Mysore
24
overcast clouds

Social Media

ಶನಿವಾರ, 04 ಜುಲೈ 2026
Light
Dark

ಕನಿಷ್ಠ ಸೌಲಭ್ಯಗಳೂ ಇಲ್ಲದ ಮಂಡ್ಯ ತಾಲ್ಲೂಕು ಕಚೇರಿ  

ಹೇಮಂತ್ ಕುಮಾರ್

ಜಾತಿ, ಆದಾಯ ಪ್ರಮಾಣ ಪತ್ರಕ್ಕೂ ಅಲೆದಾಟ; ಸರತಿ ಸಾಲಿನಲ್ಲಿ ನಿಂತು ಜನರ ಗೊಣಗಾಟ

ಮಂಡ್ಯ: ತಾಲ್ಲೂಕು ಕೇಂದ್ರವಾದ ಮಂಡ್ಯದ ತಹಸಿಲ್ದಾರ್ ಕಚೇರಿಯಲ್ಲಿ ವಿವಿಧ ಸೇವಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತೆರೆಯಲಾಗಿರುವ ಕೌಂಟರ್‌ಗಳಲ್ಲಿ ಮೂಲ ಸೌಲಭ್ಯಗಳಿಲ್ಲದೆ ಜನ ಸಾಮಾನ್ಯರು ದಿನಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ತಲೆದೋರಿದೆ.

ಸುಮಾರು ಎರಡು-ಮೂರು ಲಕ್ಷ ಜನಸಂಖ್ಯೆಯುಳ್ಳ ತಾಲ್ಲೂಕಿನ ಜನರು ಈ ಕಚೇರಿಯನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿ ಅಗತ್ಯ ಕಂಪ್ಯೂಟರ್‌ಗಳಿಲ್ಲ. ಸಿಬ್ಬಂದಿಯ ಕೊರತೆ, ವಿದ್ಯುತ್ ಕೈಕೊಟ್ಟರೆ ಸಣ್ಣ ಜನರೇಟರ್ ಆಗಲಿ, ಯುಪಿಎಸ್ ಆಗಲಿ ಇಲ್ಲ. ಇದರ ಪರಿಣಾಮ ಮಾಡಿದ ಕೆಲಸಗಳನ್ನು ಮತ್ತೆ ಮೊದಲಿನಿಂದ ಸರಿಪಡಿಸಬೇಕಾದ ಪರಿಸ್ಥಿತಿಯಿದೆ. ಸರ್ವರ್ ಇಲ್ಲ ಎಂಬುದು ಇಲ್ಲಿ ಮಾಮೂಲಿಯಾಗಿದೆ.

ಬಡ ಜನರು, ಮಧ್ಯಮ ವರ್ಗದವರು, ಕೂಲಿಕಾರರು, ಶ್ರಮಿಕ ವರ್ಗ ನಿತ್ಯ ಇಲ್ಲಿ ಒಂದಿಲ್ಲೊಂದು ದಾಖಲಾತಿ ಪಡೆಯಲು ಈ ಕಿಯೊಸ್ಕ್‌ಗಳನ್ನು ಎಡತಾಕ ಬೇಕಾಗಿರುತ್ತದೆ. ಆದರೆ ಸೌಲಭ್ಯಗಳನ್ನು ಒದಗಿಸದ ತಾಲ್ಲೂಕು ಆಡಳಿತದಿಂದಾಗಿ ಈ ಕಚೇರಿಯ ಸಿಬ್ಬಂದಿ ನಿತ್ಯ ಜನರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಹಲವು ಬಾರಿ ಜನರ ಸಿಟ್ಟು, ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.

ಇರುವ ಒಂದೆರಡು ಕೌಂಟರ್‌ಗಳಲ್ಲೇ ಹತ್ತಾರು ರೀತಿಯ ದಾಖಲಾತಿಗಳು, ಪೆನ್ಶನ್, ವಂಶವೃಕ್ಷ, ಸರ್ಟಿಫಿಕೇಟ್‌ಗಳು ನೋಂದಣಿಯಾಗಬೇಕು. ಅದರೊಂದಿಗೆ ಈಗ ಶಾಲೆಗಳಿಗೆ ಅಗತ್ಯವಾದ ಜಾತಿ, ಆದಾಯ ದೃಢೀಕರಣ ಪ್ರಮಾಣಪತ್ರಗಳಿಗೆ ಇನ್ನಿಲ್ಲದ ಬೇಡಿಕೆಯಿದೆ. ಇದಕ್ಕಾಗಿ ಬೆಳಿಗ್ಗೆ ೬ ಗಂಟೆಯಿಂದಲೇ ಕೌಂಟರ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುವ ಜನರು ಕಾಫಿ, ತಿಂಡಿ ಕೂಡ ಸೇವಿಸದೆ ಬೇಗ ನಮ್ಮ ಕೆಲಸ ಆದರೆ ಸಾಕು ಎಂಬ ಧಾವಂತದಲ್ಲಿರುತ್ತಾರೆ.

ಆದರೆ, ಕಿಟಕಿ ತೆರೆಯುತ್ತಲೇ ಸರ್ವರ್ ಇಲ್ಲ, ಕರೆಂಟ್ ಇಲ್ಲ, ಸಿಸ್ಟಂ ಸಮಸ್ಯೆ ಎಂಬ ಮಾತು ಕೇಳಿಬರುತ್ತಲೇ ಹತಾಶರಾಗುವ ಜನರು ತಹಸಿಲ್ದಾರ್ ಕಚೇರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಒಂದೇ ಒಂದು ಥಂಬ್ ರೀಡರ್ ಇದ್ದು, ಇಡೀ ಎಲ್ಲ ವಿಭಾಗಗಳಿಗೂ ಇದರಲ್ಲೇ ಎಲ್ಲ ಕೆಲಸ ಮಾಡಬೇಕಿದೆ.

ಒಂದು ಕಡೆಯಿಂದ ಮತ್ತೊಂದು ಕಡೆಗೆ ಥಂಬ್ ರೀಡರ್ ಹೋದರೆ ಲೈನ್‌ನಲ್ಲಿ ಬಂದವರು ಮತ್ತೊಂದು ದಿನ ಬರಬೇಕು. ಆಗ ಸರ್ವರ್ ಇದ್ದರೆ ಸರಿ, ಇಲ್ಲದಿದ್ದರೆಮತ್ತೊಂದು ದಿನ. ಇದು ಇಲ್ಲಿನ ದೈನೇಸಿ ಸ್ಥಿತಿ. ಗ್ಯಾರಂಟಿ ಯೋಜನೆಗಳಿಗೆ ಒಂದಲ್ಲ ಒಂದು ದಾಖಲಾತಿಗಾಗಿ ಇಲ್ಲಿಗೆ ಅಲೆಯುತ್ತಿರಲೇಬೇಕು. ಗೃಹಲಕ್ಷಿ , ಭಾಗ್ಯಜ್ಯೋತಿ ಮುಂತಾದ ಕೆಲಸಗಳಿಗೆ ತಾಲ್ಲೂಕು ಕಚೇರಿಯ ಈ ಸೇವಾ ಕೌಂಟರ್‌ಗಳಿಗೆ ಅಲೆದಾಡಬೇಕಿದೆ. ಇದೊಂದು ನಿತ್ಯ ಗೋಳಿನ ಸಂಗತಿಯಾಗಿದೆ.

ತಾಲ್ಲೂಕು ಆಡಳಿತಕ್ಕೆ ಥಂಬ್ ರೀಡರ್ ಕೊಳ್ಳಲು ಸಾಧ್ಯವಿಲ್ಲವೇ? ಹೆಚ್ಚುವರಿ ಕೌಂಟರ್ ತೆರೆದು ಹೆಚ್ಚುವರಿ ಕಂಪ್ಯೂಟರ್‌ಗಳನ್ನು ಒದಗಿಸಲು ತೊಡಕೇನಿದೆ ಎಂಬುದು ಕೌಂಟರ್ ಮುಂದೆ ಕಾದುಕುಳಿತವರ ಆಕ್ರೋಶದ ಮಾತುಗಳು. ಇನ್ನು ಈ ತಾಲ್ಲೂಕು ಕಚೇರಿಗೆ ಬರುವ ಮಹಿಳೆಯರ ಪಾಡು ಹೇಳತೀರದು. ಇರುವ ಶೌಚಾಲಯಗಳು ಗಬ್ಬೆದ್ದು ಹೋಗಿವೆ. ಕನಿಷ್ಠ ನಿರ್ವಹಣೆಯೂ ಇಲ್ಲದೆ ಒಳಗೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಸುಮಾರಾಗಿ ರುವ ಶೌಚಾಲಯಗಳೆಲ್ಲ ಸಿಬ್ಬಂದಿಗೆ ಮಾತ್ರ. ದೂರದ ಊರುಗಳಿಂದ ಬರುವ ಜನರು ಪರದಾಡಬೇಕಾದ ಪರಿಸ್ಥಿತಿ ಇಲ್ಲಿದೆ. ಈ ಕುರಿತು ಪ್ರತಿಕ್ರಿಯೆಗೆ ತಹಸಿಲ್ದಾರ್ ವಿಶ್ವನಾಥ್ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ

” ತಾಲ್ಲೂಕು ಕಚೇರಿಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ನಾನು ಒಂದು ಇನ್‌ಕಮ್ ಸರ್ಟಿಫಿಕೇಟ್, ಕ್ಯಾಸ್ಟ್ ಸರ್ಟಿಫಿಕೇಟ್ ಮಾಡಿಸಲು ನಿನ್ನೆ -ಮೊನ್ನೆಯಿಂದ ಕಾದು ನಿಂತಿದ್ದರೂ ಪ್ರಯೋಜನವಾಗಿಲ್ಲ.”

-ಗೌರಮ್ಮ, ಕ್ಯಾತುಂಗೆರೆ

” ಸರ್ವರ್ ಇಲ್ಲ ಅಂತಾರೆ, ಸಿಸ್ಟಂ ಬ್ಯುಸಿ ಅಂತಾ ನಮ್ಮನ್ನು ಸತಾಯಿಸುತ್ತಿದ್ದಾರೆ. ಅಧಿಕಾರಿಗಳಿಗೆ ಹೇಗಿದ್ದರೂ ಸಂಬಳ ಬರುತ್ತದೆ. ನಮ್ಮಂತಹ ಶ್ರಮಿಕರ ಗೋಳು ಕೇಳೋರೇ ಇಲ್ಲ. ಸರ್ಕಾರ ಏನು ಮಾಡುತ್ತಿದೆಯೋ ಗೊತ್ತಾಗುತ್ತಿಲ್ಲ.”

-ರಾಜು, ಗಾಂಧಿನಗರ

” ಸರ್ಕಾರ ಸಾಕಷ್ಟು ಅನುದಾನಗಳನ್ನು ನೀಡುತ್ತಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಆದರೆ, ತಾಲ್ಲೂಕು ಕಚೇರಿಯಲ್ಲಿ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲ ಎಂದರೆ ಜನಸಾಮಾನ್ಯರ ಕೆಲಸಗಳು ನಡೆಯಲು ಹೇಗೆ ಸಾಧ್ಯ? ಒಂದೇ ಥಂಬ್‌ರೀಡರ್‌ನಲ್ಲಿ ಎಲ್ಲ ವಿಭಾಗಗಳ ಕೆಲಸವನ್ನು ಮಾಡಲು ಸಾಧ್ಯವೆ? ಪರಿಣಾಮ ಜನರು ಅಲೆದಾಡುವುದು ತಪ್ಪಿಲ್ಲ.”

-ಎಂ.ಬಿ.ರಮೇಶ್

 

 

Tags:
error: Content is protected !!