗ ಹೊಂದುವುದು ಜನರ ಹಕ್ಕು, ನಿಮಗೆ ಆಗದಿದ್ದರೆ ಹೇಳಿ ಏಜೆನ್ಸಿ ರಚಿಸಿ ಫುಟ್‌ಪಾತ್ ಒತ್ತುವರಿ ತೆರವು ಮಾಡಿಸುತ್ತೇವೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಇನ್ನಷ್ಟು ವೇಗ ಪಡೆದಿದೆ.
ಇತ್ತ ಮೈಸೂರು ನಗರದಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಸಬ್ ಅರ್ಬನ್ ಬಸ್ ನಿಲ್ದಾಣ ಮುಂಭಾಗದ ಬೆಂಗಳೂರು-ನೀಲಗಿರಿ ರಸ್ತೆ ಸೇರಿದಂತೆ ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಮೈಸೂರು ನಗರಪಾಲಿಕೆ ಮುಂದಾಗಿದೆ.
ಈ ಸಂಬಂಧ ನಗರಪಾಲಿಕೆಯ ಆಡಳಿತಾಽಕಾರಿಗಳಾದ ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್‌ಪಾಟೀಲ್ ಅವರು ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ, ಒತ್ತುವರಿ ತೆರವಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಜು.೧೨ರೊಳಗೆ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವು ಮಾಡುವಂತೆ ಗಡುವು ನೀಡಿದ್ದರು. ಈ ಮಧ್ಯೆ ಪಾಲಿಕೆಯ ೪ ಮತ್ತು ೫ ವಲಯಗಳ ವ್ಯಾಪ್ತಿಯಲ್ಲಿ ಕಳೆದ ಗುರುವಾರದಿಂದಲೇನಡೆಸಿದ ಒತ್ತುವರಿ ತೆರವು ಕಾರ್ಯಾಚರಣೆಗೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದರೆ, ಬಹುತೇಕರು ಕೆಲ ಗಂಟೆಗಳ ಸಮಯ ತೆಗೆದುಕೊಂಡು ಸ್ವಯಂಪ್ರೇರಿತರಾಗಿ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಿದ್ದಾರೆ.
ಸವಾಲಿನ ಕೆಲಸ: ಪಾಲಿಕೆಯ ಗಡುವು ಭಾನುವಾರಕ್ಕೆ ಮುಗಿದಿದ್ದು, ಸೋಮವಾರದಿಂದ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಲಿದೆ. ಸಯ್ಯಾಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಚಾಮರಾಜ ಜೋಡಿ ರಸ್ತೆ, ದಿವಾನ್ಸ್ ರಸ್ತೆ, ಅಶೋಕ ರಸ್ತೆ, ಗಾಂಧಿವೃತ್ತ, ದೇವರಾಜ ಮಾರುಕಟ್ಟೆ, ಶಿವರಾಂ ಪೇಟೆ ಸೇರಿದಂತೆ ಅರಮನೆ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಯಾರೂ ಪೆಟ್ಟಿಗೆ ಅಂಗಡಿಗಳನ್ನು ನಿರ್ಮಿಸಿಕೊಂಡಿಲ್ಲ. ಬದಲಿಗೆ ಬೆಳಿಗ್ಗೆ ಫುಟ್‌ಪಾತ್‌ಗಳಲ್ಲಿ ತಮ್ಮ ವಸ್ತುಗಳನ್ನು ಜೋಡಿಸಿಕೊಂಡು ವ್ಯಾಪಾರ ನಡೆಸಿ, ಕತ್ತಲಾಗುತ್ತಿದ್ದಂತೆ ಮತ್ತೆ ವಸ್ತುಗಳನ್ನು ವಾಪಸ್ ತೆಗೆದುಕೊಂಡು ಹೋಗುತ್ತಾರೆ.
ಬಟ್ಟೆ, ಹೂ,ಹಣ್ಣು, ತರಕಾರಿ, ತಿಂಡಿ ತಿನಿಸುಗಳು, ಆಟಿಕೆಗಳು, ಕಡ್ಲೆಕಾಯಿ, ಪಾನಿಪುರಿ, ಸೈಕಲ್ ಗಾಡಿಗಳಲ್ಲಿ ಸೌತೆಕಾಯಿ, ಜ್ಯೂಸ್, ಸೋಡಾ ಮಾರಾಟಗಾರರೆಲ್ಲರದ್ದೂ ತಾತ್ಕಾಲಿಕ ವ್ಯವಸ್ಥೆಯೇ, ಇವರಲ್ಲಿ ಬಹುತೇಕರು ಮೂರ್ನಾಲ್ಕು ತಲೆಮಾರುಗಳಿಂದ ಫುಟ್ಪಾತ್ ವ್ಯಾಪಾರವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಗಡುವು ಮುಗಿಯಿತು ಎಂಬ ಕಾರಣಕ್ಕೆ ಏಕಾಏಕಿ ಅವರನ್ನು ತೆರವು ಮಾಡಿಸುವ ಬದಲಿಗೆ ಪಾಲಿಕೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವತ್ತ ಗಮನಹರಿಸಬೇಕಿದೆ. ಇನ್ನು ಈ ರಸ್ತೆಗಳಲ್ಲಿನ ಪ್ರತಿಷ್ಠಿತ ಅಂಗಡಿಗಳವರು ಗ್ರಾಹಕರನ್ನು ಸೆಳೆಯಲು ರಾಜಾರೋಷವಾಗಿ ತಮ್ಮ ಪದಾರ್ಥಗಳನ್ನು ಫುಟ್‌ಪಾತ್‌ಗಳಲ್ಲೇ ಜೋಡಿಸಿಕೊಳ್ಳುವುದಲ್ಲದೇ, ತಮ್ಮ ಅಂಗಡಿಯ ಜಾಹೀರಾತು ಫಲಕಗಳನ್ನೂ ಫುಟ್ ಪಾತ್‌ಗಳಲ್ಲಿ ಇಟ್ಟುಕೊಂಡು, ತಮ್ಮ ವಾಹನಗಳನ್ನೂ ಬೇಕಾಬಿಟ್ಟಿ ನಿಲ್ಲಿಸಿಕೊಳ್ಳುವುದರಿಂದ ಪಾದಚಾರಿಗಳಿಗೆ ಓಡಾಡಲು ತೊಂದರೆಯಾಗುತ್ತಿದೆ. ಇವುಗಳ ಶಾಶ್ವತ ತೆರವಿನತ್ತ ಪಾಲಿಕೆ ಮುಂದಾಗಬೇಕಿದೆ
” ಮೈಸೂರಿನಲ್ಲಿ ಮೂರ್ನಾಲ್ಕು ತಲೆಮಾರುಗಳಿಂದ ಫುಟ್ಪಾತ್ ವ್ಯಾಪಾರವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವವರನ್ನು ಏಕಾಏಕಿ ತೆರವು ಮಾಡಿಸುವ ಬದಲಿಗೆ ಪಾಲಿಕೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವತ್ತ ಗಮನಹರಿಸಬೇಕಿದೆ.”




