Mysore
26
overcast clouds

Social Media

ಸೋಮವಾರ, 06 ಜುಲೈ 2026
Light
Dark

ಆಂದೋಲನ ಸಂಪಾದಕೀಯ | ಸಾರ್ಥಕ ಪಯಣ 54 ; ಬೆನ್ನುತಟ್ಟಿ ನಡೆಸಿದವರು ನೀವು. . .

ನಿಮ್ಮೆಲ್ಲರ ‘ಆಂದೋಲನ’ ದಿನಪತ್ರಿಕೆ ೫೪ನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ. ಹುಟ್ಟಿನಿಂದ ನಡೆದುಬಂದ ಮಾರ್ಗದಲ್ಲೇ, ರೂಢಿಸಿಕೊಂಡ ಸಿದ್ಧಾಂತಗಳ ನೆರಳಲ್ಲೇ ಸಹಸ್ರಾರು ಸವಾಲುಗಳ ನಡುವೆಯೇ ನಿರಂತರವಾಗಿ ಮುಂದುವರಿದಿದೆ. ಅದಕ್ಕೆ ನನ್ನ ಅಪ್ಪಾಜಿ ಅವರು ಹಾಕಿಕೊಟ್ಟ ಹಾದಿ, ಓದುಗರ ನಾಡಿಮಿಡಿತ ಅರಿತು ಸುದ್ದಿಗಳಿಗೆ ಆದ್ಯತೆ ನೀಡುವಂತೆ ಹೇಳಿಕೊಟ್ಟ ಪಾಠವನ್ನು ಚಾಚೂತಪ್ಪದೇ ಪಾಲನೆ ಮಾಡಿದ್ದೇ ಕಾರಣ ಎಂಬುದನ್ನು ವಿನಮ್ರತೆಯಿಂದ ಹೇಳುತ್ತೇನೆ. ಹಾಗಾಗಿ ಪತ್ರಿಕೆಯ ಬೆನ್ನುತಟ್ಟಿ ನಡೆಸಿದವರು ಓದಗರು ಎಂದರೆ ಅತಿಶಯೋಕ್ತಿ ಅಲ್ಲ.

ಸಾರ್ವಜನಿಕರ ಆಸ್ತಿ, ತೆರಿಗೆ ಹಣ ಅನ್ಯಾಯವಾಗಿ ಪರರ ಪಾಲಾಗುವ ಅಥವಾ ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಲೂಟಿಗಳಂತಹ ಸುದ್ದಿಗಳ ಮೇಲೆ ಪತ್ರಿಕೆಗಳ ಹದ್ದಿನಕಣ್ಣಿರಬೇಕು. ಇಂತಹ ಸುದ್ದಿಗಳ ಸೂಕ್ಷ ತೆ ಇರದಿದ್ದರೆ ಪತ್ರಿಕೋದ್ಯಮವೇ ಹಾದಿ ತಪ್ಪುವ ಸಾಧ್ಯತೆ ಇದೆ. ರಾಜಕಾರಣಿಗಳಾಗಲಿ, ಉದ್ಯಮಿಗಳಾಗಲಿ ನಾಡಿನ ಸಂಪನ್ಮೂಲಗಳನ್ನು ಕಾನೂನುಬಾಹಿರವಾಗಿ ಬಳಸಿಕೊಳ್ಳುವಂತಹ ಪ್ರಕರಣಗಳನ್ನು ಸೂಕ್ಷ ವಾಗಿ ಅವಲೋಕಿಸಿ ವರದಿಗಾರಿಕೆ ಮೂಲಕ ಬಹಿರಂಗಪಡಿಸುವುದು ಪತ್ರಕರ್ತರ ಕರ್ತವ್ಯ ಕೂಡ.

ಅಪ್ಪಾಜಿ ಅವರು ಆರಂಭದಿಂದಲೂ ಅವಿರತ ಶ್ರಮದಿಂದ ಪತ್ರಿಕೆಯನ್ನು ಬೆಳೆಸಿದ ಪರಿ ಅವಿಸ್ಮರಣೀಯ. ವರದಿಗಾರಿಕೆ, ಸುದ್ದಿಗಳ ಸಂಪಾದನೆ ಮಾತ್ರವೇ ಅಲ್ಲದೆ, ಬೀದಿ ಬೀದಿಗಳಲ್ಲಿ ಪತ್ರಿಕೆಯನ್ನು ಹಂಚುವ ಮೂಲಕ ಪತ್ರಕರ್ತರಾಗಿ ಅವರ ಸಾಧನೆ ಅಚ್ಚರಿ ಮೂಡಿಸುವಂತಹದ್ದು. ಅವರು ಭೌತಿಕವಾಗಿ ನಮ್ಮಿಂದ ದೂರವಾಗಿ ೯ ವರ್ಷಗಳೇ ಕಳೆದುಹೋಗಿವೆ. ಆದರೆ, ಅವರ ಆಶಯಗಳಿಗೆ ಚ್ಯುತಿ ಬಾರದಂತೆ ಪತ್ರಿಕೆಯ್ನು ಮುನ್ನಡೆಸುತ್ತಿದ್ದೇವೆ ಎಂದು ನಂಬಿದ್ದೇನೆ. ಇಂದಿಗೂ ‘ಆಂದೋಲನ’ ಎಂದರೆ ರಾಜಶೇಖರ ಕೋಟಿ ಅವರೇ ಎಂಬುದರಲ್ಲಿ ಅನುಮಾನ ಇಲ್ಲ. ನನಗೆ ಪತ್ರಿಕೆ ಹೊರತುರುವ, ಸುದ್ದಿಗಳನ್ನು ಗ್ರಹಿಸುವುದರ ಆಳ- ಅಗಲ ಹೇಳಿಕೊಡುವಾಗ ಅಪ್ಪಾಜಿ ತೋರಿದ ಕಾಳಜಿ, ಶ್ರದ್ಧೆಗಳೇ ಇಂದಿಗೂ ನನ್ನನ್ನು ಈ ದಾರಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನೂ ಆತ್ಮಸ್ಥೈರ್ಯದಿಂದ ಎದುರಿಸಲು ಸಾಧನಗಳಾಗಿವೆ.

ನೊಂದವರು, ಶೋಷಿತರು, ಸಮಾಜದ ತಾರತಮ್ಯಕ್ಕೆ ಒಳಗಾದವರ ಧ್ವನಿಯಾಗಿ, ಕನ್ನಡ ಭಾಷೆ, ನೆಲ- ಜಲಕ್ಕಾಗಿ ಪ್ರಾಮಾಣಿಕವಾಗಿ ನಡೆಯುವ ಹೋರಾಟಗಳ ಭಾಗವಾಗಿ ‘ಆಂದೋಲನ’ವನ್ನು ಅವರು ಕಟ್ಟಿದ ಪರಿ ಅಸಾಧಾರಣ.

ಬದಲಾದ ಕಾಲಘಟ್ಟದಲ್ಲಿ ಪತ್ರಿಕೆಗೆ ಎದುರಾಗಿರುವ ಸವಾಲುಗಳ ಮಾದರಿ ಬದಲಾಗಿದೆ ಹಾಗೂ ಪ್ರಬಲವಾಗಿವೆ. ದೃಶ್ಯ ಮಾಧ್ಯಮಗಳು ಬಂದಾಗ, ಮುದ್ರಣ ಮಾಧ್ಯಮಕ್ಕೆ ಅಪಾಯ ಎಂಬ ಮಾತುಗಳಿದ್ದವು. ಆದರೆ, ಕೆಲ ವರ್ಷಗಳ ನಂತರ ಅದು ಸುಳ್ಳಾಯಿತು. ಅಲ್ಲದೆ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳೆರಡಕ್ಕೂ ಎದುರಾಳಿಯಾಗಿ ಯೂಟ್ಯೂಬ್, ವಾಟ್ಸಾಪ್, ಇನ್ಸ್ಟಾಗ್ರಾಂ ಮಾಧ್ಯಮಗಳು ನಿರೀಕ್ಷೆ ಮೀರಿ ಚಾಲನೆಗೊಂಡವು.

ಆದರೆ, ಮುದ್ರಣ ಮಾಧ್ಯಮದ ನಿಸ್ಪೃಹತೆ, ಪ್ರಾಮಾಣಿಕತೆಯು ಯಾವುದಕ್ಕೂ ಎದೆಗುಂದುವಂತಹ ಸನ್ನಿವೇಶವನ್ನು ಸೃಷ್ಟಿಸಲಿಲ್ಲ.

ಪತ್ರಿಕೆಗಳಿಗೆ ಜಾಹೀರಾತುಗಳೂ ಮುಖ್ಯ ಎಂಬುದು ನಿಜ. ಆದರೆ, ಮಾಧ್ಯಮಗಳು ಅದಕ್ಕೆ ಮಾರಿಕೊಳ್ಳುವುದು ಒಪ್ಪುವಂತಹ ಸಂಗತಿ ಅಲ್ಲ. ಈ ನಿಟ್ಟಿನಲ್ಲಿ ‘ಆಂದೋಲನ’ ಪತ್ರಿಕೆ ‘ಮಾರಿಕೊಳ್ಳದವರು’ ಎಂಬುದನ್ನು ಪತ್ರಿಕೆಯ ಸುದ್ದಿಗಳೇ ಸಾಬೀತುಪಡಿಸಿವೆ. ಇದಕ್ಕೆ ಅಪ್ಪಾಜಿ ಅವರು ನನಗೆ ಕಲಿಸಿದ ‘ಛಡಿಯೇಟಿನ ಪಾಠಗಳು’ ಕಾರಣ. ಅವರು ‘ಆಂದೋಲನ’ವನ್ನು ವಾರಪತ್ರಿಕೆಯಾಗಿ, ದಿನಪತ್ರಿಕೆಯಾಗಿ ಜತನದಿಂದ ಬೆಳೆಸಿದವರು.

ಜಿಲ್ಲಾ ಮಟ್ಟದಿಂದ ಪ್ರಾದೇಶಿಕ ಪತ್ರಿಕೆಯಾಗಿ ‘ಆಂದೋಲನ’ ದಾಪುಗಾಲು ಇಟ್ಟು ಬೆಳೆದ ಹಾದಿ ಅಪ್ಪಾಜಿಯವರ ಕನಸನ್ನು ನನಸಾಗಿಸುವುದಾಗಿತ್ತು. ಇದೀಗ ಪತ್ರಿಕೆಯು ರಾಜ್ಯಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ ಎಂಬುದನ್ನು ಹೇಳುವುದಕ್ಕೆ ಹೆಮ್ಮೆಯಾಗಿದೆ. ಇದರ ಹಿಂದೆ ಪತ್ರಿಕೆಯ ವಿತರಕರಿಂದ ವರದಿಗಾರರು ಸೇರಿದಂತೆ ಪ್ರತಿಯೊಬ್ಬರ ಶ್ರಮ ಇದೆ. ಸಣ್ಣಪುಟ್ಟ ಅಸಮಾಧಾನದ ನಡುವೆಯೂ ಪರಸ್ಪರ ಸಹಕಾರ ಮನೋಭಾವದೊಂದಿಗೆ ಕೆಲಸ ಮಾಡಿದ್ದರಿಂದ ಪತ್ರಿಕೆಗೆ ರಾಜ್ಯಮಟ್ಟದಲ್ಲಿ ತಲೆಯೆತ್ತುವುದು ಸಾಧ್ಯವಾಗಿದೆ.

ಮುಖ್ಯವಾಗಿ ಯಾವುದೇ ಪತ್ರಿಕೆ ಓಲೈಕೆ, ಪಕ್ಷಪಾತ, ಸಮಾಜಕ್ಕೆ ಮಾರಕವಾದಂತಹ ಸಿದ್ಧಾಂತಗಳಿಂದ ಅಂತರ ಕಾಪಾಡಿಕೊಂಡು ಪ್ರಾಂಜಲ ಮನಸ್ಸಿನಿಂದ ಸುದ್ದಿಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಆಗ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು. ಇದು ಪತ್ರಿಕೆಯೊಂದರ ಕರ್ತವ್ಯ ಕೂಡ. ‘ಆಂದೋಲನ’ ಸದಾ ಈ ದಾರಿಯಲ್ಲಿ ಓದುಗರು, ಹಿತೈಷಿಗಳ ಸಹಕಾರದೊಂದಿಗೆ ಮುಂದಡಿ ಇಡುತ್ತದೆ. ನೊಂದವರು, ಶೋಷಿತರು, ಸಮಾಜದ ತಾರತಮ್ಯಕ್ಕೆ ಒಳಗಾದವರ ಧ್ವನಿಯಾಗಿ, ಕನ್ನಡ ಭಾಷೆ, ನೆಲ- ಜಲಕ್ಕಾಗಿ ಪ್ರಾಮಾಣಿಕವಾಗಿ ನಡೆಯುವ ಹೋರಾಟಗಳ ಭಾಗವಾಗಿ ‘ಆಂದೋಲನ’ವನ್ನು ಅವರು ಕಟ್ಟಿದ ಪರಿ ಅಸಾಧಾರಣ. ಬದಲಾದ ಕಾಲಘಟ್ಟದಲ್ಲಿ ಪತ್ರಿಕೆಗೆ ಎದುರಾಗಿರುವ ಸವಾಲುಗಳ ಮಾದರಿ ಬದಲಾಗಿದೆ ಹಾಗೂ ಪ್ರಬಲವಾಗಿವೆ.

ರವಿ ಕೋಟಿ, ಸಂಪಾದಕ

Tags:
error: Content is protected !!