Mysore
24
overcast clouds

Social Media

ಮಂಗಳವಾರ, 07 ಜುಲೈ 2026
Light
Dark

ಮಲ್ಲಯ್ಯನಪುರ ಗುಡ್ಡದಲ್ಲಿ ಥೋರಿಯಂ ಖನಿಜ ನಿಕ್ಷೇಪ ಪತ್ತೆ

ಗುಂಡ್ಲುಪೇಟೆ: ಪಟ್ಟಣ ಮತ್ತು ಮಲ್ಲಯ್ಯನಪುರ ನಡುವಿನ ಅನ್ಗಲ್ ಗುಡ್ಡದ ತಪ್ಪಲಿನ ಪ್ರದೇಶದಲ್ಲಿ ಅಪರೂಪದ ಥೋರಿಯಂ ನಿಕ್ಷೇಪ ಪತ್ತೆಯಾಗಿದೆ.

ಹಿಂದಿನ ವರ್ಷ ದೇಶಾದ್ಯಂತ ಭಾರತೀಯ ಭೂ ವೈಜ್ಞಾನಿಕ ಇಲಾಖೆ ಏರಿಯಲ್ ಸರ್ವೆ ನಡೆಸಿದಾಗ ಕಚ್ಚಾ ತೈಲ, ಚಿನ್ನ, ಅಪರೂಪದ ಖನಿಜಸಂಪತ್ತುಗಳು ಪತ್ತೆಯಾಗಿದ್ದವು. ಇದೇ ಸರ್ವೆಯಲ್ಲಿ ಪಟ್ಟಣ ಮತ್ತು ಮಲ್ಲಯ್ಯನಪುರ ನಡುವಿನ ಅನ್ಗಲ್ ಗುಡ್ಡದ ತಪ್ಪಲಿನ ಪ್ರದೇಶವಾದ ಮಣಗಹಳ್ಳಿ, ವಿಜಯಪುರ ಮತ್ತು ಕೂತನೂರು ಗ್ರಾಮಗಳ ವ್ಯಾಪ್ತಿಯಲ್ಲಿ ೭೨೦ ಎಕರೆಯಲ್ಲಿ ಅಪರೂಪದ ಖನಿಜ (ರೇರ್ ಅರ್ಥ್ ಮಿನರಲ್) ನಿಕ್ಷೇಪ ಪತ್ತೆಯಾಗಿದೆ.

ಈ ರೀತಿ ನಿಕ್ಷೇಪ ಇರುವ ಪ್ರದೇಶದಲ್ಲಿ ೨೦ ಎಕರೆಯನ್ನು ಥೋರಿಯಂ ಹಾಗೂ ಕೋರ್ ಮಿನರಲ್ಸ್ ಜೋನ್ ಎಂದು ಗುರುತಿಸಿರುವ ಕೇಂದ್ರ ಸರ್ಕಾರ ಗಣಿಗಾರಿಕೆ ನಡೆಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಣ್ಣೂರುಕೇರಿ ಗ್ರಾಮದ ಪೂರ್ವ ಪಾರ್ಶ್ವದ ಚಿಕ್ಕಮ್ಮತಾಯಿ ಬೆಟ್ಟದ ಪಶ್ಚಿಮ ಪಾರ್ಶ್ವದಲ್ಲೂ ಈ ಹಿಂದೆ ನಿಕ್ಷೇಪ ಇರುವ ಬಗ್ಗೆ ಸುದ್ದಿಗಳು ಹರಡಿದ್ದವು. ಇದನ್ನು ದೃಢಪಡಿಸುವ ರೀತಿಯಲ್ಲಿ ಒಂದು ಪ್ರದೇಶದಲ್ಲಿ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು. ಈಗಲೂ ಈ ಪ್ರದೇಶದ ಒಂದು ಚಿಕ್ಕ ಪ್ರದೇಶಕ್ಕೆ ಬೀಗ ಮುದ್ರೆ ಹಾಕಲಾಗಿದೆ. ಈಗ ಥೋರಿಯಂ ನಿಕ್ಷೇಪ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚರ್ಚೆಗೆ ಮತ್ತಷ್ಟು ಬಲ ಬಂದಂತಾಗಿದೆ.

ಥೋರಿಯಂ ಖನಿಜ ನಿಕ್ಷೇಪ ಎಂದರೆ ಭೂಮಿಯ ಕಲ್ಲು, ಮಣ್ಣು ಮತ್ತು ನೀರಿನಲ್ಲಿ ನೈಸರ್ಗಿಕವಾಗಿ ದೊರೆಯುವ ವಿಕಿರಣಶೀಲ ಲೋಹವಾದ ಥೋರಿಯಂನ ಶೇಖರಣೆಯಾಗಿದೆ. ಇದು ಸ್ವತಃ ಇಂಧನವಾಗಿ ಕೆಲಸ ಮಾಡದಿದ್ದರೂ ನ್ಯೂಟ್ರಾನ್ ಹೀರಿಕೊಳ್ಳುವಿಕೆಯ ಮೂಲಕ ಇದನ್ನು ನ್ಯೂಕ್ಲಿಯರ್ ರಿಯಾಕ್ಟರ್‌ಗಳಲ್ಲಿ ಶಕ್ತಿಯಾಗಿ ಬಳಸಬಹುದು. ಥೋರಿಯಂ ಪ್ರಮುಖವಾಗಿ ‘ಮೋನಜೈಟ್’ಎಂಬ ಖನಿಜ ಮರಳಿನಲ್ಲಿ ದೊರೆಯುತ್ತದೆ. ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ಸುಮಾರು ೮,೫೦,೦೦೦ ಟನ್‌ಗಳಷ್ಟು ಥೋರಿಯಂ ನಿಕ್ಷೇಪಗಳನ್ನು ಹೊಂದಿದ್ದು ಇದು ವಿಶೇಷವಾಗಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕಡಲ ತೀರದ ಮರಳಿನಲ್ಲಿ ಹೇರಳವಾಗಿ ಲಭ್ಯವಿದೆ ಎನ್ನಲಾಗಿದೆ.ಭವಿಷ್ಯದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಪರಮಾಣು ವಿದ್ಯುತ್ ಯೋಜನೆಗಳಲ್ಲಿ ಇದು ಅತ್ಯಂತ ಪ್ರಮುಖ ಇಂಧನವಾಗಿದೆ

Tags:
error: Content is protected !!