ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಜೀವಮಾನದ ಮೊದಲ ಸಾರ್ವಜನಿಕ ಗಾಯನ ಕಾರ್ಯಕ್ರಮ ಮೈಸೂರಿನಿಂದಲೇ ಆರಂಭವಾಗಿತ್ತು. ಅಚ್ಚರಿಯೆಂದರೆ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವೂ ಸಾಂಸ್ಕೃತಿಕ ನಗರಿಯಲ್ಲೇ ನಡೆದಿತ್ತು. ಇದೀಗ ಅವರ ಉಸಿರು ಚೆಲ್ಲಿದ್ದು ಕೂಡ ಮೈಸೂರಿನಲ್ಲೇ ಎಂಬುದು ಗಮನಾರ್ಹ.
ಮೈಸೂರಿಗೂ ಗಾನ ಕೋಗಿಲೆ ಎಸ್.ಜಾನಕಿ ಅವರಿಗೆ ಅವಿನಾಭಾವ ನಂಟು. 1952ರಲ್ಲಿ ಮೈಸೂರಿನಲ್ಲಿ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರು ಆಯೋಜನೆ ಮಾಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಜಾನಕಿ ಅವರು ದನಿಗೂಡಿಸಿದ್ದರು. ಅಲ್ಲಿಂದ ಅವರಿಗೆ ಈ ಊರಿನ ಜೊತೆಗೆ ನಂಟು ಗಾಢವಾಗಿ ಬೆಳೆಯಿತು. ವಿಶೇಷವೆಂದರೆ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ ನಡೆದಿದ್ದು ಕೂಡ ಮೈಸೂರಿನಲ್ಲೇ.
2017ರ ಅಕ್ಟೋಬರ್‌ನಲ್ಲಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಹಾಡಿದ್ದರು. ಮೈಸೂರಿನಲ್ಲಿ ಎಸ್.ಜಾನಕಿ ಹೆಚ್ಚು ಕಾರ್ಯಕ್ರಮಗಳನ್ನು ನೀಡದಿದ್ದರೂ, ಈ ಪಾರಂಪರಿಕಿ ನಗರಕ್ಕೆ ಹಲವು ಬಾರಿ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೇ, ತಮ್ಮ ಮಕ್ಕಳೊಂದಿಗೆ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟವನ್ನು ಮೆಟ್ಟಿಲು ಏರಿ ತಾಯಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದರು.
48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ, 20ಕ್ಕೂ ಅಧಿಕ ಭಾಷೆಗಳ ಹಾಡುಗಳಿಗೆ ಜೀವ ತುಂಬಿದ ಗಾಯಕಿ, ಉಸಿರು ಚೆಲ್ಲಿದ್ದು ಮೈಸೂರಿನಲ್ಲೇ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್.ಜಾನಕಿ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯಲ್ಲಿ ಶನಿವಾರ ಕೊನೆಯುಸಿರೆಳೆದರು.




