Mysore
24
broken clouds

Social Media

ಸೋಮವಾರ, 13 ಜುಲೈ 2026
Light
Dark

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂವಹನ ಕೊರತೆಯಿಂದ ಪಟ್ಟಕ್ಕೆ ಕುತ್ತು

ರಾಮಕೃಷ್ಣ ಹೆಗಡೆ, ದೇವೇಗೌಡರನ್ನು ನಿರ್ಲಕ್ಷಿಸಿ ಅಧಿಕಾರ ಕಳೆದುಕೊಂಡ ಎಸ್.ಆರ್.ಬೊಮ್ಮಾಯಿ

ರಾಜಕಾರಣದಲ್ಲಿ ಸಂವಹನ ಬಹಳ ಮುಖ್ಯ.ಅದರಲ್ಲೂ ಮುಖ್ಯಮಂತ್ರಿ ಹುದ್ದೆಗೇರುವ ನಾಯಕರಿಗೆ ಸಂವಹನ ಎಂಬುದು ಬರೀ ಆದ್ಯತೆಯಲ್ಲ. ತುಂಬಾ ಅನಿವಾರ್ಯವೂ ಆಗಿದೆ. ಮುಖ್ಯಮಂತ್ರಿ ಹುದ್ದೆಗೇರಿದವರು ಇತರರೊಂದಿಗಿನ ಅದರಲ್ಲೂ ಪರ್ಯಾಯ ಶಕ್ತಿ ಕೇಂದ್ರವಾಗಬಲ್ಲ ನಾಯಕರ ಜತೆ ಉತ್ತಮ ಸಂವಹನ ಇರಿಸಿಕೊಂಡರೆ ಬಹುದೊಡ್ಡ ಅಪಾಯಗಳಿಂದ ಅವರು ಪಾರಾಗಬಲ್ಲರು.

ಆದರೆ ತುಂಬಾ ಸಲ ಮುಖ್ಯಮಂತ್ರಿ ಹುದ್ದೆಗೇರಿದವರು ತಾವು ಸರ್ವ ಬಲ ಸಂಪನ್ನ, ಸರ್ವ ಶಕ್ತ ಎಂದು ಭಾವಿಸುತ್ತಾರೆ. ಅಥವಾ ಅವರು ಹಾಗೆ ಭಾವಿಸುವಂತೆ ಸುತ್ತ-ಮುತ್ತ ಇರುವವರು ಮಾಡಿರುತ್ತಾರೆ. ಆ ಮೂಲಕ ಮುಖ್ಯಮಂತ್ರಿಯಾದವರು ಸಂವಹನದ ಕೊರತೆ (ಕಮ್ಯುನಿಕೇಶನ್ ಗ್ಯಾಪ್) ಯಿಂದ ಬಳಲುತ್ತಾರೆ. ಇಂತಹ ಸಂವಹನದ ಕೊರತೆ ಎಷ್ಟು ವಿಕೋಪಕ್ಕೆ ಹೋಗಬಹುದು ಎಂಬುದಕ್ಕೆ ಕರ್ನಾಟಕದ ರಾಜಕಾರಣದಲ್ಲಿ ಹಲವು ಉದಾಹರಣೆಗಳಿವೆ.ಇಂತಹ ಎಪಿಸೋಡುಗಳನ್ನು ಒಂದು ಸೀರಿಯಲ್‌ನಂತೆ ಹೇಳಬಹುದಾದರೂ ಸಂವಹನದ ಕೊರತೆ ಎಂಬುದು ಮುಖ್ಯಮಂತ್ರಿಯಾದವರನ್ನು ಹೇಗೆ ಕಾಡಬಹುದು ಎಂಬುದಕ್ಕೆ ಎಸ್.ಆರ್.ಬೊಮ್ಮಾಯಿ ಎಪಿಸೋಡನ್ನು ಗಮನಿಸಿದರೆ ಸಾಕು. ೧೯೮೩ ರಲ್ಲಿ ಕರ್ನಾಟಕ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ನೋಡಿತಲ್ಲ ಆ ಸರ್ಕಾರದ ಚುಕ್ಕಾಣಿ ಹಿಡಿದವರು ರಾಮಕೃಷ್ಣ ಹೆಗಡೆ.

ಹೀಗೆ ಅಂದು ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆ ೧೯೮೫ರಲ್ಲಿ ಸರ್ಕಾರವನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋದರು. ಅಂದು ನಡೆದ ಮಧ್ಯಂತರ ಚುನಾವಣೆಯಲ್ಲಿ ಜನತಾಪಕ್ಷ ಮರಳಿ ಅಧಿಕಾರಕ್ಕೆ ಬಂತಲ್ಲ ಆಗ ಪುನಃ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು.ಮುಂದೆ ಅವರ ಮತ್ತು ದೇವೇಗೌಡರ ನಡುವಣ ಸಂಘರ್ಷ ವಿಕೋಪಕ್ಕೆ ಹೋಯಿತು. ಮತ್ತು ಟೆಲಿಫೋನ್ ಕದ್ದಾಲಿಕೆಯ ಆರೋಪ ಹೊತ್ತು ರಾಮಕೃಷ್ಣ ಹೆಗಡೆ ಸಿಎಂ ಹುದ್ದೆಗೆ ರಾಜೀನಾಮೆ ಕೊಡುವಂತಾಯಿತು.

ಹೀಗೆ ಹೆಗಡೆಯವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಎಂಬ ಪ್ರಶ್ನೆ ಎದುರಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ನಾಯಕ ಹೆಚ್.ಡಿ. ದೇವೇಗೌಡ ಮತ್ತು ಲಿಂಗಾಯತ ನಾಯಕ ಎಸ್.ಆರ್.ಬೊಮ್ಮಾಯಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತು. ಆದರೆ ಅಷ್ಟೊತ್ತಿಗಾಗಲೇ ದೇವೇಗೌಡರನ್ನು ಕಂಡರೆ ರಾಮಕೃಷ್ಣ ಹೆಗಡೆ ಅವರಿಗೆ ಆಗುತ್ತಿರಲಿಲ್ಲವಲ್ಲ ಹೀಗಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರವೂ ತಮ್ಮ ಜತೆಗಿದ್ದ ಬಹುತೇಕ ಶಾಸಕರು ಬೊಮ್ಮಾಯಿ ಅವರನ್ನು ಬೆಂಬಲಿಸುವಂತೆ ಅವರು ನೋಡಿಕೊಂಡರು. ಪರಿಣಾಮ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಹೆಗಡೆ ಬೆಂಬಲಿತ ಎಸ್.ಆರ್.ಬೊಮ್ಮಾಯಿ ಗೆದ್ದರು. ಕರ್ನಾಟಕದ ಮುಖ್ಯಮಂತ್ರಿಯಾದರು.

ಹೀಗೆ ಮುಖ್ಯಮಂತ್ರಿಯಾದ ಎಸ್.ಆರ್.ಬೊಮ್ಮಾಯಿ ಒಂದು ಮೂಲಭೂತ ಸಂಗತಿಯನ್ನು ಮರೆತರು. ಅದೆಂದರೆ ತಾವು ಮುಖ್ಯಮಂತ್ರಿಯಾಗಲು ಸಹಕರಿಸಿದ ಹೆಗಡೆ ಅವರ ಜತೆಗಿನ ಸಂವಹನಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವುದು. ಏಕೆಂದರೆ ರಾಮಕೃಷ್ಣ ಹೆಗಡೆ ಅವರು ಬೊಮ್ಮಾಯಿ ಅವರ ಜತೆ ಇದ್ದರಾದರೂ, ಅವರ ಬೆಂಬಲಿಗರು ಬೊಮ್ಮಾಯಿ ಸರ್ಕಾರದಿಂದ ಬಹಳಷ್ಟನ್ನು ನಿರೀಕ್ಷಿಸಿದ್ದರು. ಈ ಪೈಕಿ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿದ್ದ ಹೆಗಡೆ ಬೆಂಬಲಿಗರು ತಾವು ಬಯಸಿದ ಕೆಲಸಗಳಿಗೆ ಬೊಮ್ಮಾಯಿ ಗ್ರೀನ್ ಸಿಗ್ನಲ್ ಕೊಡಬೇಕು ಎಂದು ಬಯಸಿದ್ದರೆ, ಹೆಗಡೆ ಬೆಂಬಲಿತ ಶಾಸಕರು ತಾವು ಬಯಸಿದ ವರ್ಗಾವಣೆಗಳು, ಟೆಂಡರ್ಗಳು ಸುಗಮವಾಗಿ ನಡೆಯಬೇಕು ಎಂದು ಬಯಸಿದ್ದರು. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂತಹ ಸಚಿವರು, ಶಾಸಕರಿಗೆ ಕ್ಯಾರೇ ಅನ್ನಲಿಲ್ಲ. ಬದಲಿಗೆ ಬಹುತೇಕ ವಿಷಯಗಳಲ್ಲಿ ತಮ್ಮಿಚ್ಛೆಯಂತೆ ನಡೆದುಕೊಳ್ಳತೊಡಗಿದರು.

ಹೀಗೆ ತಮ್ಮನ್ನು ದೂರವಿಟ್ಟು ಬೊಮ್ಮಾಯಿ ಅವರು ಏಕಪಕ್ಷೀಯವಾಗಿ ನಡೆದುಕೊಳ್ಳತೊಡಗಿದ್ದರಿಂದ ಸಹಜವಾಗಿಯೇ ಹೆಗಡೆ ಬೆಂಬಲಿಗ ಸಚಿವರು, ಶಾಸಕರು ಕುದ್ದು ಹೋದರು. ಪರಿಣಮ ಬೆಂಗಳೂರಿನ ರಾಜ್ ಮಹಲ್ ವಿಲಾಸ್‌ನಲ್ಲಿದ್ದ ಹೆಗಡೆಯವರ ನಿವಾಸ ’ಕೃತ್ತಿಕಾ’ ಒಂದು ತರಹ ಪೊಲೀಸ್ ಸ್ಟೇಷನ್ನಿನಂತಾಗಿ ಹೋಯಿತು. ಅರ್ಥಾತ್,ಮುಖ್ಯಮಂತ್ರಿ ಬೊಮ್ಮಾಯಿ ಹಾಗೆ ಮಾಡಿದರು, ಹೀಗೆ ಮಾಡಿದರು, ನಿಮ್ಮ ಬೆಂಬಲದಿಂದ ಮುಖ್ಯಮಂತ್ರಿಯಾದ ಅವರು ಈಗ ನಿಮ್ಮ ಬೆಂಬಲಿಗರನ್ನು ಕ್ಯಾರೇ ಎನ್ನುತ್ತಿಲ್ಲ. ನೇರವಾಗಿ ಹೇಳಬೇಕು ಎಂದರೆ ಇದು ನಿಮಗೆ ಮಾಡುತ್ತಿರುವ ಅವಮಾನ.

ಅವರ ವರ್ತನೆಯನ್ನು ನೋಡಿದರೆ ನಿಮ್ಮ ಮೇಲೆ ಅವರಿಗೆ ಅಸೂಯೆ ಇದ್ದಂತಿದೆ. ಏಕೆಂದರೆ ಎಷ್ಟೇ ಆದರೂ ನೀವು ಬ್ರಾಹ್ಮಣ ಸಮುದಾಯದಿಂದ ಬಂದವರು. ಇಂತಹವರು ಲಿಂಗಾಯತ ನಾಯಕರಾಗಿ ಎಮರ್ಜ್ ಆಗಿದ್ದೀರಿ. ಈಗಲೂ ನಿಮ್ಮ ಮಾತೇ ನಡೆಯುವುದಾದರೆ ನಾನು ಲಿಂಗಾಯತರ ನಿರ್ವಿವಾದ ನಾಯಕರಾಗುವುದು ಯಾವಾಗ ಅಂತ ಬೊಮ್ಮಾಯಿ ಯೋಚಿಸುತ್ತಿದ್ದಾರೆ. ಹೀಗಾಗಿ ನಿಮ್ಮನ್ನು ಮೂಲೆಗುಂಪು ಮಾಡಲು ಬಯಸಿದ್ದಾರೆ ಎಂದೆಲ್ಲಾ ಹೆಗಡೆಯವರ ಕಿವಿ ಕಚ್ಚತೊಡಗಿದರು. ವಾಸ್ತವದಲ್ಲಿ ಎಸ್.ಆರ್.ಬೊಮ್ಮಾಯಿ ಅವರು ಹಾಗಿರಲಿಲ್ಲ, ಬದಲಿಗೆ ತಾವು ಮುಖ್ಯಮಂತ್ರಿಯಾಗಿ ತಮ್ಮದೇ ಛಾಪು ಒತ್ತಬೇಕು. ಇದರಿಂದ ನಾಲ್ಕು ಮಂದಿಗೆ ಬೇಸರವಾದರೂ ಪರವಾಗಿಲ್ಲ ಎಂದು ಅವರು ಬಯಸಿದ್ದರು.

ಆದರೆ ಹೀಗೆ ಬಯಸಿದವರು ಹೆಗಡೆ ಅವರ ಜತೆ ಉತ್ತಮ ಸಂವಹನವನ್ನು ಇಟ್ಟುಕೊಳ್ಳ ಬೇಕಿತ್ತು. ಏಕೆಂದರೆ ಉತ್ತಮ ಸಂವಹನವಿದ್ದಿದ್ದರೆ ಬೆಂಬಲಿಗರ ದೂರು ಬಂದಾಗ ಹೆಗಡೆಯವರು ಬೊಮ್ಮಾಯಿ ಅವರಿಂದಸ್ಪಷ್ಟೀಕರಣ ಕೋರುತ್ತಿದ್ದರು. ಆಗ ಬೊಮ್ಮಾಯಿಯವರು ಅದಕ್ಕೆ ಸ್ಪಷ್ಟನೆ ನೀಡುವ ಇಲ್ಲವೇ ಹೆಗಡೆಯವರ ಮನಸ್ಸಿನಲ್ಲಿದ್ದ ಅನುಮಾನವನ್ನು ತೊಡೆದು ಹಾಕಲು ಸಾಧ್ಯವಾಗುತ್ತಿತ್ತು. ಆದರೆ ಬೊಮ್ಮಾಯಿ ಅವರ ಸಂವಹನದ ಕೊರತೆ ಯಾವ ಮಟ್ಟದ ಅಪಾಯವನ್ನು ಸೃಷ್ಟಿಸಿತು ಎಂದರೆ, ಬೊಮ್ಮಾಯಿ ಸರ್ಕಾರದ ಮೇಲೆ ನಿಗಾ ಇಡುವಂತೆ ತಮ್ಮ ಆಪ್ತರಾದ ಜೀವರಾಜ್ ಆಳ್ವ ಅವರಿಗೆ ಸೂಚಿಸಿದರು.

ಎಲ್ಲರೂ ನೆನಪಿನಲ್ಲಿಡಬೇಕಾದ ಸಂಗತಿಯೆಂದರೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣಕ್ಕೆ ಬೀಜ ಬಿತ್ತಿದ್ದೇ ಈ ಸಂದರ್ಭದಲ್ಲಿ. ಅರ್ಥಾತ್, ಅವತ್ತು ರಾಮಕೃಷ್ಣ ಹೆಗಡೆಯವರಿಂದ ಸೂಚನೆ ಪಡೆದ ಜೀವರಾಜ ಆಳ್ವ ಅವರು ಕೆಲ ಶಾಸಕರ ಜತೆ ಹೋಟೆಲ್ ಗಳಲ್ಲಿ ತಂಗುವ, ರಾಜಕಾರಣದ ತಂತ್ರಗಳನ್ಮು ರೂಪಿಸುವ ಕೆಲಸ ಶುರು ಹಚ್ಚಿಕೊಂಡರು. ಆದರೆ ಇಂತಹ ಚಟುವಟಿಕೆ ಆರಂಭವಾದರೂ ಬೊಮ್ಮಾಯಿ ಎಚ್ಚೆತ್ತುಕೊಳ್ಳಲಿಲ್ಲ. ಎಷ್ಟೇ ಆದರೂ ರಾಮಕೃಷ್ಣ ಹೆಗಡೆ ಅವರಿಗೆ ದೇವೇಗೌಡರನ್ನು ಕಂಡರೆ ಆಗುವುದಿಲ್ಲ. ಹೀಗಿರುವಾಗ ಅವರು ಖಾಯಂ ಆಗಿ ತಮ್ಮ ಬೆನ್ನಿಗಿರುತ್ತಾರೆ ಎಂದು ಭ್ರಮಿಸಿದರು. ಅವತ್ತು ಅವರ ಸಂವಹನದ ಕೊರತೆ ಯಾವ ಮಟ್ಟದಲ್ಲಿತ್ತು ಎಂದರೆ ಹೆಗಡೆಯವರಂತೆಯೇ ಜನತಾ ಪಕ್ಷದಲ್ಲಿ ಪರ್ಯಾಯ ಶಕ್ತಿ ಕೇಂದ್ರವಾಗಿದ್ದ ದೇವೇಗೌಡರ ವಿಷಯದಲ್ಲೂ ಅವರು ನಿರಾಸಕ್ತಿ ತೋರಿಸಿದರು.

ಉತ್ತಮ ಸಂವಹನ ಕೌಶಲ ಎಂಬುದು ಇದ್ದಿದ್ದರೆ ತಮ್ಮ ಕುರ್ಚಿಗೆ ಅಪಾಯ ತರಬಲ್ಲ ಮೂಲಗಳನ್ನು ಅವರು ಗುರುತಿಸುತ್ತಿದ್ದರು ಮತ್ತು ಅವರ ಜತೆ ಸಂವಹನದ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಬೊಮ್ಮಾಯಿ ಅವರಿಗೆ ಅದು ಮುಖ್ಯವೆನಿಸಲೇ ಇಲ್ಲ. ಪರಿಣಾಮ ಒಂದು ಎಪಿಸೋಡಿನಿಂದ ದೇವೇಗೌಡರೂ ಬೊಮ್ಮಾಯಿ ವಿರುದ್ಧ ತಿರುಗಿ ಬಿದ್ದರು. ಅಂದ ಹಾಗೆ ಈ ಎಪಿಸೋಡಿನ ಮೂಲ ಇದ್ದುದು ಜನತಾ ಪಕ್ಷ ಜನತಾದಳವಾಗಿ ಪರಿವರ್ತನೆಯಾಗುವ ಕಾಲಘಟ್ಟದಲ್ಲಿ. ಅಂದ ಹಾಗೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರಲ್ಲ ಸಹಜವಾಗಿಯೇ ಅವರು ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳಲು ಬಯಸಿದ್ದರು. ಹೀಗಾಗಿ ಕೇಂದ್ರದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಹೊರಬಂದು ಜನಮೋರ್ಚಾ ಕಟ್ಟಿದ್ದ ವಿ.ಪಿ.ಸಿಂಗ್ ಜತೆ ಸೇರಿದರು. ಅವತ್ತು ಕಾಂಗ್ರೆಸ್ ವಿರುದ್ಧ ಬಿಹಾರದ ಲಾಲೂ ಪ್ರಸಾದ್ ಯಾದವ್, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್, ಓಡಿಶಾದ ಬಿಜು ಪಾಟ್ನಾಯಕ್ ಸೇರಿದಂತೆ ಎಲ್ಲರೂ ತಿರುಗಿ ಬಿದ್ದಿದ್ದರಲ್ಲ ಆ ಸಂದರ್ಭದಲ್ಲಿ ಉಳಿದ ಶಕ್ತಿಗಳೊಂದಿಗೆ ಜನತಾ ಪಕ್ಷವನ್ನು ಜನಮೋರ್ಚಾದಲ್ಲಿ ವಿಲೀನಗೊಳಿಸಿ ಜನತಾ ದಳ ಎಂಬ ಶಕ್ತಿ ಮೇಲೇಳಬೇಕು ಎಂದು ತೀರ್ಮಾನವಾದಾಗ ಸಹಜವಾಗಿಯೇ ಬೊಮ್ಮಾಯಿ ಸರ್ಕಾರದಲ್ಲಿದ್ದ ಎಲ್ಲ ಸಚಿವರೂ ಇದಕ್ಕೆ ಒಪ್ಪಿಗೆ ಸೂಚಿಸಿ ಅಫಿಡವಿಟ್ ಕೊಡಬೇಕು ಎಂಬ ತೀರ್ಮಾನವಾಯಿತು. ಅದರಂತೆ ಬಹುತೇಕ ಸಚಿವರೂ ಅಫಿಡವಿಟ್ ಕೊಟ್ಟರೂ ದೇವೇಗೌಡರು ಇದಕ್ಕೆ ಒಪ್ಪಲಿಲ್ಲ. ಕಾರಣ ಕಾಂಗ್ರೆಸ್ ವಿರುದ್ಧ ದೇಶದಲ್ಲಿ ತಲೆ ಎತ್ತಿದ ಪ್ರಬಲ ಶಕ್ತಿ ಜನತಾಪಕ್ಷ. ಹೀಗಿರುವಾಗ ಅದರ ಹೆಸರನ್ನು ಜನತಾದಳ ಎಂದು ಬದಲಿಸುವುದು ಸರಿಯಲ್ಲ ಎಂಬುದು ದೇವೇಗೌಡರ ವಾದವಾಗಿತ್ತು.

ಈ ಹಂತದಲ್ಲಿ ಬೊಮ್ಮಾಯಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದರೆ, ದೇವೇಗೌಡರ ಮನ ಒಲಿಸುವ ಕಾರ್ಯಕ್ಕೆ ಕೈ ಹಾಕಿದ್ದರೆ ಆಟ ಬೇರೆಯಾಗುತ್ತಿತ್ತೇನೋ? ಆದರೆ ಬೊಮ್ಮಾಯಿ ತಾವು ಪವರ್‌ಫುಲ್ ಲೀಡರು ಅಂತ ತೋರಿಸಲು ‘ಜನತಾ ಪಕ್ಷ ಜನತಾದಳವಾಗಿ ಪರಿವರ್ತನೆಯಾಗಲು ಒಪ್ಪಿಗೆ ಇದೆ ಅಂತ ಇವತ್ತು ಸಂಜೆಯೊಳಗೆ ಅಫಿಡವಿಟ್ ಕೊಡಬೇಕು.ಇಲ್ಲದಿದ್ದರೆ ನಿಮ್ಮನ್ನು ಮಂತ್ರಿ ಮಂಡಲದಿಂದ ತೆಗೆದುಹಾಕಲಾಗುತ್ತದೆ’ ಎಂಬ ಸಂದೇಶವನ್ನು ದೇವೇಗೌಡರಿಗೆ ರವಾನಿಸಿದರು.

ಆದರೆ ಈ ಸಂದೇಶ ತಲುಪಬೇಕು ಎಂದರೆ ದೇವೇಗೌಡರು ಬೆಂಗಳೂರಿನಲ್ಲಿರಲಿಲ್ಲ. ಆದರೆ ಪಟ್ಟು ಬಿಡದ ಬೊಮ್ಮಾಯಿ ಪೊಲೀಸರ ಮುಖಾಂತರ ದೇವೇಗೌಡರಿಗೆ ಸಂದೇಶ ರವಾನಿಸಿದರು. ದೇವೇಗೌಡರು ಎಲ್ಲಿ ಅಂತ ಪೊಲೀಸರು ಹುಡುಕಾಟಕ್ಕಿಳಿದಾಗಅವರು ತಮ್ಮೂರು ಹೊಳೆನರಸೀಪುರದಿಂದ ಬೆಂಗಳೂರಿನ ಕಡೆಹೊರಟಿರುವ ಮಾಹಿತಿ ಬಂತು. ಅದರ ಪ್ರಕಾರ ಅವರು ಕುಣಿಗಲ್ ಬಳಿ ದೇವೇಗೌಡರಿದ್ದ ಕಾರನ್ನು ತಡೆದು ಮುಖ್ಯಮಂತ್ರಿಯವರ ಮೆಸೇಜು ಮುಟ್ಟಿಸಿದರು.

ಯಾವಾಗ ಈ ಮೆಸೇಜು ನೋಡಿದರೋ ಆಗ ದೇವೇಗೌಡರು ಉರಿದು ಬಿದ್ದರು. ಎಷ್ಟೇ ಆದರೂ ರಾಮಕೃಷ್ಣ ಹೆಗಡೆ ಅವರಂತಹ ಜೈಜಾಂಟಿಕ್ ನಾಯಕನಿಗೆ ಹಲ್ವಾ ತಿನ್ನಿಸಿದವರು ಅವರು. ಇನ್ನು ಬೊಮ್ಮಾಯಿ ವಿಷಯದಲ್ಲಿ ಸುಮ್ಮನಿರಲು ಸಾಧ್ಯವೇ ಹೀಗಾಗಿ ಅವರು ಬೊಮ್ಮಾಯಿ ನೀಡಿದ ಸಂದೇಶಕ್ಕೆ ಸೊಪ್ಪೇ ಹಾಕಲಿಲ್ಲ. ಯಾವಾಗ ದೇವೇಗೌಡರು ತಮ್ಮ ಸಂದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲವೋ ಆಗ ಬೊಮ್ಮಾಯಿ ಕೂಡ ತಮ್ಮ ಸಚಿವ ಸಂಪುಟದಿಂದ ದೇವೇಗೌಡರನ್ನು ಕಿತ್ತು ಹಾಕಿದರು.

ಇದನ್ನು ಮಾಡುವ ಬದಲು ಅವರು ದೇವೇಗೌಡರ ಜತೆ ಉತ್ತಮ ಸಂವಹನ ಸಾಽಸಿದ್ದಿದ್ದರೆ ಈ ರಗಡ ಆಗುತ್ತಿರಲಿಲ್ಲ. ಆದರೆ ಯಾವಾಗಈ ಬೆಳವಣಿಗೆ ನಡೆಯಿತೋ ಆಗ ಶತ್ರುವಿನ ಶತ್ರು ಮಿತ್ರ ಎಂಬಂತೆಹೆಗಡೆ ಮತ್ತು ದೇವೇಗೌಡರ ಶಕ್ತಿಗಳು ಬೊಮ್ಮಾಯಿ ವಿರುದ್ಧ ಒಂದುಗೂಡಿದವು. ಮತ್ತು ಈ ಇಬ್ಬರು ನಾಯಕರ ಒಟ್ಟು ಹನ್ನೆರಡು ಬೆಂಬಲಿಗರು ರಾಜ್ಯಪಾಲ ವೆಂಕಟಸುಬ್ಬಯ್ಯನವರನ್ನು ಭೇಟಿ ಮಾಡಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುತ್ತಿದ್ದೇವೆ ಅಂತ ಪತ್ರ ಕೊಟ್ಟು ಬೊಮ್ಮಾಯಿ ನೇತೃತ್ವದ ಸರ್ಕಾರ ಬಕಾಬರಲೆ ಬೀಳುವಂತೆ ನೋಡಿಕೊಂಡರು. ವಾಸ್ತವವಾಗಿ ಹಾರ್ಮ್‌ಲೆಸ್ ನಾಯಕರಾಗಿದ್ದ ಬೊಮ್ಮಾಯಿ ಯಾರಿಗೂ ಕಡು ವಿರೋಧಿಯಾಗುವ ಮನಃಸ್ಥಿತಿಯ ನಾಯಕರಾಗಿರಲಿಲ್ಲ. ಆದರೆ ಅವರಲ್ಲಿದ್ದ ಸಂವಹನದ ಕೊರತೆ ಅವರ ಕುರ್ಚಿ ಲಟಕ್ಕಂತ ಮುರಿದು ಬೀಳುವಂತೆ ಮಾಡಿತು.ಈ ಇತಿಹಾಸ ಮುಖ್ಯಮಂತ್ರಿ ಗಳಾದವರಿಗೆ ಗೊತ್ತಿದ್ದರೆ ಅವರು ಬಹಳಷ್ಟು ಅಪಾಯಗಳಿಂದ ಪಾರಾಗುತ್ತಾರೆ. ಮತ್ತು ಉತ್ತಮ ಸಂವಹನ ಎಂಬುದು ತಮ್ಮ ಕುರ್ಚಿಯನ್ನು ರಕ್ಷಿಸಬಲ್ಲ ವಜ್ರಾಯುಧ ಎಂಬುದನ್ನು ಅರಿತಿರುತ್ತಾರೆ.

ಕೊನೆಯ ಮಾತು :ಸಂವಹನದ ಕೊರತೆಯ ಅಪಾಯ ಎಂಥದ್ದುಎಂಬುದು ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತು. ಹೀಗಾಗಿಯೇ ಇತ್ತೀಚೆಗೆ ತಮ್ಮ ಪತ್ನಿ ಹಾಗೂ ಸಹೋದರನ ಜತೆಗೂಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅವರು ‘ಏನೇ ಸೂಚನೆಗಳಿದ್ದರೂ ನನಗೆ ಕೊಡಿ ಸಾರ್, ಬೇರೆಯವರು ನನ್ನ ಬಗ್ಗೆ ಹೇಳುವುದನ್ನು ನಂಬಬೇಡಿ’ ಎಂದಿದ್ದಾರಂತೆ.

” ವಾಸ್ತವವಾಗಿ ಹಾರ್ಮ್‌ಲೆಸ್ ನಾಯಕರಾಗಿದ್ದ ಬೊಮ್ಮಾಯಿ ಯಾರಿಗೂ ಕಡು ವಿರೋಧಿಯಾಗುವ ಮನಃಸ್ಥಿತಿಯ ನಾಯಕರಾಗಿರಲಿಲ್ಲ. ಆದರೆ ಅವರಲ್ಲಿದ್ದ ಸಂವಹನದ ಕೊರತೆ ಅವರ ಖುರ್ಚಿ ಲಟಕ್ಕಂತ ಮುರಿದು ಬೀಳುವಂತೆ ಮಾಡಿತು.”

 

 

Tags:
error: Content is protected !!