ಮಡಿಕೇರಿ: ತಾಲ್ಲೂಕಿನ ಕೆದಕಲ್ ಸಮೀಪದ ಕೋಟೆಕಾಡು ಪ್ರದೇಶದಲ್ಲಿ ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ನಡೆದಿದೆ.
ಕಕ್ಕಬ್ಬೆ ನಿವಾಸಿ ಎಂ.ಟಿ. ಮುತ್ತಪ್ಪ (೭೨) ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ರಸ್ತೆಗಡ್ಡಲಾಗಿ ಬಂದ ಕಾಡುಕೋಣ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮುತ್ತಪ್ಪ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಅವರ ಕಾಲು ಮುರಿದಿದ್ದು, ತಕ್ಷಣವೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




