Mysore
24
overcast clouds

Social Media

ಮಂಗಳವಾರ, 07 ಜುಲೈ 2026
Light
Dark

ಝೆನ್‌ ಕತೆಗಳು: ಸೀಜೋಳ ನಿಜವಾದ ಆತ್ಮ ಯಾವುದು?

ಸಂಗ್ರಹ ಮತ್ತು ಅನುವಾದ ಚೇತನಾ ತೀರ್ಥಹಳ್ಳಿ 

ಚೋಕನ್ ಎಂಬವನಿಗೆ ಸೀಜೋ ಎಂಬ ಸುಂದರ ಮಗಳಿದ್ದಳು. ಚೋಕನ್ ತನ್ನ ದೂರದ ಸಂಬಂಧಿಯಾದ ಓಚು ಮತ್ತು ಸೀಜೋ ಒಳ್ಳೆಯ ಜೋಡಿ ಎಂದು ಸಾಮಾನ್ಯವಾಗಿ ತಮಾಷೆ ಮಾಡುತ್ತಿದ್ದ. ಆದರೆ ತನ್ನ ಮಗಳನ್ನು ಓಚುವಿಗೆ ಕೊಟ್ಟು ಮದುವೆ ಮಾಡುವ ಯಾವ ಉದ್ದೇಶವೂ ಅವನಿಗೆ ಇರಲಿಲ್ಲ ವಾದ್ದರಿಂದ, ಮಗಳು ವಯಸ್ಸಿಗೆ ಬಂದ ಮೇಲೆ ಅವಳನ್ನು ಇನ್ನೊಬ್ಬನಿಗೆ ಕೊಟ್ಟು ಮದುವೆ ಮಾಡಲು ಯೋಜಿಸಿದ. ಆದರೆ ಚೋಕನ್‌ನ ತಮಾಷೆಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸೀಜೋ ಮತ್ತು ಓಚು ಪರಸ್ಪರ ಪ್ರೀತಿ ಬೆಳೆಸಿಕೊಂಡುಬಿಟ್ಟಿದ್ದರು.

ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಚೋಕನ್, ಒಂದು ದಿನ ಸೀಜೋಳ ನಿಶ್ಚಿತಾರ್ಥವನ್ನು ಏರ್ಪಾಟು ಮಾಡಿಯೇಬಿಟ್ಟ. ಇದರಿಂದ ದುಃಖಿತನಾದ ಓಚುಗೆ ಆ ಊರಿಂದ ದೂರ ಓಡಿಬಿಡಬೇಕು ಅನಿಸಿತು. ಅದರಂತೆ ಹೊಳೆ ದಾಟಿ ಆಚೆ ದಡಕ್ಕೆ ಹೋಗಲು ನಿರ್ಧರಿಸಿದ. ಅವನು ಹೊಳೆಯ ದಡಕ್ಕೆ ಬಂದಾಗ ದೋಣಿಯಲ್ಲಿ ಸೀಜೋ ಕಂಡಂತಾಯಿತು. ಭ್ರಮೆ ಅಂದುಕೊಂಡು ಕಣ್ಣುಜ್ಜಿ ನೋಡಿದ. ಅವಳು ಸೀಜೋನೇ! ಅವನಿಗೆ ಕುಣಿದು ಬಿಡುವಷ್ಟು ಖುಷಿಯಾಯಿತು. ಅವಳು ಕೂಡ ತಂದೆಯ ನಿರ್ಧಾರದಿಂದ ದುಃಖಿತಳಾಗಿ ಮನೆ ತೊರೆದಿದ್ದಳು.

ಅವರಿಬ್ಬರು ಮದುವೆಯಾಗಿ ಬೇರೊಂದು ನಗರದಲ್ಲಿ ಬಾಳತೊಡಗಿದರು. ಅವರಿಗೆ ಎರಡು ಮಕ್ಕಳೂ ಆದವು. ಒಂದು ದಿನ ಸೀಜೋಗೆ ತನ್ನ ತಂದೆಯನ್ನು ಭೇಟಿ ಮಾಡಬೇಕೆಂದು ಆಸೆಯಾಯಿತು. ಓಚು ಅವಳನ್ನು ತವರಿಗೆ ಕರೆದುಕೊಂಡು ಹೊರಟ.

ಮಾವನ ಬಳಿ ಕ್ಷಮೆ ಕೇಳಿ ಸಮಾಧಾನ ಪಡಿಸುವ ಉದ್ದೇಶದಿಂದ ಓಚು ತನ್ನ ಹೆಂಡತಿಯನ್ನು ಹೊರಗೇ ನಿಲ್ಲಿಸಿ ತಾನು ಮನೆಯೊಳಗೆ ಹೋದ. ‘ನಿನಗೆ ತಿಳಿಸದೆ ನಿನ್ನ ಮಗಳ ಜೊತೆ ಓಡಿಹೋಗಿ ಮದುವೆಯಾಗಿದ್ದಕ್ಕೆ ಕ್ಷಮಿಸಿಬಿಡು’ ಅಂತ ಮಂಡಿಯೂರಿ ಕೇಳಿಕೊಂಡ. ಆಗ ಚೋಕನ್, ‘ಏನು ಹೇಳ್ತಿದೀಯ ನೀನು? ನೀನು ಹೋದ ಮೇಲೆ ವಿರಹದಿಂದ ಹಾಸಿಗೆ ಹಿಡಿದ ನನ್ನ ಮಗಳು ಇನ್ನೂ ಚೇತರಿಸಿಕೊಂಡಿಲ್ಲ, ದಿನವಿಡೀ ಒಳಮನೆಯಲ್ಲಿ ಮಲಗಿರುತ್ತಾಳೆ’ ಅಂದ.

ಆಗ ಓಚು, ‘ಇಲ್ಲ ಸೀಜೋ ನನ್ನ ಜೊತೆ ಇದ್ದಾಳೆ’ ಎಂದು ಹೊರಗೆ ಕಾಯುತ್ತಿದ್ದ ಸೀಜೋಳನ್ನು ಕರೆ ತಂದ. ಒಳಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದ ಸೀಜೋ ಮತ್ತು ಓಚುವಿನ ಹೆಂಡತಿ ಸೀಜೋ ಇಬ್ಬರೂ ಮುಖಾಮುಖಿ ಯಾದರು.

ಈ ಕಥೆಯನ್ನು ತನ್ನ ಅನುಯಾಯಿಗಳಿಗೆ ಹೇಳಿದ ಝೆನ್ ಗುರು ಗೋಸೋ ಕೇಳಿದ, ‘ಸೀಜೋ ಎರಡು ಆತ್ಮಗಳನ್ನು ಹೊಂದಿದ್ದಾಳೆ. ಒಂದು ಆತ್ಮ ಅಪ್ಪನ ಮನೆಯಲ್ಲಿ ಕೃಶವಾಗಿ ಬಿದ್ದಿದೆ, ಇನ್ನೊಂದುಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದೆ. ಈ ಎರಡರಲ್ಲಿ ಯಾವ ಆತ್ಮ ನಿಜವಾದದ್ದು!?’ಈ ಬಗೆಹರಿಯದ ಕೊಆನ್ ಅನ್ನು ಇಂದಿಗೂ ಝೆನ್ ಶಿಷ್ಯಪರಂಪರೆ ಬಿಡಿಸುತ್ತಲೇ ಇದೆ. ಉತ್ತರ ದೊರಕಿದವರು ಜ್ಞಾನೋದಯ ಹೊಂದಿ, ಆ ಬಗ್ಗೆ ಏನೂ ಹೇಳದೆ ಹೋಗಿಬಿಟ್ಟಿದ್ದಾರೆ.

ಯೋಚಿಸಿದ್ದೆಲ್ಲಾ ಕರುಣಿಸುವ ಮರ ಮತ್ತು ದಾರಿಹೋಕ: 

ಒಂದು ದಿನ, ಝೆನ್ ಗುರು ಚುವಾಂಗ್ ಜಿ ಒಂದು ಮರದ ಕೆಳಗೆ ಕೂತಿದ್ದ. ಆ ಮರಕ್ಕೆ ಮೈತುಂಬಾ ಗಂಟು. ನೋಡಿದರೇ ಹೆದರಿಕೆಯಾಗುವಂತಿತ್ತು. ಆ ದಾರಿಯಲ್ಲಿ ಹಾದು ಹೋಗ್ತಿದ್ದ ಮುದುಕಿಯೊಬ್ಬಳು ಅವನನ್ನು ನೋಡಿದಳು. ಇವನ್ಯಾಕೆ ಇಲ್ಲಿ ಕೂತಿದ್ದಾನೆ ಅಂತ ಆಶ್ಚರ್ಯಪಟ್ಟು, ‘ಶಿಫು, ಈ ಮರ ನೋಡಿದರೆ ಇಷ್ಟು ಭಯಾನಕವಾಗಿದೆ. ನೀವ್ಯಾಕೆ ಇದರ ಕೆಳಗೆ ಕೂತಿದ್ದೀರಿ?’ ಎಂದು ಕೇಳಿದಳು. ‘ಯಾಕೆ? ಏನಾಗಿದೆ ಈ ಮರಕ್ಕೆ?’ ‘ಈ ಮರ ಕುರೂಪವಾಗಿರೋದು ಮಾತ್ರ ಅಲ್ಲ, ಇದರಿಂದ ನಯಾ ಪೈಸೆ ಉಪಯೋಗವಿಲ್ಲ. ನಿಮಗಿದು ನೆರಳನ್ನೂ ಕೊಡುತ್ತಿಲ್ಲ. ಇದರಲ್ಲಿ ಹೂವೂ ಇಲ್ಲ, ಹಣ್ಣೂ ಇಲ್ಲ, ಕಡಿದರೆ ನಾಲ್ಕು ಹಲಗೆಯಾಗುವಷ್ಟೂ ಸಪಾಟಿಲ್ಲ?’ ಮುದುಕಿ ಪಟ್ಟಿ ಕೊಟ್ಟಳು. ‘ಅದಕ್ಕೇ ನಾನು ಇದರ ಕೆಳಗೆ ಕೂತಿರೋದು! ಈ ಮರವನ್ನು ನೋಡಿ ಪಾಠ ಕಲಿಯಬೇಕು ಅಂತ?’ ಅಂದ ಚುವಾಂಗ್ ಜಿ, ‘ಈ ಮರದಿಂದ ಏನೂ ಪ್ರಯೋಜನ ಇಲ್ಲದಿರೋದೇ ಈ ಮರದ ಬಹಳ ದೊಡ್ಡ ಪ್ರಯೋಜನ. ಉಪಯೋಗಕ್ಕೆ ಬರುವ ಮರಗಳನ್ನು ನೀವು ನಿಮ್ಮ ಬಳಕೆಗೆ ಕಡಿದುಬಿಡ್ತೀರಿ. ಅದರಿಂದ ನಿಮಗೆ ಪ್ರಯೋಜನವಾದರೂ ಈ ಮರಕ್ಕೆ ನಷ್ಟವಾಗುತ್ತೆ. ಆದರೆ, ನಿಮ್ಮ ಪ್ರಯೋಜನಕ್ಕೆ ಬರದೆ ಇರೋದ್ರಿಂದ ಈ ಮರಕ್ಕೆ ಲಾಭವಿದೆ. ಇದು ನಿಮ್ಮ ಕೊಡಲಿಗೆ ಸಿಲುಕದೆ ತನ್ನ ಪಾಡಿಗೆ ತಾನಿರಬಹುದು. ಈ ಮರದ ಅಪ್ರಯೋಜಕತೆಯೇ ಅದಕ್ಕೆ ಪ್ರಯೋಜನ ತಂದುಕೊಟ್ಟಿದೆ’ ಎಂದು ವಿವರಿಸಿದ.

ಯಾವುದು ಒಳ್ಳೆಯದು?:  ದಾವ್ ಸಂತ, ವಿದ್ವಾಂಸ ಚುವಾಂಗ್ ಜಿ, ಪು ಕೊಳದಲ್ಲಿ ಮೀನು ಹಿಡಿಯುತ್ತ ತನ್ನ ದಿನಗಳನ್ನು ಕಳೆಯುತ್ತಿದ್ದ. ಇಂಥ ಬುದ್ಧಿವಂತ ಮನುಷ್ಯ ಅಲ್ಲಿ ಕಾಲಹರಣ ಮಾಡುತ್ತಿದ್ದಾನೆ, ಅವನನ್ನು ರಾಜಧಾನಿಗೆ ಕರೆಸಿಕೊಂಡು ಮಹತ್ವದ ಜವಾಬ್ದಾರಿ ವಹಿಸಬೇಕೆಂದು ಚು ಸಾಮ್ರಾಜ್ಯದ ರಾಜನಿಗೆ ಅನ್ನಿಸಿತು. ಅನ್ನಿಸಿದ್ದೇ ತಡ ತನ್ನ ಭಟರನ್ನು ಕರೆದು ಚುವಾಂಗ್ ಜಿಯನ್ನು ಕರೆತರುವಂತೆ ಆದೇಶ ನೀಡಿದ. ಭಟರು ಪು ಕೊಳದ ಬಳಿ ಬಂದರು. ಮೀನು ಹಿಡಿಯುತ್ತಿದ್ದ ಚುವಾಂಗ್ ಜಿ, ಭಟರು ಕೂಗಿ ಕರೆದರೂ ತಿರುಗಿ ನೋಡಲಿಲ್ಲ. ಕೊನೆಗೆ ಭಟರು ನಿಂತಲ್ಲಿಂದಲೇ ರಾಜಾಜ್ಞೆಯನ್ನು ಅರುಹಿದರು. ಗಾಳಕ್ಕೆ ಕಚ್ಚಿ ಕೊಂದ ಮೀನನ್ನು ಬುಟ್ಟಿಗೆ ಹಾಕುತ್ತಾ ಚುವಾಂಗ್ ಜಿ, ‘ಅರಮನೆಯಲ್ಲಿ ಮೂರು ಸಾವಿರ ವರ್ಷಗಳಷ್ಟು ಪುರಾತನ ಆಮೆಯೊಂದಿದೆ ಎಂದು ಕೇಳಿದ್ದೇನೆ. ರಾಜ ಅದಕ್ಕೆ ಪ್ರತಿದಿನ ಪೂಜೆ ಮಾಡುತ್ತಾನಂತೆ. ಆ ಆಮೆ ಬದುಕಿದೆಯೋ ಸತ್ತಿದೆಯೋ? ಬದುಕಿದ್ದರೆ ಅದರ ಪಾಲಿಗೆ ಯಾವುದು ಒಳ್ಳೆಯದು? ಸತ್ತಂತೆ ಒಂದೆಡೆ ಬಿದ್ದುಕೊಂಡು ಪೂಜೆ ಮಾಡಿಸಿಕೊಳ್ಳೋದೋ, ಕಡಲ ತಡಿಯ ಮಣ್ಣಿನಲ್ಲಿ ಹೊರಳುತ್ತ ಬಾಲ ಅಲ್ಲಾಡಿಸಿಕೊಂಡು ಬದುಕಿರೋದೋ?’ಎಂದು ಕೇಳಿದ. ‘ಮಣ್ಣಿನಲ್ಲಿ ಹೊರಳುತ್ತ ಬಾಲ ಅಲ್ಲಾಡಿಸಿಕೊಂಡು ಬದುಕಿರೋದು’ ಭಟರು ಒಂದು ಕ್ಷಣವೂ ಆಲೋಚಿಸದೆ ಒಕ್ಕೊರಲಿನಲ್ಲಿ ಉತ್ತರಿಸಿದರು. ‘ಸರಿ ಮತ್ತೆ!’ ಚುವಾಂಗ್ ಜಿ ನಗುತ್ತ ನುಡಿದ, ‘ನಾನೂ ಮಣ್ಣಿನಲ್ಲಿ ಬಾಲ ಅಲ್ಲಾಡಿಸಿಕೊಂಡಿರಲು ಬಯಸ್ತೇನೆ, ಹೋಗಿ ಹೇಳಿ ನಿಮ್ಮ ದೊರೆಗೆ’.

ಡೈಮಂಡ್ ಸೂತ್ರ ಮತ್ತು ಮುದುಕಿ: ಜಪಾನಿನಲ್ಲೊಬ್ಬ ಝೆಡ್‌  ಸನ್ಯಾಸಿ ಇದ್ದ. ಜಗತ್ತಿನಲ್ಲಿ ನಷ್ಟವಾಗಿಹೋಗಿದ್ದ ಬೌದ್ಧ ಧರ್ಮದ ‘ಡೈಮಂಡ್ ಸೂತ್ರ’ ವನ್ನು ಅವನು ಅರೆದು ಕುಡಿದಿದ್ದ. ಅದು ಹೇಗೋ ಡೈಮಂಡ್ ಸೂತ್ರದ ಒಂದು ಪ್ರತಿ ಅವನ ಬಳಿ ಇದ್ದುಬಿಟ್ಟಿತ್ತು. ಅವನು ಅದನ್ನು ಬೆನ್ನಿಗೆ ಕಟ್ಟಿಕೊಂಡು ಊರೂರಿಗೆ ಹೋಗಿ ತನ್ನ ಜ್ಞಾನ ಪ್ರದರ್ಶನ ಮಾಡುತ್ತಿದ್ದ. ಹೀಗೇ ಒಂದು ಮಧ್ಯಾಹ್ನ ಬೆಟ್ಟದ ಮೇಲೆ ನಡೆದು ಪಕ್ಕದ ಊರಿಗೆ ಹೋಗುತ್ತಿದ್ದ. ದಾರಿಯಲ್ಲಿ ಹಸಿವಾಗತೊಡಗಿತು.

ತಿನ್ನಲು ತಂದಿದ್ದ ಬುತ್ತಿಯೆಲ್ಲ ಖಾಲಿಯಾಗಿತ್ತು. ಅವನ ಬಳಿ ಹಣವೂ ಇರಲಿಲ್ಲ. ಹಸಿವು ತಾಳಲಾಗದೆ ಅತ್ತ ಇತ್ತ ನೋಡಿದಾಗ ಮುದುಕಿಯೊಬ್ಬಳು ಚಹ-ರೊಟ್ಟಿ ಮಾರುತ್ತಿರುವುದು ಕಂಡಿತು. ‘ನನಗೊಂದು ರೊಟ್ಟಿ ಮತ್ತು ಒಂದು ಕಪ್ ಚಹ ಕೊಡು. ನನ್ನ ಬಳಿ ಹಣವಿಲ್ಲ; ಆದರೆ ಡೈಮಂಡ್ ಸೂತ್ರದ ಜ್ಞಾನವಿದೆ. ನಿನಗೆ ಅದರ ಬಗ್ಗೆ ಹೇಳ್ತೀನಿ’ ಅಂದ.

ಆ ಮುದುಕಿಗೂ ಒಂದಷ್ಟು ಜ್ಞಾನವಿತ್ತು. ‘ನಾನೂ ಹಿಂದೊಮ್ಮೆ ಡೈಮಂಡ್ ಸೂತ್ರ ಅಭ್ಯಾಸ ಮಾಡಿದ್ದೆ. ಈಗ ನಾನೊಂದು ಪ್ರಶ್ನೆ ಕೇಳ್ತೀನಿ. ಅದಕ್ಕೆ ಉತ್ತರ ಕೊಟ್ಟರೆ ಚಹ-ರೊಟ್ಟಿ ಕೊಡ್ತೀನಿ’ ಅಂದಳು. ಸನ್ಯಾಸಿ ಆಗಲೆಂದ. ಮುದುಕಿ ಕೇಳಿದಳು, ‘ಈ ರೊಟ್ಟಿಗಳನ್ನು ತಿನ್ನುವಾಗ ನೀನು ಭೂತದ ಮನಸಿನಿಂದ ತಿನ್ನುತ್ತೀಯೋ, ವರ್ತಮಾನದ ಮನಸ್ಸಿನಿಂದ ತಿನ್ನುತ್ತೀಯೋ ಅಥವಾ ಭವಿಷ್ಯದ ಮನಸ್ಸಿನಿಂದ ತಿನ್ನುತ್ತೀಯೋ?’ ಸನ್ಯಾಸಿ ತಲೆ ಕೆರೆದುಕೊಂಡು ಯೋಚಿಸಿದ. ಉತ್ತರ ಹೊಳೆಯಲಿಲ್ಲ. ಬೆನ್ನಿಂದ ಪುಸ್ತಕವಿಳಿಸಿ ಪುಟಪುಟವನ್ನೂ ಬಿಡದೆ ಓದತೊಡಗಿದ. ಸಂಜೆಯಾದರೂ ಅವನಿಗೆ ಉತ್ತರ ಸಿಗಲಿಲ್ಲ. ಪುಸ್ತಕ ಮುಚ್ಚಿಟ್ಟು ಧ್ಯಾನಿಸತೊಡಗಿದ. ಮುಸ್ಸಂಜೆಯಾದರೂ ಉತ್ತರ ಹೊಳೆಯಲಿಲ್ಲ.

ಮುದುಕಿ ತನ್ನ ಅಂಗಡಿ ಮುಚ್ಚಿ ಅಲ್ಲಿಂದ ಹೊರಟಳು. ಸನ್ಯಾಸಿ ಮಂಡಿಯೂರಿ ಕುಳಿತು, ‘ನನಗೆ ಉತ್ತರ ಗೊತ್ತಾಗಲಿಲ್ಲ. ಅದೇನು ಅಂತ ನೀನೇ ಹೇಳು’ ಎಂದು ಅಂಗಲಾಚಿದ. ‘ಡೈಮಂಡ್ ಸೂತ್ರದಿಂದ ನೀನು ಕಲಿತಿದ್ದು ಇಷ್ಟೇ ನೋಡು!’ ಮುದುಕಿ ಬೈದಳು. ‘ಯಾವ ಕಾಲದ ಮನಸ್ಸಿನಿಂದಲೂ ರೊಟ್ಟಿಯನ್ನು ತಿನ್ನಲಾಗದು. ರೊಟ್ಟಿಯನ್ನು ತಿನ್ನುವುದು ಬಾಯಿಯಿಂದ’ ಅನ್ನುತ್ತಾ ಅವನ ಕೈಲಿ ಬುತ್ತಿ ಇಟ್ಟು, ಅಲ್ಲಿಂದ ಹೊರಟಳು.

‘ಬುದ್ದ’ನನ್ನು ಸುಟ್ಟು ಚಳಿ ಕಾಯಿಸಿಕೊಂಡ ಇಕ್ಕಿಯು: ಇಕ್ಕಿಯು ಒಬ್ಬ ಸುಪ್ರಸಿದ್ಧ ಝೆನ್ ಗುರು. ಒಂದು ಚಳಿಗಾಲದ ಸಂಜೆ ಅವನು ಎಲ್ಲಿಂದ ಎಲ್ಲಿಗೋ ಪ್ರಯಾಣ ಬೆಳೆಸಿದ. ನಡೆಯುತ್ತ ನಡೆಯುತ್ತ ರಾತ್ರಿಯಾಯ್ತು. ರಾತ್ರಿಯಾದಂತೆಲ್ಲ ಚಳಿಯೂ ಹೆಚ್ಚಿತು. ದಾರಿ ಮಧ್ಯ ಸಿಕ್ಕ ಬುದ್ಧ ಮಂದಿರವೊಂದರ ಬಾಗಿಲು ಬಡಿದ ಇಕ್ಕಿಯು, ಅಲ್ಲೇ ಪಡಸಾಲೆಯಲ್ಲಿ ಮಲಗಲು ತನಗೆ ಜಾಗ ಕೊಡಿರೆಂದು ಕೇಳಿದ. ಮಂದಿರದ ಪೂಜಾರಿ ಆಗಲೆಂದು ಹೇಳಿ ಒಂದು ಚಾಪೆ ನೀಡಿದ. ನಡು ರಾತ್ರಿಯ ಹೊತ್ತಿಗೆ ಕಿಟಕಿ ಗಾಜಿನ ಮೇಲೆ ಬೆಂಕಿ ಜ್ವಾಲೆಯ ಪ್ರತಿಫಲನ ಕಂಡು ಹೌಹಾರಿದ ಪೂಜಾರಿ ಗಾಬರಿಯಿಂದ ಹೊರಗೆ ಬಂದ. ಮಂದಿರದ ಅಂಗಳದಲ್ಲಿ ಬುದ್ಧ ಪ್ರತಿಮೆಯ ಕೈಕಾಲು ಮುರಿದು ಅಗ್ಗಿಷ್ಟಿಕೆ ಹೊತ್ತಿಸಿದ್ದ ಇಕ್ಕಿಯು, ಅಂಗೈ ಉಜ್ಜುತ್ತಾ ಚಳಿ ಕಾಯಿಸುತ್ತಿದ್ದ! ಪೂಜಾರಿ ಅದರ ಬಳಿ ಹೋಗುವ ವೇಳೆಗೆ ಬುದ್ಧನ ಪ್ರತಿಮೆಯ ತಲೆಯ ಭಾಗ ಬೆಂಕಿಯೊಳಗೆ ಇಳಿದು ಸುಟ್ಟು ಕರಕಲಾಗುತ್ತಿತ್ತು.

‘ಮೂರ್ಖ! ಇದೇನು ಮಾಡ್ತಿದ್ದೀಯ! ಬುದ್ಧ ಭಗವಾನರನ್ನು ಬೆಂಕಿಗೊಡ್ಡಿ ಚಳಿ ಕಾಯಿಸ್ಕೊಳ್ತಿದ್ದೀಯಲ್ಲ!’ ಎಂದು ಕಿರುಚಾಡಿದ. ಇಕ್ಕಿಯುವಿನ ಮುಖದ ಮಂದಹಾಸ ಚೂರೂ ಮಾಸಲಿಲ್ಲ. ಅವನು ಎದ್ದು ಒಂದು ಕೋಲನ್ನು ಹುಡುಕಿ ತಂದ. ಆ ಹೊತ್ತಿಗೆ ಪ್ರತಿಮೆ ಪೂರಾ ಉರಿದು ಕೆಂಡದ ಕಾವೂ ತಗ್ಗುತ್ತ ಬಂದಿತ್ತು. ಇಕ್ಕಿಯು ಕೋಲನ್ನು ಕೆಂಡದ ರಾಶಿ ಯೊಳಗೆ ತೂರಿ ಕೆದಕತೊಡಗಿದ. ಮೊದಲೇ ಸಿಟ್ಟು ನೆತ್ತಿಗೇರಿದ್ದ ಪೂಜಾರಿ ‘ನಿನಗೆ ತಲೆ ಸರಿ ಇಲ್ಲವೇ? ನಾನು ಕೇಳಿದ್ದೇನು, ನೀನು ಮಾಡ್ತಿರೋದೇನು?’ ಅಂತ ಕೂಗಾಡಿದ. ಇಕ್ಕಿಯು ಸಾವಧಾನವಾಗಿ, ‘ನಾನು ಬುದ್ಧನ ಮೂಳೆಗಳನ್ನು ಹುಡುಕುತ್ತಿದ್ದೇನೆ’ ಅಂದ. ‘ನಿನಗೆ ಪೂರಾ ಹುಚ್ಚು! ಅದೊಂದು ಮರದ ಪ್ರತಿಮೆ. ಮೂಳೆ ಎಲ್ಲಿಂದ ಬಂದೀತು?’ ಎಂದು ಕೋಪದಲ್ಲೇ ನಕ್ಕ ಪೂಜಾರಿ. ‘ಓಹೋ! ಮತ್ಯಾಕೆ ಆಗ ನಾನು ಬುದ್ಧನನ್ನು ಸುಟ್ಟೆ ಅಂತ ಬೊಬ್ಬೆ ಹಾಕಿದ್ದು ನೀನು? ನಾನು ಬೆಂಕಿಗೊಡ್ಡಿದ್ದು ಪ್ರತಿಮೆಯನ್ನಷ್ಟೆ. ರಾತ್ರಿ ಇನ್ನೂ ದೀರ್ಘವಿದೆ. ಚಳಿ ಮತ್ತೂ ಏರುತ್ತಲೇ ಹೋಗುವುದು. ನನ್ನೊಳಗಿನ ಜೀವಂತ ಬುದ್ಧನನ್ನು ಉಳಿಸಬೇಕಾದರೆ, ಅಗೋ ಅಲ್ಲಿ ಇನ್ನೆರಡು ಪ್ರತಿಮೆಗಳಿದ್ದಾವಲ್ಲ ಅವನ್ನೂ ತಾ? ಬೆಳಗಾಗುವ ತನಕ ಉರಿಸಲಿಕ್ಕೆ ಬೇಕು’ ಅಂದ ಇಕ್ಕಿಯು.

 

 

Tags:
error: Content is protected !!