Mysore
24
broken clouds

Social Media

ಸೋಮವಾರ, 13 ಜುಲೈ 2026
Light
Dark

ಕೆ.ಆರ್.ಪೇಟೆ: ಶೇ.19ರಷ್ಟು ಮಳೆ ಕೊರತೆ

ಆರ್.ಶ್ರೀನಿವಾಸ್

ತಾಲ್ಲೂಕಿನಲ್ಲಿ ೩೭,೬೭೧ ಹೆಕ್ಟೇರ್ ಪೈಕಿ ೬,೨೯೦ ಹೆ.ನಲ್ಲಿ ಮಾತ್ರ ಬಿತ್ತನೆ ಕಾರ್ಯ

ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನ ಜ.೧ರಿಂದ ಜು.೧೦ರವರೆಗೆ ೨೭೩.೪೦ ಮಿ.ಮೀ.ವಾಡಿಕೆ ಮಳೆ ಆಗಬೇಕಿತ್ತು. ಆದರೆ ಈವರೆಗೆ ಕೇವಲ ೨೨೨.೨೦ ಮಿ. ಮೀಟರ್ ಮಳೆಯಾಗಿದ್ದು, ಶೇ.೧೯ರಷ್ಟು ಮಳೆ ಕೊರತೆಯಾಗಿದೆ.

ಈ ಬಾರಿ ನೈಋತ್ಯ ಮುಂಗಾರು ದುರ್ಬಲವಾಗಿದ್ದು, ಎಲ್‌ನಿನೋ ಪರಿಣಾಮ ಹೆಚ್ಚು ನೀರಾವರಿ ಬೆಳೆಗಳ ಬದಲಾಗಿ ಅರೆ ನೀರಾವರಿ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಮತ್ತು ಒಂದು ವಾರದೊಳಗೆ ಸಮಗ್ರ ಪರ್ಯಾಯ ಬೆಳೆಯೋಜನೆಯನ್ನು ಸಿದ್ಧಪಡಿಸಲು ಮಂಡ್ಯ ಜಿಲ್ಲಾಡಳಿತ, ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಬಿತ್ತನೆ ಪ್ರಮಾಣ ಕುಸಿತ: ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಕುಸಿತಗೊಂಡಿದ್ದು, ತಾಲ್ಲೂಕಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿಗೆ ೩೭,೬೭೧ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಕೇವಲ ೬,೨೯೦ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಅರೆ ನೀರಾವರಿ ಬೆಳೆಗಳಾದ ಮುಸುಕಿನ ಜೋಳ, ರಾಗಿ, ನವಣೆ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಬೆಳೆಗಳು ಸಂದಿಗ್ಧ ಸ್ಥಿತಿಯಲ್ಲಿ ನೀರಿಲ್ಲದೆ ಒಣಗುತ್ತಿದ್ದರೆ ೧೯:೧೯:೧೯ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಅಥವಾ ಪೊಟ್ಯಾಷಿಯಮ್ ನೈಟ್ರೈಟ್ ರಸಗೊಬ್ಬರವನ್ನು ಸಿಂಪಡಣೆ ಮಾಡುವುದರಿಂದ ಬೆಳೆಗಳು ಒಣಗುವುದನ್ನು ಮುಂದೂಡಬಹುದು ಎಂದು ತಿಳಿಸಿದರು. ಸೆಂಟ್ರಲ್ ಐಡಿ ಮಾಡಿಸಿಕೊಳ್ಳಲು

ರೈತರಲ್ಲಿ ಮನವಿ: ತಾಲ್ಲೂಕಿನ ರೈತರು ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣವನ್ನು ಪಡೆಯಲು ಕಡ್ಡಾಯವಾಗಿ ಸೆಂಟ್ರಲ್ ಐಡಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ರೈತರು ತಮ್ಮ ಆಧಾರ್ ಸಂಖ್ಯೆ, ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಮತ್ತು ಆರ್‌ಟಿಸಿಗಳನ್ನು ತೆಗೆದುಕೊಂಡು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆಗೆ ಭೇಟಿ ನೀಡಿ ಸೆಂಟ್ರಲ್ ಐಡಿ ಮಾಡಿಸಿಕೊಳ್ಳಬಹುದು.

” ಹೇಮಾವತಿ ಜಲಾಶಯದಿಂದ ಪ್ರತಿ ವರ್ಷ ಜುಲೈ ತಿಂಗಳಿಂದ ಡಿಸೆಂಬರ್ ಅಂತ್ಯದವರೆಗೆ ನಿರಂತರವಾಗಿ ಹೇಮಾವತಿ ಎಡದಂಡೆ ನಾಲೆಗಳಲ್ಲಿ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಕಟ್ಟು ನೀರು ಪದ್ಧತಿಯಲ್ಲಾದರೂ ನೀರು ಹರಿಸಿ ಕೆರೆ-ಕಟ್ಟೆಗಳನ್ನು ಭರ್ತಿ ಮಾಡಬೇಕು. ಈ ಮೂಲಕ ರೈತರ ಕೃಷಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಭತ್ತ, ಕಬ್ಬು, ರಾಗಿ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡಬೇಕು.”

-ಕಾರಿಗನಹಳ್ಳಿ ಕುಮಾರ್, ರೈತ ಮುಖಂಡ, ಕೆ.ಆರ್.ಪೇಟೆ

” ಕೆಆರ್‌ಎಸ್ ಜಲಾಶಯ ಅಚ್ಚುಕಟ್ಟು ಭಾಗದ ನಾಲೆಗಳಿಗೆ ಕಟ್ಟು ನೀರು ಪದ್ಧತಿಯಲ್ಲಿ ನೀರು ಹರಿಸಲು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆಗಳಿಗೆ ಕಟ್ಟು ನೀರು ಪದ್ಧತಿಯಲ್ಲಿ ನೀರು ಹರಿಸಿ, ಕೆರೆ-ಕಟ್ಟೆಗಳನ್ನು ತುಂಬಿಸಲು ನಿರ್ಣಯ ಕೈಗೊಳ್ಳಬೇಕು. ಇದಕ್ಕೆ ಹೇಮಾವತಿ ಜಲಾಶಯ ವ್ಯಾಪ್ತಿಯ ಎಲ್ಲಾ ೧೮ ವಿಧಾನಸಭಾ ಕ್ಷೇತ್ರಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು.”

-ನಾಟನಹಳ್ಳಿ ಗಂಗಾಧರ್, ಕೆ.ಆರ್.ಪೇಟೆ 

” ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಶೇ.೧೯ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದಾಗಿ ಹೇಮಾವತಿ ಜಲಾಶಯದಿಂದ ನೀರಾವರಿಗೆ ನೀರು ಹರಿಸಲು ಅಸಾಧ್ಯ ಎಂದು ಸರ್ಕಾರವು ಹೇಳಿದೆ. ಹಾಗಾಗಿ ರೈತರು ಹೆಚ್ಚು ನೀರು ಬೇಡಿಕೆ ಇರುವ ಭತ್ತ, ಕಬ್ಬು ಹೊರತುಪಡಿಸಿ ಪರ್ಯಾಯ ಅರೆ ನೀರಾವರಿ ಬೆಳೆಗಳಾದ ಮುಸುಕಿನ ಜೋಳ, ರಾಗಿ, ನವಣೆ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಬಹುದು. ಆದರೆ ಕೃಷಿ ಪಂಪ್ ಸೆಟ್‌ಗಳಲ್ಲಿ ಕಬ್ಬು, ಭತ್ತ, ರಾಗಿ ಬೆಳೆಯಲು ಯಾವುದೇ ತೊಂದರೆ ಇಲ್ಲ.”

-ಬಿ.ಎಸ್.ದೀಪಕ್, ಸಹಾಯಕ ಕೃಷಿ ನಿರ್ದೇಶಕರು, ಕೆ.ಆರ್.ಪೇಟೆ

 

 

Tags:
error: Content is protected !!